ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಹಿಂದೂಗಳ ಮೇಲೆ ದಾಳಿ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ನಾವು ಈ ಪೋಸ್ಟ್ ಅನ್ನು ಕಂಡಿದ್ದೇವೆ. ಆದರೆ ಈ ನಿರ್ದಿಷ್ಟವಾದ ವೀಡಿಯೋ ಮಾಲ್ಡಾಕ್ಕೆ ಸಂಬಂಧಿಸಿದ್ದಲ್ಲ, ಇದು ಬಾಂಗ್ಲಾದೇಶದ್ದು ಎಂದು ಕಂಡುಬಂದಿದೆ.

Fact Check/Verification
ಸತ್ಯಶೋಧನೆಗಾಗಿ ವೈರಲ್ ವೀಡಿಯೋದ ಕೀಫ್ರೇಂಗಳನ್ನು ಇನ್ ವಿಡ್ ಟೂಲ್ ಸಹಾಯದಿಂದ ತೆಗೆದು ಅದನ್ನು ಗೂಗಲ್ ಲೆನ್ಸ್ ಮೂಲಕ ಸರ್ಚ್ ನಡೆಸಿದ್ದೇವೆ. ಈ ವೇಳೆ দ্যা ডেইলি কাগজ (ದಿ ಡೈಲಿ ಪೇಪರ್) ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ವೀಡಿಯೋದ ಸುದೀರ್ಘ ಆವೃತ್ತಿಯೊಂದು ಕಂಡುಬಂದಿದೆ. ಈ ವೀಡಿಯೋಕ್ಕೆ”ಇವರು ಯಾರು” (ಅನುವಾದಿಸಲಾಗಿದೆ) ಎಂಬ ಶೀರ್ಷಿಕೆ ಕೊಡಲಾಗಿದೆ. ಈ ವೀಡಿಯೋವನ್ನು ನಾವು ಇನ್ನಷ್ಟು ಶೋಧನೆಗೊಳಪಡಿಸಿದ್ದು ಇದು ಬಾಂಗ್ಲಾದೇಶದ ಸಿಲ್ಹೆಟ್ ಎಂಬಲ್ಲಿ ನಡೆದ ಹಿಂಸಾಚಾರದ್ದು ಎಂದು ಗೊತ್ತಾಗಿದೆ.
ವೀಡಿಯೋದ ಇನ್ನಷ್ಟು ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಗೆ ಒಳಪಡಿಸಿದಾಗ, ಪ್ರೊಥೊಮ್ ಆಲೊ ವರದಿ ಕಂಡುಬಂದಿದೆ. 2023 ನವೆಂಬರ್ 27ರಂದು ಯೂಟ್ಯೂಬ್ ವೀಡಿಯೋದಲ್ಲಿ ಸಿಲ್ಹೆಟ್‌ನಲ್ಲಿ ಮುತ್ತಿಗೆ ಬೆಂಬಲಿಸಿ ಪಂಜಿನ ಮೆರವಣಿಗೆ ಮತ್ತು ವಾಹನ ಧ್ವಂಸ (ಅನುವಾದಿಸಲಾಗಿದೆ) ಎಂಬ ಶೀರ್ಷಿಕೆ ಕೊಡಲಾಗಿದೆ. ಇದರಲ್ಲಿ ಹಿಂಸಾಚಾರದ ವೀಡಿಯೋ ಕಂಡಿದ್ದೇವೆ.
ಅದೇ ರೀತಿ ಡಿಸೆಂಬರ್ 4, 2023ರಂದು ಡಿಬಿಸಿ ನ್ಯೂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಕಟಿಸಲಾದ ವೀಡಿಯೋದಲ್ಲಿ ಇದೇ ರೀತಿಯ ದೃಶ್ಯಗಳನ್ನು ನೋಡಿದ್ದೇವೆ. ಈ ವೀಡಿಯೋದ ಶೀರ್ಷಿಕೆಯಲ್ಲಿ ಸಿಲ್ಹೆಟ್‌ನಲ್ಲಿ ದಿಗ್ಬಂಧನಕ್ಕೆ ಬೆಂಬಲವಾಗಿ ಸ್ವಯಂಸೇವಕರ ಪಂಜಿನ ಮೆರವಣಿಗೆ (ಅನುವಾದಿಸಲಾಗಿದೆ) ಎಂದಿದೆ.
ವೈರಲ್ ದೃಶ್ಯಗಳನ್ನು ಪರಿಶೀಲನೆ ಮಾಡಿದಾಗ, ‘ಮೀರ್ ಸೆರಾಮಿಕ್ ಲಿಮಿಟೆಡ್ ಖಾನ್ ಎಂಪೋರಿಯಮ್’ ಎಂಬ ಅಂಗಡಿಯೊಂದು ಕಾಣುತ್ತದೆ. ಪ್ರೋಥೋಮ್ ಅಲೋ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೋದಲ್ಲಿಯೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದನ್ನು ನಾವು ಗೂಗಲ್ ನಕ್ಷೆ ಮೂಲಕ ಹುಡುಕಿದ್ದು ಅದು ಸಿಲ್ಹೆಟ್ ನಲ್ಲಿದೆ ಎಂದು ಗುರುತಿಸಿದ್ದೇವೆ.


ಘಟನೆ ನಡೆದ ಸ್ಥಳ ಗೂಗಲ್ ಮ್ಯಾಪ್ ನಲ್ಲಿರುವಂತೆ
ಘಟನೆ ಬಗ್ಗೆ ನಾವು ವರದಿಗಳನ್ನು ಹುಡುಕಾಡಿದ್ದು, ನವೆಂಬರ್ 26, 2023ರ ಢಾಕಾ ಟ್ರಿಬ್ಯೂನ್ ವರದಿಯ ಪ್ರಕಾರ ಬಿಎನ್‌ಪಿ ನಾಯಕರು ಮತ್ತು ಕಾರ್ಯಕರ್ತರು ದಿಗ್ಬಂಧನವನ್ನು ಬೆಂಬಲಿಸಿ ಸಿಲ್ಹೆಟ್‌ನಲ್ಲಿ ಪಂಜಿನ ಮೆರವಣಿಗೆ ನಡೆಸಿದರು . ಮೆರವಣಿಗೆಯ ಸಮಯದಲ್ಲಿ ಹಲವಾರು ವಾಹನಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಬೆಂಕಿ ಹಚ್ಚಲಾಯಿತು. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ನಗರದ ಸುಬಿದ್ ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯು ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿತು ಎಂದಿದೆ. ಇದೇ ರೀತಿಯ ವರದಿಯನ್ನು ಇಲ್ಲಿ ನೋಡಬಹುದು.
ಇನ್ನು ವೀಡಿಯೋ ಮಾಲ್ಡಾದಲ್ಲಿ ನಡೆದ ಘಟನೆಯದ್ದಲ್ಲ, ಅದು ನಕಲಿ ಎಂದು ಎಕ್ಸ್ ಪೋಸ್ಟ್ ನಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ಪೋಸ್ಟ್ ಇಲ್ಲಿದೆ.
Conclusion
ಈ ಸತ್ಯಶೋಧನೆಯ ಪ್ರಕಾರ, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಹಿಂದೂಗಳ ಮೇಲೆ ದಾಳಿ ಎಂದ ವೀಡಿಯೋ ನಿಜವಾದ್ದಲ್ಲ, ಅದು ಬಾಂಗ್ಲಾದೇಶದ ಸಿಲ್ಹೆಟ್ ಎಂಬಲ್ಲಿ ಪ್ರತಿಭಟನೆಯೊಂದರ ವೇಳೆ ನಡೆದ ಹಿಂಸಾಚಾರದ್ದು ಎಂದು ತಿಳಿದುಬಂದಿದೆ.
Also Read: ಔರಂಗಜೇಬ್ ನಿಂದಿಸುವ ಫಲಕ ಹಿಡಿದ ಸಿಎಸ್‌ಕೆ ಅಭಿಮಾನಿ; ವೈರಲ್ ಚಿತ್ರ ನಿಜವೇ?
Our Sources
YouTube Video By Prothom Alo, Dated: November 27, 2023
YouTube Video By DBC News, Dated: December 4, 2023
Report By Dhaka Tribune, Dated: November 26, 2023
X post By West Bengal Police, Dated: March 28, 2025
Google Map
(Inputs From Rifat, Newschecker Bangladesh)