Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಅತ್ಯಾಚಾರಿಗಳಿಗೆ ನೇರವಾಗಿ ಮರಣದಂಡನೆ ಶಿಕ್ಷೆ
ಅತ್ಯಾಚಾರಿಗಳಿಗೆ ನೇರವಾಗಿ ಮರಣದಂಡನೆ ಶಿಕ್ಷೆ ಎನ್ನುವುದು ನಿಜವಲ್ಲ, ವಿಶೇಷ ಪ್ರಕರಣಗಳಲ್ಲಿ, ಪ್ರತ್ಯೇಕ ಸೆಕ್ಷನ್ ಗಳಡಿಯಲ್ಲಿ ಮಾತ್ರ ಈ ಶಿಕ್ಷೆ ಅನ್ವಯ
ಅತ್ಯಾಚಾರಿಗಳಿಗೆ ನೇರವಾಗಿ ಮರಣದಂಡನೆ ಶಿಕ್ಷೆ ನೀಡುವ ವಿನೂತನ ಕಾನೂನು ಜಾರಿಯಾಗಿದೆ ಎಂಬಂತೆ ಪೋಸ್ಟ್ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
“ಅತ್ಯಾಚಾರಿಗಳಿಗೆ ಪ್ರಧಾನಿ ಮೋದಿ ಮಾರಕ ಶಿಕ್ಷೆ! ಮಕ್ಕಳ ಮೇಲೆ ಆಗಲಿ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಲ್ಲಿ ಅಂತಹವರಿಗೆ ನೇರವಾಗಿ ಮರಣದಂಡನೆ ವಿಧಿಸಲಾಗುತ್ತದೆ” ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ.
ಇಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.



ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಭಾರತೀಯ ನ್ಯಾಯ ಸಂಹಿತಾ ಕಾನೂನು ಪ್ರಕಾರ ಅಂತಹ ಪದ್ಧತಿ ಇಲ್ಲ ಎಂದು ಕಂಡುಬಂದಿದ್ದು, ಈ ಹೇಳಿಕೆ ತಪ್ಪಾಗಿದೆ ಎಂದು ಗೊತ್ತಾಗಿದೆ.
Also Read: ಐ ಲವ್ ಮಹಾದೇವ್ ಅಭಿಯಾನದ ಮೂಲಕ ಯು.ಪಿ. ಪೊಲೀಸರಿಗೆ ಅಭಿನಂದನೆ ಸಲ್ಲಿಸಲಾಗಿದೆಯೇ?
ಸತ್ಯಶೋಧನೆಗಾಗಿ ನಾವು ಅತ್ಯಾಚಾರ ಅಪರಾಧದ ಕಾನೂನು ಕ್ರಮ/ದಂಡನೆ ಕುರಿತಾಗಿ ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದೇವೆ.
ಈ ವೇಳೆ ಇತ್ತೀಚಿಗೆ ಅತ್ಯಾಚಾರ ಪ್ರಕರಣದಲ್ಲಿ ನೇರವಾಗಿ ಮರಣದಂಡನೆ ವಿಧಿಸುವ ಕುರಿತು ಹೊಸ ಕಾನೂನು ರೂಪಿತವಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಿಲ್ಲ.
ಆದರೆ ಈ ವೇಳೆ ಭಾರತದ ಕಾನೂನು (ಭಾರತೀಯ ನ್ಯಾಯ ಸಂಹಿತಾ 2023ರ) ಪ್ರಕಾರ ಅತ್ಯಾಚಾರ ಪ್ರಕರಣಗಳಲ್ಲಿ ವಿಧಿಸಲಾಗುವ ದಂಡನೆಗಳ ಕುರಿತು ಮಾಹಿತಿ ಲಭ್ಯವಾಗಿದೆ.
ಕೇಂದ್ರ ಸರ್ಕಾರದ ಕಾನೂನುಗಳ ಕುರಿತ ಡಿಜಿಟಲ್ ಭಂಡಾರ, indiacode ಮಾಹಿತಿ ಪ್ರಕಾರ, ಅತ್ಯಾಚಾರ ಪ್ರಕರಣದಲ್ಲಿ “ನೇರವಾಗಿ ಮರಣದಂಡನೆ” ಎಂಬ ಕುರಿತು ಎಲ್ಲಿಯೂ ಪ್ರಸ್ತಾಪವಿಲ್ಲದೇ ಇರುವುದು ಕಂಡುಬಂದಿದೆ. ಬಿಎನ್ಎಸ್ ಸೆಕ್ಷನ್ 64ರ ಪ್ರಕಾರ, “ಉಪ-ವಿಭಾಗ (2) ರಲ್ಲಿ ಒದಗಿಸಲಾದ ಪ್ರಕರಣಗಳನ್ನು ಹೊರತುಪಡಿಸಿ, ಯಾರೇ ಆಗಲಿ, ಅತ್ಯಾಚಾರ ಎಸಗಿದರೆ, ಹತ್ತು ವರ್ಷಗಳಿಗಿಂತ ಕಡಿಮೆಯಿಲ್ಲದ ಆದರೆ ಜೀವಾವಧಿ ಶಿಕ್ಷೆಯವರೆಗೆ ವಿಸ್ತರಿಸಬಹುದಾದ ಅವಧಿಗೆ ಎರಡೂ ರೀತಿಯ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡಕ್ಕೂ ಗುರಿಯಾಗಬೇಕಾಗುತ್ತದೆ.” ಎಂದಿದೆ. (ಪುಟ ಸಂಖ್ಯೆ 35)

ಸೆಕ್ಷನ್ 65ರ ಪ್ರಕಾರ ಕೆಲವು ಪ್ರಕರಣಗಳಲ್ಲಿ ಅತ್ಯಾಚಾರಕ್ಕೆ ಶಿಕ್ಷೆ ಹೀಗೆ ಇದೆ. (1) ಹದಿನಾರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರ ಎಸಗುವ ಯಾರಿಗಾದರೂ ಇಪ್ಪತ್ತು ವರ್ಷಗಳಿಗಿಂತ ಕಡಿಮೆಯಿಲ್ಲದ ಆದರೆ ಜೀವಾವಧಿಯ ಜೈಲು ಶಿಕ್ಷೆಗೆ ವಿಸ್ತರಿಸಬಹುದಾದ ಕಠಿಣ ಜೈಲು ಶಿಕ್ಷೆ ವಿಧಿಸಲಾಗುವುದು, ಅಂದರೆ ಆ ವ್ಯಕ್ತಿಯ ಜೀವನದ ಉಳಿದ ಅವಧಿಗೆ ಜೈಲು ಶಿಕ್ಷೆ ಮತ್ತು ದಂಡ ಹಾಕಲಾಗುತ್ತದೆ.
(2) ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯ ಮೇಲೆ ಅತ್ಯಾಚಾರ ಎಸಗುವ ಯಾರೇ ಆಗಲಿ, ಅವರಿಗೆ ಇಪ್ಪತ್ತು ವರ್ಷಗಳಿಗಿಂತ ಕಡಿಮೆಯಿಲ್ಲದ ಆದರೆ ಜೀವಾವಧಿಯವರೆಗೆ ಜೈಲು ಶಿಕ್ಷೆ ವಿಧಿಸಬಹುದು, ಅಂದರೆ ಆ ವ್ಯಕ್ತಿಯ ಸಹಜ ಜೀವನದ ಉಳಿದ ಭಾಗಕ್ಕೆ ಜೈಲು ಶಿಕ್ಷೆ ಮತ್ತು ದಂಡ ಅಥವಾ ಮರಣದಂಡನೆ ವಿಧಿಸಬಹುದು ಎಂದಿದೆ.

ಸೆಕ್ಷನ್ 66 ರ ಪ್ರಕಾರ ಬಲಿಪಶುವಿನ ಸಾವಿಗೆ ಕಾರಣವಾದ ಅಥವಾ ನಿರಂತರ ನಿಸ್ತೇಜ ಸ್ಥಿತಿಗೆ ಕಾರಣವಾದಾಗ ಸೆಕ್ಷನ್ 64 ರ ಉಪ-ವಿಭಾಗ (1) ಅಥವಾ ಉಪ-ವಿಭಾಗ (2) ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವನ್ನು ಮಾಡುವ ಮತ್ತು ಅಂತಹ ಸಮಯದಲ್ಲಿ ಮಹಿಳೆಯ ಸಾವಿಗೆ ಕಾರಣವಾಗುವ ಅಥವಾ ಮಹಿಳೆ ನಿರಂತರ ನಿಸ್ತೇಜ ಸ್ಥಿತಿಯಲ್ಲಿರಲು ಕಾರಣವಾಗುವ ಯಾವುದೇ ಅಪರಾಧವನ್ನು ಮಾಡುವ ವ್ಯಕ್ತಿಗೆ ಇಪ್ಪತ್ತು ವರ್ಷಗಳಿಗಿಂತ ಕಡಿಮೆಯಿಲ್ಲದಂತೆ, ಜೀವಾವಧಿಯವರೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ, ಅಂದರೆ ಆ ವ್ಯಕ್ತಿಯ ಜೀವನದ ಉಳಿದ ಭಾಗಕ್ಕೆ ಜೈಲು ಶಿಕ್ಷೆ ಅಥವಾ ಮರಣದಂಡನೆ ವಿಧಿಸಬಹುದಾಗಿದೆ.” ಎಂದಿದೆ. (ಪುಟ ಸಂಖ್ಯೆ 36)

ಸೆಕ್ಷನ್ 70ರ ಪ್ರಕಾರ ಸಾಮೂಹಿಕ ಅತ್ಯಾಚಾರ ಅಪರಾಧಕ್ಕೆ (1) ಒಂದು ಗುಂಪು ರೂಪಿಸಿ ಅಥವಾ ಸಾಮಾನ್ಯ ಉದ್ದೇಶಕ್ಕಾಗಿ ವರ್ತಿಸುವ ಒಬ್ಬ ಅಥವಾ ಹೆಚ್ಚಿನ ವ್ಯಕ್ತಿಗಳಿಂದ ಮಹಿಳೆಯ ಮೇಲೆ ಅತ್ಯಾಚಾರ ನಡೆದರೆ, ಆ ವ್ಯಕ್ತಿಗಳಲ್ಲಿ ಪ್ರತಿಯೊಬ್ಬರೂ ಅತ್ಯಾಚಾರದ ಅಪರಾಧವನ್ನು ಮಾಡಿದ್ದಾರೆಂದು ಪರಿಗಣಿಸಲಾಗುತ್ತದೆ ಮತ್ತು ಇಪ್ಪತ್ತು ವರ್ಷಗಳಿಗಿಂತ ಕಡಿಮೆಯಿಲ್ಲದ ಅವಧಿಗೆ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ, ಆದರೆ ಇದು ಜೀವಾವಧಿಯ ಜೈಲು ಶಿಕ್ಷೆಗೆ ವಿಸ್ತರಿಸಬಹುದು, ಅಂದರೆ ಆ ವ್ಯಕ್ತಿಯ ಜೀವನದ ಉಳಿದ ಅವಧಿಗೆ ಜೈಲು ಶಿಕ್ಷೆ ಮತ್ತು ದಂಡದೊಂದಿಗೆ ಅನ್ವಯ.
(2) ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯ ಮೇಲೆ ಒಂದು ಗುಂಪು/ವ್ಯಕ್ತಿಗಳು ಅತ್ಯಾಚಾರ ಎಸಗಿದರೆ ಆ ಪ್ರತಿಯೊಬ್ಬ ವ್ಯಕ್ತಿಯೂ ಅತ್ಯಾಚಾರದ ಅಪರಾಧವನ್ನು ಮಾಡಿದ್ದಾರೆಂದು ಪರಿಗಣಿಸಲಾಗುತ್ತದೆ ಮತ್ತು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ, ಅಂದರೆ ಆ ವ್ಯಕ್ತಿಯ ಜೀವನದ ಉಳಿದ ಭಾಗಕ್ಕೆ ಜೈಲು ಶಿಕ್ಷೆ ಮತ್ತು ದಂಡ ಅಥವಾ ಮರಣದಂಡನೆ ವಿಧಿಸಲಾಗುತ್ತದೆ
ಸೆಕ್ಷನ್ 71ರ ಪ್ರಕಾರ ಪುನರಾವರ್ತಿತ ಅಪರಾಧಗಳಲ್ಲಿ ಸೆಕ್ಷನ್ 64 ಅಥವಾ ಸೆಕ್ಷನ್ 65 ಅಥವಾ ಸೆಕ್ಷನ್ 66 ಅಥವಾ ಸೆಕ್ಷನ್ 70 ರ ಅಡಿಯಲ್ಲಿ ಶಿಕ್ಷೆಗೆ ಅರ್ಹವಾದ ಅಪರಾಧಕ್ಕೆ ಶಿಕ್ಷೆಗೊಳಗಾದ ಮತ್ತು ನಂತರ ಹೇಳಲಾದ ಯಾವುದೇ ಸೆಕ್ಷನ್ಗಳ ಅಡಿಯಲ್ಲಿ ಶಿಕ್ಷೆಗೆ ಒಳಗಾದವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ, ಅಂದರೆ ಆ ವ್ಯಕ್ತಿಯ ಜೀವನದ ಉಳಿದ ಭಾಗಕ್ಕೆ ಜೈಲು ಶಿಕ್ಷೆ ಅಥವಾ ಮರಣದಂಡನೆ ವಿಧಿಸಲಾಗುತ್ತದೆ. (ಪುಟ ಸಂಖ್ಯೆ 37)

ಭಾರತೀಯ ನ್ಯಾಯ ಸಂಹಿತೆ ಕುರಿತಾದ ಕೇಂದ್ರ ಸರ್ಕಾರದ ಡಿಸೆಂಬರ್ 25, 2023ರ ಗೆಜೆಟ್ ಅಧಿಸೂಚನೆಯನ್ನೂ ನಾವು ನೋಡಿದ್ದೇವೆ. ಇದರಲ್ಲೂ ಸೆಕ್ಷನ್ 66, ಸೆಕ್ಷನ್ 70, ಸೆಕ್ಷನ್ 71ರ ಪ್ರಕಾರ ವಿವಿಧ ವಿಶೇಷ ಪ್ರಕರಣಗಳಲ್ಲಿ ಅತ್ಯಾಚಾರ ಆರೋಪಿಗೆ ಮರಣದಂಡನೆ ವಿಧಿಸಬಹುದಾದ ಕಾನೂನು ಅವಕಾಶವನ್ನು ಗಮನಿಸಿದ್ದೇವೆ. ಆದರೆ ಅತ್ಯಾಚಾರ ಪ್ರಕರಣದಲ್ಲಿ ನೇರವಾಗಿ ಮರಣದಂಡನೆ ಎಂಬ ಕುರಿತು ಯಾವುದೇ ಅಂಶಗಳು ಕಂಡುಬಂದಿಲ್ಲ.
ಹೆಚ್ಚಿನ ಮಾಹಿತಿಗಾಗಿ ನಾವು ನ್ಯಾಯವಾದಿ ಸತೀಶ್ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್ಚೆಕರ್ ನೊಂದಿಗೆ ಮಾತನಾಡಿ, ನಿರ್ಭಯದಂತಹ ವಿಶೇಷ ಪ್ರಕರಣಗಳಲ್ಲಿ ಕೋರ್ಟ್ ವಿವಿಧ ಸೆಕ್ಷನ್ ಗಳನ್ನಾಧರಿಸಿ ಮರಣದಂಡನೆಯ ತೀರ್ಪನ್ನು ನೀಡಿದೆ. ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ವಿವಿಧ ಸೆಕ್ಷನ್ ಗಳಡಿಯಲ್ಲೇ ಪ್ರಕರಣದ ಅಂಶಗಳನ್ನು ಆಧರಿಸಿ, ಸಾಕ್ಷ್ಯ ದಾಖಲೆಗಳನ್ನು ಇಟ್ಟುಕೊಂಡೇ ಕೋರ್ಟ್ ತೀರ್ಮಾನಕ್ಕೆ ಬರುತ್ತದೆ. ಅತ್ಯಾಚಾರ ಪ್ರಕರಣಗಳಲ್ಲಿ ನೇರ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ ಎನ್ನುವುದು ನಿಜವಲ್ಲ ಎಂದು ಹೇಳಿದ್ದಾರೆ.
ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಅತ್ಯಾಚಾರಿಗಳಿಗೆ ನೇರವಾಗಿ ಮರಣದಂಡನೆ ಶಿಕ್ಷೆ ಎಂಬ ಹೇಳಿಕೆ ನಿಜವಲ್ಲ, ಸೆಕ್ಷನ್ 66, 70ರ ಅನ್ವಯ ಕೆಲವು ಹೀನ ಕೃತ್ಯಗಳನ್ನು ಕೈಗೊಂಡಾಗ ಮರಣದಂಡನೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ಕಂಡುಬಂದಿದೆ.
Our Sources
Indiacode/The Bharatiya Nyaya Sanhitha, 2023
Gazette Notification by Ministry of Home Affairs, India, Dated December 25, 2023
Conversation with Advocate Sathish, Mangalore
Ishwarachandra B G
November 28, 2025
Ishwarachandra B G
November 22, 2025
Ishwarachandra B G
November 19, 2025