ಸರ್ಕಾರಕ್ಕೆ ಒಂದು ತಿಂಗಳು, ಐದು ಗ್ಯಾರೆಂಟಿಗಳಲ್ಲಿ ಕಾಂಗ್ರೆಸ್ ಈಡೇರಿಸಿದ್ದೆಷ್ಟು? 

ಕಾಂಗ್ರೆಸ್‌ ಗ್ಯಾರೆಂಟಿ

Authors

ಸರ್ಕಾರಕ್ಕೆ ಒಂದು ತಿಂಗಳು, ಐದು ಗ್ಯಾರೆಂಟಿಗಳಲ್ಲಿ ಕಾಂಗ್ರೆಸ್ ಈಡೇರಿಸಿದ್ದೆಷ್ಟು? 
ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭ ಪ್ರಣಾಳಿಕೆ ಬಿಡುಗಡೆ ಗೊಳಿಸಿದ್ದ ಕಾಂಗ್ರೆಸ್‌ ಮುಖಂಡರು. ಚಿತ್ರಕೃಪೆ: ಪ್ರೊಕೇರಳ

ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭೂತಪೂರ್ವ ಜಯವನ್ನು ದಾಖಲಿಸಿದೆ. ಕಾಂಗ್ರೆಸ್‌ ಅನ್ನು ಅದ್ಭುತ ಗೆಲುವಿನ ದಡ ಸೇರಿಸುವಂತೆ ಮಾಡಲು, ಪ್ರತಿಪಕ್ಷಗಳು ನೆಲಕ್ಕಚ್ಚುವಂತೆ ಮಾಡಲು ಕಾರಣವಾದ ಪ್ರಮುಖ ಅಂಶ ಎಂದರೆ ಅದು ಗ್ಯಾರೆಂಟಿ ಯೋಜನೆಗಳು.

ಎಲ್ಲ ಪಕ್ಷಗಳಿಗಿಂತ ಭಿನ್ನ, ಚುನಾವಣೆಗೆ ಸಾಕಷ್ಟು ಪೂರ್ವದಲ್ಲೇ ಸಿದ್ಧತೆ ಮಾಡಿಕೊಂಡಿದ್ದ ಕಾಂಗ್ರೆಸ್‌, ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷ ಐದು ಗ್ಯಾರೆಂಟಿಗಳನ್ನು ಕರ್ನಾಟಕ ಜನತೆಗೆ ಘೋಷಿಸಿದ್ದು, ಅದನ್ನು ಮೊದಲ ಸಂಪುಟ ಸಭೆಯಲ್ಲೇ ಜಾರಿಗೆ ತರುವುದಾಗಿ ಹೇಳಿತ್ತು. 

ಸರ್ಕಾರಕ್ಕೆ ಒಂದು ತಿಂಗಳು, ಐದು ಗ್ಯಾರೆಂಟಿಗಳಲ್ಲಿ ಕಾಂಗ್ರೆಸ್ ಈಡೇರಿಸಿದ್ದೆಷ್ಟು? 
ಕಾಂಗ್ರೆಸ್‌ ಗ್ಯಾರೆಂಟಿ ಯೋಜನೆಗಳು

 ಈ ಗ್ಯಾರೆಂಟಿ ಯೋಜನೆಗಳ ಪ್ರಭಾವ ಮತ್ತು ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಜನರ ಆಡಳಿತ ವಿರೋಧಿ ಅಲೆಯಿಂದಾಗಿ ಕಾಂಗ್ರೆಸ್‌ 34 ವರ್ಷಗಳಲ್ಲೇ ಮೊದಲ ಬಾರಿಗೆ 135 ಸ್ಥಾನಗಳನ್ನು ಗೆದ್ದುಕೊಂಡಿದ್ದು ಅಭೂತಪೂರ್ವ ಜಯವನ್ನು ದಾಖಲಿಸಿತ್ತು. ಈ ಗೆಲುವಿನಲ್ಲಿ ಕಾಂಗ್ರೆಸ್‌ ಪಕ್ಷ ಒಟ್ಟು ಶೇ.42.88ರಷ್ಟು ಮತಹಂಚಿಕೆಯನ್ನು ದಾಖಲಿಸಿತ್ತು.

ಕಾಂಗ್ರೆಸ್‌ ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆಯೇ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಬಹುದೊಡ್ಡ ಜವಾಬ್ದಾರಿ ಬಂದಿದ್ದು, ಮೊದಲ ಸಂಪುಟ ಸಭೆಯಲ್ಲಿ ಯೋಜನೆಯನ್ನು ಜಾರಿ ಮಾಡಲು ಸಾಧ್ಯವಿಲ್ಲದ್ದರಿಂದ ತಾತ್ವಿಕ ಒಪ್ಪಿಗೆಯನ್ನಷ್ಟೇ ನೀಡಲಾಗಿತ್ತು. 

ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಇದೀಗ ಒಂದು ತಿಂಗಳು ಪೂರ್ಣಗೊಂಡಿದ್ದು,  ಮಹಿಳೆಯರಿಗೆ ಉಚಿತ ಬಸ್‌ ಸಂಚಾರದ ಗ್ಯಾರೆಂಟಿ ಹೊರತು ಪಡಿಸಿ ಉಳಿದ ಗ್ಯಾರೆಂಟಿಗಳು ಪೂರ್ಣವಾಗಿ ಜಾರಿಯಾಗಿಲ್ಲ. ಅವುಗಳಿನ್ನೂ ವಿವಿಧ ಪ್ರಕ್ರಿಯೆಗಳಲ್ಲಿವೆ. ಇದರೊಂದಿಗೆ ಗ್ಯಾರೆಂಟಿ ಯೋಜನೆಗಳ ಬಗ್ಗೆ, ಅದಕ್ಕೆ ತಗಲುವ ವೆಚ್ಚಗಳ ಬಗ್ಗೆ ಈ ಹಿಂದೆ ಮತ್ತು ಈಗಲೂ ವ್ಯಾಪಕ ಚರ್ಚೆಗಳಾಗುತ್ತಿವೆ.ಬಜೆಟ್‌ನಲ್ಲಿ ಈ ಯೋಜನೆಗಳಿಗೆ ವಾರ್ಷಕ ₹52 ಸಾವಿರ ಕೋಟಿ ಖರ್ಚಾಗಬಹುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಜೊತೆಗೆ ಗ್ಯಾರೆಂಟಿಗಳ ಅನುಷ್ಠಾನಕ್ಕೆ ಕಟ್ಟುನಿಟ್ಟಿನ ತೆರಿಗೆ ಸಂಗ್ರಹ, ಬಜೆಟ್‌ ಗಾತ್ರ ಹೆಚ್ಚಳದಂತ ಸುಳಿವನ್ನು ಅವರು ಈ ಹಿಂದೆಯೇ ಕೊಟ್ಟಿದ್ದರು. 

 ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಚುನಾವಣೆ ಸಂದರ್ಭ ಘೋಷಿಸಿದ ಐದು ಗ್ಯಾರೆಂಟಿ ಯೋಜನೆಗಳು ಮತ್ತು ಪ್ರಸ್ತುತ ಅವುಗಳು ಜಾರಿಯಾಗಿವೆಯೇ? ಸದ್ಯ ಅದರ ಪರಿಸ್ಥಿತಿಯೇನು ಎಂಬುದರ ಕುರಿತ ನೋಟ ಇಲ್ಲಿದೆ. 

 ಗ್ಯಾರೆಂಟಿ 1

ಸರ್ಕಾರಕ್ಕೆ ಒಂದು ತಿಂಗಳು, ಐದು ಗ್ಯಾರೆಂಟಿಗಳಲ್ಲಿ ಕಾಂಗ್ರೆಸ್ ಈಡೇರಿಸಿದ್ದೆಷ್ಟು? 

ಗೃಹಜ್ಯೋತಿ

ಘೋಷಿಸಿದ್ದೇನು?

ಎಲ್ಲ ಮನೆಗೆ 200 ಯುನಿಟ್‌ ವಿದ್ಯುತ್‌ ಉಚಿತ

ಈಗಿನ ಸ್ಥಿತಿ ಏನು?

ಷರತ್ತುಗಳೊಂದಿಗೆ 200 ಯುನಿಟ್‌ವರೆಗೆ ವಿದ್ಯುತ್ ಉಚಿತ

ಕಾಂಗ್ರೆಸ್‌ ಮಹತ್ವದ ಗ್ಯಾರೆಂಟಿಗಳಲ್ಲಿ ಒಂದಾದ ಗೃಹಜ್ಯೋತಿಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗಳು ನಡೆದು ಜುಲೈ 1ರಿಂದ ಯೋಜನೆ ಜಾರಿಗೆ ಸರ್ಕಾರ ನಿರ್ಧರಿಸಿತ್ತು.

ಜೂನ್ 15ರಿಂದ  ಗೃಹಜ್ಯೋತಿಗೆ ನೋಂದಾವಣೆ ಆರಂಭಗೊಂಡಿದ್ದು, ಜುಲೈಯಲ್ಲಿ ನೋಂದಾಯಿಸಿದವರಿಗೆ ಆಗಸ್ಟ್‌ ನಿಂದ ಇದರ ಪ್ರಯೋಜನ ಸಿಗಲಿದೆ.

ಸದ್ಯ ಯೋಜನೆ ಪ್ರಕಾರ, ಎಲ್ಲ ಮನೆಗೆ 200 ಯುನಿಟ್‌ ವಿದ್ಯುತ್‌ ಉಚಿತ ಎಂಬ ಗ್ಯಾರೆಂಟಿಯನ್ನು ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಷರತ್ತುಗಳೊಂದಿಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ಎಂದು ಮಾಡಿದೆ.

ಅಂದರೆ ಮಾಸಿಕ ಒಬ್ಬ ವ್ಯಕ್ತಿ 200 ಯುನಿಟ್ ವರೆಗೆ ಉಚಿತವಾಗಿ ಪಡೆದುಕೊಳ್ಳಬಹುದು. ಷರತ್ತಿನ ಪ್ರಕಾರ ಒಂದು ಮನೆಯ ಸರಾಸರಿ ವಿದ್ಯುತ್‌ ಬಳಕೆಯನ್ನು ತೆಗೆದು, ಅದಕ್ಕೆ ಶೇ.10ರಷ್ಟನ್ನು ಕೂಡಿಸಿ, ಅಷ್ಟು ಯುನಿಟ್‌ವರೆಗೆ ಮಾತ್ರ ಬಳಕೆಗೆ ಅವಕಾಶವಿದೆ. ಅದರಿಂದ ಹೆಚ್ಚು ವಿದ್ಯುತ್‌ ಬಳಕೆ ಮಾಡಿದರೆ, ವಿದ್ಯುತ್‌ ಬಿಲ್‌ ಕಟ್ಟಬೇಕಿದೆ.

ಈ ಯೋಜನೆ ಜಾರಿಗೂ ಮುನ್ನ ರಾಜ್ಯದಲ್ಲಿ ದೊಡ್ಡ ಚರ್ಚೆಯೇ ನಡೆದಿದ್ದು, ಹಲವೆಡೆ ವಿದ್ಯುತ್ ಬಿಲ್‌ ಕಟ್ಟುವುದಿಲ್ಲ ಎಂದು ಜನರು ಪ್ರತಿಭಟಿಸಿದ್ದರು.

ಜೊತೆಗೆ ಹಲವೆಡೆಗಳಲ್ಲಿ ಜನರು ಇನ್ನು ವಿದ್ಯುತ್‌ ಬಿಲ್‌ ಕಟ್ಟುವ ಅವಶ್ಯಕತೆ ಇಲ್ಲ ಎಂದು ಭಾವಿಸಿದ್ದು ತೀವ್ರ ಗೊಂದಲಕ್ಕೆ ಕಾರಣವಾಗಿತ್ತು. ಬಳಿಕ ಸರ್ಕಾರ ಸ್ಪಷ್ಟೀಕರಣ ಕೊಟ್ಟಿದ್ದು, ಸೇವಾಸಿಂಧು ಪೋರ್ಟಲ್‌ ಮೂಲಕ ಉಚಿತ ವಿದ್ಯುತ್‌ಗೆ ಅರ್ಜಿ ಸಲ್ಲಿಸುವಂತೆ ಹೇಳಿತ್ತು. ಈ ಪ್ರಕಾರ ಅರ್ಜಿ ಸಲ್ಲಿಸಿದವರಿಗಷ್ಟೇ ಷರತ್ತಿನ ಪ್ರಕಾರ ಉಚಿತ ವಿದ್ಯುತ್‌ ಸಿಗಲಿದೆ. 

ಗ್ಯಾರೆಂಟಿ 2

ಸರ್ಕಾರಕ್ಕೆ ಒಂದು ತಿಂಗಳು, ಐದು ಗ್ಯಾರೆಂಟಿಗಳಲ್ಲಿ ಕಾಂಗ್ರೆಸ್ ಈಡೇರಿಸಿದ್ದೆಷ್ಟು? 

ಗೃಹಲಕ್ಷ್ಮಿ

ಘೋಷಿಸಿದ್ದೇನು?

ಪ್ರತಿ ಮನೆಯ ಯಜಮಾನಿಗೆ ಪ್ರ ತಿಂಗಳಿಗೆ ₹2000

ಈಗಿನ ಸ್ಥಿತಿ ಏನು?

ಷರತ್ತುಗಳೊಂದಿಗೆ ಪ್ರತಿಮನೆಯ ಯಜಮಾನಿಗೆ ₹2000

ಪ್ರತಿ ಮನೆಯ ಯಜಮಾನಿಗೆ ₹2000 ರೂ. ನೀಡುವ ಈ ಯೋಜನೆಗೆ ಆ.15ರಂದು ಚಾಲನೆ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ತಾಂತ್ರಿಕ ಕಾರಣಗಳಿಂದಾಗಿ ಕೂಡಲೇ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದೂ ಹೇಳಿದ್ದರು. ಜೂನ್‌ 15 ರಿಂದ ಜುಲೈ 15 ರವರೆಗೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ಈ ಅವಧಿಯಲ್ಲಿ ಅರ್ಜಿದಾರರು ಅಂದರೆ ಮನೆ ಯಜಮಾನಿ ಬ್ಯಾಂಕ್‌ ಖಾತೆ ವಿವರ, ಆಧಾರ್‌ ಕಾರ್ಡ್‌ ವಿವರ ಹಾಗೂ ಯೋಜನೆಗೆ ಅರ್ಜಿ ಸಲ್ಲಿಸಬೇಕು ಎಂದು ಸರ್ಕಾರ ಹೇಳಿದೆ. ಅರ್ಜಿ ಸಲ್ಲಿಸಲು ಸೇವಾಸಿಂಧು ಮತ್ತು ಆಪ್‌ ಮೂಲಕ ಅರ್ಜಿ ಕೊಡಲು ಅವಕಾಶ ಇದೆ. ಆರಂಭದಲ್ಲಿ ಯಾವುದೇ ಷರತ್ತು ಇಲ್ಲದಿದ್ದರೂ, ಗಂಡ  ತೆರಿಗೆ ಪಾವತಿದಾರರಾಗಿದ್ದರೆ, ಸ್ವತಃ ಮಹಿಳೆಯೇ ತೆರಿಗೆ ಪಾವತಿದಾರರಾಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಹೇಳಿದೆ.

ಗ್ಯಾರೆಂಟಿ 3

ಸರ್ಕಾರಕ್ಕೆ ಒಂದು ತಿಂಗಳು, ಐದು ಗ್ಯಾರೆಂಟಿಗಳಲ್ಲಿ ಕಾಂಗ್ರೆಸ್ ಈಡೇರಿಸಿದ್ದೆಷ್ಟು? 

ಅನ್ನಭಾಗ್ಯ

ಘೋಷಿಸಿದ್ದೇನು?

ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ಉಚಿತ

ಈಗಿನ ಸ್ಥಿತಿಯೇನು?

ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿ ಇಲ್ಲ. ಕೇಂದ್ರದಿಂದ 5 ಕೆ.ಜಿ. ಅಕ್ಕಿ ಮಾತ್ರ ಉಚಿತ. ಒಟ್ಟಾರೆ 10 ಕೆ.ಜಿ. ಅಕ್ಕಿ ಕೊಡುವುದಾಗಿ ಹೇಳಿಕೆ. ಜೊತೆಗೆ 5 ಕೆ.ಜಿ. ಅಕ್ಕಿ ಬದಲಿಗೆ 170 ರೂ.ಗಳಂತೆ ಬ್ಯಾಂಕ್‌ ಖಾತೆಗೆ ಜಮೆ.

ಪ್ರತಿ ವ್ಯಕ್ತಿಗೆ 10 ಕೆ.ಜಿ. ಉಚಿತ ಅಕ್ಕಿ ಎಂದು ಕಾಂಗ್ರೆಸ್‌ ಸರ್ಕಾರ ಹೇಳಿದ್ದರೂ, ಅಕ್ಕಿ ಕೊಡಲು ತಡೆಯಾಗಿದೆ. ಆರಂಭದಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಸ್ವಾಮ್ಯದ ಎಫ್‌ಸಿಐ ಅಸಮ್ಮತಿ ವ್ಯಕ್ತಪಡಿಸಿದ್ದರಿಂದ ಸರ್ಕಾರ ವಿವಿಧ ರಾಜ್ಯಗಳ ಬಳಿ ಅಕ್ಕಿ ಕೇಳಿದ್ದು ಆದರೆ ಕೆಲವು ರಾಜ್ಯಗಳು ತಮ್ಮ ಬಳಿ ಅಕ್ಕಿ ಇಲ್ಲ ಎಂದು ಹೇಳಿದ್ದರೆ, ಇನ್ನು ಕೆಲವು ಹೆಚ್ಚಿನ ದರಪಟ್ಟಿ ನೀಡಿದ್ದವು. ಜುಲೈ 1ರಿಂದ ಅಕ್ಕಿ ಕೊಡುವುದಾಗಿ ಹೇಳಿದ್ದ ಸರ್ಕಾರಕ್ಕೆ ಇದರಿಂದ ಒತ್ತಡ ಉಂಟಾಗಿದ್ದು,ಅಕ್ಕಿ ಲಭ್ಯತೆ ಇಲ್ಲದ್ದರಿಂದ 5 ಕೆ.ಜಿ. ಅಕ್ಕಿ ಬದಲಾಗಿ ಎಫ್‌ಸಿಐಗೆ ನೀಡುವಂತೆ ಕೆ.ಜಿ.ಗೆ 34 ರೂ.ಗಳಂತೆ 170 ರೂ. ಹಣ ನೀಡಲು ನಿರ್ಧರಿಸಿದ್ದು ಜುಲೈ 10ರಂದು ಚಾಲನೆ ನೀಡಿದೆ. ಅಕ್ಕಿಯ ಲಭ್ಯತೆ ಆಗುವಲ್ಲಿವರೆಗೆ ಇದನ್ನು ಮುಂದುವರಿಸುವುದಾಗಿ ಹೇಳಿದೆ. 

ಈ ಪ್ರಕಾರ, 5 ಕೆ.ಜಿ. ಅಕ್ಕಿ ಕೇಂದ್ರ ಕೊಡುವ ಪಾಲಾಗಿದ್ದು, ಉಳಿದದ್ದನ್ನು ರಾಜ್ಯ ಕೊಡಬೇಕಾಗಿತ್ತು. ಆದರೆ ಅಲಭ್ಯತೆಯಿಂದಾಗಿ ಹಣ ಕೊಡಲು ನಿರ್ಧರಿಸಿದೆ. ಈ ತಿಂಗಳಿಂದ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಹಾಕುವುದಾಗಿ ಸರ್ಕಾರ ಹೇಳಿದೆ.

 ಗ್ಯಾರೆಂಟಿ 4

ಸರ್ಕಾರಕ್ಕೆ ಒಂದು ತಿಂಗಳು, ಐದು ಗ್ಯಾರೆಂಟಿಗಳಲ್ಲಿ ಕಾಂಗ್ರೆಸ್ ಈಡೇರಿಸಿದ್ದೆಷ್ಟು? 

ಯುವನಿಧಿ

ಘೋಷಿಸಿದ್ದೇನು?

ನಿರುದ್ಯೋಗ ಭತ್ಯೆ: ₹3000 ಪದವೀಧರರಿಗೆ, ₹1500 ಡಿಪೊಮಾ ಪದವೀಧರರಿಗೆ

ಈಗಿನ ಸ್ಥಿತಿ ಏನು?

ಷರತ್ತುಗಳೊಂದಿಗೆ ಯುವನಿಧಿ ಜಾರಿ, 2022-23ರಲ್ಲಿ ಪಾಸ್‌ ಆದವರಿಗೆ ಮಾತ್ರ ಯೋಜನೆ ಅನ್ವಯ

ರಾಜ್ಯದಲ್ಲಿ 2022-23ರಲ್ಲಿ ತೇರ್ಗಡೆಯಾದ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3000 ರೂ., ಡಿಪ್ಲೊಮಾ ಹೊಂದಿದ ನಿರುದ್ಯೋಗಿಗಳಿಗೆ ಮಾಸಿಕ 1500 ರೂಪಾಯಿಯಂತೆ ನಿರುದ್ಯೋಗ ಭತ್ಯೆ ನೀಡುವ “ಯುವ ನಿಧಿ ಯೋಜನೆ” ಜಾರಿಗೊಳಿಸಲು ತಾತ್ವಿಕ ಅನುಮೋದನೆ ನೀಡಿದೆ. ಜೊತೆಗೆ ಯೋಜನೆ ಅನುಷ್ಠಾನಕ್ಕೆ ಷರತ್ತು ಹಾಗೂ ಅರ್ಹತೆಯ ಮಾನದಂಡಗಳನ್ನು ವಿಧಿಸಿ ಆದೇಶ ಹೊರಡಿಸಿದೆ. ಈ ಆದೇಶದ ಅನ್ವಯ ಯೋಜನೆ ಅಕ್ಟೋಬರ್/ನವೆಂಬರ್ ನಿಂದಷ್ಟೇ ಆರಂಭವಾಗುವ ಸಾಧ್ಯತೆ ಇದೆ.

ಜೂನ್‌ 3ರಂದು ಆದೇಶ ಹೊರಬಿದ್ದಿದ್ದು, ಆ ಪ್ರಕಾರ, 2022- 23ನೇ ಸಾಲಿನಲ್ಲಿಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದ ಪದವೀಧರರಿಗೆ ನಿರುದ್ಯೋಗ ಭತ್ಯೆ ಸಿಗಲಿದೆ. ಪದವಿ/ ಡಿಪ್ಲೊಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಸಿಗದೆ ಇರುವ ಕನ್ನಡಿಗರಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ. ಈ ಭತ್ಯೆ 2 ವರ್ಷಕ್ಕೆ ಮಾತ್ರ. 2 ವರ್ಷದೊಳಗೆ ಉದ್ಯೋಗ ದೊರೆತರೆ ಯೋಜನೆ ಸೌಲಭ್ಯ ಸ್ಥಗಿತಗೊಳ್ಳಲಿದೆ. ಪ್ರತಿ ತಿಂಗಳು ಡಿಬಿಟಿ ಮೂಲಕ ಹಣ ಪಾವತಿ ಮಾಡಲಾಗುತ್ತದೆ. ‘ಸೇವಾ ಸಿಂಧು’ ಪೋರ್ಟಲ್‌ನಲ್ಲಿ ಭತ್ಯೆಗೆ ಅರ್ಜಿ ಸಲ್ಲಿಸಬೇಕು. ನಿರುದ್ಯೋಗ ಸ್ಥಿತಿ ಬಗ್ಗೆ ಸ್ವಯಂ ಘೋಷಣೆ ಸಾಕಾಗುತ್ತದೆ.. ಆದರೆ, ಉದ್ಯೋಗ ದೊರೆತ ನಂತರ ಘೋಷಣೆ ಮಾಡಿಕೊಳ್ಳದಿದ್ದರೆ ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿದೆ. 

ಗ್ಯಾರೆಂಟಿ 5

ಸರ್ಕಾರಕ್ಕೆ ಒಂದು ತಿಂಗಳು, ಐದು ಗ್ಯಾರೆಂಟಿಗಳಲ್ಲಿ ಕಾಂಗ್ರೆಸ್ ಈಡೇರಿಸಿದ್ದೆಷ್ಟು? 

ಶಕ್ತಿ

ಘೋಷಿಸಿದ್ದೇನು?

ಎಲ್ಲ ಮಹಿಳೆಯರಿಗೆ ಸಾಮಾನ್ಯ ಕೆಎಸ್ ಆರ್ಟಿಸಿ, ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ

ಈಗಿನ ಸ್ಥಿತಿಗತಿ

ಷರತ್ತುಗಳೊಂದಿಗೆ ರಾಜ್ಯಾದ್ಯಂತ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣ.

ರಾಜ್ಯಾದ್ಯಂತ ಸಾಮಾನ್ಯ ಸಾರಿಗೆ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂತಾರಾಜ್ಯ ಬಸ್‌ಗಳಲ್ಲಿ ಇಲ್ಲ, ರಾಜ್ಯದ ಮಹಿಳೆಯರಿಗೆ ಮಾತ್ರ ಉಚಿತ ಪ್ರಯಾಣ. ಪ್ರಯಾಣದ ವೇಳೆ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯವಾಗಿದೆ. ಆಪ್‌/ವೆಬ್‌ ಅಭಿವೃದ್ದಿ ಪಡಿಸಿದ ಬಳಿಕ ಗುರುತಿನ ಚೀಟಿ/ಸ್ಮಾರ್ಟ್ ಕಾರ್ಡ್ ತೆಗೆದುಕೊಳ್ಳಬೇಕು ಎಂದು ಸರ್ಕಾರ ಹೇಳಿದೆ. ಇದಕ್ಕೆ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಲಾಗಿದೆ. ಜೂನ್‌ 12ರಿಂದ ಈ ಯೋಜನೆಗೆ ಚಾಲನೆ ನೀಡಲಾಗಿತ್ತು.


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors