Fact Check: ಮೋದಿ ಸರ್ಕಾರ ಸ್ತನ ಕ್ಯಾನ್ಸರ್ ಔಷಧ ಬೆಲೆಯನ್ನು ₹95 ಸಾವಿರದಿಂದ ₹5 ಸಾವಿರಕ್ಕೆ ಇಳಿಸಿದೆಯೇ?

ಸ್ತನ ಕ್ಯಾನ್ಸರ್‌, ಮೋದಿ, ಔಷಧ

Authors

Claim
ಮೋದಿ ಸರ್ಕಾರ ಸ್ತನ ಕ್ಯಾನ್ಸರ್ ಔಷಧ ಬೆಲೆಯನ್ನು ₹90 ಸಾವಿರದಿಂದ ₹5 ಸಾವಿರಕ್ಕೆ ಇಳಿಸಿದೆ

Fact
ಕೇಂದ್ರ ಸರ್ಕಾರ ಸ್ತನ ಕ್ಯಾನ್ಸರ್‌ ಚಿಕಿತ್ಸೆಗೆ ಬಳಸುವ ಪಾಲ್ಬೊಕ್ಲಿಸಿಬ್‌ ಔಷಧದ ಬೆಲೆಯನ್ನು ಇಳಿಸಿಲ್ಲ, ಬದಲಾಗಿ ಇದರ ಪೇಟೆಂಟ್‌ ಅವಧಿ ಜನವರಿ 10ಕ್ಕೆ ಮುಕ್ತಾಯವಾಗಿದ್ದು, ಇನ್ನು ಜೆನೆರಿಕ್‌ ಔಷಧ ತಯಾರಿಕೆಯಾಗಲಿದೆ. ಆದ್ದರಿಂದ ಔಷಧ ಬೆಲೆ ಮಾಸಿಕ ₹5 ಸಾವಿರ ಒಳಗೆ ಆಗಲಿದೆ.

ಮಹಿಳೆಯರನ್ನು ಅತಿ ಹೆಚ್ಚಾಗಿ ಕಾಡುವ ಸ್ತನ ಕ್ಯಾನ್ಸರ್‌ ಔಷಧ ದರ ಇಳಿಕೆ ಕುರಿತಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದೆ.

ಸ್ತನ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ (ಐಬ್ರಾನ್ಸ್) ಪಾಲ್ಬೊಕ್ಲಿಸಿಬ್ (ಇದು ಜೆನರಿಕ್‌ ಹೆಸರು) ಔಷಧದ ಬೆಲೆಯನ್ನು ಮೋದಿ ಸರ್ಕಾರ ₹95 ಸಾವಿರಗಳಿಂದ ₹5 ಸಾವಿರಗಳಿಗೆ ಇಳಿಸಿದೆ ಎಂದು ಫೇಸ್‌ಬುಕ್‌ ಕ್ಲೇಮಿನಲ್ಲಿ ಹೇಳಲಾಗಿದೆ. ಸ್ತನ ಕ್ಯಾನ್ಸರ್‌ ಚಿಕಿತ್ಸೆಗೆ ಬೇಕಾಗುವ ಈ ಔಷಧದ ಬೆಲೆ ಇಳಿಕೆ ನಿಜವೇ? ಅದನ್ನು ಸರ್ಕಾರ ಕಡಿಮೆಗೊಳಿಸಿದೆಯೇ ಎಂಬ ಬಗ್ಗೆ ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಲು ಮುಂದಾಗಿದೆ.

Also Read: ಗೋಮಾಂಸ ರಫ್ತಿನಲ್ಲಿ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಕಿಂಗ್‌ ಆಗಿದ್ದಾರೆಯೇ, ಸತ್ಯ ಏನು?

ಸತ್ಯಶೋಧನೆ ವೇಳೆ ಇದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.

ಸತ್ಯಶೋಧನೆಗಾಗಿ ನಾವು ಮೊದಲು ಗೂಗಲ್‌ ಕೀವರ್ಡ್ ಸರ್ಚ್ ನಡೆಸಿದ್ದು, ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.

ಜನವರಿ 11, 2023ರ ಸಿಎನ್‌ಬಿಸಿ ಟಿವಿ 18 ವರದಿಯಲ್ಲಿರುವಂತೆ, “ಭಾರತದಲ್ಲಿ ಸ್ತನ ಕ್ಯಾನ್ಸರ್‌ ಚಿಕಿತ್ಸೆ ಅಗ್ಗವಾಗಲಿದೆ. ಈ ವಾರದ ಮಹತ್ವದ ಬೆಳವಣಿಗೆಯೊಂದರಲ್ಲಿ, ಫೈಝರ್ ಔಷಧ ಕಂಪೆನಿಯ ಪಾಲ್ಬಾಕ್‌ ಬ್ರ್ಯಾಂಡ್ ತನ್ನ ಪೇಟೆಂಡ್‌ ಅನ್ನು ಜನವರಿ 10ರ ಮಧ್ಯರಾತ್ರಿ ನಿಲ್ಲಿಸಿದ್ದು, ಜೆನೆರಿಕ್‌ ಔಷಧಗಳು ಮಾರುಕಟ್ಟೆಗೆ ಪ್ರವೇಶಿಸಲು ಅನುವು ಮಾಡಿದೆ.” ಎಂದಿದೆ.

ಸಿಎನ್ ಬಿಸಿಟಿವಿ18 ವರದಿ

ಜುಲೈ 6, 2023ರ ದಿ ಟ್ರಿಬ್ಯೂನ್‌ ವರದಿಯ ಪ್ರಕಾರ, “ಸ್ತನ ಕ್ಯಾನ್ಸರ್‌ನ ಪ್ರಮುಖ ಔಷಧ ಪಾಲ್ಬೋಸಿಕ್ಲಿಬ್‌ನ ಪೇಟೆಂಟ್‌ ಅವಧಿಯು ಮುಗಿದಿದ್ದು, ಜೆನೆರಿಕ್‌ ಆವೃತ್ತಿಗಳಿಗೆ ಅವಕಾಶವಿದೆ ಎಂದು ಸರ್ಕಾರ ಸಂಸತ್ತಿಗೆ ತಿಳಿಸಿದೆ” ಎಂದು ವರದಿ ಮಾಡಿದೆ. “ಬ್ರ್ಯಾಂಡೆಡ್‌ ಪಾಲ್ಬೋಸಿಕ್ಲಿಬ್‌ ಔಷಧದ ಬೆಲೆ ₹80 ಸಾವಿರ ಮೇಲ್ಪಟ್ಟು ಇದ್ದು, ಜೆನೆರಿಕ್‌ ಔಷಧಗಳು ಇನ್ನು ಮಾಸಿಕ ₹3800 ಗಳಲ್ಲಿ ಸಿಗಲಿವೆ” ಎಂದಿದೆ.

ಜನವರಿ 28, 2023ರ ಟೈಮ್ಸ್‌ ಆಫ್‌ ಇಂಡಿಯಾ ವರದಿ ಪ್ರಕಾರ, “ಪಾಲ್ಬೋಕ್ಲಿಬ್‌ ಎಂಬ ಔಷಧದ ಜೆನರಿಕ್‌ ಮಾದರಿಯಿಂದಾಗಿ ಭಾರತದಲ್ಲಿ ಸ್ತನ ಕ್ಯಾನ್ಸರ್ ಔಷಧದ ಬೆಲೆ ಶೇ.95ರಷ್ಟು ಇಳಿಕೆಯಾಗಿದೆ ಎಂದು ಆಂಕಾಲಜಿಸ್ಟ್‌ ಗಳು ಹೇಳಿದ್ದಾರೆ” ಎಂದಿದೆ. “ಬ್ರ್ಯಾಂಡೆಡ್‌ ಔಷಧದ ಬೆಲೆ ಮಾಸಿಕ ₹80000 ರೂ. ಆಗಿದ್ದು, ಜನವರಿ 17ರಿಂದ ಲಭ್ಯವಾಗುವ, ₹3800ಗಳ  ಜೆನೆರಿಕ್‌ ಆವೃತ್ತಿಯ ಔಷಧದಿಂದಾಗಿ ಚಿಕಿತ್ಸೆ ವೆಚ್ಚ ಕಡಿಮೆಯಾಗಲಿದೆ. ಈ ಔಷಧವನ್ನು ರೋಗಿಗಳಿಗೆ ಸಾಮಾನ್ಯವಾಗಿ 18 ತಿಂಗಳು ಕಾಲ ತಿನ್ನಲು ಹೇಳಲಾಗುತ್ತದೆ” ಎಂದಿದೆ.

ಜನವರಿ 29, 2023ರ ಇಂಡಿಯನ್‌ ಎಕ್ಸ್ ಪ್ರೆಸ್‌ ವರದಿ ಪ್ರಕಾರ “ಹೊಸದಾಗಿ ಪರಿಚಯಿಸಲಾದ ಪಾಲ್ಬೋಕ್ಲಿಸಿಬ್‌ನ ಜೆನೆರಿಕ್‌ ಆವೃತ್ತಿಯನ್ನು ಆಂಕಾಲಜಿಸ್ಟ್‌ಗಳು ಸ್ವಾಗತಿಸಿದ್ದಾರೆ. ಇದು ದೇಶದಲ್ಲಿ ಸ್ತನ ಕ್ಯಾನ್ಸರ್‌ ಚಿಕಿತ್ಸೆಯ ದಿಕ್ಕನ್ನೇ ಬದಲಿಸಲಿದೆ. ಭಾರತೀಯ ಕಂಪೆನಿಗಳು ಪಾಲ್ಬೋಕ್ಲಿಸಿಬ್‌ನ ಜೆನರಿಕ್ ಆವೃತ್ತಿಯನ್ನು ಪರಿಚಯಿಸಲಿದ್ದು, ಇದರಿಂದ ಔಷಧ ದರ ₹90 ಸಾವಿರಗಳಿಂದ ಮಾಸಿಕ ₹5 ಸಾವಿರಕ್ಕೆ ಇಳಿಕೆಯಾಗಲಿದೆ. ಇದರಿಂದ ದೊಡ್ಡ ಸಂಖ್ಯೆಯಲ್ಲಿ ರೋಗಿಗಳಿ ಔಷಧ ಕೈಗೆಟುಕಲಿದೆ” ಎಂದಿದೆ.

Also Read: ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್‌

ಈ ಸಾಕ್ಷ್ಯಗಳನ್ನು ಪರಿಗಣಿಸಿ ನಾವು ಇನ್ನಷ್ಟು ಗೂಗಲ್‌ ಸರ್ಚ್ ಮಾಡಿದ್ದು ಈ ವೇಳೆ ಕೇಂದ್ರ ಕೇಂದ್ರ ಆರೋಗ್ಯ ಸಚಿವಾಲಯ 28 ಮಾರ್ಚ್ 2023ರಂದು ಹೊರಡಿಸಿದ ಪತ್ರಿಕಾ ಪ್ರಕಟನೆ ಲಭ್ಯವಾಗಿದೆ. ಆ ಪ್ರಕಾರ, 42 ಆಯ್ದ ನಿಗದಿತ ಅಲ್ಲದ ಕ್ಯಾನ್ಸರ್ ಔಷಧಗಳ ದರಪಟ್ಟಿಯನ್ನು ರಾಷ್ಟ್ರೀಯ ಔ‍ಷಧೀಯ ಬೆಲೆ ನಿಯಂತ್ರಣ ಪ್ರಾಧಿಕಾರ ಮಿತಿಗೊಳಿಸಿದೆ  ಎಂದು ಹೇಳಿದೆ. ಇದೇ ಪತ್ರಿಕಾ ಪ್ರಕಟಣೆಯಲ್ಲಿ, “ಸೆಂಟ್ರಲ್‌ ಡ್ರಗ್‌ ಸ್ಟಾಂಡರ್ಡ್ ಕಂಟ್ರೋಲ್‌ ಆರ್ಗನೈಸೇಷನ್(ಸಿಡಿಎಸ್‌ಸಿಒ) ಪ್ರಕಾರ ಪಾಲ್ಬೋಸಿಕ್ಲಿಬ್‌ ಪೇಟೆಂಟ್ ಅವಧಿ ಜನವರಿ 10, 2023ರಂದು ಮುಕ್ತಾಯಗೊಂಡಿದೆ” ಎಂದು ಹೇಳಿದೆ.

ಈ ಕುರಿತು ಹೆಚ್ಚಿನ ಮಾಹಿತಿಗೆ ನ್ಯೂಸ್ ಚೆಕರ್‌, ಮಂಗಳೂರಿನ ಶ್ರೀನಿವಾಸ್‌ ಕಾಲೇಜ್‌ ಆರ್ಫ್ ಫಾರ್ಮಸಿಯ, ಫಾರ್ಮಕಾಲಜಿ (ಔಷಧಶಾಸ್ತ್ರ) ವಿಭಾಗದ ಮುಖ್ಯಸ್ಥರಾದ ಡಾ.ಕರುಣಾಕರ್ ಹೆಗ್ಡೆ ಅವರನ್ನು ಸಂಪರ್ಕಿಸಿದ್ದು, “ಕೆಲವೊಂದು ನಿರ್ದಿಷ್ಟ ಜೀವರಕ್ಷಕ ಔಷಧಗಳಿಗೆ ಸರ್ಕಾರ ಇಂತಿಷ್ಟೇ ವರ್ಷದ ಪೇಟೆಂಟ್ ಅವಧಿಯನ್ನು ನಿಗದಿ ಪಡಿಸುತ್ತದೆ. ಜೊತೆಗೆ ತುರ್ತು ಸಂದರ್ಭದಲ್ಲಿ ಜನತೆಯ ಹಿತದೃಷ್ಟಿಯಿಂದ ಪೇಟೆಂಟ್ ಅವಧಿಯನ್ನು ಸರ್ಕಾರ ಕೊನೆಗೊಳಿಸಲೂಬಹುದು. ಸಾಮಾನ್ಯವಾಗಿ ಪೇಟೆಂಟ್ ಅವಧಿ ಮುಗಿದ ಕೂಡಲೇ ಇತರ ಔಷಧ ತಯಾರಕರು ಜೆನೆರಿಕ್ ಔಷಧವನ್ನು ತಯಾರು ಮಾಡಲು ಸರ್ಕಾರದಿಂದ ಸೂಕ್ತ ಅನುಮತಿಯನ್ನು ಪಡೆಯಬೇಕಾಗುತ್ತದೆ. ಪಾಲ್ಬೋಸಿಕ್ಲಿಬ್‌ ವಿಚಾರದಲ್ಲಿ ಪೇಟೆಂಟ್ ಅವಧಿ ಮುಗಿದು ಜೆನೆರಿಕ್‌ ಔಷಧ ತಯಾರಿಕೆಗೆ ಅನುಮತಿ ನೀಡಿದಂತಿದೆ” ಎಂದು ಹೇಳಿದ್ದಾರೆ.

Conclusion

ಈ ಸತ್ಯಶೋಧನೆಯ ಪ್ರಕಾರ, ಪೇಟೆಂಟ್ ಅವಧಿ ಮುಕ್ತಾಯಗೊಂಡಿರುವುದರಿಂದ ಪಾಲ್ಬೊಸಿಕ್ಲಿಬ್‌ ಔಷಧ ಜೆನೆರಿಕ್‌ ಉತ್ಪಾದನೆಯಾಗಲಿದ್ದು, ದರ ಇಳಿಕೆಗೆ ಕಾರಣ ಎಂದು ತಿಳಿದುಬಂದಿದೆ. ಇದು ಸಹಜ ಪ್ರಕ್ರಿಯೆಗಾಗಿದ್ದು, 42 ಕ್ಯಾನ್ಸರ್ ಔಷಧಿಗಳಿಗೆ ದರ ಮಿತಿ ಗೊಳಿಸುವ ಕೇಂದ್ರ ಸರ್ಕಾರದ ಕ್ರಮದ ಹೊರತಾಗಿ ಬೇರಾವುದೇ ನಿರ್ಧಾರ ಇದರ ಹಿಂದಿರುವುದಿಲ್ಲ ಎಂದು ತಿಳಿದುಬಂದಿದೆ.

Result: Missing Context

Our Sources
Report By CNBC News 18, Dated: January 11, 2023

Report By Times of India, Dated: January 28, 2023

Report By Indian Express, Dated: January 29, 2023

Report By The Tribune, Dated: July 6, 2023

Press Release By Ministry of Health: Dated: March 28, 2023

Conversation with Dr.Karunakar Hegde, HOD of Pharmacology, Srinivas College of Pharmacy Mangalore


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors