‘ಮಹದಾಯಿ ವಿವಾದ ಬಗೆಹರಿದಿದೆ’: ಅಮಿತ್‌ ಶಾ ಹೇಳಿಕೆ ಎಷ್ಟು ಸತ್ಯ?

ಮಹದಾಯಿ ನದಿ, ಕರ್ನಾಟಕ, ಗೋವಾ

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಳು ಸಮೀಪಿಸುತ್ತಿರುವಂತೆ, ಬೆಳಗಾವಿ ಜನಸೇವಕ ಸಮಾವೇಶದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಭಾಗವಹಿಸಿ ಅವರೊಂದು ಮಾಡಿದ ಭಾಷಣ, ಮತ್ತೆ ಮಹದಾಯಿ ವಿವಾದ ಭುಗಿಲೇಳುವಂತೆ ಮಾಡಿದೆ!

ಜನವರಿ 28ರಂದು ಗೋವಾದಲ್ಲಿ ನಡೆದಿದ್ದ ಸಮಾವೇಶದಲ್ಲಿ ಮಾತನಾಡುತ್ತ, ಅಮಿತ್ ಶಾ ಅವರು, “ಸ್ನೇಹಿತರೇ ಕರ್ನಾಟಕ ಮತ್ತು ಗೋವಾ ನಡುವಿನ ಹಳೆಯ ವಿವಾದವನ್ನು ಬಗೆಹರಿಸುವ ಮೂಲಕ ಕರ್ನಾಟಕಕ್ಕೆ ಮಹದಾಯಿ ನೀರನ್ನು ನೀಡುವ ಮೂಲಕ ಭಾರತೀಯ ಜನತಾ ಪಕ್ಷವು ಕರ್ನಾಟಕದ ಅನೇಕ ಜಿಲ್ಲೆಗಳ ರೈತರ ಪರವಾಗಿ ಉತ್ತಮ ಕೆಲಸವನ್ನು ಮಾಡಿದೆ ಎಂದು ಹೇಳಿದ್ದರು”.

ಅಮಿತ್‌ ಶಾ ಅವರ ಈ ಹೇಳಿಕೆ, ಎರಡೂ ರಾಜ್ಯಗಳಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳ ನಡುವೆ ಒಮ್ಮತವಿದೆ ಎಂದು ಸೂಚಿಸುತ್ತದೆ. ಆದರೆ ಅಮಿತ್‌ ಶಾ ಅವರ ಹೇಳಿಕೆ ಹೊರ ಬಿದ್ದ ಬೆನ್ನಲ್ಲೇ ಗೋವಾದ ಸಿಎಂ ಅವರು “ ಗೋವಾ ಪ್ರತಿ ನೀರ ಹನಿಗಾಗಿ ಹೋರಾಟ ಮುಂದುವರಿಸಲಿದೆ” ಎಂದು ಹೇಳಿದ್ದರು. ಇದರೊಂದಿಗೆ ಅಮಿತ್‌ ಶಾ ಅವರ ಹೇಳಿಕೆ ಗೋವಾದಲ್ಲಿ ರಾಜಕೀಯ ಸಂಚಲನವನ್ನೇ ಸೃಷ್ಟಿಸಿದ್ದು, ಗೋವಾ ಸಿಎಂ ಸಾವಂತ್‌ ಅವರ ರಾಜೀನಾಮೆಯನ್ನು ಕೇಳಿವೆ. ಕರ್ನಾಟಕದಲ್ಲಿ ಶೀಘ್ರದಲ್ಲಿ ಚುನಾವಣೆ ನಡೆಯಲಿದ್ದು, ಆ ಹೊತ್ತಿಗೆ ಮಹದಾಯಿ ವಿಚಾರ ಒಂದು ವಿವಾದಾತ್ಮಕ ವಿಷಯವಾಗುವ ಸಾಧ್ಯತೆಯೂ ಇದೆ.

ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣದ ತೀರ್ಪು ಮತ್ತು ಇನ್ನೂ ನ್ಯಾಯಾಂಗ ಹೋರಾಟ ನಡೆಯುತ್ತಿರುವಾಗ ಅದಿನ್ನೂ ಯಾಕೆ ವಿವಾದಾಸ್ಪದವಾಗಿದೆ ಮತ್ತು ಯೋಜನೆಯ ಸ್ಥಿತಿಗತಿ ಮತ್ತು ಕಾನೂನು ಹೋರಾಟದ ಸ್ಥಿತಿಗತಿ ಏನು ಎಂಬುದರ ಬಗ್ಗೆ ನೋಡೋಣ.

ಅಮಿತ್‌ ಶಾ ಹೇಳಿದ್ದೇನು?

ಕಳೆದ ಶನಿವಾರ ಪಕ್ಷದ ಉನ್ನತ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿ ಜಿಲ್ಲೆಯ ಎಂ.ಕೆ.ಹುಬ್ಬಳ್ಳಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಸಿದರು. ಧಾರವಾಡ, ಹುಬ್ಬಳ್ಳಿ, ನರಗುಂದ ಮತ್ತು ನವಲಗುಂದ ಭಾಗದ ರೈತರ ಪರವಾಗಿ ಅವರು ಈ ಹೇಳಿಕೆ ನೀಡಿದ್ದಾರೆ.

ಅಮಿತ್‌ ಶಾ ಅವರು ತಮ್ಮ ಭಾಷಣದಲ್ಲಿ “ಸ್ನೇಹಿತರೇ, ಕರ್ನಾಟಕದ ನಾಯಕರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು, ಅವರು ಗೋವಾದ ಬಿಜೆಪಿ ಸರ್ಕಾರದೊಂದಿಗೆ ಸಂಧಾನ ನಡೆಸಿ, ಕರ್ನಾಟಕಕ್ಕೆ ಮಹದಾಯಿ ನೀರು ಬರುವಂತೆ ಮಾಡಿದ್ದಾರೆ. ಎಂದು ಹೇಳುತ್ತಾರೆ. ಮೇಡಂ ಸೋನಿಯಾ ಗಾಂಧಿಯವರು 2007ರಲ್ಲಿ ಗೋವಾದಲ್ಲಿ ಮಾಡಿದ ಭಾಷಣದ ಬಗ್ಗೆ ಇಂದು ನಾನು ನೆನಪಿಸಲು ಬಯಸುತ್ತೇನೆ. ಮಹದಾಯಿ ನೀರನ್ನು ಕರ್ನಾಟಕಕ್ಕೆ ಹರಿಸಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.   ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಕರ್ನಾಟಕಕ್ಕೆ ಒಂದು ಹನಿ ಮಹದಾಯಿ ನೀರು ಸಿಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಲಾಗಿತ್ತು. ನಾನಿಂದು ಒಂದು ವಿಚಾರ ನಿಮಗೆ ಹೇಳಲು ಬಂದಿದ್ದೇನೆ. ಭಾರತೀಯ ಜನತಾ ಪಕ್ಷವು ಎರಡು ರಾಜ್ಯಗಳ ನಡುವಿನ ಹಳೆಯ ವಿವಾದವನ್ನು ಪರಿಹರಿಸುವ ಮೂಲಕ, ಕರ್ನಾಟಕಕ್ಕೆ ಮಹದಾಯಿ ನದಿ ನೀರನ್ನು ನೀಡುವ ಮೂಲಕ ಕರ್ನಾಟಕದ ಹಲವು ಜಿಲ್ಲೆಗಳ ರೈತರಿಗಾಗಿ ದೊಡ್ಡ ಕೆಲಸ ಮಾಡಿದೆ,” ಎಂದು ಹೇಳಿದ್ದಾರೆ.

ಬೆಳಗಾವಿ ಸುದ್ದಿ ಅಮಿತ್ ಶಾ ಅವರು ಮಾಡಿದ ಭಾಷಣದ ನೇರ ಪ್ರಸಾರವನ್ನು ಇಲ್ಲಿ ಕಾಣಬಹುದು.

ಮಹಾದಾಯಿ ನದಿ ನೀರಿನ ವಿಷಯದ ಬಗ್ಗೆ ಅಮಿತ್ ಶಾ ಏನು ಹೇಳಿದರು ಎಂಬುದನ್ನು ಅದೇ ವೀಡಿಯೋದ ಕಿರು ತುಣುಕನ್ನು ಇಲ್ಲಿ ನೋಡಬಹುದು.

ಅಮಿತ್ ಶಾ ಅವರ ಹೇಳಿಕೆಯ ಅರ್ಥವೇನೆಂದರೆ ಗೋವಾ ಮತ್ತು ಕರ್ನಾಟಕ ಮಹದಾಯಿ ವಿಷಯದಲ್ಲಿ ಒಮ್ಮತಕ್ಕೆ ಬಂದಿದೆ. ಇದರೊಂದಿಗೆ ಕರ್ನಾಟಕವು ಈಗ ಮಹಾದಾಯಿ ನದಿಯಿಂದ ನೀರನ್ನು ಪಡೆಯಲು ಸಾಧ್ಯವಾಗಲಿದೆ. ಅಂದರೆ, ಇಷ್ಟು ವರ್ಷಗಳ ಕಾಲ ಮಹದಾಯಿ ನೀರನ್ನು ನೀಡುವಲ್ಲಿ ಗೋವಾಕ್ಕಿದ್ದ ವಿರೋಧವನ್ನು ಈಗ ಬಗೆಹರಿಸಲಾಗಿದೆ ಎಂಬರ್ಥದಲ್ಲಿ ಹೇಳಿದ್ದಾರೆ. 

ಮಹದಾಯಿ ಜಲ ವಿವಾದವೇನು?

ನದಿ ಮಹದಾಯಿ ಅಥವಾ ಮಹದೈ, ಮಾಂಡೋವಿ ಎಂದು ಕರೆಯುವ ಈ ನದಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಭೀಮಗಢ ವನ್ಯಜೀವಿ ಸಂರಕ್ಷಣಾ ವಲಯದಲ್ಲಿ ಹುಟ್ಟುತ್ತದೆ. ಅಲ್ಲಿಂದ ಅದು ನಂತರ ಗೋವಾದಲ್ಲಿ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತದೆ.

ಈ ನಕಾಶೆಯು ಮಹದಾಯಿ ಹರಿವಿನ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ. ಜೊತೆಗೆ ಗೂಗಲ್‌ ಮ್ಯಾಪ್‌ನ ಇನ್ನೊಂದು ಚಿತ್ರವು, ಕರ್ನಾಟಕ ಸರ್ಕಾರವು ನಿರ್ಮಾಣ ಮಾಡಲುದ್ದೇಶಿಸಿದ ಯೋಜನಾ ಪ್ರದೇಶವಾಗಿದೆ.

ಗೋವನ್‌ ಅಬ್ಸರ್‌ವರ್‌ ಪ್ರಕಟಿಸಿದ ಮಹದಾಯಿ ಹರಿವಿನ ಪ್ರದೇಶ
ಸ್ಳಳದ ಗೂಗಲ್‌ ನಕ್ಷೆ

1980ರ ದಶಕದಲ್ಲಿ ಮಹದಾಯಿ ನೀರನ್ನು ಪಡೆಯಲು ಕಳಸಾ ಬಂಡೂರಿ ಎಂಬ ನಾಲೆಗಳನ್ನು ಮಾಡಲು ಕರ್ನಾಟಕ ಸರ್ಕಾರ ಉದ್ದೇಶಿಸಿತ್ತು. ಈ ಮೂಲಕ ನೀರಿನ ಅಭಾವ ಇರುವ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗಗಳಿಗೆ ನೀರಿನ್ನು ಹರಿಸುವ ಪ್ರಯತ್ನ ಇದಾಗಿತ್ತು. ಆದರೆ ಈ ಯೋಜನೆ ಬಗ್ಗೆ ಗೋವಾ ಆಕ್ಷೇಪ ಎತ್ತಿದ್ದು ಬಳಿಕ ಇದು ಮೂರು ರಾಜ್ಯಗಳಾದ ಕರ್ನಾಟಕ, ಗೋವಾ, ಮಹಾರಾಷ್ಟ್ರ ನಡುವಿನ ವಿವಾದವಾಗಿ ಸ್ಥಗಿತವಾಯಿತು.

2002ರಲ್ಲಿ ಕರ್ನಾಟಕದಲ್ಲಿ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ, ಯೋಜನೆಯನ್ನು ಮತ್ತೆ ಮುನ್ನೆಲೆಗೆ ತಂದು ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಲು ಯತ್ನಿಸಿದದರು.

ಅಡ್ವಕೇಟ್‌ ಜನರಲ್‌ ಗೋವಾ ದೇವಿದಾಸ್‌ ಪಾಂಗಮ್‌ ಅವರು ಮಹದಾಯಿ ಹುಟ್ಟು, ಜಲಾನಯನ ಪ್ರದೇಶ, ಹರಿವಿನ ವ್ಯಾಪ್ತಿಯನ್ನು ವಿವರಿಸುತ್ತಿರುವುದು.

ಮಹದಾಯಿ ವಿಚಾರದಲ್ಲಿ ನಾವು ಸ್ಥಳೀಯ ಪತ್ರಕರ್ತ ವಾಸುದೇವ್ ಚೌಗುಲೆ ಅವರನ್ನು ಸಂಪರ್ಕಿಸಿದ್ದು ಹಲವು ಮಾಹಿತಿಗಳನ್ನು ನೀಡಿದ್ದಾರೆ. “ಮಹಾದಾಯಿ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಹುಟ್ಟುತ್ತದೆ. ಕಳಸಾ ಬಂಡೂರಿ ಎಂಬ ಕೊಳ್ಳಗಳ ಮೂಲಕ ನೀರು ಹರಿದು ಮಹದಾಯಿ ನದಿಯಾಗಿ ಗೋವಾಕ್ಕೆ ಹರಿಯುತ್ತದೆ.

ಖಾನಾಪುರದಿಂದ 37 ಕಿ.ಮೀ ದೂರದಲ್ಲಿರುವ ಕಣಕುಂಬಿ ಬಳಿ ಕಳಸಾ ಕೊಳ್ಳ ಇದ್ದರೆ, ಖಾನಾಪುರದಿಂದ 12 ಕಿ.ಮೀ ದೂರದಲ್ಲಿರುವ ನೆರ್ಸಾದಲ್ಲಿ ಬಂಡೂರಿ ಇದೆ. ಕರ್ನಾಟಕ ಸರ್ಕಾರವು ಈ ಎರಡೂ ಕಾಲುವೆಗಳಿಗೆ ಅಣೆಕಟ್ಟುಗಳನ್ನು ನಿರ್ಮಿಸಿ ಕಾಲುವೆಯ ಮೂಲಕ ಖಾನಾಪುರದಿಂದ ಹರಿಯುವ ಮಲಪ್ರಭಾ ನದಿ ಜಲಾನಯನ ಪ್ರದೇಶಕ್ಕೆ ನೀರನ್ನು ಬಿಡುಗಡೆ ಮಾಡಲು ಯತ್ನಿಸುತ್ತಿದೆ.

ಸದ್ಯ ಕಳಸಾ ಕೊಳ್ಳಕ್ಕೆ ಕಟ್ಟಲಾದ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಇದಕ್ಕೆ ಗೋವಾ ಸರ್ಕಾರದ ವಿರೋಧ ಇದೆ. ಕಳಸಾ ಬಂಡೂರಿಯ ನೀರುಗಳನ್ನು ತಡೆದರೆ, ಮಹದಾಯಿ ಜಲಾನಯನ ಮತ್ತು ಅದರ ನೀರಿನ ಮೇಲೆ ಪರಿಣಾಮ ಬೀರುತ್ತದೆ. ಗೋವಾದಲ್ಲಿ ಮೀನುಗಾರಿಕೆ ಮೇಲೆ ತೊಂದರೆಯಾಗುತ್ತದೆ ಕುಡಿಯುವ ನೀರಿನ ಬಿಕ್ಕಟ್ಟು ತಲೆದೋರುತ್ತದೆ ಎನ್ನುವುದು ಗೋವಾದ ವಾದವಾಗಿದೆ.” ಎಂದು ಹೇಳಿದರು.

ಮಹದಾಯಿ ಹೋರಾಟದಲ್ಲಿರುವ ಪರಿಸರ ವಾದಿ ರಾಜೇಂದ್ರ ಕರ್ಕೆರ್‌ ಅವರನ್ನು ನ್ಯೂಸ್‌ಚೆಕರ್‌ ಸಂಪರ್ಕಿಸಿದ್ದು, ಅವರ ಪ್ರಕಾರ “ನಾವು ಈ ಯೋಜನೆಗೆ ವಿರುದ್ಧವಾಗಿದ್ದೇವೆ. ಇದು ಪರಿಸರ, ವನ್ಯಜೀವಿಗಳಿಗೆ ಹಾನಿ ಮಾಡುತ್ತದೆ. ಚೋರ್ಲಾ ಅರಣ್ಯ ವಲಯದಲ್ಲಿ ಈ ಯೋಜನೆ ನಡೆಯಲಿದ್ದು, ಇದು 1999ರಲ್ಲಿ ನಮೂದಾದ ಮಹದಾಯಿ ಅರಣ್ಯವಲಯದಲ್ಲಿ ಸಾಗುತ್ತದೆ. ಈ ಪ್ರದೇಶ ಪರಿಸರ ಸೂಕ್ಷ್ಮ ಪ್ರದೇಶ ಎಂದು ಕಸ್ತೂರಿರಂಗನ್‌ ಸಮಿತಿ ಗುರುತಿಸಿದೆ” ಎಂದರು.

“ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಪ್ರಕಾರ ಈ ಯೋಜನೆ ಸಂಪೂರ್ಣವಾಗಿ ಅಕ್ರಮವಾಗಿದೆ. ದಶಕಗಳಿಂದ ಈ ಪ್ರದೇಶದ ಕಣಕುಂಬಿಯಲ್ಲಿ ಹುಲಿ ಸಂಚಾರ ತಿಳಿಯಲು ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇದು ಹುಲಿ ಪ್ರದೇಶ ಎನ್ನುವುದು ತಿಳಿದಿದೆ. ಇಂತಹ ಪ್ರದೇಶದಲ್ಲಿ 6 ಅಣೆಕಟ್ಟುಗಳು, ಮೂರು ನಾಲೆಗಳನ್ನು ನಿರ್ಮಿಸುವುದು ತಪ್ಪಾಗುತ್ತದೆ. ಮಲಪ್ರಭೆಯನ್ನು ಮತ್ತೆ ಪುನರುಜ್ಜೀವನಗೊಳಿಸಲು ಅದರ ಹರಿವಿನ ಪ್ರದೇಶಗಳಲ್ಲಿ ಮರಗಳನ್ನು ನೆಡುವ ಅಗತ್ಯವಿದೆ. 1972ರ ವನ್ಯಜೀವಿ ಕಾಯ್ದೆಯನ್ನು ಉಲ್ಲಂಘಿಸಿ ಯೋಜನೆಗೆ ಅನುಮತಿ ಪಡೆಯುವುದು ಕಷ್ಟ” ಎಂದು ಅವರು ಹೇಳಿದ್ದಾರೆ.

ಇದರೊಂದಿಗೆ ಕಳಸಾ ಬಂಡೂರಿಯಲ್ಲಿ ಅಣೆಕಟ್ಟು ಕಟ್ಟಿದರೆ, ಮಲಪ್ರಭೆಯ ಭಾಗದಲ್ಲಿ ನೀರಿನ ಹೆಚ್ಚಳವಾಗಿ ಪಶ್ಚಿಮ ಘಟ್ಟಗಳ ಪ್ರದೇಶ ಮುಳುಗಡೆ, ಪ್ರಕೃತಿ ಹಾನಿಯಾಗುತ್ತದೆ. ಖಾನಾಪುರ, ಅಸೋಗಾ, ಯಡೋಗಾ, ಬಲೋಗಾ, ಕುಪ್ಪಟ್ಗಿರಿ ಮುಂತಾದ ನದಿ ತೀರದ ಗ್ರಾಮಗಳು ಪ್ರವಾಹ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ಇಲ್ಲಿನ ಸ್ಥಳೀಯರು ಈ ಯೋಜನೆ ವಿರೋಧಿಸುತ್ತಾರೆ.

ಪರಿಕರ್‌ ದೂರಿನ ಬಳಿಕ ಯೋಜನೆಗೆ ತಡೆ

ಕರ್ನಾಟಕ ಈ ಯೋಜನೆಗೆ ವೇಗ ನೀಡಿದ ಬೆನ್ನಲ್ಲೇ ಅಂದಿನ ಗೋವಾ ಮುಖ್ಯಮಂತ್ರಿ ಮನೋಹರ ಪರಿಕರ್‌ ಅವರು 2002ರಲ್ಲಿ ಕೇಂದ್ರಕ್ಕೆ ದೂರನ್ನು ದಾಖಲಿಸಿದ್ದು, ನ್ಯಾಯಾಧಿಕರಣ ಸ್ಥಾಪನೆಗೆ ಮತ್ತು ನೀರು ಹಂಚಿಕೆಗೆ ಒತ್ತಾಯಿಸಿದ್ದರು. ಆಗ ಯೋಜನೆಗೆ ತಡೆ ನೀಡಲಾಗಿದ್ದು, ಗೋವಾದ ಪ್ರತಿಭಟನೆ ಪ್ರಕಾರ, ಪರಿಸರ ಹಾನಿ ಮತ್ತು ಈ ಕುರಿತು ಆಂತಕವನ್ನು ವ್ಯಕ್ತಪಡಿಸಿತ್ತು.

2006ರಲ್ಲಿ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬಂದಾಗ ಮತ್ತು ಮಹದಾಯಿ ವಿಚಾರ ಮುನ್ನೆಲೆಗೆ ಬಂದಿದ್ದು, ಕೇಂದ್ರದ ಅನುಮತಿ ಹೊರತಾಗಿ ಯೋಜನೆಗೆ ಚಾಲನೆ ನೀಡಲು ಉದ್ದೇಶಿಸಲಾಗಿತ್ತು. ಆಗ ಗೋವಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ನ್ಯಾಯಾಧಿಕರಣ ರಚನೆಗೆ ಆಗ್ರಹಿಸಿದ್ದು, ಅದರಂತೆ ಯುಪಿಎ ಸರ್ಕಾರ 2010ರಲ್ಲಿ ನ್ಯಾಯಾಧಿಕರಣ ರಚನೆ ಮಾಡಿತ್ತು.

Also Read: ಗುಜರಾತ್ ಗಲಭೆ ಬಗ್ಗೆ ಸಾಕ್ಷ್ಯಚಿತ್ರ ಮಾಡಿದ್ದಕ್ಕಾಗಿ ಬಿಬಿಸಿ ವಿರುದ್ಧ ಪ್ರತಿಭಟನೆ?

ಆಗಸ್ಟ್ 14, 2018ರ ಹೊತ್ತಿಗೆ ಮಹದಾಯಿ ವಿಚಾರದಲ್ಲಿ ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿತ್ತು. ಕರ್ನಾಟಕದ ಪಾಲಿಗೆ 13.42 ಟಿಎಂಸಿ ನೀರು ನೀಡಿದರೆ, ಗೋವಾಕ್ಕೆ 24 ಟಿಎಂಸಿ, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಹಂಚಿಕೆ ಮಾಡಿ ತೀರ್ಪು ಹೊರಡಿಸಿತ್ತು. (1 ಟಿಎಂಸಿ ಅಂದರೆ 1000 ಮಿಲಿಯನ್‌ ಕ್ಯೂಬಿಕ್‌ ಫೀಟ್ನಲ್ಲಿ ಹಿಡಿಯುವಷ್ಟು ನೀರು.) ನ್ಯಾಯಾಧಿಕರಣದ ತೀರ್ಪಿನ ಬಗ್ಗೆ ಮಾಧ್ಯಮಗಳೂ ವರದಿ ಮಾಡಿದ್ದು, ದಿ ಇಂಡಿಯನ್‌ ಎಕ್ಸ್ ಪ್ರೆಸ್‌ ವರದಿ ಇಲ್ಲಿದೆ. ಆದರೆ ಈ ತೀರ್ಪಿನ ವಿರುದ್ಧ ಗೋವಾ ತಕರಾರು ತೆಗೆದಿದ್ದು, ಮೂರು ರಾಜ್ಯಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.

ಆ ನಂತರದಲ್ಲಿ ಕೇಂದ್ರ ಜಲ ಆಯೋಗ ಫೆಬ್ರವರಿ 2020ರಲ್ಲಿ ಕರ್ನಾಟಕದ ಯೋಜನೆಗೆ ಸಮ್ಮತಿ ನೀಡಿತ್ತು. ಆದರೆ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿಗೆ ಅನುಸಾರವಾಗಿ ಈ ಸಮ್ಮತಿ ಜಾರಿಯಲ್ಲಿದೆ ಎಂದು ಹೇಳಿತ್ತು. ಇದು ಗೋವಾ ಆಕ್ಷೇಪಕ್ಕೆ ಕಾರಣವಾಗಿದ್ದು, ಅದು ಮತ್ತೆ ಸುಪ್ರೀಂ ಕದವನ್ನು ತಟ್ಟಿದೆ.

ಬೊಮ್ಮಾಯಿ ಹೇಳಿಕೆ, ದಿಲ್ಲಿಗೆ ದೌಡಾಯಿಸಿದ ಸಾವಂತ್‌

ಡಿಸೆಂಬರ್‌ 2022ರ ಹೊತ್ತಿಗೆ ಕರ್ನಾಟಕ ಮುಖ್ಯಮಂತ್ರಿ ಬೊಮ್ಮಾಯಿಯವರು ಕೇಂದ್ರ ಜಲ ಆಯೋಗದ ಸಮ್ಮತಿ ಕರ್ನಾಟಕದ ಪಾಲಿನ ಜಯ ಎಂದು ಹೇಳಿದ್ದರು. ಅಲ್ಲದೇ ಕಳಸಾ ಬಂಡೂರಿ ನಾಲೆಗೆ ಸಮ್ಮತಿ ಚುನಾವನೆ ಹೊಸ್ತಿಲಿನಲ್ಲಿರುವ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿರುವ ಕೊಡುಗೆ ಎಂದು ಹೇಳಿದ್ದರು.

ಇದಾಗುತ್ತಲೇ ಗೋವಾ ಸರ್ಕಾರದ ನಿಯೋಗ, ಸಿಎಂ ಪ್ರಮೋದ್‌ ಸಾವಂತ್‌ ಅವರ ನೇತೃತ್ವದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದು, ಕೂಡಲೆ ನೀರು ಹಂಚಿಕೆ ಕುರಿತು ಪ್ರಾಧಿಕಾರ ನಿರ್ಮಿಸಲು ಆಗ್ರಹಿಸಿದ್ದರು. ಗೋವಾ ಇದರೊಂದಿಗೆ ಕರ್ನಾಟಕಕ್ಕೆ 2 ಅಣೆಕಟ್ಟು ಕಟ್ಟಲು ನೀಡಿದ ಜಲ ಆಯೋಗದ ಸಮ್ಮತಿಯನ್ನೂ ವಾಪಸ್‌ ಪಡೆದುಕೊಳ್ಳಲು ಹೇಳಿದ್ದರು.

ಸಾವಂತ್‌ ಅವರೊಂದಿಗೆ ಭೇಟಿಯಾದ ವಾರದಲ್ಲೇ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಕರ್ನಾಟಕದಲ್ಲಿ ಮಹದಾಯಿ ವಿವಾದ ಬಗೆಹರಿದಿರುವುದಾಗಿ ಹೇಳಿಕೆ ನೀಡಿದ್ದಾರೆ. ಇದರಿಂದ ಗೋವಾ ವಿಪಕ್ಷಗಳು, ಸಾವಂತ್‌ ಅವರ ರಾಜೀನಾಮೆಗೆ ಆಗ್ರಹಿಸಿವೆ.

ಈ ಕೂಡಲೇ ಸಾವಂತ್‌ ಅವರು ಟ್ವೀಟ್‌ ಮಾಡಿ, “ನಾವು ಮಹದಾಯಿ ಕುರಿತಾಗಿ ಕೂಡಲೇ ಆಕ್ಷೇಪಣೆಗಳನ್ನು ಕೇಳಬೇಕು ಎಂದು ಮನವಿ ಮಾಡಿದ್ದಾಗಿ ಹೇಳಿದ್ದಾರೆ. ಗೋವಾಕ್ಕೆ ಲಭ್ಯವಾಗಬೇಕಿರುವ ಪ್ರತಿ ಹನಿ ನೀರಿಗೂ ನಾವು ಹೋರಾಟ ಮಾಡುತ್ತೇವೆ. ಕರ್ನಾಟಕದ ಡಿಪಿಆರ್‌ಗೆ ಪರಿಸರ ಸಚಿವಾಲಯದ ಸೂಕ್ತ ಸಮ್ಮತಿಯೂ ಸಿಕ್ಕಿಲ್ಲ. ನನ್ನ ಸರ್ಕಾರ ಗೋವಾ ಜನರ ಹಿತಾಸಕ್ತಿ ರಕ್ಷಿಸುವುದಾಗಿ ಅವರು ಹೇಳಿದ್ದಾರೆ.”

ಕೋರ್ಟ್‌ ಕೇಸಿನ ಪರಿಸ್ಥಿತಿಯೇನು?

ಮಹದಾಯಿ ವಿಚಾರದಲ್ಲಿ ಗೋವಾ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಫೆ.13ರಂದು ನಡೆಯಲಿದೆ. ಈ ವಿಚಾರದಲ್ಲಿ ಗೋವಾ ಸರ್ಕಾರದ ಅಡ್ವೊಕೇಟ್ ಜನರಲ್ ದೇವಿದಾಸ್ ಪಾಂಗಮ್ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು. “ಕೇಂದ್ರ ಜಲ ಆಯೋಗದಿಂದ ನಮಗೆ ಅನುಮತಿ ಸಿಕ್ಕಿದೆ ಎಂದು ಹೇಳುವ ಮೂಲಕ ಕರ್ನಾಟಕವು ನಮ್ಮ ನೀರನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದೆ ಮತ್ತು ಇದನ್ನು ನಾವು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದೇವೆ. ಅವರ ವಿಚಾರಣೆ ಶೀಘ್ರದಲ್ಲೇ ನಡೆಯಲಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿ ಕಾನೂನಿನಿಂದ ನಿಷೇಧಿಸಲಾಗಿರುವ ಮಹಾದಾಯಿ ಅಭಯಾರಣ್ಯದಿಂದ ಕರ್ನಾಟಕವು ಅಂತಹ ನೀರನ್ನು ತಿರುಗಿಸಲು ಸಾಧ್ಯವಿಲ್ಲ. ಇದು ಕೇಂದ್ರ ಸರ್ಕಾರದ ಕಾನೂನು ಮತ್ತು ಪ್ರಯತ್ನಗಳು ಕಾನೂನು ಬಾಹಿರವಾಗಿವೆ. ಈ ವಿಷಯವು ಕೇಂದ್ರ ಜಲ ಆಯೋಗದಲ್ಲಿ ಬರುವುದಿಲ್ಲ. ಒಂದು ಅನುಮತಿ ನೀಡಿದರೆ ಯೋಜನೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮಹದಾಯಿ ನ್ಯಾಯಾಧಿಕರಣ ತೀರ್ಪಿನಲ್ಲಿ ಪ್ರಮುಖವಾಗಿ ಬರೆಯಲಾಗಿದೆ. ಅರಣ್ಯ ಮತ್ತು ಪರಿಸರ ಸಚಿವಾಲಯದ ಅನುಮತಿಯೂ ಸಮಾನವಾಗಿ ಮಹತ್ವದ್ದಾಗಿವೆ ಮತ್ತು ಅದಕ್ಕಾಗಿ ನ್ಯಾಯಾಲಯದ ಹೋರಾಟ ಮುಂದುವರಿಯುತ್ತದೆ” ಎಂದು ಅವರು ಹೇಳಿದ್ದಾರೆ.

ಇದೇ ವಿಚಾರದಲ್ಲಿ ನಾವು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮೋಹನ್‌ ಕಾತರಕಿ ಅವರನ್ನು ಸಂಪರ್ಕಿಸಿದಾಗ, ಕೇಸ್‌ ಇನ್ನಷ್ಟೇ ಪಟ್ಟಿಯಾಗಬೇಕಿದ್ದು, ಈ ಬಗ್ಗೆ ಕರ್ನಾಟಕ ತನ್ನ ಪಾಲಿನ ಹಕ್ಕಿಗಾಗಿ ಹೋರಾಟ ಮುಂದುವರಿಸಲಿದೆ ಎಂದು ಹೇಳಿದ್ದಾರೆ.

ಅಲ್ಲದೇ ಕರ್ನಾಟಕದ ನಿಲುವಿನ ಬಗ್ಗೆ ಕೇಳಿದಾಗ ಕಾತರಕಿ ಅವರು, “ನಮಗೆ ನೋಟಿಸ್‌ ಸಿಕ್ಕಿಲ್ಲ. ಗೋವಾ ಆಕ್ಷೇಪದ ಬಗ್ಗೆ ಸರಿಯಾದ ಕಾನೂನು ಪ್ರಕ್ರಿಯೆ ನಡೆಯಲಿದೆ. ಈ ಬಗ್ಗೆ ಅನಂತರವೇ ಸರಿಯಾಗಿ ಮಾತನಾಡಬಹುದಷ್ಟೇ” ಎಂದು ಹೇಳಿದ್ದಾರೆ.

Conclusion

ಮಹದಾಯಿ ಕುರಿತಂತೆ ಕಳಸಾ ಬಂಡೂರಿ ಅಣೆಕಟ್ಟುಗಳಿಗೆ ಅನುಮತಿ ಸಿಕ್ಕಿದ ಬಗ್ಗೆ ಈವರೆಗೂ ಯಾವುದೇ ಅಧಿಕೃತ ಮಾಹಿತಿಗಳು ತಿಳಿದು ಬಂದಿಲ್ಲ. ಕೇಂದ್ರ ಜಲ ಆಯೋಗ ನೀಡಿದ ಅನುಮತಿ ವಿಚಾರದಲ್ಲಿಯೂ ಸುಪ್ರೀಂ ಕೋರ್ಟ್‌ ವಿಚಾರಣೆ ಇನ್ನೂ ಬಾಕಿ ಇವೆ. ಆದ್ದರಿಂದ ಮಹದಾಯಿ ವಿಚಾರದಲ್ಲಿ ಎಲ್ಲ ವಿವಾದಗಳೂ ಬಗೆಹರಿದಿದೆ ಎಂದು ಹೇಳುವುದು ದಾರಿತಪ್ಪಿಸುವ ಹೇಳಿಕೆಯಾಗುತ್ತದೆ.

Our Sources
Live coverage by Belgavi Suddi
Tweet made by Dr. Pramod Sawant
Report by The Indian Express, Dated, Augst 18, 2018
Explainer by The Indian Express, Dated, January 3, 2023
Explainer by The news minute, Dated, January 3, 2023
Report by Live Law, Dated, january 27, 2023
Conversation with environmentalist Rajendra Kerkar, Advocate general of Goa Devidas Pangam and Karnataka’s Advocate Mohan Kataraki


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.