Authors
ಕೋಲ್ಕತಾದ ಆರ್‍ಜಿ ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಪ್ರಕರಣ ದೇಶಾದ್ಯಂತ ತಲ್ಲಣ ಸೃಷ್ಟಿಸಿರುವಂತೆಯೇ ಈ ಕುರಿತ ತಪ್ಪು ಹೇಳಿಕೆಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬಂದಿವೆ. ವಿಶಾಖಪಟ್ಟಣದ ಹಳೇ ವೀಡಿಯೋ ಕೋಲ್ಕತಾ ಅತ್ಯಾಚಾರ ಪ್ರಕರಣಕ್ಕೆ ಲಿಂಕ್, ಅತ್ಯಾಚಾರ ಸಂತ್ರಸ್ತೆ ಮೃತರಾಗುವ ಮೊದಲಿನ ವೀಡಿಯೋ ಎಂಬ ಹೇಳಿಕೆಗಳು ಪ್ರಮುಖವಾಗಿದ್ದವು. ಇದರೊಂದಿಗೆ ಕೋಮು ಹೇಳಿಕೆಗಳೂ ಇದ್ದು, ಕೇದಾರನಾಥ ಯಾತ್ರಿಗಳ ಮೇಲೆ ಮುಸ್ಲಿಂ ನಿರ್ವಾಹಕರ ಹಲ್ಲೆ, ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್ ಗಳಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ಎಂದು ಹೇಳಲಾಗಿತ್ತು. ಜೊತೆಗೆ, ಯಮ-ಚಿತ್ರಗುಪ್ತರು ರಸ್ತೆಗುಂಡಿ ಅಳೆಯುವ ವೀಡಿಯೋ ಬೆಂಗಳೂರಿನದ್ದು ಎಂಬ ಹೇಳಿಕೆ, ಮಂಕಿಪಾಕ್ಸ್ ಇನ್ನು ಜಾಗತಿಕ ತುರ್ತು ಸ್ಥಿತಿ ಅಲ್ಲ, ತೆಂಗಿನೆಣ್ಣೆ-ವಿಕ್ಸ್-ಕರ್ಪೂರ ಮಿಶ್ರಣದಿಂದ ಮಸಾಜ್‌ಮಾಡುವುದರಿಂದ ಕೊಬ್ಬು ಕರಗುತ್ತದೆ ಎಂಬ ಹೇಳಿಕೆಗಳೂ ಇದ್ದವು. ಇವುಗಳ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಇವುಗಳು ತಪ್ಪು ಹೇಳಿಕೆಗಳು ಎಂದು ಕಂಡುಬಂದಿವೆ.
ವಿಶಾಖಪಟ್ಟಣದ ಹಳೇ ವೀಡಿಯೋ ಕೋಲ್ಕತಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಲಿಂಕ್!
ಕೋಲ್ಕತಾದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ಮೃತದೇಹವನ್ನು ತೋರಿಸುವ ವೀಡಿಯೋ ಎಂದು ಶವವೊಂದನ್ನು ಸ್ಟ್ರೆಚರ್ ನಲ್ಲಿ ಸಾಗಿಸುವ ವೇಳೆ ಆಸ್ಪತ್ರೆಯ ಸಿಬ್ಬಂದಿಗಳು ನಮಸ್ಕರಿಸುತ್ತಿರುವ 21 ಸೆಕೆಂಡ್ ಉದ್ದದ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿದಾಗ, ಈ ವೀಡಿಯೋ ಕೋಲ್ಕತಾ ಕೊಲೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ, ವಿಶಾಖಪಟ್ಟಣದಲ್ಲಿ ಅಂಗಾಗ ದಾನಿಯೊಬ್ಬರನ್ನು ಅಂತಿಮವಾಗಿ ಕಳುಹಿಸಿಕೊಡುತ್ತಿರುವ ವೇಳೆ ಆಸ್ಪತ್ರೆ ಸಿಬ್ಬಂದಿಗಳು ಗೌರವ ಸೂಚಕವಾಗಿ ನಡೆದುಕೊಂಡ ಸಂದರ್ಭದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಸಂತ್ರಸ್ತೆ ಮೃತರಾಗುವ ಮೊದಲಿನ ವೀಡಿಯೋ ನಿಜವಾದ್ದೇ?
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯ ಕೊನೆಯುಸಿರು ಎಳೆಯುವ ಮುನ್ನ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ನಡೆಸಿದ ವೇಳೆ ನ್ಯೂಸ್‌ಚೆಕರ್ ಗೆ ತಿಳಿದುಬಂದಿದ್ದೇನೆಂದರೆ, ಇವರು ಅತ್ಯಾಚಾರ ಸಂತ್ರಸ್ತೆಯಲ್ಲ, ಬದಲಾಗಿ ಓರ್ವ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ ಎನ್ನುವುದಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್ ಗಳಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ಎಂಬ ಹೇಳಿಕೆ ನಿಜವೇ?
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಹಾಸ್ಟೆಲ್ಗಳನ್ನು ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಕಾಯ್ದಿರಿಸಿದೆ ಎಂದು ಮಹೇಶ್ ಜೈನ್ ಎಂಬ ವ್ಯಕ್ತಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ ತನಿಖೆ ನಡೆಸಿದಾಗ, ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್ ಗಳಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ಎಂಬ ಹೇಳಿಕೆ ನಿಜವಲ್ಲ, ಜೈನ ವಿದ್ಯಾರ್ಥಿಗಳಿಗೂ ಅವಕಾಶ ಇದೆ. ಸರ್ಕಾರ ಅಂತಹ ಯಾವುದೇ ಆದೇಶ ತಂದಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಕೇದಾರನಾಥ ಯಾತ್ರಿಗಳ ಮೇಲೆ ಕುದುರೆ, ಹೇಸರಗತ್ತೆಗಳ ಮುಸ್ಲಿಂ ನಿರ್ವಾಹಕರಿಂದ ಹಲ್ಲೆ ಎನ್ನುವ ಹೇಳಿಕೆ ಹಿಂದಿನ ಸತ್ಯವೇನು?
ಕೇದಾರನಾಥ ಯಾತ್ರಿಗಳ ಮೇಲೆ ಕುದುರೆ, ಹೇಸರಗತ್ತೆಗಳ ಮುಸ್ಲಿಂ ನಿರ್ವಾಹಕರಿಂದ ಹಲ್ಲೆ ಎಂಬ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ಈ ಹೇಳಿಕೆ ತಪ್ಪಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಹಿಂದೂಗಳಾಗಿದ್ದು ಅವರನ್ನು ಬಂಧಿಸಿದ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ ಎನ್ನುವುದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಯಮ-ಚಿತ್ರಗುಪ್ತರು ರಸ್ತೆ ಗುಂಡಿಯನ್ನು ಅಳೆಯುವ ಹಾಸ್ಯದ ವೀಡಿಯೋ ಬೆಂಗಳೂರಿನದ್ದೇ?
ಯಮ-ಚಿತ್ರಗುಪ್ತರು ರಸ್ತೆ ಗುಂಡಿಯನ್ನು ಅಳೆಯುವ ಹಾಸ್ಯದ ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇದು ಬೆಂಗಳೂರಿನದ್ದು ಎಂದು ಹೇಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ತಿಳಿದುಬಂದ ಪ್ರಕಾರ, ಯಮಚಿತ್ರಗುಪ್ತರು ರಸ್ತೆ ಹೊಂಡ ಅಳತೆ ಮಾಡಿದ ಈ ವೀಡಿಯೋ ಉಡುಪಿಯದ್ದಾಗಿದ್ದು, ಕೃಷ್ಣಾಷ್ಟಮಿಯ ಸಂದರ್ಭದ್ದಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಮಂಕಿ ಪಾಕ್ಸ್ ಇನ್ನು ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಅಲ್ಲ? WHO ಮುಖ್ಯಸ್ಥರ ಬೇರೆ ಸಂದರ್ಭದ ಹಳೆ ವೀಡಿಯೋ ಹಂಚಿಕೆ
ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಮಂಕಿ ಪಾಕ್ಸ್ (Mpox) ಅನ್ನು “ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಲ್ಲ” ಎಂದು ಘೋಷಿಸುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಈ ಕುರಿತು ತನಿಖೆ ನಡೆಸಿದಾಗ, ಮಂಕಿ ಪಾಕ್ಸ್ ಇನ್ನು ಮುಂದೆ ಜಾಗತಿಕ ಆರೋಗ್ಯ ತುರ್ತುಸ್ಥಿತಿಯಲ್ಲ ಎಂದ ಡಬ್ಲ್ಯೂಎಚ್‌ಒ ಮುಖ್ಯಸ್ಥರ 2023ರ ಬೇರೆ ಸಂದರ್ಭದ ಹಳೆ ವೀಡಿಯೋವನ್ನು ಈಗ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ತೆಂಗಿನೆಣ್ಣೆ-ಕರ್ಪೂರ-ವಿಕ್ಸ್ ಮಿಶ್ರಣ ಮಾಡಿ ಮಸಾಜ್ ಮಾಡುವುದರಿಂದ ಕೊಬ್ಬು ಕರಗುತ್ತದೆಯೇ?
ಕರ್ಪೂರ, ತೆಂಗಿನೆಣ್ಣೆ, ವಿಕ್ಸ್ ವೆಪೊರಬ್ ಮಿಶ್ರಣದಿಂದ ಮಸಾಜ್ ಮಾಡಿದರೆ ಕೊಬ್ಬು ಕರಗಿಸಬಹುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದು ಹರಿದಾಡುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ, ಈ ಹೇಳಿಕೆಯನ್ನು ಸಾಬೀತು ಪಡಿಸುವಂತೆ ಯಾವುದೇ ವೈಜ್ಞಾನಿಕ ಪುರಾವೆಗಳು ಲಭ್ಯವಿಲ್ಲ ಎಂದು ಗೊತ್ತಾಗಿದೆ ಮತ್ತು ಪರಿಣತರ ಪ್ರಕಾರವೂ ಇದೊಂದು ತಪ್ಪು ಹೇಳಿಕೆ ಎಂದು ತಿಳಿದುಬಂದಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.