Authors
ಲೋಕಸಭೆ ಚುನಾವಣೆ ಮುಗಿದರೂ, ಆ ಹಿನ್ನೆಲೆಯಲ್ಲಿ ಸುಳ್ಳು ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಮಹಾವಿಕಾಸ್ ಅಘಾಡಿ ವಿಜಯದ ವೇಳೆ ಶ್ರೀರಾಂಪುರದಲ್ಲಿ ಪಾಕಿಸ್ಥಾನ ಧ್ವಜ ಹಾರಿಸಲಾಗಿದೆ , ಹಿಂದೂ ವಿಭಜನೆ, ಮುಸ್ಲಿಂ ಸಂಘಟನೆ ಮಾಡುವುದಾಗಿ ಸೋನಿಯಾ ಗಾಂಧಿಗೆ ಎಂ.ಬಿ. ಪಾಟೀಲ್ ಪತ್ರ ಬರೆದಿದ್ದಾರೆ ಎಂಬಂತೆ ಹಂಚಿಕೊಳ್ಳಲಾಗಿದೆ. ಇದರೊಂದಿಗೆ ಯಾದಗಿರಿಯಲ್ಲಿ ದರ್ಗಾ ನಿರ್ಮಿಸಲು ರೈತನ ಜಮೀನನ್ನು ವಕ್ಫ್ ಬೋರ್ಡ್ ಕಿತ್ತುಕೊಂಡಿದೆ ಎಂಬ ಸುಳ್ಳು ಪೋಸ್ಟ್ ವೈರಲ್ ಆಗಿದೆ. ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಅಣೆಕಟ್ಟು ಸ್ಫೋಟ ಎಂಬ ಹೇಳಿಕೆಯನ್ನೂ ಹಂಚಿಕೊಳ್ಳಲಾಗಿದೆ. ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಇವುಗಳು ಸುಳ್ಳು ಎಂದು ನಿರೂಪಿಸಿದೆ.
ಮಹಾವಿಕಾಸ್ ಅಘಾಡಿ ವಿಜಯದ ವೇಳೆ ಶ್ರೀರಾಂಪುರದಲ್ಲಿ ಪಾಕಿಸ್ಥಾನ ಧ್ವಜ ಹಾರಿಸಲಾಗಿದೆಯೇ?
ಲೋಕಸಭೆ ಚುನಾವಣೆಯಲ್ಲಿ ಮಹಾವಿಕಾಸ್ ಅಘಾಡಿ ವಿಜಯದ ವೇಳೆ ಶ್ರೀರಾಂಪುರದಲ್ಲಿ ಪಾಕಿಸ್ಥಾನದ ಧ್ವಜವನ್ನು ಹಾರಿಸಲಾಯಿತು ಎಂದು ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆಯನ್ನು ನಡೆಸಿದ್ದು, ಇದು ಪಾಕಿಸ್ಥಾನ ಧ್ವಜವಲ್ಲ, ಇಸ್ಲಾಮಿಕ್ ಧ್ವಜ ಎಂದು ಕಂಡುಬಂದಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಹಿಂದೂ ವಿಭಜನೆ, ಮುಸ್ಲಿಂ ಸಂಘಟನೆ ಮಾಡುವುದಾಗಿ ಸೋನಿಯಾ ಗಾಂಧಿಗೆ ಎಂ.ಬಿ. ಪಾಟೀಲ್ ಬರೆದ ಪತ್ರ ಸತ್ಯವೇ?
ಹಿಂದೂಗಳನ್ನು ವಿಭಜಿಸಿ, ಮುಸ್ಲಿಮರನ್ನು ಸಂಘಟಿಸುವುದಾಗಿ, ಈಗ ಕರ್ನಾಟಕದಲ್ಲಿ ಸಚಿವರಾಗಿರುವ ಎಂ.ಬಿ. ಪಾಟೀಲ್ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಗೆ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸತ್ಯಶೋಧನೆ ವೇಳೆ ಕಂಡುಬಂದ ರೀತಿ, ಈ ಪತ್ರವು ನಕಲಿಯಾಗಿದ್ದು, ಬಿಎಲ್‌ಡಿ ಅಸೋಸಿಯೇಷನ್ ಲೆಟರ್ ಹೆಡ್ ಅನ್ನು ತಿರುಚಲಾಗಿದೆ, 2019ರಲ್ಲಿ ಈ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು ಎಂದು ಗೊತ್ತಾಗಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾದಗಿರಿಯಲ್ಲಿ ದರ್ಗಾ ನಿರ್ಮಿಸಲು ರೈತನ ಜಮೀನನ್ನು ವಕ್ಫ್ ಬೋರ್ಡ್ ಕಿತ್ತುಕೊಂಡಿದೆ ಎಂಬ ಸುಳ್ಳು ಪೋಸ್ಟ್ ವೈರಲ್
ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ವಕ್ಫ್ ಬೋರ್ಡ್ ರೈತರೊಬ್ಬರ ಭೂಮಿಯನ್ನು ಕಸಿದುಕೊಂಡಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ತನಿಖೆ ನಡೆಸಿದ ವೇಳೆ ಯಾದಗಿರಿ ಶಾಬಾದ್ ಗ್ರಾಮದಲ್ಲಿ ವಕ್ಫ್ ಬೋರ್ಡ್ ರೈತನ ಭೂಮಿಯನ್ನು ಕಸಿದುಕೊಂಡಿದೆ ಎನ್ನುವುದು ಸುಳ್ಳು. ಯಾದಗಿರಿಯಲ್ಲಿ ಶಾಬಾದ್ ಹೆಸರಿನ ಗ್ರಾಮವಿಲ್ಲ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಅಣೆಕಟ್ಟು ಸ್ಫೋಟ ಎಂಬ ವೀಡಿಯೋ ನಿಜವೇ?
ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಅಣೆಕಟ್ಟು ಸ್ಫೋಟ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಅಣೆಕಟ್ಟು ಸ್ಫೋಟ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ವೀಡಿಯೋಗಳು ನೈಜವಾಗಿ ಅಲ್ಲಿನದ್ದಲ್ಲ, ವಿಶ್ವದ ವಿವಿಧೆಡೆಗಳಲ್ಲಿ ಸಂಭವಿಸಿದ ಪ್ರವಾಹ, ಪಾಕೃತಿಕ ವಿಕೋಪಗಳ ವೀಡಿಯೋಗಳನ್ನು ಎಡಿಟ್ ಮಾಡಿ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಸುವರ್ಣಗಡ್ಡೆ ತಿನ್ನುವುದರಿಂದ ಅಲರ್ಜಿ ದೂರವಾಗುತ್ತದೆ ಎನ್ನುವ ಹೇಳಿಕೆ ಸತ್ಯವೇ?
ಸುವರ್ಣಗಡ್ಡೆ ತಿನ್ನುವುದರಿಂದ ಅಲರ್ಜಿ ದೂರ ಮಾಡಬಹುದು ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದಂತೆ ಇಂತಹ ಹೇಳಿಕೆಗೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.