Fact Check: ಗ್ಯಾರೆಂಟಿ ಯೋಜನೆಗಳಿಗೆ ದುಡ್ಡು ಎಲ್ಲಿಂದ ತರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಯೇ?

ಗ್ಯಾರೆಂಟಿ ಯೋಜನೆ ಸಿದ್ದರಾಮಯ್ಯ ಎಲ್ಲಿಂದ ತರಲಿ ದುಡ್ಡು

Authors

Claim
ಗ್ಯಾರೆಂಟಿ ಯೋಜನೆಗಳಿಗೆ ದುಡ್ಡು ಎಲ್ಲಿಂದ ತರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ

Fact
ಬೆಳಗಾವಿ ಅಧಿವೇಶನದ ವೇಳೆ ಸಿಎಂ ಸಿದ್ದರಾಮಯ್ಯ ಅವರ ಭಾಷಣದ ಆಯ್ದ ಭಾಗವನಷ್ಟೇ ಹಾಕಿ ದುಡ್ಡು ಎಲ್ಲಿಂದ ತರಲಿ ಎಂದು ಸಿಎಂ ಕೇಳಿದ್ದಾರೆ ಎಂದು ತಪ್ಪಾಗಿ ಹೇಳಲಾಗಿದೆ.

ಗ್ಯಾರೆಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಪರದಾಡುತ್ತಿರುವ ಸಿದ್ದರಾಮಯ್ಯ ಹಣ ಎಲ್ಲಿಂದ ತರಲಿ ಎಂದು ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಹರಿದಾಡಿದೆ.

ವೀಡಿಯೋದಲ್ಲಿ ಸಿಎಂ ಸಿದ್ದರಾಮಯ್ಯ ನವರು ದುಡ್ಡು ಎಲ್ಲಿಂದ ತರಲಿ ಎಂದು ಪ್ರಶ್ನಿಸುವುದು ಕಾಣಿಸುತ್ತಿದೆ. ಈ ಕುರಿತ ಕ್ಲೇಮಿನಲ್ಲಿ “ಎಲ್ಲಿಂದ ತರಲಿ ದುಡ್ಡು ಸಿದ್ದರಾಮಯ್ಯ. ಸಾಹೇಬ್ರೆ ಮತ್ತೆ ನಮ್ಮ ಬ್ರದರ್ಸ್ ಅಲ್ಪಸಂಖ್ಯಾತರಿಗೆ ಎಲ್ಲಿಂದ ತರ್ತಿರಾ” ಎಂದಿದೆ.

Fact Check: ಗ್ಯಾರೆಂಟಿ ಯೋಜನೆಗಳಿಗೆ ದುಡ್ಡು ಎಲ್ಲಿಂದ ತರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಯೇ?

ಇದೇ ರೀತಿಯ ಕ್ಲೇಮ್‌ ಅನ್ನು ತೆಲಂಗಾಣದ ಮಾಜಿ ಸಚಿವ ಕೆಟಿ ರಾಮರಾವ್ ಅವರು ಪೋಸ್ಟ್ ಮಾಡಿದ್ದು, ” ಗ್ಯಾರೆಂಟಿಗಳಿಗೆ ಹಣವಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಚುನಾವಣೆಯಲ್ಲಿ ಯಶಸ್ವಿಯಾಗಿ ಜನರನ್ನು ವಂಚಿಸಿದ ನಂತರ ತೆಲಂಗಾಣಕ್ಕೂ ಇದು ಅನ್ವಯಿಸಲಿದೆಯೇ? ವಿಚಿತ್ರ ಆಶ್ವಾಸನೆಗಳನ್ನು ಕೊಡುವ ಮೊದಲು ಸಂಶೋಧನೆ ಮತ್ತು ಯೋಜನೆಯನ್ನು ಮಾಡಬೇಕಲ್ಲವೇ?” ಎಂದಿದ್ದಾರೆ.

Fact Check: ಗ್ಯಾರೆಂಟಿ ಯೋಜನೆಗಳಿಗೆ ದುಡ್ಡು ಎಲ್ಲಿಂದ ತರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಯೇ?

ಈ ಕುರಿತು ನಾವು ಸತ್ಯಶೋಧನೆ ನಡೆಸಿದ್ದು ಇದು ತಪ್ಪು ಎಂದು ಕಂಡುಕೊಂಡಿದ್ದೇವೆ.

Fact Check/ Verification

ಸತ್ಯಶೋಧನೆಗಾಗಿ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

ಡಿಸೆಂಬರ್ 19, 2023ರ ಹಿಂದೂಸ್ತಾನ್‌ ಟೈಮ್ಸ್ ಕನ್ನಡ ವರದಿಯಲ್ಲಿ, “ಕರ್ನಾಟಕ ಸಿಎಂ ಗ್ಯಾರಂಟಿಗಳಿಗೆ ಹಣವಿಲ್ಲ ಎಂದಿದ್ದಾರೆ ಎಂದ ಕೆಟಿಆರ್; ಅದು ಫೇಕ್ ವಿಡಿಯೊ ಅಂತ ಸಿದ್ದರಾಮಯ್ಯ ತಿರುಗೇಟು” ಎಂದಿದೆ. ಈ ವರದಿಯಲ್ಲಿ ಕೆಟಿಆರ್ ಕ್ಲೇಮ್‌ಗೆ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಯನ್ನುಕೊಡಲಾಗಿದೆ.

ಈ ವರದಿಯನ್ನು ಗಮನಿಸಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ. ಈ ವೇಳೆ ಎಕ್ಸ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪ್ರತಿಕ್ರಿಯೆಯನ್ನು ಗಮನಿಸಿದ್ದೇವೆ.

ಸಿಎಂ ಸಿದ್ದರಾಮಯ್ಯ ಅವರು ಕೆಟಿಆರ್ ಅವರ ಕ್ಲೇಮಿಗೆ ಡಿಸೆಂಬರ್ 19, 2023ರಂದು ಪ್ರತಿಕ್ರಿಯೆಯನ್ನು ನೀಡಿದ್ದು, ಇದು ಫೇಕ್‌ ವೀಡಿಯೋ, ಎಡಿಟ್‌ ಮಾಡಲಾದ ವೀಡಿಯೋ ಎಂದು ಹೇಳಿದ್ದಾರೆ. ಇದರೊಂದಿಗೆ ಎಲ್ಲಿಂದ ದುಡ್ಡು ತರಲಿ ಎಂದು ಕೇಳಿದ್ದಾಗಿ ವಿಪಕ್ಷ ಬಿಜೆಪಿ ನಾಯಕರು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ಕುರಿತ ಪೂರ್ಣ ವೀಡಿಯೋ ಎಂದು ಸಿದ್ದರಾಮಯ್ಯನವರು ಡಿಸೆಂಬರ್ 17, 2023ರ ಇನ್ನೊಂದು ಪೋಸ್ಟ್ ನಲ್ಲಿ ಹೇಳಿರುವುದನ್ನೂ ನಾವು ಗಮನಿಸಿದ್ದೇವೆ.

ವೈರಲ್‌ ಆಗಿರುವ ಭಾಷಣದ ತುಣುಕು ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಸಿದ್ದರಾಮಯ್ಯನವರು ಮಾತನಾಡಿದ್ದಾಗಿದೆ. ಇದನ್ನು ಡಿಸೆಂಬರ್ 15, 2023ರಂದು ಯೊ ಯೊ ಟಿವಿ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಂಪೂರ್ಣ ಭಾಷಣವನ್ನು ಗಮನಿಸಬಹುದು. 6.20 ನಿಮಿಷದಿಂದ 6.23ರವರೆಗಿನ ಭಾಷಣದ ಆಯ್ದ ಭಾಗವನ್ನು ನೋಡಬಹುದು. ಇದರಲ್ಲಿ, “ಸಾಲ ಮನ್ನಾ ಮಾಡದೆ ಹೋದರೆ ಈ ಸರ್ಕಾರದ ವಿರುದ್ಧ ಇಡೀ ರಾಜ್ಯದಲ್ಲಿ ಹೋರಾಟ ಮಾಡುತ್ತೀವಿ, ಯಡಿಯೂರಪ್ಪನವರು ಹೇಳಿದ್ದಾರೆ. ನಿಮ್ಮ ಪ್ರಣಾಳಿಕೆಯಲ್ಲಿ 2018ರಲ್ಲಿ ಅಧಿಕಾರಕ್ಕೆ ಬಂಧ ಮೊದಲನೇ ಕ್ಯಾಬಿಟ್ ನಲ್ಲಿ 1 ಲಕ್ಷರೂ ವರೆಗೆ ರಾಷ್ಟ್ರೀಕೃತ ಬ್ಯಾಂಕ್ ಇರಬಹುದು, ಸಹಕಾರಿ ಬ್ಯಾಂಕ್‌ ಇರಬಹುದು ಸಾಲ ಮನ್ನಾ ಮಾಡ್ತೀವಿ ಎಂದಿದ್ದೀರಿ? ಮಾಡಿದ್ದೀರಾ, ಯಾವ ನೈತಿಕತೆ ಇದೆ ಅವರಿಗೆ, ಯಾವ ನೈತಿಕತೆ ಇದೆ ಅವರಿಗೆ? ಇದೇ ಯಡಿಯೂರಪ್ಪ ಸಿಎಂ ಆಗಿದ್ದ 2009 ಡಿಸೆಂಬರ್ ನಲ್ಲಿ ಉಗ್ರಪ್ಪ ಕೌನ್ಸಿಲ್‌ ನಲ್ಲಿ ಸಾಲಮನ್ನಾ ಬಗ್ಗೆ ಹೇಳಿದಾಗ ಯಡಿಯೂರಪ್ಪನವರು ನಮ್ಮಲ್ಲಿ ಪ್ರಿಂಟಿಂಗ್‌ ಮಷಿನ್‌ ಇದೆಯೇ ಎಲ್ಲಿಂದ ತರಲಿ ದುಡ್ಡು? ಎಲ್ಲಿಂದ ತರೋದು ದುಡ್ಡು, ನಾವೇನು ಹೇಳ್ತೀವಪ್ಪ, ಚುನಾವಣೆಯಲ್ಲಿ, ಹೇಳಿದಂತೆ ಆಗುತ್ತಾ?…” ಎಂದು ಸಿದ್ದರಾಮಯ್ಯನವರು ಹೇಳುವುದನ್ನು ಗಮನಿಸಬಹುದು.

Conclusion

ಈ ಸತ್ಯಶೋಧನೆಯ ಪ್ರಕಾರ ಗ್ಯಾರೆಂಟಿಗೆ ದುಡ್ಡು ಎಲ್ಲಿಂದ ತರಲಿ ಎಂದು ಸಿದ್ದರಾಮಯ್ಯನವರು ಕೇಳಿದ್ದಾರೆ ಎನ್ನುವುದು ತಪ್ಪಾಗಿದೆ. ಅವರ ಭಾಷಣವನ್ನು ತುಂಡರಿಸಿ, ಕ್ಲೇಮಿನೊಂದಿಗೆ ಹಂಚಿಕೊಳ್ಳಲಾಗಿದೆ.

Result: False

Our Sources

Report By Hindustan Times Kannada, Dated: December, 19 2023

Tweet By Siddaramaiah, Dated: December 17, 2023

YouTube Video By Yo Yo Tv Kannada, Dated: December 15, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors