Authors
Claim
ಸಂಸತ್ತಿನಲ್ಲಿ ದಾಳಿ ನಡೆಸಲು ಉದ್ದೇಶಿಸಿದ ಯತ್ನದಲ್ಲಿ ಮೈಸೂರಿನ ಮನೋರಂಜನ್ ಎಂಬ ವ್ಯಕ್ತಿ ಬಂಧನಕ್ಕೊಳಗಾಗಿರುವಂತೆಯೇ, ಆ ವ್ಯಕ್ತಿ ಎಸ್ಎಫ್‌ಐ ಹಿನ್ನಲೆ ಹೊಂದಿದ್ದ ಎನ್ನುವ ಕುರಿತ ಫೋಟೋ ಒಂದು ವೈರಲ್ ಆಗಿದೆ.
ಈ ಫೋಟೋದೊಂದಿಗೆ ಫೇಸ್‌ಬುಕ್ ನಲ್ಲಿ ನೀಡಲಾದ ಹೇಳಿಕೆಯಲ್ಲಿ, “#SFI ಸಮ್ಮೇಳನದಲ್ಲಿ “ಕ್ಷೇತ್ರದ ಪ್ರಜೆ”ಯಾಗಿ ಪಾಸ್ ಪಡೆದು ಕುಕೃತ್ಯ ಎಸಗಿದ ಮನೋರಂಜನ್ !!! ಪ್ರತಾಪ್ ಸಿಂಹರಿಗೆ ಕೆಟ್ಟ ಹೆಸರು ತರುವ ಕೆಲಸ ಬಿಟ್ಟುಬಿಡಿ ಕಾಂಗ್ರೆಸಿಗರೇ, ಕಮ್ಮಿನಿಷ್ಟರೇ .. !!!” ಎಂದಿದೆ.
ಈ ಕುರಿತಂತೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
Fact
ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್ ಮೊದಲು ವೈರಲ್ ಆಗಿರುವ ಫೊಟೋ ಮತ್ತು ಸಂಸತ್ ದಾಳಿಯ ಆರೋಪಿ ಮನೋರಂಜನ್ ನದ್ದು ಎನ್ನಲಾದ ಫೋಟೋವನ್ನು ತುಲನೆ ಮಾಡಿದೆ.
ಫೊಟೋ ತುಲನೆ ಮಾಡುವ ವೆಬ್ ಗಳನ್ನು ಬಳಸಿ ಪರಿಶೀಲಿಸಿದ್ದು, ಎರಡೂ ಮುಖಗಳ ಚಹರೆಗಳು ಬೇರೆ ಬೇರೆ ಮತ್ತು ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂಬುದನ್ನು ಗಮನಿಸಿದ್ದೇವೆ. ಇವುಗಳ ಫಲಿತಾಂಶವನ್ನು ಇಲ್ಲಿ ನೋಡಬಹುದು.
ಫೇಸ್ ಬುಕ್‌ನಲ್ಲಿ ಶೋಧ ನಡೆಸಿದಾಗ, ರಾಜ್ಯ ಡಿವೈಎಫ್‌ಐ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರ ಪೋಸ್ಟ್ ಒಂದು ಲಭ್ಯವಾಗಿದೆ.
ಈ ಪೋಸ್ಟ್ನಲ್ಲಿ ಅವರು “ಬಿಜೆಪಿ ಅನುಯಾಯಿಗಳು ಎಸ್‌ಎಫ್‌ಐ ಮೈಸೂರು ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್ ಅವರನ್ನು ತೋರಿಸಿ ಮನೋರಂಜನ್ ಎಂದು ದಿಕ್ಕು ತಪ್ಪಿಸಲು ನೋಡುತ್ತಿದ್ದಾರೆ” ಎಂದು ಹೇಳಿರುವುದನ್ನು ಗಮನಿಸಿದ್ದೇವೆ. ಮುನೀರ್ ಅವರ ಪೋಸ್ಟ್ ಇಲ್ಲಿದೆ.
ಇದನ್ನು ಪರಿಗಣಿಸಿ ನಾವು, ರಾಜ್ಯ ಎಸ್‌ಎಫ್‌ಐ ಮಾಜಿ ಕಾರ್ಯದರ್ಶಿ ಗುರುರಾಜ್ ದೇಸಾಯಿ ಅವರನ್ನು ಸಂಪರ್ಕಿಸಿದ್ದೇವೆ. ಅವರು ಈ ಕುರಿತು ನ್ಯೂಸ್ ಚೆಕರ್ ಜೊತೆ ಮಾತನಾಡಿ “ವಿಜಯ್ ಕುಮಾರ್ ಅವರು ಮೈಸೂರು ಜಿಲ್ಲಾ ಅಧ್ಯಕ್ಷರಾಗಿದ್ದಾರೆ ಮತ್ತು ವೈರಲ್ ಆಗಿರುವ ಫೋಟೋ ಮೈಸೂರಿನ ಕಾರ್ಯಕ್ರಮವೊಂದರದ್ದು ಎಂದು ಸ್ಪಷ್ಟಪಡಿಸಿದ್ದಾರೆ”
ಆ ಬಳಿಕ ನಾವು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಅವರನ್ನು ಸಂಪರ್ಕಿಸಿದ್ದೇವೆ “ವಿಜಯ್ ಕುಮಾರ್ ಅವರ ಫೋಟೊವನ್ನು ಬಳಸಿ, ಎಸ್‌ಎಫ್‌ಐ ಜೊತೆ ಸಂಸತ್ ದಾಳಿಕೋರನಿಗೆ ಸಂಬಂಧವಿದೆ ಎಂದು ಕಟ್ಟು ಕಥೆ ಕಟ್ಟಲಾಗಿದೆ. ಇದು ಸಂಪೂರ್ಣ ಸುಳ್ಳು. ಎಸ್‌ಎಫ್‌ಐ ಮತ್ತು ಸಂಸತ್ ದಾಳಿಕೋರನಿಗೆ ಸಂಬಂಧವಿಲ್ಲ. ಈ ಕುರಿತು ವಿಜಯ್ ಕುಮಾರ್ ಅವರು ಮೈಸೂರು ಪೊಲೀಸ್ ಬಳಿ ದೂರು ದಾಖಲಿಸಿದ್ದಾರೆ, ಮತ್ತವರು ಮೈಸೂರಿನಲ್ಲೇ ಇದ್ದಾರೆ” ಎಂದು ತಿಳಿಸಿದ್ದಾರೆ. ಇದರೊಂದಿಗೆ ವಿಜಯ್ ಕುಮಾರ್ ಅವರ ಫೋಟೋ ತಪ್ಪು ಹೇಳಿಕೆಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದರ ವಿರುದ್ಧ ಮೈಸೂರು ಸೈಬರ್ ಪೊಲೀಸರೊಂದಿಗೆ ನೀಡಲಾದ ದೂರು, ಮತ್ತು ದೂರಿನ ವೇಳೆ ಉಪಸ್ಥಿತರಿಂದ್ದ ವಿಜಯ್ ಕುಮಾರ್ ಅವರ ಫೋಟೋವನ್ನು ಅವರು ನ್ಯೂಸ್‌ಚೆಕರ್ ಜೊತೆಗೆ ಹಂಚಿಕೊಂಡಿದ್ದಾರೆ. (ಎಡದಿಂದ ಮೊದಲನೆಯವರು ಮೈಸೂರು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್)
Also Read: ಕಾಂಗ್ರೆಸ್ ಸಂಸದರ ಬಳಿ ಸಿಕ್ಕಿದ ಹಣ ಎಂದು ಕೋಲ್ಕತಾ ಇಡಿ ದಾಳಿ ಪ್ರಕರಣದ ವೀಡಿಯೋ ವೈರಲ್
ಪ್ರಕರಣ ಹಿನ್ನೆಲೆಯಲ್ಲಿ ನಾವು ಟಿವಿ9 ಮೈಸೂರು ಜಿಲ್ಲಾ ವರದಿಗಾರ ರಾಮ್ ಅವರನ್ನು ಸಂಪರ್ಕಿಸಿದ್ದೇವೆ. ಅವರು “ವಿಜಯ ಕುಮಾರ್ ಅವರು ಪೊಲೀಸ್ ಬಳಿ ತಮ್ಮ ವಿರುದ್ಧದ ಅಪಪ್ರಚಾರ ಮತ್ತು ಸಾಮಾಜಿಕ ಜಾಲತಾಣದಲ್ಲಿ ಎಸ್‌ಎಫ್‌ಐ ವಿರುದ್ಧದ ಪೋಸ್ಟ್ ಗಳ ಬಗ್ಗೆ ದೂರು ನೀಡಿದ್ದಾರೆ” ಎಂದು ಖಚಿತಪಡಿಸಿದ್ದಾರೆ.
ಇದರೊಂದಿಗೆ ನಾವು ಸಂಸತ್ ದಾಳಿ ನಡೆಸಿದ ಆರೋಪಿ ಎಂದು ಫೋಟೋದಲ್ಲಿ ವೈರಲ್ ಆದ ಮೈಸೂರು ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಅವರನ್ನು ಸಂಪರ್ಕಿಸಿದ್ದೇವೆ. ನ್ಯೂಸ್‌ಚೆಕರ್ ಜೊತೆ ಅವರು ಮಾತನಾಡಿ “ಸಂಸತ್ ದಾಳಿ ಆರೋಪಿಯ ಹೆಸರಿನಲ್ಲಿ ನನ್ನ ಫೋಟೋವನ್ನು ಉದ್ದೇಶಪೂರ್ವಕವಾಗಿ ಅಪಪ್ರಚಾರಕ್ಕೆ ಬಳಸಲಾಗಿದೆ. ಪ್ರಕರಣದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಹೆಸರು ಕೇಳಿಬರುತ್ತಿದ್ದಂತೆ ಕೇಂದ್ರದ ವಿವಿಧ ಜನವಿರೋಧಿ ಧೋರಣೆ, ಎನ್‌ಇಪಿ ವಿಷಯದಲ್ಲಿ, ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳಿಗೆ ಹೋರಾಟ ನಡೆಸುತ್ತಿರುವ ಮೈಸೂರು ಎಸ್‌ಎಫ್‌ಐ ವಿರುದ್ಧ ಹೆಸರು ಕೆಡಿಸಲು ಈ ಯತ್ನ ನಡೆಸಲಾಗಿದೆ. ವೈರಲ್ ಆಗಿರುವ ಫೋಟೋ 2022 ಸೆಪ್ಟೆಂಬರ್ ವೇಳೆ ತೆಗೆದಿದ್ದಾಗಿದ್ದು ಮೈಸೂರು ಎಸ್‌ಎಫ್‌ಐ ಫೇಸ್ಬುಕ್ ಪೇಜ್ ನಿಂದ ತೆಗೆಯಲಾಗಿದೆ” ಎಂದು ಹೇಳಿದ್ದಾರೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ವೈರಲ್ ಆಗಿರುವ ಫೊಟೋ ಎಸ್ಎಫ್ಐ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ್ದಾಗಿದ್ದು ಅದರಲ್ಲಿರುವ ವ್ಯಕ್ತಿ ಮೈಸೂರು ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಅವರಾಗಿದ್ದಾರೆ ಎಂದು ತಿಳಿದುಬಂದಿದೆ.
Result: False
Our Sources
Facebook Post By Muneer Katipalla, State President DYFI, Dated: December 14, 2023
Conversation with Gururaj Desai, Ex Secretary SFI Karnataka
Conversation with Amaresh Kadagada, State President SFI Karnataka
Conversation with Ram, District Reporter TV9 Kannada
Conversation with Vijay kumar, District President SFI Mysore
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.