Fact Check: ನಂದಿನಿ ಉತ್ಪನ್ನಗಳ ಮೇಲೆ ಹಿಂದಿ ಹೇರಿಕೆ? ಕ್ಲೇಮ್‌ ಹಿಂದಿನ ಸತ್ಯ ಏನು?

ನಂದಿನಿ ಉತ್ಪನ್ನ, ಹಿಂದಿ ಹೇರಿಕೆ, ಎಜಿಮಾರ್ಕ್‌, ಕೇಂದ್ರ ಸರ್ಕಾರ

ಪ್ರಸಿದ್ಧ ನಂದಿನಿ ಹಾಲಿನ ಉತ್ಪನ್ನಗಳ ಮೇಲೆ ಹಿಂದಿ ಹೇರಿಕೆಯಾಗುತ್ತಿದೆ, ಹಿಂದಿ ಹೇರಿಕೆಯನ್ನು ನಿಲ್ಲಿಸಿ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಟ್ವಿಟರ್‌ನಲ್ಲಿ  ಈ ಕುರಿತು ಕಿರಿಕ್ ಗೆ ಕಾರ‌್ತಿಕ್ l KIRIK ge K@rTH!K ಎಂಬ ಬಳಕೆದಾರು ಹಾಕಿದ ಕ್ಲೇಮ್‌ ಒಂದು ಕಂಡುಬಂದಿದ್ದು ಅದರಲ್ಲಿ, : ಹಿಂದಿ ಅಂದರೆ ಇಂಡಿಯಾ ಅಂದುಕೊಂಡಿದ್ದಾರೆ ಈ ಬಿಜೆಪಿ ಮತ್ತು ಸಿಎಂ ಕರ್ನಾಟಕ ಅವರು. ಕನ್ನಡನಾಡ ನಂದಿನಿ ಮೇಲೆ ಹಿಂದಿ ಬಂತು, ಕರ್ನಾಟಕ ಸರ್ಕಾರ ಹೋಗಿ ಭಾರತ ಸರ್ಕಾರ ಆಯ್ತ” ಎಂದು ಬರೆಯಲಾಗಿದೆ.

ಈ ಕ್ಲೇಮಿನ ಸತ್ಯಶೋಧನೆಯನ್ನು ನಡೆಸಿದಾಗ, ಇದು ತಪ್ಪು ಎಂದು ತಿಳಿದುಬಂದಿದೆ.

Fact Check/ Verification

ಸತ್ಯಶೋಧನೆಗಾಗಿ ಮೊದಲು ಕ್ಲೇಮಿನೊಂದಿಗೆ ಹಾಕಲಾಗಿರುವ ಮತ್ತು ಕೆಂಪು ಗುರುತಿನಲ್ಲಿ ತೋರಿಸಲಾದ ಚಿಹ್ನೆಯನ್ನು ಪರಿಶೀಲಿಸಿಲಾಗಿದೆ. ಇದು ಎಜಿಮಾರ್ಕ್ ಎಂದು ತಿಳಿದುಬಂದಿದೆ. ಈ ಮಾರ್ಕ್‌ನಲ್ಲಿ ಮೇಲ್ಭಾಗದಲ್ಲಿ ಭಾರತ ಸರ್ಕಾರ ಎಂದು ಹಿಂದಿಯಲ್ಲಿ ಮತ್ತು ಕೆಳಭಾಗ ಗವರ್ನ್‌ಮೆಂಟ್‌ ಆಫ್‌ ಇಂಡಿಯಾ ಎಂದು ಇಂಗ್ಲಿಷ್ ನಲ್ಲಿ ಬರೆಯಲಾಗಿದೆ.

ಕೃಷಿ ಉತ್ಪನ್ನಗಳ ಕುರಿತ ಮಾರಾಟಕ್ಕೆ ಕೇಂದ್ರ ಕೃಷಿ ಸಚಿವಾಲಯದ ಅಧೀನದಲ್ಲಿರುವ ಮಾರುಕಟ್ಟೆ ಮತ್ತು ಪರಿಶೀಲನೆ ಕುರಿತ ನಿರ್ದೇಶನಾಲಯ ಕೊಡುವ ಪ್ರಮಾಣ ಪತ್ರ ಎಜಿಮಾರ್ಕ್‌ ಆಗಿದ್ದು, ಇದನ್ನು ನಿರ್ದಿಷ್ಟ ಕೃಷ್ಯುತ್ಪನ್ನಗಳ ಗುಣಮಟ್ಟತೆಗಾಗಿ ಇದನ್ನು ಬಳಸಲಾಗುತ್ತದೆ. ಈ ಪ್ರಮಾಣ ಪತ್ರದ ಮೊಹರು ಇದಾಗಿದ್ದು, ಇದನ್ನು ಕೆಲವು ಉತ್ಪನ್ನಗಳಲ್ಲಿ ಕಾಣಬಹುದು.

ಈ ಕುರಿತು ನಾವು ಶೋಧನೆ ನಡೆಸಿದ್ದು, ಆಹಾರ ಮತ್ತು ನಿಯಂತ್ರಣ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಎಜಿಮಾರ್ಕ್‌ ಬಗ್ಗೆ ಈ ಮಾಹಿತಿಯನ್ನು ನೋಡಬಹುದು.

ಇದರಲ್ಲಿ “ಹಣ್ಣುಗಳು, ತರಕಾರಿ, ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಕಾಳುಗಳು, ಸಸ್ಯಜನ್ಯ ಎಣ್ಣೆಗಳು, ತುಪ್ಪ, ಮಸಾಲೆಗಳು, ಜೇನುತುಪ್ಪ, ಕೆನೆ ಬೆಣ್ಣೆ,  ಗೋಧಿ, ಕಡಲೆ ಹುಡಿ ಇತ್ಯಾದಿಗಳಿಗೆ ಎಜಿ ಮಾರ್ಕ್‌ಗಳನ್ನು ಕೊಡಲಾಗುತ್ತದೆ” ಎಂದಿದೆ.

Also Read: ರಿಷಬ್ ಶೆಟ್ಟಿಗೆ ನಿಜಕ್ಕೂ ಸಿಕ್ಕಿದ್ದು ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯೇ?

ಇದರೊಂದಿಗೆ ಮಾರುಕಟ್ಟೆ ಮತ್ತು ಪರಿಶೀಲನೆ ಕುರಿತ ನಿರ್ದೇಶನಾಲಯದ ಎಜಿಮಾರ್ಕ್ ಗೆ ಬೇಕಾದ ಅರ್ಹತೆಯನ್ನು ಒಳಗೊಂಡ ಮಾನದಂಡಗಳನ್ನು ಇಲ್ಲಿ ನೋಡಬಹುದು. ಇದೇ ನಿಯಮಾವಳಿಯಲ್ಲಿ, ಎಜಿ ಮಾರ್ಕ್‌ನ ಚಿಹ್ನೆಯೂ ಇದ್ದು ಅದನ್ನು ಇಲ್ಲಿ ಗುರುತಿಸಬಹುದು.

ಎಜಿ ಮಾರ್ಕ್‌ ಮೊಹರು

ಇದರೊಂದಿಗೆ ಉತ್ಪನ್ನವೊಂದು ಎಜಿಮಾರ್ಕ್ ಅನ್ನು ಹೊಂದಿರಬೇಕಾದರೆ ಹೊಂದಿರಬೇಕಾದ ಅರ್ಹತೆ ಬಗ್ಗೆ 3ನೇ ಶೆಡ್ಯೂಲ್‌ನ 7ನೇ ನಿಯಮದಲ್ಲಿ ಹೇಳಲಾಗಿದೆ. ಒಟ್ಟು 10 ನಿಯಮಗಳು ಇದರಲ್ಲಿದ್ದು ಇವುಗಳನ್ನು ಪೂರೈಸಿದರೆ ಮಾತ್ರ ಉತ್ಪನ್ನಕ್ಕೆ ಎಜಿಮಾರ್ಕ್‌ ಲಭ್ಯವಾಗುತ್ತದೆ.

ಎಜಿ ಮಾರ್ಕ್‌ ಕುರಿತ ನಿಯಮ

ನಂದಿನಿ ಉತ್ಪನ್ನಗಳ ಗುಣಮಟ್ಟ ಕುರಿತ ಹಿರಿಯ ಉಪ ನಿರ್ದೇಶಕರಾದ ರಾಜಶೇಖರ್‌.ಎ ಅವರು ಹೇಳುವ ಪ್ರಕಾರ, ನಂದಿನಿಯ ತುಪ್ಪ ಮತ್ತು ಬೆಣ್ಣೆಗೆ ಎಜಿಮಾರ್ಕ್‌ ದೃಢೀಕರಣ ಇದೆ. ಇದು ಸುಮಾರು 30 ವರ್ಷದ ಹಿಂದೆ ಪಡೆದುಕೊಳ್ಳಲಾಗಿದೆ. ಈ ಮಾರ್ಕ್‌ ಕಡ್ಡಾಯವಲ್ಲ. ಇದು ಐಚ್ಛಿಕವಾಗಿದ್ದು, ಅತ್ಯುತ್ತಮ ಗುಣಮಟ್ಟದ ಉತ್ಪನ್ನಕ್ಕೆ ಸ್ವಯಂ ಪ್ರೇರಣೆಯಿಂದ ಪಡೆದುಕೊಂಡಿರುವ ದೃಢೀಕರಣವಾಗಿದೆ. ಇದು ಕೇಂದ್ರ ಸರ್ಕಾರದ  ಕೃಷಿ ಸಚಿವಾಲಯದ ಅಧೀನದಲ್ಲಿರುವ ಮಾರುಕಟ್ಟೆ ಮತ್ತು ಪರಿಶೀಲನೆ ಕುರಿತ ನಿರ್ದೇಶನಾಲಯ ಕೊಡುವ ಪ್ರಮಾಣ ಪತ್ರವಾಗಿದ್ದು, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿದೆ. ಎಜಿಮಾರ್ಕ್ ದೃಢೀಕರಣ ಇರುವ ಉತ್ಪನ್ನಗಳು ಅದೇ ರೀತಿಯ ಚಿಹ್ನೆಯನ್ನು ಹೊಂದಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ನ್ಯೂಸ್‌ಚೆಕರ್‌ ಸತ್ಯಶೋಧನೆಯಲ್ಲಿ ಕಂಡುಕೊಂಡ ಪ್ರಕಾರ, ಅಮೂಲ್‌ನ ಬೆಣ್ಣೆ, ತುಪ್ಪದ ಪ್ಯಾಕ್‌ನಲ್ಲೂ ಎಜಿಮಾರ್ಕ್‌ನ ಮೊಹರು ಇದೆ. ಇದನ್ನು ಇಲ್ಲಿ ನೋಡಬಹುದು. ಅಮೆಜಾನ್‌ ಮತ್ತು ಬಿಗ್‌ಬಾಸ್ಕೆಟ್‌ ಮಾರಾಟ ಜಾಲತಾಣಗಳಲ್ಲಿ ಅಮೂಲ್‌ ತುಪ್ಪ ಮತ್ತು ಬೆಣ್ಣೆಯ ಪ್ಯಾಕ್‌ಗಳನ್ನು ಗಮನಿಸಲಾಗಿದ್ದು, ಅದರಲ್ಲಿ ಎಜಿಮಾರ್ಕ್‌ ಇರುವುದು ಗೊತ್ತಾಗಿದೆ.

ಅಮೂಲ್ ಬೆಣ್ಣೆ ಪ್ಯಾಕ್‌ನಲ್ಲಿ ಕಂಡುಬಂದ ಎಜಿಮಾರ್ಕ್‌ (ಚಿತ್ರಕೃಪೆ: ಅಮೆಜಾನ್‌)
ಅಮೂಲ್‌ ತುಪ್ಪದ ಪ್ಯಾಕ್‌ನಲ್ಲಿ ಕಂಡುಬಂದ ಎಜಿಮಾರ್ಕ್‌ (ಚಿತ್ರಕೃಪೆ: ಬಿಗ್‌ಬಾಸ್ಕೆಟ್‌)

Conclusion

ಈ ಸತ್ಯಶೋಧನೆಯ ಪ್ರಕಾರ, ಎಜಿಮಾರ್ಕ್‌ ಎನ್ನುವುದು ಕೃಷ್ಯುತ್ಪನ್ನದ ಗುಣಮಟ್ಟದ ಕುರಿತಾಗಿ ಇರುವ ಮೊಹರಾಗಿದೆ. ಇದನ್ನು ವಿವಿಧ ತಯಾರಕರು ತಮ್ಮ ಉತ್ಪನ್ನಗಳಲ್ಲಿ ಬಳಸುವುದನ್ನು ಕಾಣಬಹುದು. ಆದ್ದರಿಂದ ನಂದಿನಿಯ ಮೇಲೆ ಕೇಂದ್ರ ಸರ್ಕಾರದಿಂದ ಹಿಂದಿ ಹೇರಿಕೆ ಎನ್ನುವ ಈ ಕ್ಲೇಮ್‌ ತಪ್ಪಾಗಿದೆ.

Result: False

Our Source:
Official website of Food regulatory
Official website of Directorate of Marketing & Inspection
Conversation with KMF Deputy Director, Rajashekhar. A


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.