Fact Check
ಮುರ್ಷಿದಾಬಾದ್ ನಲ್ಲಿ ಹಿಂದೂಗಳನ್ನು ಮನೆ ಬಿಟ್ಟು ಓಡಿಸಲಾಗುತ್ತಿದೆ, ಕೊಲ್ಲಲಾಗುತ್ತಿದೆ ಎಂದು ಜೈಪುರ ವೀಡಿಯೋ ವೈರಲ್

Claim
ಮುರ್ಷಿದಾಬಾದ್ ನಲ್ಲಿ ಹಿಂದೂಗಳನ್ನು ಮನೆ ಬಿಟ್ಟು ಓಡಿಸಲಾಗುತ್ತಿದೆ, ಕೊಲ್ಲಲಾಗುತ್ತಿದೆ
Fact
ಮುರ್ಷಿದಾಬಾದ್ ನಲ್ಲಿ ಹಿಂದೂಗಳನ್ನು ಮನೆ ಬಿಟ್ಟು ಓಡಿಸಲಾಗುತ್ತಿದೆ, ಕೊಲ್ಲಲಾಗುತ್ತಿದೆ ಎಂದು ತಪ್ಪು ಹೇಳಿಕೆಗಳೊಂದಿಗೆ ಜೈಪುರದ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ. ಆಸ್ತಿ ಪ್ರಕರಣವೊಂದಕ್ಕೆ ಸಂಬಂಧಿಸಿ, ಗುಂಪೊಂದು ಕುಟುಂಬದ ಮೇಲೆ ನಡೆಸಿದ ಹಲ್ಲೆ ನಡೆಸಿ ಮನೆ ಮೇಲೆ ನಡೆದ ದಾಳಿಯ ವೀಡಿಯೋ ಇದಾಗಿದೆ.
ಮುರ್ಷಿದಾಬಾದ್ ನಲ್ಲಿ ಹಿಂದೂಗಳನ್ನು ಮನೆ ಬಿಟ್ಟು ಓಡಿಸಲಾಗುತ್ತಿದೆ ಮತ್ತು ಹಿಂದೂ ಸಮುದಾಯಕ್ಕೆ ಸೇರಿದ ಒಂದೇ ಕುಟುಂಬದ ಮೂವರನ್ನು ಕೊಲ್ಲಲಾಗಿದೆ ಎಂಬಂತೆ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಪ್ರತಿಭಟನೆ ನಡೆದಿದ್ದು ಹಿಂಸಾತ್ಮಕ ರೂಪ ಪಡೆದಿದೆ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಇನ್ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.
ಈ ಘಟನೆ ಹಿನ್ನೆಲೆಯಲ್ಲಿ ಒಂದು ವೀಡಿಯೋ ಜೊತೆಗೆ ವಿವಿಧ ಹೇಳಿಕೆಗಳನ್ನು ಉಲ್ಲೇಖಿಸಿ ಹಂಚಿಕೊಳ್ಳುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಇದು ಜೈಪುರದಲ್ಲಿ ನಡೆದ ಗಲಾಟೆಯೊಂದರ ವೀಡಿಯೋ ಎಂದು ಕಂಡುಬಂದಿದೆ.


ಈ ಹೇಳಿಕೆಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
Also Read: ರಾಮಸೇತು ಅವಶೇಷ ನೀರೊಳಗೆ ಅನ್ವೇಷಿಸುವ ಸ್ಕ್ಯೂಬಾಡೈವರ್ ಗಳು; ಇದು ಎಐ ರಚನೆ!
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ಇನ್ವಿಡ್ ಮೂಲಕ ತೆಗೆದು ಗೂಗಲ್ ಲೆನ್ಸ್ ನಲ್ಲಿ ಸರ್ಚ್ ಮಾಡಿದ್ದೇವೆ. ಈ ವೇಳೆ ವಿವಿಧ ವರದಿಗಳು ಲಭ್ಯವಾಗಿವೆ.
ಏಪ್ರಿಲ್ 8, 2024ರ ಇಂಡಿಯಾ ಟಿವಿ ವರದಿಯಲ್ಲಿ “ರಾಜಸ್ಥಾನ ಸಿಎಂ ಭಜನ್ ಲಾಲ್ ಅವರ ವಿಧಾನಸಭಾ ಕ್ಷೇತ್ರವಾದ ಸಂಗನೇರ್ ನಿಂದ ದುಷ್ಕರ್ಮಿಗಳ ಗುಂಪೊಂದು ಒಂದು ಕುಟುಂಬದ ಮೇಲೆ ಕೋಲು ಮತ್ತು ಕಲ್ಲುಗಳಿಂದ ದಾಳಿ ಮಾಡುತ್ತಿದ್ದು, ಆ ಕುಟುಂಬವು ಜೀವ ಉಳಿಸಿಕೊಳ್ಳಲು ಓಡಿಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಮಾಲ್ಪುರ ಗೇಟ್ ಪೊಲೀಸ್ ಠಾಣೆ ಪ್ರದೇಶದ ಸಂಗನೇರ್ ರೈಲ್ವೆ ನಿಲ್ದಾಣದ ಬಳಿಯ ದಾದಾ ಗುರುದೇವ್ ನಗರದಲ್ಲಿ ಈ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಸುಮಾರು 40 ರಿಂದ 50 ದುಷ್ಕರ್ಮಿಗಳು ಜಮೀನನ್ನು ವಶಪಡಿಸಿಕೊಳ್ಳಲು ಕಾರಿನಲ್ಲಿ ಬಂದಿದ್ದರು. ಈ ಜನರು 50 ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದ ಕುಟುಂಬದ ಮೇಲೆ ದಾಳಿ ಮಾಡಿ, ಇಡೀ ಪ್ರದೇಶದಲ್ಲಿ ಭೀತಿ ಮೂಡಿಸುವಷ್ಟು ಭಯವನ್ನು ಹರಡಿದರು. ಕಲ್ಲು ತೂರಾಟದಲ್ಲಿ ಮಹಿಳೆ ಸೇರಿದಂತೆ ಐದು ಜನರು ಗಾಯಗೊಂಡಿದ್ದಾರೆ. “ ಎಂದಿದೆ.

ಏಪ್ರಿಲ್ 8, 2024ರ ಟಿವಿ9 ಹಿಂದಿ ವರದಿಯಲ್ಲಿ “ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಗೂಂಡಾಗಿರಿಯ ಚಿತ್ರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಭೂಮಿಯನ್ನು ವಶಪಡಿಸಿಕೊಳ್ಳಲು, ದುಷ್ಕರ್ಮಿಗಳು ವಾಹನಗಳಲ್ಲಿ ಬಂದು ಜನರನ್ನು ಥಳಿಸಲು ಪ್ರಾರಂಭಿಸಿದರು. 50 ವರ್ಷಗಳಿಂದ ಆ ಮನೆಯಲ್ಲಿ ವಾಸಿಸುತ್ತಿದ್ದ ಕುಟುಂಬದ ಮೇಲೆ 40-50 ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ. ಭೂಮಿಯನ್ನು ವಶಪಡಿಸಿಕೊಳ್ಳಲು, ದುಷ್ಕರ್ಮಿಗಳು ಅಲ್ಲಿ ವಾಸಿಸುವ ಜನರನ್ನು ನಿಂದಿಸಿ, ನಂತರ ಅವರನ್ನು ಕೆಟ್ಟದಾಗಿ ಥಳಿಸಿದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.” ಎಂದಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಇನ್ನಷ್ಟು ಶೋಧ ನಡೆಸಿದಾಗ, ಏಪ್ರಿಲ್ 11, 2024ರ ಆಜ್ ತಕ್ ವರದಿಯಲ್ಲಿ “ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಅವರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕುಟುಂಬದ ಮೇಲೆ ಕಲ್ಲು ತೂರಾಟ ನಡೆದ ನಂತರ ಪೊಲೀಸರ ಕಣ್ಣು ತೆರೆಯಿತು. ವಿವಾದಿತ ಭೂಮಿಯನ್ನು ಹಗಲು ಹೊತ್ತಿನಲ್ಲಿ ಆಕ್ರಮಿಸಿಕೊಳ್ಳುವ ಉದ್ದೇಶದಿಂದ ಗೂಂಡಾಗಿರಿಯಲ್ಲಿ ತೊಡಗಿ ಭಯೋತ್ಪಾದನೆಯನ್ನು ಹರಡುತ್ತಿದ್ದ ದುಷ್ಕರ್ಮಿಗಳಿಗೆ ಪೊಲೀಸರು ತಡವಾಗಿಯಾದರೂ ಕಾನೂನಿನ ಉತ್ತಮ ಪಾಠ ಕಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು 10 ಆರೋಪಿಗಳನ್ನು ಬಂಧಿಸಿ ಜನದಟ್ಟಣೆಯ ಮಾರುಕಟ್ಟೆಯಲ್ಲಿ ಬರಿಗಾಲಲ್ಲಿ ನಡೆಯುವಂತೆ ಮಾಡಿದರು” ಎಂದಿದೆ.

ಏಪ್ರಿಲ್ 9, 2024ರ ನ್ಯೂಸ್ ಇಂಡಿಯಾ 24 ವರದಿಯಲ್ಲೂ ರಾಜಸ್ಥಾನ ಸಿಎಂ ಭಜನ್ ಲಾಲ್ ಅವರ ಕ್ಷೇತ್ರದಲ್ಲಿ ಭೂಮಿಯನ್ನು ವಶಪಡಿಸಿಕೊಂಡು ಕುಟುಂಬದ ಮೇಲೆ ದಾಳಿಗೆ 50 ಗೂಂಡಾಗಳು ಆಗಮಿಸಿದರು ಎಂಬ ಶೀರ್ಷಿಕೆಯಲ್ಲಿ ವೀಡಿಯೋ ವರದಿ ನೀಡಲಾಗಿದೆ.
Conclusion
ಈ ಸಾಕ್ಷ್ಯಾಧಾರಗಳ ಪ್ರಕಾರ, ವೈರಲ್ ವೀಡಿಯೋ ಮುರ್ಷಿದಾಬಾದ್ ನ ವಕ್ಫ್ ಗಲಭೆ ಕುರಿತಾದ್ದಲ್ಲ, ಜೈಪುರದಲ್ಲಿ ಕುಟುಂಬವೊಂದರ ಮೇಲೆ ನಡೆದ ದಾಳಿಯ ವೀಡಿಯೋವನ್ನು ತಪ್ಪು ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ.
Our Sources
Report By India TV, Dated: April 8, 2024
Report By Tv9 Hindi, Dated: April 8, 2024
Report By Aajtak, Dated: April 11, 2024
YouTube Video By News India 24, April 9, 2024