Authors
ಕಾಶ್ಮೀರದಲ್ಲಿ ಕಾಂಗ್ರೆಸ್ ಗೆದ್ದರೆ ಜೈಲಿನಿಂದ ಉಗ್ರರ ಬಿಡುಗಡೆ, ವಿಠಲನ ವಿಗ್ರಹ ಸ್ವೀಕರಿಸಲು ನಿರಾಕರಿಸಿದ ರಾಹುಲ್ ಗಾಂಧಿ ಎಂಬ ಕ್ಲೇಮುಗಳು ಈ ವಾರ ಪ್ರಮುಖವಾಗಿದ್ದವು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಸಂಬಂಧಿ ಕ್ಲೇಮುಗಳು ಹರಿದಾಡಿದ್ದವು. ಇವುಗಳ ಹೊರತಾಗಿ ಕೋಮು ವಿಚಾರದ ಕ್ಲೇಮುಗಳೂ ಇದ್ದವು. ಏಷ್ಯಾದ ಮೊದಲ ಮಸೀದಿ ಹಿಂದೆ ದೇಗುಲವಾಗಿತ್ತು ಎಂದು ವೈರಲ್ ವೀಡಿಯೋ, ಉತ್ತರ ಪ್ರದೇಶದಲ್ಲಿ ಚಾಕು ಹಿಡಿದು ಅಂಗಡಿಯವರನ್ನು ಬೆದರಿಸಿದ ವ್ಯಕ್ತಿಗೆ ಗುಂಡೇಟು, ಗದಗಿನಲ್ಲಿ ಕಾಣಿಸಿಕೊಂಡ ಚಿರತೆಯ ಹಳೆ ವೀಡಿಯೋ ಬೆಂಗಳೂರಿನದ್ದು ಎಂಬ ಹೇಳಿಕೆ, ನಿತ್ಯ ಖರ್ಜೂರ ತಿಂದರೆ ನೆನಪಿನ ಶಕ್ತಿ, ಪುರುಷರಲ್ಲಿ ಫಲವತ್ತತೆ ಹೆಚ್ಚಾಗುತ್ತದೆ ಎಂಬ ಹೇಳಿಕೆಗಳೂ ಇದ್ದವು. ಇವುಗಳ ಕುರಿತು ಸತ್ಯಶೋಧನೆ ನಡೆಸಲಾಗಿದ್ದು, ಇವುಗಳು ಸುಳ್ಳು ಎಂದು ಕಂಡುಬಂದಿದೆ.
ಕಾಶ್ಮೀರದಲ್ಲಿ ಕಾಂಗ್ರೆಸ್ ಗೆದ್ದರೆ ಜೈಲಿನಿಂದ ಉಗ್ರರ ಬಿಡುಗಡೆ ಮಾಡುವುದಾಗಿ ಹೇಳಿದೆಯೇ?
ಕಾಶ್ಮೀರದಲ್ಲಿ ಕಾಂಗ್ರೆಸ್ ಗೆದ್ದರೆ ಜೈಲಿನಿಂದ ಉಗ್ರರ ಬಿಡುಗಡೆ ಮಾಡುವುದಾಗಿ ಹೇಳಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಸತ್ಯಶೋಧನೆಯ ಪ್ರಕಾರ, ಕಾಂಗ್ರೆಸ್ ಗೆದ್ದರೆ ಜೈಲಿನಿಂದ ಉಗ್ರರ ಬಿಡುಗಡೆ ಮಾಡುವುದಾಗಿ ಹೇಳಿದೆ ಎನ್ನುವ ವಿಚಾರದಲ್ಲಿ ಕಾಂಗ್ರೆಸ್ ನಾಯಕ ಸಗೀರ್ ಸಯೀದ್ ಖಾನ್ 2018ರಲ್ಲಿ ನೀಡಿದ ಹೇಳಿಕೆ ಇದಾಗಿದ್ದು ಈಗಿನದ್ದಲ್ಲ, ಚುನಾವಣೆ ಹಿನ್ನೆಲೆಯಲ್ಲಿ ಇದನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ರಾಹುಲ್ ಗಾಂಧಿ ರಾಲಿಯಲ್ಲಿ ಮೋದಿ-ಮೋದಿ ಘೋಷಣೆ? ವೈರಲ್ ವೀಡಿಯೋದ ಸತ್ಯ ಇಲ್ಲಿದೆ
ರಾಹುಲ್ ಗಾಂಧಿ ಅವರ ರಾಲಿಯ 41 ಸೆಕೆಂಡುಗಳ ಉದ್ದದ ವೀಡಿಯೋವನ್ನು ಹಂಚಕೊಳ್ಳಲಾಗಿದೆ. ಅದರಲ್ಲಿ ಗುಜರಾತ್ ನ ಅಹಮದ್ ನಗರದಲ್ಲಿ ನಡೆದ ರಾಹುಲ್ ಗಾಂಧಿಯವರ ರಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದು ಕ್ಲೇಮ್ ಹರಿದಾಡಿದೆ. ಈ ಬಗ್ಗೆ ನಾವು ಸತ್ಯಶೋಧನೆ ನಡೆಸಿದಾಗ, 7 ವರ್ಷದ ಹಳೆಯ ವೀಡಿಯೋವನ್ನು ಎಡಿಟ್ ಮಾಡಿ, ಮೋದಿ-ಮೋದಿ ಘೋಷಣೆ ಕೂಗಲಾಗಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ವಿಠಲನ ವಿಗ್ರಹವನ್ನು ಸ್ವೀಕರಿಸಲು ರಾಹುಲ್ ಗಾಂಧಿ ನಿರಾಕರಿಸಿದರು ಎಂಬ ಹೇಳಿಕೆ ಸುಳ್ಳು
ಮಹಾರಾಷ್ಟ್ರದ ನಾಸಿಕ್ನಲ್ಲಿ ಕಾಂಗ್ರೆಸ್ ಸಮಾವೇಶದ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ನೀಡಿದ ವಿಠಲನ ವಿಗ್ರಹವನ್ನು ಸ್ವೀಕರಿಸಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ತನಿಖೆ ನಡೆಸಿದ ವೇಳೆ, ರಾಹುಲ್ ಗಾಂಧಿಯವರು ವಿಠಲ ವಿಗ್ರಹ ಸ್ವೀಕರಿಸಲು ನಿರಾಕರಿಸಿದರು ಎನ್ನುವುದು ಸುಳ್ಳು, ಅವರು ಪೇಟ ಕಟ್ಟಿ, ಹೂಮಾಲೆ ಗೌರವ ಸ್ವೀಕರಿಸಿದ ಬಳಿಕ ವಿಗ್ರಹವನ್ನು ಸ್ವೀಕರಿಸಿದ್ದಾರೆ. ಈ ವೀಡಿಯೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಉತ್ತರ ಪ್ರದೇಶದಲ್ಲಿ ಚಾಕು ಹಿಡಿದು ಅಂಗಡಿಯವರನ್ನು ಬೆದರಿಸಿದ ವ್ಯಕ್ತಿಗೆ ಗುಂಡೇಟು ಎಂದ ವೀಡಿಯೋ ಕಲಬುರಗಿಯದ್ದು!
ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಚಾಕು ಹಿಡಿದು ಅಂಗಡಿಯವರನ್ನು ಬೆದರಿಸುತ್ತಿದ್ದು, ಆತನಿಗೆ ಯೋಗಿ ಪೊಲೀಸರು ಸರಿಯಾದ ರೀತಿ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಓಡಾಡುತ್ತಿದೆ. ಆದರೆ ಲಭ್ಯವಿರುವ ಪುರಾವೆಗಳ ಪ್ರಕಾರ, ಘಟನೆ ಕಲಬುರಗಿಯಲ್ಲಿ 2023ರಲ್ಲಿ ನಡೆದಿದ್ದು, ಉತ್ತರಪ್ರದೇಶದಲ್ಲಿ ನಡೆದ ಘಟನೆಯಲ್ಲ, ಆರೋಪಿ ಕಾಲಿಗೆ ಗುಂಡೇಟು ಹೊಡೆದವರು ಉತ್ತರ ಪ್ರದೇಶ ಪೊಲೀಸರಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಏಷ್ಯಾದ ಮೊದಲ ಮಸೀದಿ ಹಿಂದೆ ದೇಗುಲವಾಗಿತ್ತು ಎಂದ ವೈರಲ್ ವೀಡಿಯೋ ಹಿಂದಿನ ಸತ್ಯ ಇಲ್ಲಿದೆ
ಪ್ರಾಚೀನ ದೇಗುಲ ಈಗ ಮಸೀದಿಯಾಗಿದೆ ಎಂಬರ್ಥದಲ್ಲಿ ಪ್ರಾಚೀನ ವಾಸ್ತು ಶೈಲಿಯ ಮಸೀದಿ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ತನಿಖೆಯನ್ನು ನಡೆಸಲಾಗಿದ್ದು, ಜೀನತ್ ಬಕ್ಷ್ ಹೆಸರಿನ ಈ ಮಸೀದಿ ಮಂಗಳೂರಿನ ಬಂದರು ಪ್ರದೇಶದಲ್ಲಿದ್ದು ಅತ್ಯಂತ ಹಳೆಯ ಮಸೀದಿ. ಇದು ದೇಗುಲವಾಗಿತ್ತು ಎನ್ನುವ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಬೆಂಗಳೂರು-ಮೈಸೂರು ಹೈವೇಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದ ವೀಡಿಯೋ ಗದಗಿನದ್ದು!
ಬೆಂಗಳೂರು-ಮೈಸೂರು ಹೈವೇಯ ನಿಡ್ಲಘಟ್ಟ ಸರ್ವಿಸ್ ರಸ್ತೆಯಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಹರಿದಾಡುತ್ತಿದೆ. ಸತ್ಯಶೋಧನೆಯ ಪ್ರಕಾರ, ಚಿರತೆ ಕಂಡುಬಂದಿರುವುದು ಬೆಂಗಳೂರು-ಮೈಸೂರು ಹೈವೇಯಲ್ಲಿ ಅಲ್ಲ,ಬದಲಾಗಿ ಗದಗ ಬಳಿಕ ಬಿಂಕದಕಟ್ಟಿ ಎಂಬಲ್ಲಾಗಿದೆ. ಇದು 2023ರ ಘಟನೆ ಎಂದು ತಿಳಿದುಬಂದಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ನಿತ್ಯ ಖರ್ಜೂರ ತಿಂದರೆ ಜ್ಞಾಪಕ ಶಕ್ತಿ, ಪುರುಷರ ಫಲವತ್ತತೆ ಹೆಚ್ಚುತ್ತದೆಯೇ?
ನಿತ್ಯ ಖರ್ಜೂರ ತಿಂದರೆ ಜ್ಞಾಪಕ ಶಕ್ತಿ, ಪುರುಷರ ಫಲವತ್ತತೆ ಹೆಚ್ಚುತ್ತದೆ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ, ಖರ್ಜೂರ ನೆನಪಿನ ಶಕ್ತಿಗೆ, ಪುರುಷರಲ್ಲಿ ಫಲವತ್ತತೆಗೆ ಪ್ರಯೋಜನಕಾರಿಯಾಗಬಹುದು ಎಂದು ಹೇಳಿದರೂ, ಇದನ್ನು ದೃಢೀಕರಿಸುವಂತೆ ವೈಜ್ಞಾನಿಕ ಪ್ರಯೋಗಗಳು ಆಗಿಲ್ಲ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.