Authors
ಕೊಯಮತ್ತೂರಲ್ಲಿ ಬಿರಿಯಾನಿಗೆ ಗರ್ಭನಿರೋಧಕ ಮಾತ್ರೆ ಬೆರೆಸಿ ಹಿಂದೂಗಳಿಗೆ ಮಾರಾಟ, ಶ್ರೀಲಂಕಾದಲ್ಲಿ ಮುಸ್ಲಿಂ ವೈದ್ಯನಿಂದ ಹಿಂದೂ-ಬೌದ್ಧ ಮಹಿಳೆಯರಿಗೆ ಸಂತಾನಹರಣ, ಇಂದೋರ್ ನಲ್ಲಿ ಈದ್ ದಿನ ಹಿಂದೂ ಮನೆಗಳ ಮೇಲೆ ಮುಸ್ಲಿಂ ಗುಂಪಿನ ಕಲ್ಲುತೂರಾಟ,ಉತ್ತರ ಪ್ರದೇಶ ಸರ್ಕಾರ ಅಕ್ರಮ ನಿರ್ಮಾಣದ ಮಸೀದಿಯನ್ನು ಮಾತ್ರ ಕೆಡವಿದೆ, ದೇಗುಲ ಕೆಡವಿಲ್ಲ ಎಂಬ ಕೋಮು ಹೇಳಿಕೆಗಳು ಈ ವಾರ ಪ್ರಮುಖವಾಗಿದ್ದವು. ಇವುಗಳನ್ನು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ. ಇದರೊಂದಿಗೆ ಚುನಾವಣೆ ಭರವಸೆಗಳ ಬಗ್ಗೆ ರಾಹುಲ್ ಗಾಂಧಿ ಕ್ಷಮೆ ಕೇಳಿದ್ದಾರೆ, ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರುಗಳು ದುರ್ಬಲವಾಗುತ್ತದೆ ಎಂಬ ಹೇಳಿಕೆಗಳೂ ಇದ್ದವು. ತನಿಖೆಯಲ್ಲಿ ಇವುಗಳು ಸತ್ಯವಲ್ಲ ಎಂದು ಕಂಡುಬಂದಿದೆ.
ಕೊಯಮತ್ತೂರಲ್ಲಿ ಬಿರಿಯಾನಿಗೆ ಗರ್ಭನಿರೋಧಕ ಮಾತ್ರೆ ಬೆರೆಸಿ ಹಿಂದೂಗಳಿಗೆ ಮಾರಲಾಗುತ್ತಿದೆ ಎಂದ ವೈರಲ್ ಪೋಸ್ಟ್ ಸುಳ್ಳು
ಕೊಯಮತ್ತೂರಿನಲ್ಲಿ ಬಿರಿಯಾನಿಗೆ ಗರ್ಭನಿರೋಧಕ ಮಾತ್ರೆ ಬೆರೆಸಿ ಹಿಂದೂಗಳಿಗೆ ಮಾರಲಾಗುತ್ತಿದೆ ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ವೈರಲ್ ಮೆಸೇಜ್ ನಲ್ಲಿರುವ ಫೋಟೋಗಳು ಬೇರೆಯ ಪ್ರಕರಣದ್ದಾಗಿದೆ, ಕೊಯಮತ್ತೂರಿನಲ್ಲಿ ಅಂತಹ ಘಟನೆ ನಡೆದ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ, ಪೊಲೀಸರು ಇಂತಹ ಪೋಸ್ಟ್ ಗಳ ವಿರುದ್ಧ ಕ್ರಮಕ್ಕೆ ಕೇಸು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಶ್ರೀಲಂಕಾದ ಮುಸ್ಲಿಂ ವೈದ್ಯ 4 ಸಾವಿರ ಹಿಂದೂ-ಬೌದ್ಧ ಮಹಿಳೆಯರಿಗೆ ಮೋಸದ ಸಂತಾನಹರಣ ಮಾಡಿದ್ದು ನಿಜವೇ?
ಶ್ರೀಲಂಕಾದ ವೈದ್ಯರೊಬ್ಬರು 4 ಸಾವಿರ ಹಿಂದೂ, ಬೌದ್ಧ ಮಹಿಳೆಯರಿಗೆ ಮಕ್ಕಳಾಗದಂತೆ ಸಿಸೇರಿಯನ್ ವೇಳೆ ಗರ್ಭಾಶಯ ಕತ್ತರಿಸಿದ್ದಾರೆ ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಈ ಬಗ್ಗೆ ತನಿಖೆ ನಡೆಸಿದಾಗ, ಶ್ರೀಲಂಕಾದಲ್ಲಿ 2019 ಏಪ್ರಿಲ್ 21ರ ಬಳಿಕ ವೈದ್ಯರೊಬ್ಬರು 4 ಸಾವಿರ ಬೌದ್ಧ ಮಹಿಳೆಯರಿಗೆ ಮೋಸದಿಂದ ಸಂತಾನಹರಣ ಮಾಡಿದ್ದಾರೆ ಎಂಬ ಆರೋಪ ಮಾಧ್ಯಮದಲ್ಲಿ ಕೇಳಿಬಂದಿತ್ತು. ಆ ಬಳಿಕ ಕೋರ್ಟ್ ನಲ್ಲಿ ವೈದ್ಯರ ವಿರುದ್ಧ ಯಾವುದೇ ಪೂರಕ ಸಾಕ್ಷ್ಯಗಳು ಇಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದರು. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಇಂದೋರ್ ನಲ್ಲಿ ಈದ್ ದಿನ ಹಿಂದೂ ಮನೆಗಳ ಮೇಲೆ ಮುಸ್ಲಿಂ ಗುಂಪು ಕಲ್ಲೆಸೆದಿದೆ ಎಂದ ವೈರಲ್ ವೀಡಿಯೋ ಸತ್ಯವೇ?
ಇಂದೋರ್ ನಲ್ಲಿ ಈದ್ ದಿನ ಹಿಂದೂ ಮನೆಗಳ ಮೇಲೆ ಮುಸ್ಲಿಂ ಗುಂಪು ಕಲ್ಲೆ ಎಸೆದಿದ್ದಾರೆ, ಅಂತಹ ಗುಂಪನ್ನುಅರೆಬೆತ್ತಲೆಯಾಗಿಸಿ, ಪೆರೇಡ್ ನಡೆಸಿ ಪೊಲೀಸರು ಶಿಕ್ಷೆ ವಿಧಿಸಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಯೊಂದು ಹರಿದಾಡುತ್ತಿದೆ. ತನಿಖೆ ವೇಳೆ ಕಂಡುಬಂದಂತೆ ವೈರಲ್ ವೀಡಿಯೋ 2023ರ ಸೆಪ್ಟೆಂಬರ್ ನಲ್ಲಿ ನಡೆದ ಘಟನೆಯಾಗಿದ್ದು, ಮುಸ್ಲಿಂ ಗುಂಪು ಪರಸ್ಪರ ಕಲ್ಲು ತೂರಿದ್ದಕ್ಕಾಗಿ ಪೊಲೀಸರು ಅರೆಬೆತ್ತಲೆಯಾಗಿಸಿ ಪೆರೇಡ್ ನಡೆಸಿದ ಘಟನೆಯಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಉತ್ತರ ಪ್ರದೇಶ ಸರ್ಕಾರ ಅಕ್ರಮ ನಿರ್ಮಾಣದ ಮಸೀದಿಯನ್ನು ಮಾತ್ರ ಕೆಡವಿದೆ, ದೇಗುಲ ಕೆಡವಿಲ್ಲ ಎನ್ನುವುದು ನಿಜವೇ?
ಸಾಮಾಜಿಕ ಜಾಲತಾಣಗಳಲ್ಲಿ ಮಸೀದಿ ಕೆಡವಿದ ವೀಡಿಯೋ ಒಂದರ ಜೊತೆಗೆ, ಉತ್ತರ ಪ್ರದೇಶದ ಯೋಗಿ ಸರ್ಕಾರ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿರುವ ಮಸೀದಿಗಳನ್ನು ಮಾತ್ರ ಕೆಡವಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಅಕ್ಬರ್‌ನಗರದ ಸರ್ಕಾರಿ ಭೂಮಿ ತೆರವುಗೊಳಿಸುವ ವೇಳೆ ಮಸೀದಿಯನ್ನು ಮಾತ್ರ ಕೆಡವಲಾಗಿದೆ ಎಂಬ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ. ತೆರವು ಕಾರ್‍ಯಾಚರಣೆ ವೇಳೆ ಮಸೀದಿ ಮತ್ತು ದೇವಾಲಯ ಎರಡನ್ನೂ ತೆಗೆದುಹಾಕಲಾಗಿದೆ ಎಂದು ತನಿಖೆಯಲ್ಲಿ ಕಂಡುಕೊಳ್ಳಲಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಚುನಾವಣಾ ಭರವಸೆಗಳ ಬಗ್ಗೆ ರಾಹುಲ್ ಗಾಂಧಿ ಕ್ಷಮೆ ಕೇಳಿದ್ದಾರೆಯೇ? ಇಲ್ಲ, ವೈರಲ್ ಹೇಳಿಕೆ ಸುಳ್ಳು
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಿಂಗಳಿಗೆ ₹ 8,500 ಮತ್ತು ಯುವಕರಿಗೆ ತಿಂಗಳಿಗೆ ₹ 1,00,000 ವೇತನ ನೀಡುವುದಾಗಿ ಚುನಾವಣೆ ವೇಳೆ ಭರವಸೆ ನೀಡಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಸತ್ಯಶೋಧನೆಯಲ್ಲಿ ಕಂಡುಬಂದತೆ, ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳ ಬಗ್ಗೆ ರಾಹುಲ್ ಗಾಂಧಿಯವರು ಯಾವುದೇ ಕ್ಷಮೆ ಕೋರಿಲ್ಲ ಮತ್ತು ಚುನಾವಣಾ ಭರವಸೆಗಳ ಕುರಿತಾದ ಸಾಮಾಜಿಕ ಜಾಲತಾಣದಲ್ಲಿ ಕಂಡುಬಂದಿರುವ ಹೇಳಿಕೆಗಳು ತಪ್ಪುದಾರಿಗೆಳೆಯುವಂಥಾದ್ದಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರು ದುರ್ಬಲವಾಗುತ್ತದೆಯೇ, ಸತ್ಯ ಏನು?
ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರುಗಳು ದುರ್ಬಲವಾಗುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದು ಕಂಡುಬಂದಿದೆ. ಊಟ ಮಾಡುವಾಗ ಹೆಚ್ಚು ನೀರು ಕುಡಿಯುವುದರಿಂದ ಉಗುರು ದುರ್ಬಲವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ, ಉಗುರಿನ ಆರೋಗ್ಯಕ್ಕೆ ನೀರು ಕೂಡ ಅಗತ್ಯ ಎಂದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಈ ಕುರಿತ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.