ಪ್ರಧಾನಿ ನರೇಂದ್ರ ಮೋದಿ ಕೇಶಮುಂಡನ ಮಾಡಿಸಿಕೊಂಡಿದ್ದಾರೆಯೇ? ವೈರಲ್‌ ಕ್ಲೇಮ್‌ ಸುಳ್ಳು

ಪ್ರಧಾನಿ, ನರೇಂದ್ರ ಮೋದಿ, ಕೇಶಮುಂಡನ

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಮೋದಿಯವರ ನಿಧನದ ಬಳಿಕ ಕೇಶಮುಂಡನ ಮಾಡಿಸಿಕೊಂಡಿದ್ದಾರೆ ಎಂಬ ಫೋಟೋ ಒಂದು ಇದೀಗ ವೈರಲ್‌ ಆಗಿದೆ.

ವಾಟ್ಸಾಪ್‌ ಮೂಲಕ ಈ ಕ್ಲೇಮ್‌ ಪಡೆದುಕೊಳ್ಳಲಾಗಿದ್ದು, ಅದರಲ್ಲಿ “ಲೋಕನಾಯಕ, ಅಜಾತಶತ್ರು, ಕಳಂಕ ರಹಿತ, ಅಪ್ಪಟ ಹಿಂದೂ ಮೋದೀ ಜೀ ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಕೇಶಮುಂಡನ ಮಾಡಿಕೊಂಡ ತಾಯಿಗೆ ತಕ್ಕ ಮಗ. ಈ ಆದರ್ಶ ಇಷ್ಟಕ್ಕೇ ಸೀಮಿತವಲ್ಲ.” ಎಂದು ಬರೆಯಲಾಗಿದೆ.

ಪ್ರಧಾನಿ, ನರೇಂದ್ರ ಮೋದಿ, ಕೇಶಮುಂಡನ, ವೈರಲ್‌ ಕ್ಲೇಮ್‌, ಹೀರಾಬೆನ್‌ ಮೋದಿ
ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ವೈರಲ್‌ ಮೆಸೇಜ್‌

ಇದೇ ಕ್ಲೇಮ್‌ ಫೇಸ್‌ಬುಕ್‌ ನಲ್ಲಿಯೂ ಕಂಡು ಬಂದಿದ್ದು ಅವುಗಳು ಇಲ್ಲಿದೆ, ಇಲ್ಲಿದೆ ಮತ್ತು ಇಲ್ಲಿದೆ

ಆದರೆ ಈ ಕ್ಲೇಮ್‌ ಸುಳ್ಳು ಎಂದು ನ್ಯೂಸ್ ಚೆಕರ್‌ ಪರಿಶೀಲನೆಯಿಂದ ತಿಳಿದುಬಂದಿದ್ದು, ಅದರ ವಿವರಗಳು ಇಲ್ಲಿವೆ.

Fact Check/ Verification

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್‌ ಮೋದಿ ಅವರು ಡಿಸೆಂಬರ್‌ 30 2022ರ ಶುಕ್ರವಾರ ನಿಧನರಾಗಿದ್ದರು. ಆ ಬಳಿಕ ಮೋದಿ ಅವರ ಕೇಶಮುಂಡನದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಶುರುವಾಗಿದೆ.

ಈ ಕುರಿತು ಪರಿಶೀಲನೆಗೆ ರಿವರ್ಸ್‌ ಇಮೇಜ್ ಸರ್ಚ್ ನಡೆಸಲಾಗಿದೆ. ಈ ವೇಳೆ ನಿಜವಾದ ಚಿತ್ರ ಪ್ರೆಸ್‌ ಟ್ರಸ್ಟ್‌ ಆಫ್‌ ಇಂಡಿಯಾ (ಪಿಟಿಐ) ದ ಮೂಲದ್ದು ಎಂದು ತಿಳಿದುಬಂದಿದೆ. ವಿವಿಧ ಮಾಧ್ಯಮಗಳು ಈ ಚಿತ್ರವನ್ನು ಪತ್ರಿಕಾ ವರದಿಗಳಿಗೆ ಬಳಸಿಕೊಂಡಿವೆ. ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ಈ ವರದಿ ಡಿಸೆಂಬರ್‌ 2 2019 ರದ್ದಾಗಿದ್ದು, ಆ ವರದಿಯಲ್ಲಿ ಈ ಫೋಟೋದ ಮೂಲ ಪ್ರತಿಯನ್ನು ಬಳಸಿಕೊಳ್ಳಲಾಗಿದೆ ಮತ್ತು ಪಿಟಿಐಗೆ ಚಿತ್ರಕೃಪೆಯನ್ನು ಕೊಡಲಾಗಿದೆ.

ಇನ್ನೊಂದು ವರದಿಯಲ್ಲಿ ಝೀನ್ಯೂಸ್‌ ಕೂಡ ಇದೇ ಚಿತ್ರವನ್ನು ಬಳಸಿದ್ದು ಅದು ಮಾರ್ಚ್ 2 2019ರ ಸಮಯದ್ದಾಗಿದೆ.

ಮಿಂಟ್‌ ಕೂಡ ತನ್ನ ವರದಿಯೊಂದರಲ್ಲಿ ಮೋದಿಯವರ ಇದೇ ಫೊಟೋವನ್ನು ಬಳಸಿಕೊಂಡಿದ್ದು ಅದು ಡಿಸೆಂಬರ್‌ 16, 2017ರದ್ದಾಗಿದೆ.

Also Read: ಬಿಸಿ ಅನನಾಸು ನೀರು ಕ್ಯಾನ್ಸರನ್ನು ಗುಣಪಡಿಸುವುದಿಲ್ಲ, ವೈರಲ್‌ ಕ್ಲೇಮ್‌ ತಪ್ಪು

ಕೂಲಕಂಷವಾಗಿ ಪರಿಶೀಲನೆ ನಡೆಸಿದಾಗ ಈ ಮೂರು ಚಿತ್ರಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೇಶಮುಂಡನದ ಚಿತ್ರಕ್ಕೂ ಬಹುತೇಕ ಸಾಮ್ಯತೆಗಳು ಇರುವುದು ಕಂಡು ಬಂದಿದೆ.

ಪ್ರಧಾನಿ ನರೇಂದ್ರ ಮೋದಿಯವರ ತಿರುಚಿದ ಚಿತ್ರ ಮತ್ತು ಮೂಲ ಚಿತ್ರ

ಇನ್ನೊಂದು ಪ್ರಮುಖವಾದ ವಿಚಾರವೆಂದರೆ, ಹಿಂದೂ ಸಂಪ್ರದಾಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು ಕೇಶಮುಂಡನ ಮಾಡಿಸಿಕೊಂಡರೂ, ಅದನ್ನು ಮಾಡಿಸುವ ಪದ್ಧತಿ ಮೃತರ ವೈಕುಂಠ ಸಮಾರಾಧನೆಯ ದಿನಕ್ಕೆ ಪೂರಕವಾಗಿ ಇರುತ್ತದೆ. ಅಂದರೆ, ಗತಿಸಿದ 13 ನೇ ದಿನಕ್ಕೆ ಇರುತ್ತದೆ. ಹೀರಾಬೆನ್‌ ಅವರು ಡಿಸೆಂಬರ್‌ 30, 2022ರಂದು ಗತಿಸಿದ್ದು, ಅವರ ಅಂತ್ಯಕ್ರಿಯೆಯ ಕಾರ್ಯಕ್ರಮಗಳು ಜನವರಿ 11 2023ರ ಸುಮಾರಿಗೆ ಆಗುತ್ತದೆ. ಆದ್ದರಿಂದ ಅದಕ್ಕೂ ಮುನ್ನ ಪ್ರಧಾನಿಯವರು ಕೇಶಮುಂಡನ ಮಾಡಿಸಿರುವುದು ಸುಳ್ಳಾಗುತ್ತದೆ.

ಗಮನಿಸಬೇಕಾದ ಅಂಶವೆಂದರೆ, ಡಿಸೆಂಬರ್‌ 31, 2022ರ ಮಧ್ಯಾಹ್ನ 2.23ರ ಹೊತ್ತಿಗೆ ಪ್ರಧಾನಿಯವರು ಟ್ವಿಟರ್‌ನಲ್ಲಿ ಎರಡು ಫೊಟೋಗಳನ್ನು ಪೋಸ್ಟ್‌ ಮಾಡಿದ್ದು, ಅದರಲ್ಲಿ ನಿವೃತ್ತಿ ಏರ್ ಮಾರ್ಷಲ್‌ ಪಿವಿ ಐಯರ್‌ ಅವರನ್ನು ಭೇಟಿಯಾಗಿರುವುದಾಗಿ ಹೇಳಿಕೊಂಡಿದ್ದರು. ಆ ವೇಳೆ ಅವರು ಕೇಶಮುಂಡನ ಮಾಡಿಸಿಕೊಂಡ ರೀತಿ ಇರಲಿಲ್ಲ ಎನ್ನುವುದು ಮುಖ್ಯವಾಗಿದೆ.

Conclusion

ಆದ್ದರಿಂದ ಹೀರಾಬೆನ್‌ ಅವರ ನಿಧನದ ಕೂಡಲೇ ನರೇಂದ್ರ ಮೋದಿಯವರು ಕೇಶಮುಂಡನ ಮಾಡಿಸಿಕೊಂಡಿದ್ದಾರೆ ಎನ್ನುವುದು ಸುಳ್ಳು ಕ್ಲೇಮ್‌ ಆಗಿದೆ. ಜೊತೆಗೆ ಈ ಫೋಟೋವನ್ನು ತಿರುಚಲಾಗಿದೆ ಎಂಬುದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ.

Result: Altered Photo

Our sources
Self-analysis
Report Published By Deccan Herald, Dated: December 2, 2019
Report Published By Zee News, Dated: March 2 2019
Report Published By Mint, Dated: December 17, 2017
Tweet By Narendra Modi, Dated: December 31, 2022

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.