Authors
Claim
ಬೆಂಗಳೂರಿನಲ್ಲಿ ಸ್ವಾಮೀಜಿಯ ಕೊಲೆ ನಡೆದಿದೆ
Fact
ಮೃತ ಫಣೀಂದ್ರ ಸುಬ್ರಹ್ಮಣ್ಯಂ ಸ್ವಾಮೀಜಿಯಲ್ಲ, ಏರೋನಿಕ್ಸ್ ಇಂಟರ್ನೆಟ್ ಕಂಪೆನಿಯ ಎಂ.ಡಿ. ವ್ಯವಹಾರ ಕುರಿತ ವೈಷಮ್ಯದಿಂದ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಿಂದೂ ನಾಯಕರ ಕೊಲೆಗಳು ನಡೆದಿದ್ದು, ಬೆಂಗಳೂರಿನಲ್ಲಿ ನಡೆದ ಇನ್ನೊಂದು ಜೋಡಿ ಕೊಲೆಗೆ ಸಂಬಂಧಿಸಿದಂತೆ ಕ್ಲೇಮ್ ಗಳು ಹರಿದಾಡಿವೆ. ‘ಹಿಂದೂ ಸ್ವಾಮೀಜಿಗಳ ಕೊಲೆ, ಇನ್ನೊಂದು ಹಿಂದೂ ನಾಯಕನ ಕೊಲೆ ನಡೆದಿದೆ ಎಂಬ ಹೇಳಿಕೆಗಳೊಂದಿಗೆ ಪೋಸ್ಟ್ ಗಳನ್ನುಹಂಚಿಕೊಳ್ಳಲಾಗುತ್ತಿದೆ.
ಈ ಕುರಿತಂತೆ ಟ್ವಿಟರ್ ಕ್ಲೇಮ್ ಒಂದರಲ್ಲಿ “ಹಿಂದೂ ಸ್ವಾಮೀಜಿಗಳ ಕೊಲೆ ಬೆಂಗಳೂರಿನಲ್ಲಿ ನಡೆದಿದೆ. #ಫಣೀಂದ್ರ ಸುಬ್ರಹ್ಮಣ್ಯಂ ಇನ್ನಿಲ್ಲ ಕ್ರೂರಿ #ಟಿಪ್ಪುಸುಲ್ತಾನನನ್ನು ಆರಾಧಿಸುವ ಸರ್ಕಾರದಿಂದಾಗಿ #ಕರ್ನಾಟಕದಲ್ಲಿ ಆತಂಕಕಾರಿ ಪರಿಸ್ಥಿತಿ ಬಂದಿದೆ.” ಎಂದಿದೆ.
Also Read: ಬಡತನ, ಭ್ರಷ್ಟಾಚಾರ ವಿರೋಧಿಸಿ ಮೆಕ್ಸಿಕನ್ ಸಂಸದ ಸಂಸತ್ತಿನಲ್ಲಿ ಭಾಷಣ ವೇಳೆ ಬಟ್ಟೆ ಬಿಚ್ಚಿದ್ದಾರೆಯೇ, ಸತ್ಯ ಏನು?
ಇದೇ ರೀತಿ ಹಿಂದೂ ನಾಯಕನೊಬ್ಬನ ಕೊಲೆ ನಡೆದಿದೆ ಎಂದೂ ಟ್ವೀಟ್ ಕ್ಲೇಮ್‌ಗಳು ಕಂಡುಬಂದಿವೆ. ಈ ಕ್ಲೇಮ್‌ಗಳು ಇಲ್ಲಿ ಮತ್ತು ಇಲ್ಲಿವೆ
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದೊಂದು ತಪ್ಪಾದ ಸಂದರ್ಭವಾಗಿದೆ ಎಂದು ಕಂಡುಕೊಂಡಿದೆ.
Fact Check/Verification
ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್ ಗೂಗಲ್ ಕೀವರ್ಡ್ ಸರ್ಚ್ ನಡೆಸಿದೆ. ಈ ವೇಳೆ ಹಲವು ಮಾಧ್ಯಮ ವರದಿಗಳು ಲಭ್ಯವಾಗಿವೆ.
ಜುಲೈ 12, 2023ರ ಮಿರರ್ ನೌ ವರದಿ ಪ್ರಕಾರ, “ಬೆಂಗಳೂರಿನ ಏರೋನಿಕ್ಸ್ ಇಂಟರ್ನೆಟ್ ಕಂಪೆನಿಯ ಆಡಳಿತ ನಿರ್ದೇಶಕ, ಮುಖ್ಯ ಕಾರ್ಯನಿರ್ವಣಾಧಿಕಾರಿ ಫಣೀಂದ್ರ ಸುಬ್ರಹ್ಮಣ್ಯ ಮತ್ತು ವಿನು ಕುಮಾರ್ ಎಂಬವರ ಹತ್ಯೆಯಾಗಿದ್ದು, ಅಮೃತಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ” ಎಂದಿದೆ. ಹಾಡುಹಗಲೇ ನಗರದಲ್ಲಿ ಈ ಹತ್ಯೆ ನಡೆದಿದ್ದು, ಇದಕ್ಕೆ ಕಾರಣವಾಗಿರಬಹುದಾದ ಅಂಶಗಳನ್ನು ಇದೇ ವರದಿಯಲ್ಲಿ ನೀಡಲಾಗಿದೆ. “ಫಣೀಂದ್ರ ಅವರು ಜಿ ನೆಟ್ ಹೆಸರಿನ ಕಂಪೆನಿಯೊಂದಕ್ಕೆ ಕೆಲಸ ಮಾಡುತ್ತಿದ್ದು 6-7 ತಿಂಗಳ ಹಿಂದೆ ಹೊಸ ಕಂಪೆನಿ ತೆರೆದಿದ್ದರು. ಜೊತೆಗೆ ತಮ್ಮ ಹಳೆಯ ಕಂಪೆನಿಯಿಂದ ಅನೇಕ ಸಿಬ್ಬಂದಿ ಮತ್ತು ಗ್ರಾಹಕರನ್ನು ಪಡೆದಿದ್ದರು. ಇದಕ್ಕಾಗಿ ಹಿಂದಿನ ಕಂಪೆನಿ ಮಾಲಕರು ಫಣೀಂದ್ರ ಅವರ ಸಹೋದರನಿಗೆ ಇದು ಚೆನ್ನಾಗಿರಲ್ಲ ಎಂದು ಬೆದರಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ” ಎಂದಿದೆ.
ಜುಲೈ 12, 2023ರ ಟಿವಿ 9 ಕನ್ನಡ ವರದಿಯಲ್ಲಿ “ಏರೋನಿಕ್ಸ್ ಇಂಟರ್ನೆಟ್ ಕಂಪನಿ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಮತ್ತು ಸಿಇಒ ವಿನುಕುಮಾರ್ ಕೊಲೆ ಪ್ರಕರಣಕ್ಕೆ ಸದ್ಯ ಟ್ವಿಸ್ಟ್ ಸಿಕ್ಕಿದ್ದು, ಜೋಡಿ ಕೊಲೆ ಹಿಂದೆ ಜಿ-ನೆಟ್ ಕಂಪನಿ ಮಾಲೀಕ ಅರುಣ್ ಕೈವಾಡ ಇದೆ ಎನ್ನಲಾಗುತ್ತಿದೆ” ಎಂದಿದೆ ಜೊತೆಗೆ “ಬಳಿಕ ಫಣೀಂದ್ರ ಜಿ-ನೆಟ್ ಕಂಪನಿ ಬಿಟ್ಟು ಹೊಸ ಕಂಪನಿ ಆರಂಭಿಸಿದ್ದ. ಜಿ-ನೆಟ್ ಕಂಪನಿಯ ಹಲವು ನೌಕರರು ಫಣೀಂದ್ರ ಕಂಪನಿಗೆ ಸೇರಿದ್ದರು. ಇದರಿಂದ ಜಿ-ನೆಟ್ ಕಂಪನಿ ನಷ್ಟ ಸಿಲುಕಿದ್ದರಿಂದ ಅರುಣ್ ಆಕ್ರೋಶಗೊಂಡಿದ್ದ. ಹೀಗಾಗಿ ಅರುಣ್, ಫಣೀಂದ್ರ ನಡುವೆ ವೈಮನಸ್ಸು ಉಂಟಾಗಿತ್ತು.” ಎಂದಿದೆ”
Also Read: ಪ.ಬಂಗಾಳದಲ್ಲಿ ಸೇನಾ ವಾಹನ ತಡೆದ ಮುಸ್ಲಿಂ ಗುಂಪು, ವೈರಲ್ ವೀಡಿಯೋ ಹಿಂದಿನ ಸತ್ಯವೇನು?
ಜುಲೈ 12, 2023ರಂದು ಇಂಡಿಯಾ ಟುಡೇ ಕೂಡ ಈ ಪ್ರಕರಣದ ವರದಿ ಮಾಡಿದ್ದು “ವ್ಯವಹಾರ ಕುರಿತಾಗಿನ ವೈಮನಸ್ಸಿನಿಂದ ಹತ್ಯೆ ನಡೆದಿದೆ” ಎಂದು ಪೊಲೀಸ್ ಮೂಲಗಳನ್ನುದ್ದೇಶಿಸಿ ಹೇಳಿದೆ.
ಪ್ರಕರಣದ ಬಗ್ಗೆ ಜುಲೈ 12, 2023ರಂದು ಕನ್ನಡಪ್ರಭ ವರದಿ ಮಾಡಿದ್ದು ಅದರಲ್ಲೂ “ವ್ಯವಹಾರದ ಕಾರಣಕ್ಕೆ ಕೊಲೆ ನಡೆದಿರುವ ವಿಚಾರ” ಹೇಳಲಾಗಿದೆ. ಇದರೊಂದಿಗೆ ಆರ್‌ಎಸ್‌ಎಸ್‌ನಲ್ಲಿ ಫಣೀಂದ್ರ ಸಕ್ರಿಯರಾಗಿದ್ದರು ಎಂಬುದನ್ನು ಹೇಳಿದೆ. “ಹತ್ಯೆಗೀಡಾದ ಫಣೀಂದ್ರ ಆರೆಸ್ಸೆಸ್, ಹಿಂದೂ ಪರ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದರು. ಸಂಘಟನೆಗಳ ವಿವಿಧ ಕಾರ್ಯಕ್ರಮಗಳಿಗೆ ಆರ್ಥಿಕ ನೆರವು ನೀಡುತ್ತಿದ್ದರು” ಎಂದಿದೆ.
ಫಣೀಂದ್ರ ಅವರು ಹಿಂದೂ ಸಂಘಟನೆ ನಾಯಕರೇ, ಆರೆಸ್ಸೆಸ್ ನಾಯಕರಾಗಿದ್ದಾರೆಯೇ ಅಥವಾ ವಿವಿಧ ಕ್ಲೇಮುಗಳಲ್ಲಿ ಹೇಳಲಾಗಿರುವಂತೆ ಅವರು ಸ್ವಾಮೀಜಿ ಅಥವಾ ಪುರೋಹಿತ ಆಗಿದ್ದಾರೆಯೇ ಎಂಬ ಬಗ್ಗೆ ನ್ಯೂಸ್ ಚೆಕರ್ ತಿಳಿಯಲು ಯತ್ನಿಸಿದೆ.
ಫಣೀಂದ್ರ ಸುಬ್ರಹ್ಮಣ್ಯಂ ಅವರ ಫೇಸ್‌ಬುಕ್ ಖಾತೆಯನ್ನು ನೋಡಲಾಗಿದ್ದು, ಅವರು ಧಾರ್ಮಿಕ ನಾಯಕರು ಅಥವಾ ಸ್ವಾಮೀಜಿ, ಪುರೋಹಿತ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಕಂಡುಬಂದಿಲ್ಲ.
ಇದೇ ವೇಳೆ ಅವರ ಇನ್‌ಸ್ಟಾ ಗ್ರಾಂ ಖಾತೆಯನ್ನು ಪರಿಶೀಲಿಸಲಾಗಿದ್ದು, ಈ ವೇಳೆ ರೀಲ್ ಒಂದರಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅವರ ಭಾವಚಿತ್ರವೊಂದು ಕಂಡುಬಂದಿದೆ.
ಈ ಬಗ್ಗೆ ಕನ್ನಡ ಪ್ರಭದ ಹಿರಿಯ ಕ್ರೈಂ ವರದಿಗಾಗ ಗಿರೀಶ್ ಮಾದೇನಹಳ್ಳಿಯವರನ್ನು ಸಂಪರ್ಕಸಿದಾಗ, “ಫಣೀಂದ್ರ ಅವರು ರಾಷ್ಟ್ರೀಯವಾದಿ ಚಿಂತನೆ ಹೊಂದಿದ್ದು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು ಎಂದು ಮೂಲಗಳನ್ನುದ್ದೇಶಿಸಿ ವರದಿ ಮಾಡಲಾಗಿದೆ” ಎಂದು ಹೇಳಿದ್ದಾರೆ.
ಪ್ರಕರಣದ ವಿಚಾರದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫಣೀಂದ್ರ ಅವರ ಫೋಟೋ ಒಂದರ ಬಗ್ಗೆ ಸ್ಪಷ್ಟನೆಗಾಗಿ ನ್ಯೂಸ್ ಚೆಕರ್ ಇಂಡಿಯಾ ಟುಡೇ ಉಪ ಸಂಪಾದಕ ನಾಗಾರ್ಜುನ ದ್ವಾರಕನಾಥ್ ಅವರನ್ನು ಸಂಪರ್ಕಿಸಲಾಗಿದ್ದು,ಇದನ್ನು ಸಾಮಾಜಿಕ ಜಾಲತಾಣದಿಂದ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಪ್ರಕರಣದ ಬಗ್ಗೆ ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಅವರ ಹೇಳಿಕೆಯನ್ನು ನ್ಯೂಸ್‌ಚೆಕರ್ ಪಡೆದಿದ್ದು, “ಶಬರಿ ಅಲಿಯಾಸ್ ಫೆಲಿಕ್ಸ್, ಸಂತೋಷ್ ಅಲಿಯಾಸ್ ಸಂತು, ವಿನಯ್ ರೆಡ್ಡಿ ಎಂಬವರನ್ನು ಬಂಧಿಸಲಾಗಿದೆ. ಫೆಲಿಕ್ಸ್, ಸಂತು ಮುಖ್ಯ ಆರೋಪಿಗಳಾಗಿದ್ದು, ಜಿನೆಟ್ ಕಂಪೆನಿಯಲ್ಲಿ ಕೊಲೆಯಾದ ಇಬ್ಬರು ವ್ಯಕ್ತಿಗಳೊಂದಿಗೆ ಕೆಲಸ ಮಾಡಿದ್ದರು. ಏರೋನಿಕ್ಸ್ ಕಂಪೆನಿ ಸ್ಥಳಾಂತರ ವಿಚಾರದಲ್ಲಿ ಅವರು ಫಣೀಂದ್ರ ಅವರೊಂದಿಗೆ ಮಾತುಕತೆ ನಡೆಸಿದ ಕೆಲವೇ ನಿಮಿಷದಲ್ಲಿ ದಾಳಿ ನಡೆಸಿದ್ದಾರೆ” ಎಂದಿದ್ದಾರೆ. ಜೊತೆಗೆ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿರುವುದಾಗಿ ಹೇಳಿದ್ದಾರೆ.
ಕೊಲೆಯಾದ ಫಣೀಂದ್ರ ಸುಬ್ರಹ್ಮಣ್ಯಂ ಅವರ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಎಸ್‌ಪಿ. ಬಿ. ದಯಾನಂದ ಅವರನ್ನು ನ್ಯೂಸ್‌ಚೆಕರ್ ಕೇಳಿದ್ದು, ಅವರು ಸ್ವಾಮೀಜಿ ಅಥವಾ ಪುರೋಹಿತರಾಗಿರಲಿಲ್ಲ, ಧಾರ್ಮಿಕ ಮುಖಂಡರೂ ಆಗಿರಲಿಲ್ಲ. ಅವರು ಕಂಪೆನಿಯ ಎಂ.ಡಿ. ಆಗಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.
ಇದರೊಂದಿಗೆ ಬೆಂಗಳೂರು ಪೊಲೀಸರು ಪ್ರಕರಣದ ಕುರಿತಾಗಿ ಕಪೋಲಕಲ್ಪಿತ ಪೋಸ್ಟ್ ಗಳನ್ನು ಮಾಡದಂತೆ ಟ್ವಿಟರ್ನಲ್ಲಿ ಮನವಿ ಮಾಡಿದ್ದಾರೆ. ಜೊತೆಗೆ ತನಿಖೆ ಪ್ರಗತಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಟ್ವೀಟ್ ಇಲ್ಲಿದೆ.
Also Read: ಫಾಸ್ಟ್ ಅಂಡ್ ಫ್ಯೂರಿಯಸ್ 8 ವೀಡಿಯೋಕ್ಕೆ ಫ್ರಾನ್ಸ್ ಹಿಂಸಾಚಾರದ ಲಿಂಕ್!
Conclusion
ಈ ಸತ್ಯಶೋಧನೆಯ ಪ್ರಕಾರ, ಫಣೀಂದ್ರ ಅವರ ಹತ್ಯೆ ಪ್ರಕರಣಕ್ಕೆ ಇನ್ನೊಂದು ಹಿಂದೂ ನಾಯಕನ ಕೊಲೆಯಾಗಿದೆ ಎಂದು ಕೋಮು ಬಣ್ಣ ಹಚ್ಚುವುದು ಮತ್ತು ಅವರು ಸ್ವಾಮೀಜಿ ಅಥವಾ ಪುರೋಹಿತರಾಗಿದ್ದರು ಎಂದು ಹೇಳುವುದು ತಪ್ಪಾದ ಸಂದರ್ಭವಾಗಿದೆ. ಮತ್ತು ಈ ಕೊಲೆ ಹಿಂದೆ ವ್ಯವಹಾರ ವೈಷಮ್ಯ ಇರುವುದು ಕಂಡುಬಂದಿದೆ ಎನ್ನುವುದನ್ನು ಗುರುತಿಸಲಾಗಿದೆ.
Result: False
Our Sources
Report By Mirror now, Dated: July 12, 2023
Report By Tv9 Kannada, Dated: July 12, 2023
Report By India today, Dated: July 12, 2023
Report By Kannadaprabha, Dated: July 12, 2023
Conversation with Girish Madenahalli, Senior crime reporter, Kannadaprabha
Conversation with Nagarjuna Dwarakanath, Deputy Editor, India Today
Conversation with DCP Laxmi Prasad, Bangalore Northeast
Conversation with SP B.Dayananda, Police commissioner of Bangalore
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.