Authors
ರೈತ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ವಾರವೂ ಆ ಕುರಿತ ಹೇಳಿಕೆಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಹರಿದಾಡಿವೆ. ರೈತ ಹೋರಾಟದಲ್ಲಿ ಮುಸ್ಲಿಮರೂ ಸಿಖ್ ಪೇಟ ಕಟ್ಟಿ ಪಾಲ್ಗೊಂಡಿದ್ದಾರೆ, ಪ್ರತಿಭಟನಾ ನಿರತರಿಗೆ ಮದ್ಯ ನೀಡಲಾಗುತ್ತಿದೆ, ರಾಷ್ಟ್ರಧ್ವಜ ಅವಮಾನಿಸಿದ ರೈತರು, ರೈತರ ಅನ್ನದ ಪಾತ್ರೆಗೆ ಗುಂಡೇಟು ಎಂಬ ಹೇಳಿಕೆಗಳು ಪ್ರಮುಖವಾಗಿದ್ದವು. ಇದರೊಂದಿಗೆ ಡಿಎಂಕೆ ಶಾಸಕನಿಂದ ಪೊಲೀಸ್ ಮೇಲೆ ಹಲ್ಲೆ, ಏಲಕ್ಕಿ ಪುಡಿಯನ್ನು ಬಿಸಿ ನೀರಿನಲ್ಲಿ ಕದಡಿಸಿ ಕುಡಿದರೆ ಮಾನಸಿಕ ಖಿನ್ನತೆ ದೂರವಾಗುತ್ತದೆ ಎಂಬ ಹೇಳಿಕೆಗಳಿದ್ದವು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧ ನಡೆಸಿದ್ದು ಸುಳ್ಳು ಎಂದು ಸಾಬೀತು ಪಡಿಸಿದೆ.
ರೈತ ಹೋರಾಟದಲ್ಲಿ ಮುಸ್ಲಿಮರೂ ಸಿಖ್ ಪೇಟ ಕಟ್ಟಿ ಪಾಲ್ಗೊಂಡಿದ್ದಾರೆಯೇ?
ಸಿಖ್ಖರೇ ಹೆಚ್ಚು ಕಾಣುತ್ತಿರುವ ರೈತರ ಹೋರಾಟಕ್ಕೆ ಮಾರು ವೇಷದಲ್ಲಿ ಮುಸ್ಲಿಮರೂ ಪಾಲ್ಗೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋವೊಂದು ವೈರಲ್ ಆಗಿದೆ. ಆದರೆ ನಿಖೆಯಲ್ಲಿ ವೈರಲ್ ವೀಡಿಯೋ ರೈತ ಪ್ರತಿಭಟನೆಯದ್ದಲ್ಲ, 2022ರಲ್ಲಿ ಗಾಯಕ ಸಿಧು ಮೂಸೆವಾಲ ಅಂತಿಮ ಯಾತ್ರೆಯ ವೇಳೆ ಅವರ ಗೌರವಾರ್ಥ ಯುವಕರಿಗೆ ಪೇಟ ಕಟ್ಟಿದ ವಿದ್ಯಮಾನ ಇದು ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ರೈತ ಪ್ರತಿಭಟನೆಯಲ್ಲಿ ಪ್ರತಿಭಟನಾ ನಿರತರಿಗೆ ಮದ್ಯ ನೀಡಲಾಗುತ್ತಿದೆಯೇ, ಸತ್ಯ ಏನು?
ರೈತ ಪ್ರತಿಭಟನೆಯಲ್ಲಿ ಪ್ರತಿಭಟನಾ ನಿರತರಿಗೆ ಮದ್ಯ ನೀಡಲಾಗುತ್ತಿದೆ ಎಂದು ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ನಮ್ಮ ತನಿಖೆಯ ಪ್ರಕಾರ ಪ್ರತಿಭಟನೆಯ ಸಮಯದಲ್ಲಿ ರೈತರಿಗೆ ಮದ್ಯ ವಿತರಿಸಲಾಗುತ್ತಿದೆ ಎನ್ನುವ ಹೇಳಿಕೆ ತಪ್ಪು ದಾರಿಗೆಳೆ ಯುವಂಥಾದ್ದಾಗಿದೆ. ವಾಸ್ತವವಾಗಿ, ವೈರಲ್ ವೀಡಿಯೋ ಏಪ್ರಿಲ್ 2020 ರಿಂದ ಇಂಟರ್ನೆಟ್ನಲ್ಲಿದೆ. ಅದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬಳಸಿರುವುದು ಕಂಡುಬಂದಿದೆ. ಈ ಕುರಿತು ಹೆಚ್ಚಿನದ್ದವನ್ನು ಇಲ್ಲಿ ಓದಿ
ರೈತರ ಅನ್ನದ ಪಾತ್ರೆಗೆ ಗುಂಡೇಟು ಬಿದ್ದಿದೆ ಎಂಬುದು ನಿಜವೇ?
ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದನ್ನು ಶೇರ್ ಮಾಡಲಾಗುತ್ತಿದ್ದು ರೈತರ ಅನ್ನದ ಪಾತ್ರೆಗೂ ಗುಂಡುಬಿದ್ದಿದೆ ಎಂದು ಹೇಳಲಾಗಿದೆ. ಆದರೆ ಘಟನೆ ನಡೆದಿರುವುದು ಬಾಂಗ್ಲಾ-ಮ್ಯಾನ್ಮಾರ್ ಗಡಿಯಲ್ಲಾಗಿದೆ. ಇದು ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ರಾಷ್ಟ್ರಧ್ವಜ ಅವಮಾನಿಸಿದ ರೈತರು ಎಂದು ಕೆನಡಾ ವೀಡಿಯೋ ವೈರಲ್
ರಾಷ್ಟ್ರಧ್ವಜವನ್ನು ರೈತರು ಅವಮಾನಿಸಿದ್ದಾರೆ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಫುಟ್ಬಾಲ್ ನಲ್ಲಿ ಸುತ್ತಿದ ತ್ರಿವರ್ಣಧ್ವಜವನ್ನು ಸಿಖ್ಖರ ರೀತಿ ಪೇಟ ಧರಿಸಿದವರು ಒದೆಯುವ ಈ ವೀಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ರೈತರ ಪ್ರತಿಭಟನೆಯ ಸಮಯದಲ್ಲಿ ಭಾರತೀಯ ಧ್ವಜಕ್ಕೆ ಅಗೌರವ ತೋರಿದ್ದಾರೆ ಎನ್ನುವುದು ನಿಜವಲ್ಲ, ಇದು ಕೆನಡಾದಲ್ಲಿ ನಡೆದ ಘಟನೆಯಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ದಿಮಿರ್ ಅವರಿಂದ ಪೊಲೀಸ್ ಮೇಲೆ ಹಲ್ಲೆ ಎನ್ನುವುದು ನಿಜವೇ?
ಡಿಎಂಕೆ ಶಾಸಕ ಮನ್ಸೂರ್ ಮೊಹಮ್ಮದ್ ದಿಮಿರ್ ಅವರಿಂದ ಪೊಲೀಸ್ ಮೇಲೆ ಹಲ್ಲೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಈ ಪ್ರಕರಣ ಡಿಎಂಕೆ ಶಾಸಕನಿಗೆ ಸಂಬಂಧ ಇಲ್ಲದ್ದು ಎಂದು ತನಿಖೆಯಲ್ಲಿ ಗೊತ್ತಾಗಿದೆ. ಪೊಲೀಸ್ ಮೇಲೆ ಹಲ್ಲೆ ನಡೆಸಿದಾತ ಮೇರಠ್ ಬಿಜೆಪಿಯ ಕೌನ್ಸಿಲರ್ ಮನೀಶ್ ಚೌಧರಿ ಎಂಬಾತನಾಗಿದ್ದು ಇದು 2018ರಲ್ಲಿ ನಡೆದ ಘಟನೆಯಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಏಲಕ್ಕಿ ಪುಡಿಯನ್ನು ನೀರಿನಲ್ಲಿ ಕಲಸಿ ಕುಡಿದರೆ ಮಾನಸಿಕ ಖಿನ್ನತೆ ದೂರವಾಗುತ್ತದೆ ಎನ್ನುವುದು ನಿಜವೇ?
ಏಲಕ್ಕಿ ಪುಡಿಯನ್ನು ನೀರಿನಲ್ಲಿ ಕಲಸಿ ಕುಡಿದರೆ ಮಾನಸಿಕ ಖಿನ್ನತೆ ದೂರವಾಗುತ್ತದೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಖಿನ್ನತೆಯನ್ನು ಆಹಾರ ಕ್ರಮ ಅಥವಾ ಮನೆಮದ್ದುಗಳಿಂದ ನಿವಾರಣೆ ಸಾಧ್ಯವಿಲ್ಲ. ಅದಕ್ಕೆ ಸೂಕ್ತ ವೈದ್ಯಕೀಯ ಸಲಹೆ ಅಗತ್ಯ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.