Authors
Claim
ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ, ಭಾರತಕ್ಕೆ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವಂತೆ ಕೆನಡಾ ಹೇಳಿದೆ, ಜಮ್ಮು ಮತ್ತು ಕಾಶ್ಮೀರದಲ್ಲಿ ‘ಊಹಿಸಲಾಗದ ಪರಿಸ್ಥಿತಿ’ಯಿರುವ ಬಗ್ಗೆ ಅದು ತನ್ನಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.
Fact
ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸುವ ಪ್ರಜೆಗಳಿಗೆ ನೀಡಿರುವ ಸಲಹೆ ಹೊಸಲದಲ್ಲ. ಅದು 2021ರಿಂದ ಬದಲಾವಣೆಯಾಗದೆ ಉಳಿದಿದೆ ಎಂದು ದಿಲ್ಲಿಯಲ್ಲಿರುವ ಕೆನಡಾ ಹೈಕಮಿಷನ್ ಸ್ಪಷ್ಟಪಡಿಸಿದೆ.
ಕೆನಡಾದ ಪ್ರಜೆ, ಖಲಿಸ್ತಾನಿ ಉಹ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ “ಆರೋಪ”ಗಳನ್ನು ಉಲ್ಲೇಖಿಸಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರ ಹೇಳಿಕೆ ದೊಡ್ಡ ವಿವಾದ ಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ಕೆನಡಾ ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿರುವುದು ಪ್ರತಿಯಾಗಿ ಭಾರತವೂ ಅದೇ ಕ್ರಮ ತೆಗೆದುಕೊಂಡಿದ್ದು ನವದೆಹಲಿ-ಟೊರೊಂಟೊ ಸಂಬಂಧಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲು ಕಾರಣವಾಗಿದೆ.
ಈ ಬೆನ್ನಲ್ಲೇ ಭಾರತಕ್ಕೆ ಪ್ರಯಾಣಿಸುವ ಕೆನಡಾದ ತನ್ನ ಪ್ರಜೆಗಳಿಗೆ ಪ್ರಯಾಣದ ಎಚ್ಚರಿಕೆಯನ್ನು ಕೆನಡಾ ನೀಡಿದೆ ಎಂಬ ಸುದ್ದಿ ಹರಿದಾಡಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತೀಯ ಸುದ್ದಿ ಸಂಸ್ಥೆ ಎಎನ್ಐ ಸೆಪ್ಟೆಂಬರ್ 19, 2023 ರಂದು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕೆನಡಾ ಸರ್ಕಾರವು ಭಾರತಕ್ಕೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಹೊಸ ಪ್ರಯಾಣ ಸಲಹೆಯನ್ನು ನೀಡಿದೆ, ಆ ಪ್ರಕಾರ “ಭಯೋತ್ಪಾದನೆ, ಉಗ್ರಗಾಮಿತ್ವ, ನಾಗರಿಕ ಅಶಾಂತಿ ಮತ್ತು ಅಪಹರಣ” ವಿಚಾರಗಳನ್ನು ಎತ್ತಿ ತೋರಿಸುವುದರೊಂದಿಗೆ ‘ಜಮ್ಮು ಮತ್ತು ಕಾಶ್ಮೀರದ ಅನಿರೀಕ್ಷಿತ ಪರಿಸ್ಥಿತಿ’ ಬಗ್ಗೆ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ಏಜೆನ್ಸಿಯು ತನ್ನ ವೆಬ್ಸೈಟ್ನಲ್ಲಿ ಇದೇ ಹೇಳಿಕೆಯನ್ನು ಹೊಂದಿರುವ ಸುದ್ದಿಯನ್ನು ಪ್ರಕಟಿಸಿದೆ.
ಈ ಲೇಖನವನ್ನು ಪ್ರಕಟಿಸುವ ಸಮಯದಲ್ಲಿ ಈ ಪೋಸ್ಟ್ 350 ಕ್ಕೂ ಹೆಚ್ಚು ಕಾಮೆಂಟ್ಗಳು ಮತ್ತು 500 ಕ್ಕೂ ಹೆಚ್ಚು ರಿಟ್ವೀಟ್ಗಳನ್ನು ಗಳಿಸಿದೆ.
ಎರಡೂ ದೇಶಗಳ ಮಧ್ಯೆ ಹೆಚ್ಚುತ್ತಿರುವ ರಾಜತಾಂತ್ರಿಕ ಜಟಾಪಟಿಯ ಮೇಲೆ ನಿಗಾ ಇಟ್ಟಿರುವ ಭಾರತೀಯ ಮಾಧ್ಯಮಗಳು ಈ ಪೋಸ್ಟ್ ಅನ್ನು ತ್ವರಿತವಾಗಿ ಎತ್ತಿಕೊಂಡು, ತಮ್ಮ ಸುದ್ದಿ ಬುಲೆಟಿನ್ಗಳಲ್ಲಿ, ವೆಬ್ ಸೈಟ್ ಗಳಲ್ಲಿ ಪ್ರಸಾರ ಮಾಡಿವೆ.
ವಿಯೋನ್, ಇಂಡಿಯನ್ ಎಕ್ಸ್ಪ್ರೆಸ್, ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ಇಂಡಿಯಾ ಟುಡೇ ಮುಂತಾದ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸಿವೆ.
ಟೈಮ್ಸ್ ನೌ, ಎನ್ಡಿಟಿವಿ ಹಿಂದಿ, ಮೊಜೊ ಸ್ಟೋರಿ, ಸಿಎನ್ಎನ್ ನ್ಯೂಸ್ 18 ಸೇರಿದಂತೆ ಹಲವು ಟಿವಿ ಚಾನೆಲ್ಗಳು ಈ ಸುದ್ದಿಯನ್ನು ಪ್ರಕಟಿಸಿವೆ.
ಕನ್ನಡದಲ್ಲಿಯೂ, “ಖಲಿಸ್ತಾನಿ ಭಯೋತ್ಪಾಕನ ಹತ್ಯೆ ವಿವಾದದ ನಡುವೆ ಭಾರತಕ್ಕೆ ಪ್ರಯಾಣಿಸುವ ಬಗ್ಗೆ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಕೆನಡಾ” ಎಂದು ಕನ್ನಡಿ ನ್ಯೂಸ್ ಸುದ್ದಿ ಮಾಡಿದೆ.
Fact Check/Verification
ಈ ಸುದ್ದಿಯ ಸತ್ಯಶೋಧನೆಗಾಗಿ, ನ್ಯೂಸ್‌ಚೆಕರ್ ಭಾರತಕ್ಕೆ ತೆರಳುವವರಿಗೆ ಕೆನಡಾ ಸರ್ಕಾರ ನೀಡಿದೆ ಎನ್ನಲಾದ ಪ್ರಯಾಣ ಸಲಹೆಯ ಬಗ್ಗೆ ಅವರ ವೆಬ್ಸೈಟ್ ಅನ್ನು ನಾವು ಶೋಧಿಸಿದ್ದೇವೆ, ಈ ವೇಳೆ ಕಂಡುಬಂದ ಪ್ರಕಾರ ಪುಟದ ಕೊನೆಯ ನವೀಕರಿಸಿದ ಆವೃತ್ತಿ ಸೆಪ್ಟೆಂಬರ್ 18, 2023 ರಂದು 14:48 ET ಆಗಿತ್ತು. ಜಮ್ಮು ಮತ್ತು ಕಾಶ್ಮೀರದ ವಿಭಾಗದಲ್ಲಿ “ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ – ಎಲ್ಲ ಪ್ರಯಾಣ ತಪ್ಪಿಸಿ” ಎಂದು ಶೀರ್ಷಿಕೆ ನೀಡಲಾಗಿದೆ ಮತ್ತು “ಅನಿರೀಕ್ಷಿತ ಭದ್ರತಾ ಪರಿಸ್ಥಿತಿಯಿಂದಾಗಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಎಲ್ಲಾ ಪ್ರಯಾಣವನ್ನು ತಪ್ಪಿಸಿ. ಇಲ್ಲಿ ಭಯೋತ್ಪಾದನೆ, ಉಗ್ರಗಾಮಿತ್ವ, ನಾಗರಿಕ ಅಶಾಂತಿ ಮತ್ತು ಅಪಹರಣದ ಬೆದರಿಕೆ ಇದೆ. ಈ ಸಲಹೆಯು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಗೆ ಸಂಚರಿಸುವುದಕ್ಕೆ ಅನ್ವಯಿಸುವುದಿಲ್ಲ” ಎನ್ನಲಾಗಿದೆ.
ವೆಬ್ಸೈಟ್ ನ ಇತ್ತೀಚಿನ ಅಪ್ಡೇಟ್ ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ವೆಬ್‌ಸೈಟ್ ಮಾಹಿತಿ ನೀಡಿದೆ. “ಇತ್ತೀಚಿನ ಅಪ್ಡೇಟ್ಗಳು: ಆರೋಗ್ಯ ವಿಭಾಗವನ್ನು ಅಪ್ಡೇಟ್ ಮಾಡಲಾಗಿದೆ. – ಪ್ರಯಾಣ ಆರೋಗ್ಯ ಮಾಹಿತಿ (ಕೆನಡಾದ ಸಾರ್ವಜನಿಕ ಆರೋಗ್ಯ ಸಂಸ್ಥೆ)” ಎಂದು ಅದರಲ್ಲಿದೆ.
ಪ್ರಪಂಚದಾದ್ಯಂತದ ದೇಶಗಳು ತಮ್ಮ ನಾಗರಿಕರಿಗೆ ನಿಯಮಿತವಾಗಿ ಪ್ರಯಾಣ ಸಲಹೆಗಳನ್ನು ನೀಡುವುದರಿಂದ, ನಾವು archive.org ಪುಟದಲ್ಲಿ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಪರಿಶೀಲಿಸಿದ್ದೇವೆ ಮತ್ತು ಪುಟವನ್ನು ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಆರ್ಕೈವ್ ಮಾಡಲಾಗಿದೆ ಎಂದು ಕಂಡುಕೊಂಡಿದ್ದೇವೆ.
ಜುಲೈ 19, 2023 ರಂದು ಆರ್ಕೈವ್ ಮಾಡಲಾದ ವೆಬ್ ಪುಟವು “ಅನಿರೀಕ್ಷಿತ ಭದ್ರತಾ ಪರಿಸ್ಥಿತಿಯಿಂದಾಗಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಎಲ್ಲ ಪ್ರಯಾಣವನ್ನು ತಪ್ಪಿಸಿ. ಭಯೋತ್ಪಾದನೆ, ಉಗ್ರಗಾಮಿತ್ವ, ನಾಗರಿಕ ಅಶಾಂತಿ ಮತ್ತು ಅಪಹರಣದ ಬೆದರಿಕೆ ಇದೆ. ಈ ಸಲಹೆಯು ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಗೆ ಅನ್ವಯಿಸುವುದಿಲ್ಲ” ಎಂದಿದೆ.
ಪುಟವನ್ನು ಕೊನೆಯದಾಗಿ ಜುಲೈ 6, 2023 ರಂದು 9:49ET ಗೆ ಅಪ್ಡೇಟ್ ಮಾಡಲಾಗಿದೆ ಎಂದು ತೋರಿಸಿದೆ. ಇದು ಸೆಪ್ಟೆಂಬರ್ 18 ರಂದು ವೆಬ್ ಸೈಟ್ ನಲ್ಲಿ ಏನಿತ್ತು ಎಂಬುದರ ಪದದಿಂದ ಪದಕ್ಕಿದ್ದ ನಿರೂಪಣೆಯಾಗಿದೆ.
ಹಾಗೆಯೇ, ಪ್ರಸಕ್ತ ವರ್ಷ 2023 ರಲ್ಲಿ, ಇಲ್ಲಿಯವರೆಗೆ, ಪುಟವನ್ನು ಇತ್ತೀಚಿನ ಆವೃತ್ತಿ ಸೇರಿದಂತೆ 13 ಸಂದರ್ಭಗಳಲ್ಲಿ ಆರ್ಕೈವ್ ಮಾಡಲಾಗಿದೆ, ಇವೆಲ್ಲವೂ ಜಮ್ಮು ಮತ್ತು ಕಾಶ್ಮೀರ ಶೀರ್ಷಿಕೆಯಡಿಯಲ್ಲಿ ಒಂದೇ ಪಠ್ಯವನ್ನು ತೋರಿಸಿವೆ ಮತ್ತು ಬದಲಾಗದೆ ಉಳಿದಿವೆ.
ಅದೇ ವೆಬ್ ಪುಟವನ್ನು 24 ರಲ್ಲಿ 2022 ಬಾರಿ ಅಪ್ಡೇಟ್ ಮಾಡಲಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರ ಶೀರ್ಷಿಕೆಯಡಿ ಹೇಳಿಕೆಯು ಬದಲಾಗದೆ ಉಳಿದಿದೆ ಎಂದು ನಾವು ಕಂಡುಕೊಂಡಿದ್ದೇವೆ.
ವೆಬ್ ಪುಟದ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಪರಿಶೀಲಿಸಿದಾಗ, ಈ ವಿಭಾಗವನ್ನು ಕೊನೆಯ ಬಾರಿಗೆ ಅಪ್ಡೇಟ್ ಮಾಡಿದ್ದು ಜುಲೈ 27, 2021 ರಂದು. “ಇತ್ತೀಚಿನ ಅಪ್ಡೇಟ್ ಗಳು: ಸಂಪೂರ್ಣ ಪ್ರಯಾಣ ಸಲಹೆ ವಿಷಯದ ಸಮಗ್ರ ವಿಮರ್ಶೆ ಮತ್ತು ಅಪ್ಡೇಟ್” ಎಂದು ಅಪ್ಡೇಟ್ ವಿಭಾಗದಲ್ಲಿ ತಿಳಿಸಲಾಗಿದೆ.
ಜುಲೈ 10, 2021 ರಂದು ಆರ್ಕೈವ್ ಮಾಡಲಾದ ಪುಟದ ಹಿಂದಿನ ಆವೃತ್ತಿಯು ವಿಭಿನ್ನ ಪಠ್ಯವನ್ನು ಹೊಂದಿದೆ. “ಭಯೋತ್ಪಾದಕ ಚಟುವಟಿಕೆಗಳು ಮತ್ತು ಹಿಂಸಾತ್ಮಕ ಘಟನೆಗಳಿಂದಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಿಗೆ ಎಲ್ಲಾ ಪ್ರಯಾಣವನ್ನು ತಪ್ಪಿಸಿ. ಈ ಸಲಹೆಯು ಮನಾಲಿ ಮೂಲಕ ಲಡಾಖ್ ಗೆ ಪ್ರಯಾಣಿಸುವುದು ಮತ್ತು ಲೇಹ್ ಗೆ ವಿಮಾನ ಪ್ರಯಾಣ ಮಾಡುವುದಕ್ಕೆ ಅನ್ವಯಿಸುವುದಿಲ್ಲ” ಎಂದಿದೆ.
“ದೇಶಾದ್ಯಂತ ಭಯೋತ್ಪಾದಕ ದಾಳಿಗಳಿಂದಾಗಿ ಭಾರತದಲ್ಲಿ ಹೆಚ್ಚಿನ ಮಟ್ಟದ ಎಚ್ಚರಿಕೆ”ಯಿಂದ ಇರುವಂತೆ ಕೆನಡಾದ ನಾಗರಿಕರನ್ನು ಒತ್ತಾಯಿಸುವ ಸಂದೇಶವು ಭಾರತಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡಲಾಗುವ ಸಲಹೆಗಳಲ್ಲಿ ನಿರಂತರವಾಗಿ ಕಾಣಿಸಿಕೊಂಡಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಎಚ್ಚರಿಕೆಯ ಆರಂಭಿಕ ದಾಖಲೆಯು ನವೆಂಬರ್ 19, 2017 ರಂದು ಆರ್ಕೈವ್ ಮಾಡಲಾದ ಆವೃತ್ತಿಯಲ್ಲಿದೆ. ಅಲ್ಲಿ “ದೇಶಾದ್ಯಂತ ಎಲ್ಲ ಸಮಯದಲ್ಲೂ ಭಯೋತ್ಪಾದಕ ದಾಳಿಯ ನಿರಂತರ ಬೆದರಿಕೆಯಿಂದಾಗಿ ಭಾರತದಲ್ಲಿ ಹೆಚ್ಚಿನ ಮಟ್ಟದ ಎಚ್ಚರಿಕೆ ವಹಿಸಿ” ಎಂದು ಹೇಳಲಾಗಿದೆ.
ಇನ್ನು ಈ ಸುದ್ದಿಗೆ ಸಂಬಂಧಿಸಿದಂತೆ ನಾವು ದಿಲ್ಲಿ ಮೂಲದ ಕೆನಡಾದ ಹೈಕಮಿಷನ್ ಅನ್ನು ಸಹ ಸಂಪರ್ಕಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರದ ನವೀಕರಣವು ಇತ್ತೀಚಿನದಲ್ಲ ಎಂದು ಹೈಕಮಿಷನ್ ನ್ಯೂಸ್ಚೆಕರ್ಗೆ ದೃಢಪಡಿಸಿದೆ. “ಸೆಪ್ಟೆಂಬರ್ 18 ರ ನವೀಕರಿಸಿದ ಪ್ರಯಾಣ ಸಲಹೆಯು ಆರೋಗ್ಯ ವಿಭಾಗದ ನವೀಕರಣಕ್ಕಾಗಿ ಮಾತ್ರ. ಅಪಾಯದ ಮಟ್ಟ ಮತ್ತು ಪ್ರಾದೇಶಿಕ ಸಲಹೆಗಳು ಬದಲಾಗಲಿಲ್ಲ” ಎಂದು ಹೈಕಮಿಷನ್ ಸ್ಪಷ್ಟಪಡಿಸಿದೆ.
Conclusion
ಭಾರತ ಮತ್ತು ಕೆನಡಾ ನಡುವಿನ ಉದ್ವಿಗ್ನತೆಯ ಮಧ್ಯೆ ಕೆನಡಾ ಪ್ರಯಾಣಿಕರಿಗ ಹೊಸ ಎಚ್ಚರಿಕೆ ಹೊರಡಿಸಿದೆ ಎಂದು ಸುದ್ದಿಸಂಸ್ಥೆ ಎಎನ್ಐ ಹೇಳಿದ ಹೇಳಿಕೆಯು ಸುಳ್ಳಾಗಿದೆ. ಈ ಮಾಹಿತಿಯು ಜುಲೈ 27, 2021 ರಿಂದ ಜಾರಿಯಲ್ಲಿದೆ ಮತ್ತು ಇದು ಇತ್ತೀಚಿನ ಬೆಳವಣಿಗೆಯಲ್ಲ ಎಂದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ.
Result: False
Our Sources
Archive.org page of Canadian travel advisory to India, Dated: September 19, 2023
Archive.org page of Canadian travel advisory to India, Dated: July 19, 2023
Archive.org page of Canadian travel advisory to India, Dated: July 27, 2021
Archive.org page of Canadian travel advisory to India, Dated: July 10, 2021
Archive.org page of Canadian travel advisory to India, Dated: November 19, 2017
Communication with officials of the Canadian High Commission in New Delhi
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.