Authors
ಅಸ್ಸಾಂನಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ, ಲಂಡನ್ ನಲ್ಲಿ ಚುನಾವಣೆ ನಂತರ ಮುಸ್ಲಿಮರು ಬೀದಿಗಳಲ್ಲಿ ಶಕ್ತಿ ಪ್ರದರ್ಶಿಸುತ್ತಿದ್ದಾರೆ, ಡೆಹ್ರಾಡೂನ್ ನಲ್ಲಿ ಹಿಂದೂಗಳು ಅಂಗಡಿ ಬೋರ್ಡ್ ಗಳನ್ನು ಕೇಸರಿ ಮಾಡಿದ್ದಾರೆ ಎಂಬ ಕೋಮು ಭಾವನೆಯ ಹೇಳಿಕೆಗಳು ಈ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು. ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಸಾಬೀತು ಮಾಡಿದೆ. ಇದರೊಂದಿಗೆ ಹೊಗೇನಕಲ್ ಜಲಪಾತದ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯ, “ಮಿ.ಬೀನ್” ವೃದ್ಧರಾಗಿ ಹಾಸಿಗೆ ಹಿಡಿದಿದ್ದಾರೆ ಎಂಬ ವೈರಲ್ ಫೋಟೋ, ಅಂಕೋಲಾ ಗುಡ್ಡ ಕುಸಿತ ಪ್ರಕರಣದಲ್ಲಿ ಕೇರಳ ಚಾಲಕ ಅರ್ಜುನ್ ಶವ ಪತ್ತೆಯಾಗಿದೆ ಎಂಬ ಪ್ರಕರಣಗಳೂ ಇದ್ದವು. ಇವುಗಳೂ ತಪ್ಪು ಹೇಳಿಕೆ ಎಂದು ಗೊತ್ತಾಗಿದೆ.
ಲಂಡನ್ ನಲ್ಲಿ ಚುನಾವಣೆ ನಂತರ ಮುಸ್ಲಿಮರು ಬೀದಿಗಳಲ್ಲಿ ಶಕ್ತಿ ಪ್ರದರ್ಶಿಸುತ್ತಿದ್ದಾರೆ ಎಂಬ ವೀಡಿಯೋ ನಿಜವೇ?
ಲಂಡನ್ ನಲ್ಲಿ ಚುನಾವಣೆಯ ನಂತರ ಮುಸ್ಲಿಮರು ಬೀದಿಗಳಲ್ಲಿ ಶಕ್ತಿ ಪ್ರದರ್ಶನ ತೋರಿಸುತ್ತಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋದೊಂದಿಗೆ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದಂತೆ ಅಶುರಾ ದಿನ ಎಂದು ಕರೆಯುವ ಧಾರ್ಮಿಕ ಆಚರಣೆಯ ಪಾದಯಾತ್ರೆಯ ವೀಡಿಯೋ ಇದಾಗಿದೆ. ಮುಸ್ಲಿಮರು ಬೀದಿಗೆ ಇಳಿದಿದ್ದಾರೆ ಎಂದು ಹೇಳಿಕೊಳ್ಳಲು ತಪ್ಪಾಗಿ ಈ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಅಸ್ಸಾಂನಲ್ಲಿ ಮತ್ತೊಂದು ಶ್ರದ್ಧಾ ಪ್ರಕರಣ ಎಂದ ವೈರಲ್ ಫೋಟೋ ಹಿನ್ನೆಲೆ ಏನು?
ಮಹಿಳೆಯ ಶವವನ್ನು ಫ್ರೀಜರ್ನಲ್ಲಿ ಇರಿಸಿರುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಲವ್ ಜಿಹಾದ್ ಎಂಬ ಹೇಳಿಕೆಯೊಂದಿಗೆ ಚಿತ್ರವನ್ನು 2022ರ ಶ್ರದ್ಧಾ ವಾಕರ್ ಪ್ರಕರಣದ ರೀತಿ ಎಂದು ಹೇಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ, ವೈರಲ್ ಚಿತ್ರದೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆ ತಪ್ಪಾಗಿದೆ. ವೈರಲ್ ಫೋಟೋ ಬ್ರೆಜಿಲ್ ನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಿದ್ದಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಡೆಹ್ರಾಡೂನ್ ನಲ್ಲಿ ಹಿಂದೂಗಳು ಅಂಗಡಿ ಬೋರ್ಡ್ ಗಳನ್ನು ಕೇಸರಿ ಮಾಡಿದ್ದಾರೆ ಎನ್ನುವ ಹೇಳಿಕೆ ಸತ್ಯವೇ?
ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಹಿಂದೂಗಳು ತಮ್ಮ ಅಂಗಡಿಯ ಬೋರ್ಡ್ ಗಳನ್ನು ಕೇಸರಿ ಮಾಡಿದ್ದಾರೆ ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಅಂಗಡಿ ಬೋರ್ಡ್ ಗಳನ್ನು ಕೇಸರಿ ಮಾಡಿದ ನಿರ್ಧಾರ ಡೆಹ್ರಾಡೂನ್ ಸ್ಮಾರ್ಟ್ ಸಿಟಿ ಪ್ರಾಧಿಕಾರದ್ದಾಗಿದ್ದು, ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧವನ್ನು ವ್ಯಕ್ತಪಡಿಸಿತ್ತು ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಹೊಗೇನಕಲ್ ಜಲಪಾತದ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯವೆಂದು ಹಳೆಯ ವೀಡಿಯೋ ವೈರಲ್
ಹೊಗೇನಕಲ್ ಜಲಪಾತದಲ್ಲಿ ಪ್ರವಾಹದಲ್ಲಿ ಜನರು ಸಿಕ್ಕಿಬಿದ್ದ ದೃಶ್ಯವೆಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ಜಲಪಾತದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುತ್ತಿರುವ ವೀಡಿಯೋ ಹೊಗೇನಕಲ್ ನದ್ದಲ್ಲ, ಇದು ಸೇಲಂ ಆನೈವಾರಿ ಜಲಪಾತದಲ್ಲಿ 2021ರಲ್ಲಿ ಸಂಭವಿಸಿದ ಘಟನೆಯಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
“ಮಿ.ಬೀನ್” ವೃದ್ಧರಾಗಿ ಹಾಸಿಗೆ ಹಿಡಿದಿದ್ದಾರೆ ಎಂಬ ವೈರಲ್ ಫೋಟೋ ನಿಜವೇ?
ಮಿಸ್ಟರ್ ಬೀನ್ ಪಾತ್ರಗಳ ಮೂಲಕ ಕಾಣಿಸಿಕೊಂಡಿದ್ದ ರೋವರ್ ಆಟ್ಕಿನ್ಸನ್ ಅವರು ವೃದ್ಧಾಪ್ಯದಿಂದ ಹಾಸಿಗೆ ಹಿಡಿದಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಫೊಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ “ಮಿ.ಬೀನ್” ನಟ ರೋವರ್ ಆಟ್ಕಿನ್ಸನ್ ಅವರು ವೃದ್ಧಾಪ್ಯದಿಂದ ಹಾಸಿಗೆ ಹಿಡಿದಿಲ್ಲ. ವೈರಲ್ ಫೊಟೋ ತಂತ್ರಜ್ಞಾನದ ಮೂಲಕ ತಿರುಚಿದ ಚಿತ್ರವಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಅಂಕೋಲಾ ಗುಡ್ಡ ಕುಸಿತ ಪ್ರಕರಣದಲ್ಲಿ ಕೇರಳ ಲಾರಿ ಚಾಲಕ ಅರ್ಜುನ್ ಶವ ಸಿಕ್ಕಿದೆ ಎಂಬ ಸುಳ್ಳು ಹೇಳಿಕೆ ವೈರಲ್
ಅಂಕೋಲಾ ಗುಡ್ಡ ಕುಸಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಲಾರಿ ಚಾಲಕ ಅರ್ಜುನ್ ಅವರ ಶವ ದೊರಕಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಒಂದನ್ನು ಶೇರ್ ಮಾಡಲಾಗುತ್ತಿದೆ. ಆದರೆ ಸತ್ಯಶೋಧನೆ ಪ್ರಕಾರ, ಕೇರಳ ಲಾರಿ ಚಾಲಕ ಅರ್ಜುನ್ ಅವರ ಶವ ದೊರೆತಿದೆ ಎಂಬ ಸಂದೇಶದೊಂದಿಗೆ ಹಂಚಿಕೊಳ್ಳುತ್ತಿರುವ ಪೋಟೋ ತಪ್ಪಾಗಿದೆ. ಈ ಕುರಿತು ನ್ಯೂಸ್ ಚೆಕರ್ ಲೇಖನವನ್ನು ಪ್ರಕಟಿಸುವವರೆಗೆ ನಾಪತ್ತೆಯಾದವರ ಕುರುಹು ಸಿಕ್ಕಿರಲಿಲ್ಲ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.