Authors
ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ, ಸೌದಿಯಲ್ಲೂ ದೀಪಾವಳಿ ಆಚರಿಸಲಾಗಿದೆ, ಟ್ರಂಪ್ ವಿಜಯೋತ್ಸವ ಭಾಷಣದಲ್ಲಿ ಜನರು ‘ಮೋದಿ- ಮೋದಿ’ ಘೋಷಣೆ ಕೂಗಿದ್ದಾರೆ, ಜಮೀನು ಪಹಣಿಯಲ್ಲಿ ವಕ್ಫ್ ಹೆಸರು ನಮೂದಾದ್ದರಿಂದ ಹಾವೇರಿ ರೈತ ಆತ್ಮಹತ್ಯೆ ಎಂಬ ಹೇಳಿಕೆಗಳು ಈ ವಾರ ಪ್ರಮುಖವಾಗಿದ್ದವು. ಇನ್ನು ಆರೋಗ್ಯ ವಿಚಾರಕ್ಕೆ ಸಂಬಂಧಿಸಿ ಟೊಮೆಟೊ ಜ್ಯೂಸ್ ಕುಡಿಯುವುದರಿಂದ ಹೃದಯ ಸ್ತಂಭನ ತಡೆಯಬಹುದು ಎಂದೂ ಹೇಳಿಕೆ ಹರಿದಾಡಿತ್ತು. ಇದರ ಬಗ್ಗೆ ನ್ಯೂಸ್‌ಚೆಕರ್ ತನಿಖೆ ನಡೆಸಿ ಸತ್ಯಾಂಶವನ್ನು ತೆರೆದಿಟ್ಟಿದೆ.
ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎನ್ನುವುದು ನಿಜವೇ?
ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯಗಳನ್ನು ಘೋಷಿಸಿದೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎನ್ನುವುದು ತಪ್ಪು ಹೇಳಿಕೆ. ಇದು ಹೊರತಾಗಿ ರೈಲ್ವೇ ಯಾತ್ರಿ ಸೇವೆ, ಲೋವರ್ ಬರ್ತ್ ಸೌಕರ್‍ಯಗಳನ್ನು ನೀಡುವುದನ್ನು ಮುಂದುವರಿಸಲಾಗಿದೆ. ಈ ಕುರಿತ ವರದಿ ಇಲ್ಲಿದೆ.
ಸೌದಿಯಲ್ಲೂ ದೀಪಾವಳಿ ಆಚರಿಸಲಾಗಿದೆಯೇ?
ದೀಪಾವಳಿಯನ್ನು ಸೌದಿಯಲ್ಲೂ ಆಚರಿಸಲಾಗಿದೆ, ರಾಮನ ಆಗಮನವನ್ನು ಸೌದಿ ಅರೇಬಿಯಾ ಕೂಡ ಸಂಭ್ರಮಿಸಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ಪ್ರಕಾರ, ಇದು 2 ತಿಂಗಳ ಹಳೆಯ ವೀಡಿಯೋ ಆಗಿದ್ದು ಸೌದಿಯಲ್ಲೂ ದೀಪಾವಳಿ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಕೊಳ್ಳಲಾಗಿದೆ. ಈ ಕುರಿತ ವರದಿ ಇಲ್ಲಿದೆ.
ಟ್ರಂಪ್ ವಿಜಯೋತ್ಸವ ಭಾಷಣದಲ್ಲಿ ಜನರು ‘ಮೋದಿ- ಮೋದಿ’ ಘೋಷಣೆ ಕೂಗಿದ್ದಾರೆಯೇ?
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಎದುರಾಳಿ, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿ 270 ಕ್ಕೂ ಹೆಚ್ಚು ಎಲೆಕ್ಟೋರಲ್ ಮತಗಳನ್ನು ಗಳಿಸಿದ ನಂತರ ಡೊನಾಲ್ಡ್ ಟ್ರಂಪ್ ಅವರ ವಿಜಯೋತ್ಸವ ಭಾಷಣದ ಸಮಯದಲ್ಲಿ ಪ್ರೇಕ್ಷಕರು “ಮೋದಿ-ಮೋದಿ” ಎಂದು ಕೂಗಿದ್ದಾರೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆ ಪ್ರಕಾರ, ಟ್ರಂಪ್ ವಿಜಯೋತ್ಸವ ಭಾಷಣದಲ್ಲಿ “ಬಾಬಿ!-ಬಾಬಿ!” ಎಂದು ಕೂಗಲಾಗಿದೆಯೇ ಹೊರತು “ಮೋದಿ-ಮೋದಿ” ಎಂದಲ್ಲ ಎಂದು ಕಂಡುಕೊಂಡಿದ್ದೇವೆ. ಈ ಕುರಿತ ವರದಿ ಇಲ್ಲಿದೆ.
ಜಮೀನು ಪಹಣಿಯಲ್ಲಿ ವಕ್ಫ್ ಹೆಸರು ನಮೂದಾದ್ದರಿಂದ ಹಾವೇರಿ ರೈತ ಆತ್ಮಹತ್ಯೆ? ಸತ್ಯ ಇಲ್ಲಿದೆ
ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾದ ಕಾರಣದಿಂದಾಗಿ ಹಾವೇರಿಯ ರೈತರೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ದಿಯೊಂದು ಹರಿದಾಡಿದೆ. ಆದರೆ ಸತ್ಯಶೋಧನೆಯಲ್ಲಿ ಕಂಡುಬಂದತೆ, ಜಮೀನು ಪಹಣಿಯಲ್ಲಿ ವಕ್ಫ್ ಹೆಸರು ನಮೂದಾದ್ದರಿಂದ ಹಾವೇರಿ ರೈತ ರುದ್ರಪ್ಪ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ. ಸಾಲದ ಕಾರಣದಿಂದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿದೆ.
ಟೊಮೆಟೊ ಜ್ಯೂಸ್ ಕುಡಿಯುವುದರಿಂದ ಹೃದಯ ಸ್ತಂಭನ ತಡೆಯಬಹುದೇ?
ಟೊಮೆಟೊ ಜ್ಯೂಸ್ ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳೊಂದಿಗೆ ಹೃದಯ ಸ್ತಂಭನ ತಡೆಯುತ್ತದೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ, ಟೊಮೆಟೊ ಜ್ಯೂಸ್ ಕುಡಿಯುವುದರಿಂದ ಹೃದಯ ಸ್ತಂಭನಕ್ಕೆ ತಡೆಯಾಗುತ್ತದೆ ಎನ್ನವುದು ತಪ್ಪಾದ ಹೇಳಿಕೆ. ಟೊಮೆಟೋ ಜ್ಯೂಸ್ ಒಂದರಿಂದಲೇ ಇದು ಸಾಧ್ಯವಿಲ್ಲ. ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ಒಟ್ಟಾರೆಯಾಗಿ ಉತ್ತಮ ಜೀವನ ಶೈಲಿ ಮುಖ್ಯವಾಗುತ್ತದೆ. ಈ ಕುರಿತ ವರದಿ ಇಲ್ಲಿದೆ.
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.