Fact Check: ಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜ ಸೇರಿಸಿ ಕುಡಿದರೆ ಪೈಲ್ಸ್ ಗುಣವಾಗುತ್ತಾ?

ಪೈಲ್ಸ್‌, ಕಾಮಕಸ್ತೂರಿ, ಕಲ್ಲುಸಕ್ಕರೆ

Claim
ಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜಗಳು ಸೇರಿಸಿ ಕುಡಿಯುವುದರಿಂದ ಪೈಲ್ಸ್ ಗುಣವಾಗುತ್ತದೆ

Fact
ಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜಗಳನ್ನು ಸೇರಿಸಿ ಕುಡಿಯುವುದರಿಂದ ನಾರಿನಂಶ ಹೆಚ್ಚಿ ಇದು ಪೈಲ್ಸ್‌ ಕಡಿಮೆ ನೋವಿರುವಂತೆ ಮಾಡಬಹುದು. ಆದರೆ ಇದರಿಂದ ಪೈಲ್ಸ್‌ ಗುಣವಾಗುವುದಿಲ್ಲ

ಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜಗಳು ಸೇರಿಸಿ ಕುಡಿಯುವುದರಿಂದ ಪೈಲ್ಸ್ (ಮೂಲವ್ಯಾಧಿ) ಗುಣವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ಹರಿದಾಡಿದೆ.

ಫೇಸ್ ಬುಕ್‌ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ “ಕಲ್ಲುಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜವನ್ನು 1 ವಾರ ಇದನ್ನ ನೀರಲ್ಲಿ ಹಾಕಿ ಹೀಗೆ ಕುಡಿಯಿರಿ ಪೈಲ್ಸ್ ಸಮಸ್ಯೆ ಎಷ್ಟು ಬೇಗ ಕಮ್ಮಿ ಆಗುತ್ತೆ ನೋಡಿ” ಎಂದಿದೆ.

Also Read: ಹಗಲಿನಲ್ಲಿ ಹೆಚ್ಚು ನಿದ್ರೆ ಮಾಡುವವರು ಶೀಘ್ರದಲ್ಲಿ ಖಿನ್ನತೆಗೆ ಒಳಗಾಗುತ್ತಾರೆ ಎಂಬುದು ನಿಜವೇ?

ಈ ಕುರಿತು ನಾವು ಸತ್ಯಶೋಧನೆ ಮಾಡಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ. ಕೇವಲ ಮನೆಮದ್ದುಗಳನ್ನು ಅನುಸರಿಸಿ ಪೈಲ್ಸ್‌ಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಕಂಡುಕೊಳ್ಳಲಾಗಿದೆ.

Fact Check/Verification

ಹೆಮೊರೊಯಿಡ್ಸ್ ಅನ್ನು ಸಾಮಾನ್ಯವಾಗಿ ಪೈಲ್ಸ್/ಮೂಲವ್ಯಾಧಿ ಎಂದು ಕರೆಯಲಾಗುತ್ತದೆ. ಗುದದ್ವಾರ ಮತ್ತು ಗುದನಾಳದಲ್ಲಿ ಊದಿಕೊಂಡ ನಾಳಗಳಿಂದ ಹೀಗಾಗುತ್ತದೆ.

ಇದು ಹತ್ತಿರದ ಅಂಗಾಂಶಗಳಲ್ಲಿ ಉರಿಯೂತ / ಊತಕ್ಕೆ ಕಾರಣವಾಗುತ್ತದೆ. ಜೊತೆಗೆ ಗುದದಲ್ಲಿ ತುರಿಕೆ, ಗುದದಲ್ಲಿ ನೋವು, ಗುದದ್ವಾರದ ಬಳಿ ಉಂಡೆಗಳ ರೀತಿ ಸಂರಚನೆಗಳ ಸೃಷ್ಟಿ, ಗುದನಾಳದಿಂದ ರಕ್ತಸ್ರಾವ ಮುಂತಾದ ರೋಗಲಕ್ಷಣಗಳಿಂದ ಪೈಲ್ಸ್ ತೀವ್ರ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.

ಗುದನಾಳದಲ್ಲಿ ಹೆಚ್ಚಿದ ಒತ್ತಡದಿಂದಾಗಿ ಪೈಲ್ಸ್ ರೋಗ ಸಂಭವಿಸುತ್ತದೆ.ಈ  ಒತ್ತಡವು ಗುದದ್ವಾರ ಮತ್ತು ಗುದನಾಳದ ಬಳಿ ರಕ್ತನಾಳಗಳನ್ನು ವಿಸ್ತರಿಸುವುದರಿಂದ ಪೈಲ್ಸ್ ಉಂಟಾಗುತ್ತದೆ. ದೀರ್ಘಕಾಲದ ಮಲಬದ್ಧತೆ, ಭಾರವಾದ ತೂಕವನ್ನು ಎತ್ತುವುದು, ದೀರ್ಘಕಾಲದ ಅತಿಸಾರ ಅಥವಾ ಮಲ ಹೋಗುವಾಗ ಆಯಾಸವಾಗುವುದು ಮುಂತಾದ ಪರಿಸ್ಥಿತಿ ಇದನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ. ಇದಲ್ಲದೆ, ಪೈಲ್ಸ್ ಕಾಯಿಲೆಗೆ  ಗರ್ಭಾವಸ್ಥೆ, ವಯಸ್ಸು, ತೂಕ ಮತ್ತು ಆಹಾರ ಪದ್ಧತಿ ಇತ್ಯಾದಿಗಳೂ ಕಾರಣವಾಗಬಹುದು.

ವೈದ್ಯಕೀಯ ತಜ್ಞರು ಸಾಮಾನ್ಯವಾಗಿ ಪೈಲ್ಸ್ ಅನ್ನು ಗುಣಪಡಿಸಲು ಅಥವಾ ನಿರ್ವಹಿಸಲು ಆಹಾರದ ಮಾರ್ಪಾಡುಗಳನ್ನು ಸೂಚಿಸುತ್ತಾರೆ. ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಮಲವು ಮೃದುವಾಗುತ್ತದೆ ಮತ್ತು ಸುಲಭವಾಗಿ ಹೊರಹೋಗುತ್ತದೆ. ಅಲ್ಲದೆ, ಕುಡಿಯುವ ನೀರು ಮತ್ತು ದ್ರವಗಳು ಮಲವಿಸರ್ಜನೆ ಚೆನ್ನಾಗಿ ಆಗುವಂತೆ ಸಹಾಯ ಮಾಡುತ್ತದೆ.

ಪೈಲ್ಸ್ ಕಾಯಿಲೆಯೊಂದಿಗೆ, ದೇಹದ ತೂಕ, ಆರೋಗ್ಯ ಸ್ಥಿತಿ, ಚಟುವಟಿಕೆಯ ಮಟ್ಟ ಮತ್ತು ಭೌಗೋಳಿಕ ಸ್ಥಳದ ಆಧಾರದ ಮೇಲೆ ಪ್ರತಿದಿನ ಎಷ್ಟು ನಾರಿನಂಶ ಮತ್ತು ನೀರು, ಪಾನೀಯ ಪ್ರಮಾಣ ಬೇಕು ಎನಂದು ವೈದ್ಯರನ್ನು ಕೇಳುವುದು ಅಗತ್ಯ

Also Read: ಪ್ರತಿ ದಿನ ಒಂದು ಮುಷ್ಟಿ ಮಂಡಕ್ಕಿ ತಿನ್ನೋದ್ರಿಂದ ಧೂಳಿನ ಅಲರ್ಜಿ ಕಡಿಮೆಯಾಗುತ್ತಾ?

ಪೈಲ್ಸ್ ಕಾಯಿಲೆಯನ್ನು ಗುಣಪಡಿಸುವಲ್ಲಿ ಆಹಾರದ ಪಾತ್ರವನ್ನು ವಿವರಿಸಲು ನಾವು ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಶರದ್ ಮಲ್ಹೋತ್ರಾ ಅವರನ್ನು ಸಂಪರ್ಕಿಸಿದ್ದೇವೆ. ಅವರು ಪ್ರತಿಕ್ರಿಯಿಸಿ, “ಪಥ್ಯವು ಪೈಲ್ಸ್ ಅನ್ನು ಗುಣಪಡಿಸದಿರಬಹುದು ಆದರೆ ರೋಗಲಕ್ಷಣದ ಸುಧಾರಣೆಗೆ ಸಹಾಯ ಮಾಡುತ್ತದೆ. ಉಪಯುಕ್ತ ಆಹಾರಗಳು ಮಲಬದ್ಧತೆಯನ್ನು ತಪ್ಪಿಸಲು ಯಾವುದೇ ರೂಪದಲ್ಲಿ ಕೊಡುಗೆ ನೀಡಬಹುದು. ಧಾನ್ಯಗಳು, ದ್ವಿದಳ ಧಾನ್ಯಗಳು, ಸಿಪ್ಪೆಯೊಂದಿಗೆ ಹಣ್ಣುಗಳು ಮತ್ತು ನಾರಿನಂಶದ ಆಹಾರ ಒಳಗೊಂಡಿರಬೇಕು. ಸಂಸ್ಕರಿತ ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ತಪ್ಪಿಸಬೇಕು ಏಕೆಂದರೆ ಅವು ಕರುಳಿನ ಚಲನಶೀಲತೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ಉಲ್ಬಣಗೊಳಿಸುತ್ತದೆ.” ಎಂದಿದ್ದಾರೆ.

ಡಾ. ಮಲ್ಹೋತ್ರಾ ಅವರು ಮತ್ತಷ್ಟು ಮಾಹಿತಿ ನೀಡಿ, “ಪೈಲ್ಸ್ ಚಿಕಿತ್ಸೆಯಲ್ಲಿ ನಾರಿನಂಶದ ಆಹಾರ, ವಿರೇಚಕಗಳು ಅಥವಾ ಮಲ ಮೃದುಗೊಳಿಸುವಿಕೆ, ಮಲಬದ್ಧತೆಗೆ ಕಾರಣವಾಗುವ ಇತರ ಔಷಧಗಳು ಅಥವಾ ಆಹಾರವನ್ನು ತಪ್ಪಿಸುವುದು, ಗುದದ್ವಾರದ ರಕ್ತನಾಳಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುವ ಔಷಧಗಳು, ಎಂಡೋಸ್ಕೋಪಿ ಮಾರ್ಗದರ್ಶಿ ಇಂಜೆಕ್ಷನ್ ಥೆರಪಿ ಅಥವಾ ಬ್ಯಾಂಡಿಂಗ್ ಮತ್ತು ರೋಗಗ್ರಸ್ತ ನಾಳದ ಕಾಲಮ್ ಅನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆ ಸೇರಿವೆ.” ಎಂದಿದ್ದಾರೆ.

“ಒಂದು ವಾರದವರೆಗೆ ಕಲ್ಲುಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜಗಳನ್ನು ಕುಡಿಯುವುದು ಪೈಲ್ಸ್ ಅನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಎಂಬ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದಾಗ್ಯೂ, ಹಾಗೆ ಮಾಡುವುದರಿಂದ ಕೆಲವು ಸಂಭಾವ್ಯ ಪ್ರಯೋಜನಗಳಿವೆ.

ಕಾಮಕಸ್ತೂರಿ ಬೀಜಗಳು ಕರಗುವ ನಾರಿನಂಶ ಹೊಂದಿರುತ್ತವೆ, ಇದು ಮಲವನ್ನು ಮೃದುಗೊಳಿಸಲು ಮತ್ತು ಅವು ಸುಲಭ ಹೋಗಲು ಸಹಾಯ ಮಾಡುತ್ತದೆ. ಪೈಲ್ಸ್ ಇರುವವರಿಗೆ ಇದು ಸಹಾಯಕವಾಗಬಹುದು,  ಹೆಚ್ಚುವರಿಯಾಗಿ, ಕಾಮಕಸ್ತೂರಿ ಬೀಜಗಳು ಉರಿಯೂತ ನಿಯಂತ್ರಣದ ಗುಣಲಕ್ಷಣಗಳನ್ನು ಹೊಂದಿವೆ, ಇದು ಪೈಲ್ಸ್‌ಗೆ ಸಂಬಂಧಿಸಿದ ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಲ್ಲು ಸಕ್ಕರೆ ಒಂದು ರೀತಿಯ ಸಂಸ್ಕರಿಸದ ಸಕ್ಕರೆ. ಹೆಚ್ಚಿನ ಖನಿಜಗಳು, ಉದಾಹರಣೆಗೆ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಇದರಲ್ಲಿದೆ. ಈ ಖನಿಜಗಳು ಗುದದ ಸುತ್ತಲಿನ ಅಂಗಾಂಶಗಳನ್ನು ಶಮನಗೊಳಿಸಲು ಮತ್ತು ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತದೆ.

ಒಟ್ಟಾರೆಯಾಗಿ, ಕಲ್ಲುಸಕ್ಕರೆಯೊಂದಿಗೆ ಕಾಮ ಕಸ್ತೂರಿ ಬೀಜಗಳನ್ನು ಕುಡಿಯುವುದು ಪೈಲ್ಸ್ ಅನ್ನು ಗುಣಪಡಿಸಲು ಅಸಂಭವವಾಗಿದೆ, ಆದರೆ ಇದು ಕೆಲವು ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ” ಎಂದಿದ್ದಾರೆ.

ಆಹಾರ ತಜ್ಞ ಕಾಮ್ನಾ ಟ್ಯಾಂಕ್ ಅವರು ಮಾತನಾಡಿ “ಪಥ್ಯವು ಪೈಲ್ ರೋಗವನ್ನು ಗುಣಪಡಿಸಲು ಸಾಧ್ಯವಿಲ್ಲ ಆದರೆ ರೋಗಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಮಲ ಮೃದುವಾಗಿ ಮತ್ತು ಸುಲಭವಾಗಿ ಹೊರಹಾಕಲು ಸಾಧ್ಯವಾಗುತ್ತದೆ. ಇದು ಪೈಲ್ಸ್ ಅನ್ನು ಕಡಿಮೆ ನೋವಿರುವಂತೆ ಮಾಡಬಹುದು. ಕುಡಿಯುವ ನೀರು ಮತ್ತು ಇತರ ದ್ರವಗಳು ಆಹಾರದಲ್ಲಿ ನಾರಿನಂಶ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ.” ಎಂದಿದ್ದಾರೆ.

ತುಲನಾತ್ಮಕವಾಗಿ ನೋಡುವುದಾದರೆ, ಪೈಲ್ಸ್ ಎನ್ನುವುದು ವಯಸ್ಕರಲ್ಲಿ ಸಾಮಾನ್ಯ ಕಾಯಿಲೆಯಾಗಿದೆ ಮತ್ತು ಹೆಚ್ಚಿನ ಸಂದರ್ಭದಲ್ಲಿ ದೊಡ್ಡ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಆದಾಗ್ಯೂ, ಅವು ಕೆಲವೊಮ್ಮೆ ಸಿಡಿಯಬಹುದು ಅಥವಾ ರಕ್ತಸ್ರಾವಕ್ಕೆ ಕಾರಣವಾಗಬಹುದು. ಅಂತಹ ಸಂದರ್ಭಗಳಲ್ಲಿ, ವೈದ್ಯಕೀಯ ಆರೈಕೆಯನ್ನು ಪಡೆಯದಿರುವುದು ಮತ್ತು ಮನೆಮದ್ದುಗಳನ್ನು ಪ್ರಯತ್ನಿಸುವುದು ಅಪಾಯಕಾರಿಯಾಗಿದೆ.

ಹಾಲಿನ ವಿಚಾರದಲ್ಲಿ, ಲಭ್ಯವಿರುವ ಪುರಾವೆಗಳು, ಪೈಲ್ಸ್‌ ಇರುವವರು ಅದನ್ನು ಕುಡಿಯದಂತೆ ಶಿಫಾರಸು ಮಾಡುತ್ತದೆ. ಹಾಲಿನಲ್ಲಿ ನಾರಿನಂಶ ಇಲ್ಲದಿರುವುದರಿಂದ ಅದು ಮಲಬದ್ಧತೆಯನ್ನು ಉಂಟುಮಾಡುತ್ತದೆ. ಇದು ಪರಿಸ್ಥಿತಿ ಉಲ್ಬಣಕ್ಕೆ ಕಾರಣವಾಗಬಹುದು. ಇನ್ನು ಕೆಲವು ಜನರಿಗೆ ಹಾಲು ಕುಡಿದರೆ ಯಾವುದೇ ಸಮಸ್ಯೆ ಆಗದೇ ಕೂಡ ಇರಬಹುದಾಗಿದೆ.  

Also Read: ಪನೀರ್ ತಿನ್ನುವುದರಿಂದ ಚುರುಕುತನ ಹೆಚ್ಚುತ್ತದೆ ಎನ್ನುವುದು ನಿಜವೇ?

ಮೂಲ ಕಾರಣವನ್ನು ಅರ್ಥಮಾಡಿಕೊಳ್ಳದೆ ಮನೆಮದ್ದುಗಳೊಂದಿಗೆ ಪೈಲ್ಸ್‌ಗೆ ಚಿಕಿತ್ಸೆ ನೀಡಲು ಪ್ರಯತ್ನಿಸುವುದು ಸಮಸ್ಯೆ ತಂದೊಡ್ಡಬಹುದು. ಅಂತಹ ಸ್ಥಿತಿಯು ರಕ್ತಹೀನತೆ ಮತ್ತು ಗುದದ ಸ್ನಾಯುಗಳಲ್ಲಿ ನೋವಿನ ಸ್ಥಿತಿಯನ್ನು ಉಂಟುಮಾಡುತ್ತವೆ ಇದಕ್ಕೆ ಗ್ಯಾಂಗ್ರೀನ್ ಎಂದೂ ಕರೆಯುತ್ತಾರೆ. ಇದು ಅಂಗಾಂಶಗಳ ಸಾವಿಗೆ ಕಾರಣವಾಗುತ್ತದೆ.

Conclusion

ಈ ಸತ್ಯಶೋಧನೆ ಪ್ರಕಾರ, ಕಲ್ಲು ಸಕ್ಕರೆಯೊಂದಿಗೆ ಕಾಮಕಸ್ತೂರಿ ಬೀಜ ಸೇರಿಸಿ ಕುಡಿದರೆ ಪೈಲ್ಸ್ ಗುಣವಾಗುತ್ತದೆ ಎನ್ನುವುದು ತಪ್ಪು ಹೇಳಿಕೆಯಾಗಿದೆ.

Result: False

Our Sources

External Hemorrhoid – StatPearls – NCBI Bookshelf (nih.gov)

Body changes and discomforts | Office on Women’s Health (womenshealth.gov)

Definition & Facts of Hemorrhoids – NIDDK (nih.gov)

Symptoms & Causes of Hemorrhoids – NIDDK (nih.gov)

List of Treatment Guides – THIP

Basil Seeds as a Novel Food, Source of Nutrients and Functional Ingredients with Beneficial Properties: A Review – PMC (nih.gov)

Full article: Chemical components and pharmacological benefits of Basil (Ocimum basilicum): a review (tandfonline.com)

Rock Sugar Crystallization: The Effect of Mineral Impurities | SpringerLink

Does Milk Cause Constipation? A Crossover Dietary Trial – PMC (nih.gov)

Anorectal Disease: Hemorrhoids – PMC (nih.gov)

Conversation with Dr.Sharad Malhotra, Gastroenterologist

Conversation with Kamna Tank, Dietician

(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.