Authors
Claim
ಬೆಂಗಳೂರಲ್ಲಿ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ
Fact
ಕೆಎಸ್‌ಆರ್ ಎಸ್‌ನಿಂದ ಇದೀಗ ನೀರು ಹರಿಸಿರುವುದು ಬೆಂಗಳೂರಿನ ನೀರಿನ ಉದ್ದೇಶಕ್ಕಾಗಿ. ಮಳವಳ್ಳಿಯ ಶಿವಾ ಡ್ಯಾಂ ಗೆ ನೀರು ಬಿಟ್ಟು ಅಲ್ಲಿಂದ ಅದನ್ನು ಬೆಂಗಳೂರಿಗೆ ಪೂರೈಸಲು ನೀರು ಹರಿಯಬಿಡಲಾಗಿದೆ
ಬೆಂಗಳೂರಲ್ಲಿ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಬೆಂಗಳೂರಿನಲ್ಲಿ ನೀರಿಗೆ ತೀವ್ರವಾದ ಹಾಹಾಕಾರ ಕಂಡುಬಂದ ಬೆನ್ನಲ್ಲೇ, ಕೆಆರ್ ಎಸ್ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ಬಿಜೆಪಿ ಕರ್ನಾಟಕ ಎಕ್ಸ್ ನಲ್ಲಿ ಮಾಡಿದ ಪೋಸ್ಟ್ ನಲ್ಲಿ “ಬೆಂಗಳೂರಿನಲ್ಲಿ ಕುಡಿಯಲು ಹನಿ ನೀರು ಕೂಡ ಸಿಗುತ್ತಿಲ್ಲ. ಆದರೆ, ನಾಡ ದ್ರೋಹಿ @INCKarnataka ತಮಿಳುನಾಡಿಗೆ ಮಾತ್ರ ಕಳ್ಳತನದಿಂದ ಕಾವೇರಿ ನೀರು ಹರಿಸುತ್ತಲೇ ಇದೆ….” ಎಂದು ಹೇಳಿದೆ.
Also Read: ರಂಜಾನ್ ಪ್ರಯುಕ್ತ ಶಾಲೆಗಳ ಸಮಯವನ್ನು ರಾಜ್ಯ ಸರ್ಕಾರ ಬದಲಾಯಿಸಿದೆಯೇ?
ಇದರ ಆರ್ಕೈವ್ ಆವೃತ್ತಿ ಇಲ್ಲಿದೆ.
ಇದೇ ರೀತಿಯ ಪೋಸ್ಟ್ ಗಳನ್ನು ನಾವು ಇಲ್ಲಿ, ಇಲ್ಲಿ, ಇಲ್ಲಿ ಕಂಡುಕೊಂಡಿದ್ದೇವೆ.
Fact Check/ Verification
ಕಾವೇರಿ ನೀರು ತಮಿಳುನಾಡಿಗೆ ಹರಿಸಲಾಗುತ್ತಿದೆಯೇ ಎಂಬ ಬಗ್ಗೆ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಕೆಲವೊಂದು ಮಾಧ್ಯಮ ವರದಿಗಳು ಲಭ್ಯವಾಗಿವೆ. ಈ ಮಾಧ್ಯಮ ವರದಿಗಳಲ್ಲಿ ನೀರು ಹರಿಸುತ್ತಿರುವುದನ್ನು ನಿರಾಕರಿಸಿರುವುದನ್ನು ಗಮನಿಸಿದ್ದೇವೆ.
ಮಾರ್ಚ್ 11, 2024ರಂದು ಇಟಿವಿ ಭಾರತ್ ಪ್ರಕಟಿಸಿದ ವರದಿಯಲ್ಲಿ “ಕೆಆರ್ಎಸ್ನಿಂದ ತಮಿಳುನಾಡಿಗೆ ನೀರು ಬಿಟ್ಟಿಲ್ಲ, ಬೆಂಗಳೂರಿಗಾಗಿ ಹರಿಬಿಡಲಾಗಿದೆ: ನೀರಾವರಿ ಇಲಾಖೆ ಸ್ಪಷ್ಟನೆ” ಎಂದಿದೆ. ಈ ವರದಿಯಲ್ಲಿ, ಬೆಂಗಳೂರಿಗೆ ನೀರಿನ ಬರ ಇದ್ದರೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳ ಆರೋಪ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಪ್ರತಿಕಾ ಪ್ರಕಟಣೆ ಹೊರಡಿಸಿದೆ. ”ಇಲಾಖೆಯ ಮೈಸೂರು ವಿಭಾಗ ಹಾಗೂ ಬೆಂಗಳೂರು ನಗರಕ್ಕೆ ಕುಡಿಯಲು ನೀರು ಸರಬರಾಜು ಮಾಡುವ ಉದ್ದೇಶಕ್ಕಾಗಿ ಮಳವಳ್ಳಿ ತಾಲೂಕಿನ ಶಿವಾ ಅಣೆಕಟ್ಟೆಯನ್ನು ಉಪಯೋಗಿಸಲಾಗುತ್ತಿದೆ. ಕಾವೇರಿ ನದಿಯಿಂದ ಬೆಂಗಳೂರು, ಮೈಸೂರು ಮತ್ತು ಇತರೆ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯಲು ಹಾಗೂ ಕೈಗಾರಿಕೆಗಳಿಗೆ ಸರಬರಾಜು ಮಾಡಲು ಪ್ರತಿದಿನ ಒಟ್ಟಾರೆ 1000 ಕ್ಯೂಸೆಕ್ನಷ್ಟು ನೀರಿನ ಅಗತ್ಯತೆ ಇದೆ” ಎಂದು ನೀರಾವರಿ ಇಲಾಖೆ ತಿಳಿಸಿದೆ.
ಮಾರ್ಚ್ 11, 2024ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯಲ್ಲಿ, “ಬೆಂಗಳೂರಿನ ದಾಹ ನೀಗಿಸಲು ಶಿವಾ ಡ್ಯಾಮ್‌ಗೆ ನೀರು” ಎಂದಿದೆ. ಬೆಂಗಳೂರು ನಗರಕ್ಕೆ ನೀರು ಪೂರೈಕೆಗಾಗಿ ಕಾವೇರಿ ನೀರಾವರಿ ನಿಗಮ ಕೆಆರ್ ಎಸ್ ಡ್ಯಾಮ್ ನಿಂದ 4780 ಕ್ಯೂಸೆಕ್ಸ್ ಮತ್ತು ಕಬಿನಿ ಡ್ಯಾಂ ನಿಂದ 2 ಸಾವಿರ ಕ್ಯೂಸೆಕ್ಸ್ ನೀರನ್ನು ಮಳವಳ್ಳಿ ತಾಲೂಕಿನ ಶಿವಾ ಡ್ಯಾಂಗೆ ಹರಿಸಿದ್ದು, ಇದರಿಂದ ಶಿವಾ ಡ್ಯಾಂನಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ ಎಂದಿದೆ. ಶಿವಾ ಡ್ಯಾಂನಲ್ಲಿ ನೀರಿನ ಮಟ್ಟ ಇಳಿದಿದ್ದರಿಂದ ಇದಕ್ಕೆ ನೀರು ಹರಿಸಲು ಬಿಡಬ್ಲ್ಯೂಎಸ್‌ಎಸ್ ಬಿಯವರು ಶನಿವಾರ ಕಾವೇರಿ ನಿಗಮಕ್ಕೆ ಮನವಿ ಮಾಡಿಕೊಂಡಿದ್ದರು. ಅದರಂತೆ ಭಾನುವಾರ ಕಾವೇರಿ ನೀರ ಹೊರ ಹರಿವು 2769 ಕ್ಯೂಸೆಕ್ಸ್ ಇದ್ದು, ಶಿವಾ ಡ್ಯಾಂನಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ 1008 ಕ್ಯೂಸೆಕ್ಸ್ ಗೆ ಇಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾಗಿ ವರದಿಯಲ್ಲಿದೆ.
Also Read: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 21 ಬಿಲಿಯನ್ ವರ್ಷ ಹಳೆಯ ಡ್ರೋನ್ ಸಿಕ್ಕಿದೆಯೇ?
ಕಾವೇರಿ ನೀರನ್ನು ಬೆಂಗಳೂರಿಗೆ ಹರಿಸಲಾಗುತ್ತಿದೆಯೇ ಎಂಬ ಬಗ್ಗೆ ಖಚಿತಪಡಿಸಲು ನಾವು ಮಂಡ್ಯದ ಪ್ರಜಾವಾಣಿ ವರದಿಗಾರರಾದ ಯೋಗೇಶ್ ಅವರನ್ನು ಸಂಪರ್ಕಿಸಿದ್ದೇವೆ. ಅವರು ಈ ಬಗ್ಗೆ ಮಾತನಾಡಿ, “ಬೆಂಗಳೂರಿನ ನೀರಿನ ಬೇಡಿಕೆಯನ್ನು ಈಡೇರಿಸಲು ಕಾವೇರಿ ನೀರನ್ನು ಹರಿಸಲಾಗಿದೆ. ಬೆಂಗಳೂರಿಗೆ ನೀರು ಪೂರೈಸುವ ಶಿವಾ ಡ್ಯಾಂನಲ್ಲಿ ನೀರು ಬರಿದಾಗಿದ್ದು,ಈ ಕೂಡಲೇ ನೀರಿಗಾಗಿ ಕಾವೇರಿ ನೀರು ಕೊಡಲಾಗಿದೆ. ತಮಿಳುನಾಡಿಗೆ ನೀರು ಹರಿಸಿಲ್ಲ. ಇದು ಹೊರತಾಗಿಯೂ ನದಿ ಪಾತ್ರಗಳನ್ನು ಬರಿದು ಮಾಡುವಂತೆ ಇಲ್ಲ. ಅದಕ್ಕಾಗಿ ಅಲ್ಪ ಪ್ರಮಾಣದಲ್ಲಿ ನೀರು ಹರಿಸಲೇಬೇಕಾಗುತ್ತದೆ ” ಎಂದು ಹೇಳಿದ್ದಾರೆ.
ಹೆಚ್ಚಿನ ಮಾಹಿತಗಾಗಿ ನಾವು ತಮಿಳುನಾಡು ಭಾಗದ ಇಂಡಿಯಾ ಟುಡೇ ಪತ್ರಕರ್ತ ಪ್ರಮೋದ್ ಮಾಧವ್ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್‌ಚೆಕರ್ ನೊಂದಿಗೆ ಮಾತನಾಡಿ, “ಸದ್ಯ ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿಲ್ಲ. ಪರಿಸರ ವ್ಯವಸ್ಥೆ ಕಾಪಾಡಿಕೊಳ್ಳಲು ನದಿ ಪಾತ್ರವನ್ನು ಸಂಪೂರ್ಣ ಬರಿದು ಮಾಡುವಂತೆಯೂ ಇಲ್ಲ. ನೀರು ಅಲ್ಪ ಹರಿವನ್ನು ಕಾಪಾಡಿಕೊಳ್ಳಬೇಕಾಗುತ್ತದೆ” ಎಂದಿದ್ದಾರೆ.
ಇನ್ನು ಈ ಕುರಿತಂತೆ ವರದಿಗಳ ಬಗ್ಗೆ ಕೃಷ್ಣರಾಜಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನಾ ವೃತ್ತ, ಮಂಡ್ಯದ ಅಧೀಕ್ಷಕ ಇಂಜಿನಿಯರ್ ರಘುರಾಮ್ ಮತ್ತು ಮುಖ್ಯ ಇಂಜಿನಿಯರ್ ಆರ್.ಎಲ್.ವೆಂಕಟೇಶ್ ಅವರು ಸ್ಪಷ್ಟನೆ ನೀಡಿದ್ದು, “ಮಾರ್ಚ್ 9 ಮತ್ತು ಮಾರ್ಚ್ 10, 2024ರಂದು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವಂತೆ ಕೆಆರ್ ಎಸ್ ಜಲಾಶಯದಿಂದ 4000 ಕ್ಯೂಸೆಕ್ಸ್ ಗೂ ಹೆಚ್ಚು ನೀರನ್ನು ತಮಿಳುನಾಡಿಗೆ ಹರಿಸಿಲ್ಲ. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಬಳಕೆಗೆ ಮಳವಳ್ಳಿಯ ಶಿವಾ ಅಣೆಕಟ್ಟೆಗೆ ನೀರು ಹರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.” ಈ ಕುರಿತ ಪತ್ರಿಕಾ ಪ್ರಕಟಣೆಯನ್ನು ಇಲ್ಲಿ ನೋಡಬಹುದು.
ಹಾಗಿದ್ದರೆ, ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನಿಯಂತ್ರಣ ಸಮಿತಿಯ ಇತ್ತೀಚಿನ ಶಿಫಾರಸುಗಳು ಮತ್ತು ಆಗ ಹೇಳಿದ ನೀರಿನ ಪ್ರಮಾಣ ಎಷ್ಟು ಎಂಬುದನ್ನು ನಾವು ಪರಿಶೀಲಿಸಿದ್ದೇವೆ. ಜನವರಿ 18, 2024ರ ಪ್ರಜಾವಾಣಿ ವರದಿಯಲ್ಲಿ ಕರ್ನಾಟಕವು ಫೆಬ್ರವರಿಯಲ್ಲಿ ತಮಿಳುನಾಡಿಗೆ ನಿತ್ಯ 998 ಕ್ಯೂಸೆಕ್ ಕಾವೇರಿ ನೀರನ್ನು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ. ಹಾಗೆಯೇ, ಫೆಬ್ರವರಿ 13, 2024ರ ಕನ್ನಡ ಪ್ರಭ ವರದಿಯ ಪ್ರಕಾರ, ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ತಮಿಳುನಾಡಿಗೆ ತಲಾ 2.5 (ಒಟ್ಟು 5 ಟಿಎಂಸಿ) ನೀರು ಹರಿಸಲು ಶಿಫಾರಸು ಮಾಡಿದೆ.
Conclusion
ಈ ಸತ್ಯಶೋಧನೆಯ ಪ್ರಕಾರ, ಸದ್ಯ ಕರ್ನಾಟಕ ಕಾವೇರಿ ನೀರು ಹರಿಸಿರುವುದು ಬೆಂಗಳೂರಿನ ನೀರಿನ ಉದ್ದೇಶಕ್ಕಾಗಿ ಆಗಿದೆ. ಇದು ತಮಿಳುನಾಡಿಗೆ ಹರಿಸಿದ ನೀರಲ್ಲ ಗೊತ್ತಾಗಿದೆ.
Also Read: ಹಿಂದೂ ಹುಡುಗಿಗೆ ಬ್ರೈನ್ ವಾಶ್ ಮಾಡಿ ಬುರ್ಖಾ ತೊಡುವಂತೆ ಮುಸ್ಲಿಂ ಹುಡುಗಿಯಿಂದ ಬಲವಂತ, ಸತ್ಯ ಏನು?
Result: False
Our Sources
Report By Etv Bharat, Dated: March 11, 2024
Report By Times of India, Dated: March 11, 2024
Report By Prajavani, Dated: January 18, 2024
Report By Kannadaprabha, Dated: February 13, 2024
Conversation with Yogesh, Prajavani Mandya
Conversation with Pramod, India Today Chennai
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.