Fact Check
ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಗೆ ಜಾಮೀನು, ವೈರಲ್ ವೀಡಿಯೋ ಹಿಂದಿನ ಸತ್ಯವೇನು?
Claim
ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಗೆ ಜಾಮೀನು
Fact
2020ರಲ್ಲಿ ಪ್ರಕರಣವೊಂದರಲ್ಲಿ ಫಜಿಲ್ಕಾ ನ್ಯಾಯಾಲಯಕ್ಕೆ ಲಾರೆನ್ಸ್ ಬಿಷ್ಣೋಯ್ ಹಾಜರು ಪಡಿಸಲಾಗಿದ್ದ ವೇಳೆ ಚಿತ್ರೀಕರಿಸಿದ ವೀಡಿಯೋವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಜಾಮೀನು ಪಡೆದು ಹೊರಬಂದಿದ್ದಾನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಲಾರೆನ್ಸ್ ಬಿಷ್ಣೋಯ್ ಜಾಮೀನು ಪಡೆದಿದ್ದಾರೆ, ಸನಾತನ ಧರ್ಮದ ವಿರೋಧಿಗಳೇ, ದಯವಿಟ್ಟು ಎಚ್ಚರಿಕೆಯಿಂದ ಮಾತನಾಡಿ.” ಎಂದಿದೆ.

ಈ ಕುರಿತು ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು, ಹಳೆಯ ವೀಡಿಯೋ ಹಂಚಿಕೊಂಡು ತಪ್ಪು ಹೇಳಿಕೆ ನೀಡಲಾಗಿದೆ ಎಂದು ಕಂಡುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ಲಾರೆನ್ಸ್ ಬಿಷ್ಣೋಯಿಗೆ ಜಾಮೀನು ದೊರೆತಿದೆಯೇ ಎಂಬ ಬಗ್ಗೆ ಹುಡುಕಾಡಿದ್ದೇವೆ. ಈ ವೇಳೆ ಅಂತಹ ಯಾವುದೇ ವರದಿಗಳು ಕಂಡುಬಂದಿಲ್ಲ. ಆದರೆ ಲಾರೆನ್ಸ್ ಬಿಷ್ಣೋಯಿ ಮೇಲಿನ ನಿರ್ಬಂಧವನ್ನು ಕೇಂದ್ರ ಗೃಹಸಚಿವಾಲಯ ಮುಂದುವರಿಸಿದ್ದರ ಕುರಿತಾದ ಪತ್ರಿಕಾ ವರದಿಯನ್ನು ಕಂಡಿದ್ದೇವೆ.
ಇಂಡಿಯನ್ ಎಕ್ಸ್ ಪ್ರೆಸ್ ನವೆಂಬರ್ 20, 2025ರಂದು ಈ ವರದಿಯನ್ನು ಪ್ರಕಟಿಸಿದೆ. ಇದರಲ್ಲಿ “ಈ ವರ್ಷದ ಆಗಸ್ಟ್ನಲ್ಲಿ ಗೃಹ ಸಚಿವಾಲಯ (MHA), ಅಹಮದಾಬಾದ್ನ ಸಬರಮತಿ ಕೇಂದ್ರ ಕಾರಾಗೃಹದಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಚಲನವಲನವನ್ನು ಮತ್ತೊಂದು ವರ್ಷದವರೆಗೆ ನಿರ್ಬಂಧಿಸುವ ಆದೇಶವನ್ನು ನವೀಕರಿಸಿತು. ಲಾರೆನ್ಸ್ ಬಿಷ್ಣೋಯ್ ವಿರುದ್ಧದ ನಿರ್ಬಂಧಿತ ಆದೇಶವನ್ನು ಬಿಎನ್ಎಸ್ಎಸ್ ಸೆಕ್ಷನ್ 303 ರ ಅಡಿಯಲ್ಲಿ ಗೃಹ ಸಚಿವಾಲಯ ನವೀಕರಿಸಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ಜೈಲು ಅಧಿಕಾರಿಯೊಬ್ಬರು ಬುಧವಾರ ಇಂಡಿಯನ್ ಎಕ್ಸ್ಪ್ರೆಸ್ಗೆ ದೃಢಪಡಿಸಿದರು. ನ್ಯಾಯಾಲಯದಲ್ಲಿ ಹಾಜರಾತಿ, ಯಾವುದಾದರೂ ಇದ್ದರೆ, ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದರು. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (CrPC) ಅಡಿಯಲ್ಲಿ ಒಮ್ಮೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಅಡಿಯಲ್ಲಿ ಎರಡು ಬಾರಿ ಸತತ ಮೂರನೇ ವರ್ಷಕ್ಕೆ ನಿರ್ಬಂಧಿತ ಆದೇಶ ಹೊರಡಿಸಲಾಗಿದ್ದು, ಈ ಆದೇಶ ಜಾರಿಯಲ್ಲಿರುವ ಕಾರಣ ಗುಜರಾತ್ ಜೈಲಿನಿಂದ ಹೊರಗೆ ಸ್ಥಳಾಂತರಿಸಲು ಸಾಧ್ಯವಿಲ್ಲ. ಅಮೆರಿಕದಿಂದ ಗಡೀಪಾರು ಮಾಡಲ್ಪಟ್ಟು ಬುಧವಾರ ಭಾರತಕ್ಕೆ ತಲುಪಿದ ಅನ್ಮೋಲ್ ಬಿಷ್ಣೋಯ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದ್ದರೂ, ಗ್ಯಾಂಗ್ನ ನಾಯಕ ಲಾರೆನ್ಸ್ ಎರಡೂವರೆ ವರ್ಷಗಳಿಗೂ ಹೆಚ್ಚು ಕಾಲ ಗುಜರಾತ್ನ ಜೈಲಿನಲ್ಲಿದ್ದಾನೆ.” ಎಂದಿದೆ.

ತನಿಖೆಯ ಭಾಗವಾಗಿ ನಾವು ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಆರ್ ಬಿ ಲೈವ್ ಮೀಡಿಯಾ ಚಾನೆಲ್ ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡಿರುವ ವೀಡಿಯೋ ಲಭ್ಯವಾಗಿದೆ. ಫೆಬ್ರವರಿ 24, 2020ರಂದು ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ಇದರಲ್ಲಿ, “ಲಾರೆನ್ಸ್ ಬಿಷ್ಣೋಯ್ ಅವರನ್ನು ಫಜಿಲ್ಕಾ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು, 24/02/20 ರಂದು ಖುಲಾಸೆಗೊಳಿಸಲಾಯಿತು.” ಎಂದಿದೆ.
ಇದೇ ವಿವರಣೆಯ ಕೀವರ್ಡ್ ಗಳನ್ನು ಬಳಸಿ ನಾವು ಗೂಗಲ್ ನಲ್ಲಿ ಹುಡುಕಾಟ ನಡೆಸಿದಾಗ, ಮಾರ್ಚ್ 2, 2020ರ ಇನ್ನೊಂದು ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ. ಎಲ್ ಬಿಜಿ ಡಿಜೆ ಸಾಂಗ್ ಎಂಬ ಚಾನೆಲ್ ನಲ್ಲಿ “ಫಜಿಲ್ಕಾ ನ್ಯಾಯಾಲಯದಲ್ಲಿ ಲಾರೆನ್ಸ್ ಬಿಷ್ಣೋಯ್ ಇತ್ತೀಚಿನ ವೀಡಿಯೋ 2020” ಎಂಬ ವಿವರಣೆಯೊಂದಿಗೆ ವೀಡಿಯೋವನ್ನು ನೋಡಿದ್ದೇವೆ.
ಈ ಎರಡೂ ವೀಡಿಯೋಗಳು ವೈರಲ್ ವೀಡಿಯೋದ ಕೀಫ್ರೇಂಗಳಿಗೆ ಹೊಂದಾಣಿಕೆಯಾಗುತ್ತಿರುವುದೂ ಕಂಡುಬಂದಿದೆ.
Conclusion
ಆದ್ದರಿಂದ ಸತ್ಯಶೋಧನೆಯ ಪ್ರಕಾರ, ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಜಾಮೀನು ಪಡೆದು ಹೊರಬಂದಿದ್ದಾನೆ ಎನ್ನುವುದು ಸುಳ್ಳಾಗಿದ್ದು, ಹಳೆಯ ವೀಡಿಯೋವನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.
Also Read: ದಲಿತ ವರನನ್ನು ಕುದುರೆಯಿಂದ ಇಳಿಸುವ ವೀಡಿಯೋ ಎಂದು ಆಂಧ್ರಪ್ರದೇಶದ ಕುದುರೆ ರೇಸ್ ವೀಡಿಯೋ ವೈರಲ್
Our Sources
Report by Indian Express, Dated: November 20, 2025
YouTube Video by, RB Live Media, Dated: February 24, 2020
YouTube Video by LBG DJ Song, Dated: March 2, 2020