Weekly wrap: ಪ್ರತಿಭಟನೆಗಾಗಿ ದಿಲ್ಲಿಯತ್ತ ಮುನ್ನುಗ್ಗುತ್ತಿರುವ ರೈತರು, ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್, ವಾರದ ಕ್ಲೇಮ್ ನೋಟ

Weekly wrap

ಪ್ರತಿಭಟನೆಗಾಗಿ ದಿಲ್ಲಿಯತ್ತ ಮುನ್ನುಗ್ಗುತ್ತಿರುವ ರೈತರು, ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್, ಬಿಗುಬಂದೋಬಸ್ತ್ ಗೆ ಹಾಕಲಾದ ಬ್ಯಾರಿಕೇಡ್, ಎಂಬ ಕ್ಲೇಮ್‌ ಗಳು ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ರೈತರ ದಿಲ್ಲಿ ಚಲೋ ಪ್ರತಿಭಟನೆ ಹಿನ್ನೆಲೆಯಲ್ಲಿ ಆ ಕುರಿತ ಸುಳ್ಳು ಪ್ರತಿಪಾದನೆಗಳು ಈವಾರ ಹೆಚ್ಚಿದ್ದವು. ಇದರೊಂದಿಗೆ, ಶಿವಾಜಿ ನಗರದಲ್ಲಿ ಪಾಕಿಸ್ಥಾನ ಬಾವುಟ ಹಾರಾಡಿದೆ, ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳೆ ದುಪ್ಪಟ್ಟಾ ಎಳೆದಿದ್ದಾರೆ, ಜೇನುತುಪ್ಪದೊಂದಿಗೆ ಅಮೃತಬಳ್ಳಿ ರಸ ಕುಡಿಯುವುದರಿಂದ ಮಧುಮೇಹ ಸಮಸ್ಯೆ ಕಡಿಮೆಯಾಗುತ್ತದೆ ಎಂಬ ಹೇಳಿಕೆಗಳಿದ್ದವು. ಇದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಸಾಬೀತು ಪಡಿಸಿದೆ.

ಪ್ರತಿಭಟನೆಗಾಗಿ ದೆಹಲಿಯತ್ತ ಮುನ್ನುಗ್ಗುತ್ತಿರುವ ರೈತರು ಎಂದ ವೀಡಿಯೋ ನಿಜವೇ?

ಪ್ರತಿಭಟನೆಗಾಗಿ ದೆಹಲಿಯತ್ತ ಮುನ್ನುಗ್ಗುತ್ತಿರುವ ರೈತರು ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ರೈತರು ಬ್ಯಾರಿಕೇಡ್ ಗಳ ಮೇಲೆ ಟ್ರಾಕ್ಟರ್ ಹಾಯಿಸಿ ತೆರಳುತ್ತಿರುವುದು ದಿಲ್ಲಿ ಕಡೆಗಲ್ಲ, ಬದಲಾಗಿ ಇದು ಬ್ಲಾಗರ್ ಭಾನಾ ಸಿಧು ಅವರ ಬಿಡುಗಡೆಗೆ ಒತ್ತಾಯಿಸಿ ಫೆಬ್ರವರಿ 3, 2024 ರಂದು ನಡೆದ ಪ್ರತಿಭಟನೆಯ ವೀಡಿಯೋ ಇದು ಎಂದು ತಿಳಿದುಬಂದಿದೆ. ಈ ಕುರಿತು ವಿವರಗಳನ್ನು ಇಲ್ಲಿ ಓದಿ

ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್ ತಯಾರಿಸಲಾಗಿದೆ ಎಂದ ವೀಡಿಯೋ ಟರ್ಕಿಯದ್ದು!

ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್ ತಯಾರಿಸಲಾಗಿದೆ, ಪೊಲೀಸ್ ಭದ್ರತೆ ಭೇದಿಸಲು ಹೀಗೆ ಮಾರ್ಪಡಿಸಲಾಗಿದೆ ಎಂಬರ್ಥದಲ್ಲಿ ಹೇಳಿಕೆಯೊಂದು ಓಡಾಡಿದೆ. ತನಿಖೆ ವೇಳೆ ರೈತರ ಪ್ರತಿಭಟನೆಗೆ ಮಾರ್ಪಡಿಸಲಾದ ಟ್ರಾಕ್ಟರ್ ತಯಾರಿಸಲಾಗಿದೆ ಎಂದು ಹಂಚಿಕೊಂಡಿರುವ ವೀಡಿಯೋ ಟರ್ಕಿಯದ್ದಾಗಿದ್ದು, ಇದಕ್ಕೂ ರೈತರ ಪ್ರತಿಭಟನೆಗೂ ಸಂಬಂಧವಿಲ್ಲ ಎಂದು ಗೊತ್ತಾಗಿದೆ. ಈ ಕುರಿತು ವಿವರಗಳನ್ನು ಇಲ್ಲಿ ಓದಿ

ಬಿಗು ಬಂದೋಬಸ್ತ್ ಗೆ ಹಾಕಲಾದ ಈ ಬ್ಯಾರಿಕೇಡ್ ಚಿತ್ರ ಹಳೆಯದು!

ದಿಲ್ಲಿ ಚಲೋ ನಡೆಸುತ್ತಿರುವ ರೈತರನ್ನು ತಡೆಯಲು ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ ಎಂದು ಕ್ಲೇಮ್‌ ಒಂದು ಹರಿದಾಡಿದೆ. ಆದರೆ ಸತ್ಶಶೋಧನೆಯಲ್ಲಿ ಕಂಡುಬಂದ ಪ್ರಕಾರ, ಮೂರು ಕೃಷಿ ಕಾನೂನುಗಳ ವಿರುದ್ಧ 2021ರಲ್ಲಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾಗ ನಡೆಸಲಾದ ಬಿಗು ಬಂದೋಬಸ್ತ್ ಕುರಿತ ಫೋಟೋ ಇದಾಗಿದೆ. ಆದ್ದರಿಂದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿರುವ ಚಿತ್ರ ಹಳೆಯದು ಎಂದು ಗೊತ್ತಾಗಿದೆ. ಈ ಕುರಿತು ವಿವರಗಳಿಗೆ ಇಲ್ಲಿ ಓದಿ

ಪಾಕಿಸ್ಥಾನದ ಬಾವುಟ ಬೆಂಗಳೂರಿನ ಶಿವಾಜಿನಗರದಲ್ಲಿ ಹಾರಾಡಿದೆ ಎನ್ನುವುದು ನಿಜವೇ?

ಪಾಕಿಸ್ಥಾನದ ಬಾವುಟ ಬೆಂಗಳೂರಿನ ಶಿವಾಜಿನಗರದಲ್ಲಿ ಹಾರಾಡುತ್ತಿದೆ ಎಂಬ ಹೇಳಿಕೆಯುಳ್ಳ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ನ್ಯೂಸ್‌ಚೆಕರ್‌ ತನಿಖೆ ವೇಳೆ, ಶಿವಾಜಿನಗರದಲ್ಲಿ ಹಾರಾಡಿದ್ದು ದರ್ಗಾವೊಂದರ ಇಸ್ಲಾಮಿಕ್ ಧ್ವಜ, ಪಾಕಿಸ್ಥಾನದ ಧ್ವಜವಲ್ಲ ಅದನ್ನು ಪೊಲೀಸರು ತೆರವುಗೊಳಿಸಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತ ವಿವರಗಳಿಗೆ ಇಲ್ಲಿ ಓದಿ

ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳೆಯ ದುಪ್ಪಟ್ಟಾ ಎಳೆದಿದ್ದಾರೆಯೇ?

ಜನತಾ ದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಮಹಿಳೆಯ ದುಪ್ಪಟ್ಟಾ ಎಳೆದರು ಎಂದು ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ತನಿಖೆ ವೇಳೆ ಕಂಡು ಬಂದ ಪ್ರಕಾರ, ಜನತಾ ದರ್ಶನದಲ್ಲಿ  ಮಹಿಳೆಯ ದುಪ್ಪಟ್ಟಾ ಎಳೆದಿದ್ದಾರೆ ಎನ್ನುವುದು ತಪ್ಪಾಗಿದೆ. ಈ ಘಟನೆ 2019ರಲ್ಲಿ ನಡೆದಿದ್ದು, ಸಿದ್ದರಾಮಯ್ಯ ಅವರು ಮಹಿಳೆ ಕೈಯಿಂದ ಮೈಕ್‌ ಎಳೆಯುವಾಗ ದುಪ್ಪಟ್ಟಾ ಸಿಲುಕಿದ ವಿದ್ಯಮಾನ ಇದಾಗಿದೆ. ಈ ಕುರಿತ ವಿವರಗಳಿಗೆ ಇಲ್ಲಿ ಓದಿ

ಜೇನುತುಪ್ಪದೊಂದಿಗೆ ಅಮೃತಬಳ್ಳಿ ರಸವನ್ನು ಕುಡಿಯುವುದರಿಂದ ಮಧುಮೇಹ ಸಮಸ್ಯೆ ಕಡಿಮೆಯಾಗುತ್ತದೆಯೇ?

ಜೇನುತುಪ್ಪದೊಂದಿಗೆ ಅಮೃತಬಳ್ಳಿ ರಸವನ್ನು ಕುಡಿಯುವುದರಿಂದ ಮಧುಮೇಹ ಸಮಸ್ಯೆ ಕಡಿಮೆಯಾಗುತ್ತದೆ ಎಂದು ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಪ್ರತಿಪಾದಿಸಲಾಗಿತ್ತು. ಆದರೆ ಇದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ. ಜೇನುತುಪ್ಪದೊಂದಿಗೆ ಅಮೃತಬಳ್ಳಿ ರಸವನ್ನು ಕುಡಿಯುವುದರಿಂದ ಮಧುಮೇಹ ಸಮಸ್ಯೆ ಕಡಿಮೆಯಾಗುತ್ತದೆ ಎನ್ನುವುದಕ್ಕೆ ಮಾನವನ ಮೇಲೆ ನಡೆದ ವೈದ್ಯಕೀಯ ಪ್ರಯೋಗಗಳ ಫಲಿತಾಂಶಗಳು ಲಭ್ಯವಿಲ್ಲ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.