Authors
ಒಡಿಶಾ ರೈಲು ದುರಂತದ ಬಳಿಕ ವಿವಿಧ ಸುಳ್ಳು ನಿರೂಪಣೆಗಳು ಈ ವಾರವೂ ಸುದ್ದಿ ಮಾಡಿದೆ. ಸಿಬಿಐ ವಿಚಾರಣೆ ಶುರು ಮಾಡುತ್ತಲೇ ರೈಲ್ವೇ ಸಿಗ್ನಲಿಂಗ್ ನ ಜೂನಿಯರ್ ಎಂಜಿನಿಯರ್ ಅಮೀರ್ ಖಾನ್ ನಾಪತ್ತೆಯಾಗಿದ್ದಾರೆ ಮತ್ತು ಬಹನಾಗಾ ಸ್ಟೇಷನ್ ಮಾಸ್ಟರ್ ಶರೀಫ್ ಬಂಧನವಾಗಿದ್ದು, ಪೊಲೀಸರು ಥಳಿಸುತ್ತಿರುವ ವೀಡಿಯೋ ಎನ್ನುವ ಕ್ಲೇಮುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಉಳಿದಂತೆ, ಬಿಪರ್ ಜಾಯ್ ಚಂಡಮಾರುತದ ಪರಿಣಾಮ ತೋರಿಸಲು ಹಳೆಯ, ಸಂಬಂಧವೇ ಇಲ್ಲದ ವೀಡಿಯೋಗಳನ್ನು ಬಳಸಿರುವುದು, ಫೋಟೋ ತೆಗೆಯುತ್ತಿದ್ದ ಯುವತಿಯನ್ನು ಮೊಸಳೆ ನುಂಗಿದೆ ಎನ್ನುವ ವೀಡಿಯೋ, ಟ್ಯಾಲೆಂಟ್ ಶೋದಲ್ಲಿ ಅಮೆರಿಕನ್ ಬಾಲಕರು ರಾಮಾಯಣ ಧಾರಾವಾಹಿಯ ಶೀರ್ಷಿಕೆ ಗೀತೆ ಹಾಡಿದ್ದಾರೆ ಎಂಬ ಕ್ಲೇಮ್ ಸೇರಿದಂತೆ ಶಿರಡಿ ದೇಗುಲ ಟ್ರಸ್ಟ್ ಹಜ್ ಸಮಿತಿಗೆ ₹35 ಕೋಟಿ ರೂ. ನೀಡಿದೆ ಎನ್ನುವ ಸುಳ್ಳು ಕ್ಲೇಮ್ಗಳು ಸುದ್ದಿ ಮಾಡಿವೆ.
ಒಡಿಶಾ ರೈಲು ದುರಂತ ಬಳಿಕ ಸಿಗ್ನಲ್ ಜೆ.ಇ. ಅಮೀರ್ ಖಾನ್ ನಾಪತ್ತೆಯಾಗಿದ್ದಾರೆಯೇ, ಸತ್ಯ ಏನು?
ಒಡಿಶಾದ ರೈಲು ದುರಂತ ನಡೆದ ಬೆನ್ನಲ್ಲೇ ದುರಂತದ ಕಾರಣದ ಬಗ್ಗೆ ಸಂಶಯಗಳು ಇರುವುದರಿಂದ ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ಇದೇ ವೇಳೆ, ರೈಲ್ವೇ ಸಿಗ್ನಲಿಂಗ್ ಜವಾಬ್ದಾರಿ ಹೊಂದಿದ ಜೂನಿಯರ್ ಎಂಜಿನಿಯರ್ ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡಿದೆ. ಆದರೆ ಇದನ್ನು ಸ್ವತಃ ರೈಲ್ವೇ ಇಲಾಖೆಯೇ ಅಲ್ಲಗೆಳೆದಿದೆ. ತ್ಯಶೋಧನೆ ಪ್ರಕಾರ, ರೈಲ್ವೇ ಸಿಗ್ನಲಿಂಗ್ ಜೂನಿಯರ್ ಎಂಜಿನಿಯರ್ ಅಮೀರ್ ಖಾನ್ ನಾಪತ್ತೆಯಾಗಿದ್ದಾರೆ ಎನ್ನವುದು ತಪ್ಪಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಒಡಿಶಾ ರೈಲು ದುರಂತದ ಸ್ಟೇಷನ್ ಮಾಸ್ಟರ್ ಶರೀಫ್ಗೆ ‘ಹೊಡೆದು ವಿಚಾರಣೆ’ ಎನ್ನುವ ವೀಡಿಯೋಕ್ಕೂ, ಪ್ರಕರಣಕ್ಕೂ ಸಂಬಂಧವಿಲ್ಲ!
ಕೈಗಳಿಗೆ ಕೋಳ ಹಾಕಿ ವ್ಯಕ್ತಿಯೊಬ್ಬನನ್ನು ನೆಲದ ಮೇಲೆ ಮಲಗಿಸಿ, ಮರದ ಹಲಗೆಯಿಂದ ಹೊಡೆಯುತ್ತ ಕ್ರೂರವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋವನ್ನು ಹಲವು ಬಳಕೆದಾರರು ಇತ್ತೀಚಿನ ಒಡಿಶಾ ರೈಲು ದುರಂತದೊಂದಿಗೆ ಸಂಬಂಧ ಕಲ್ಪಿಸಿದ್ದು, ಬಾಲಾಸೋರ್ ರೈಲು ದುರಂತದ ಪ್ರಮುಖ ಆರೋಪಿ, ಅಡಗಿಕೊಂಡಿದ್ದ ಸ್ಟೇಷನ್ ಮಾಸ್ಟರ್ ಶರೀಫ್ ಅವರನ್ನು ಪೊಲೀಸರು ಬಂಧಿಸಿ ಥಳಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಹೇಳಲಾಗಿದೆ. ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆಯಲ್ಲಿ ಈ ವೀಡಿಯೋ ಮೆಕ್ಸಿಕೋದ್ದಾಗಿದ್ದು, ಪ್ರಕರಣಕ್ಕೆ ಸಂಬಂಧವೇ ಇಲ್ಲದ್ದು ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ರಾಮಾಯಣ ಧಾರಾವಾಹಿ ಶೀರ್ಷಿಕೆ ಗೀತೆಯನ್ನು ಅಮೆರಿಕನ್ ಶೋದಲ್ಲಿ ಬಾಲಕರು ಹಾಡಿದ್ದಾರೆಯೇ? ಇಲ್ಲ, ಇದು ಸುಳ್ಳು
ಅಮೆರಿಕನ್ ಟ್ಯಾಲೆಂಟ್ ಶೋ ಒಂದರಲ್ಲಿ ಇಬ್ಬರು ಮಕ್ಕಳು ರಾಮಾಯಣ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಹಾಡುತ್ತಿದ್ದಾರೆ ಎಂಬ ಮೆಸೇಜ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ಸತ್ಯಶೋಧನೆಯ ಪ್ರಕಾರ, ಬಾಲಕರು ಬ್ರಿಟನ್ ಗಾಟ್ ಟ್ಯಾಲೆಂಟ್ನಲ್ಲಿ ಹಾಡು ಹಾಡಿದ್ದು, ಅವರು ಹಾಡಿದ್ದು ‘ಹೋಪ್’ ಎನ್ನುವ ಎನ್ನುವ ಹಾಡಾಗಿದೆ. ಜೊತೆಗೆ ವೀಡಿಯೋವನ್ನು ತಿರುಚಿರುವುದು ಕಂಡುಬಂದಿದೆ. ನ್ಯೂಸ್ಚೆಕರ್ನ ಈ ಸತ್ಯಶೋಧನೆಯ ಬಗ್ಗೆ ಹೆಚ್ಚಿನದ್ದನ್ನು ಇಲ್ಲಿ ಓದಿ
ಫೋಟೋ ತೆಗೆಸಿಕೊಳ್ಳುತ್ತಿರುವ ಯುವತಿಯನ್ನು ಮೊಸಳೆ ನುಂಗಿದ್ದು ನಿಜವೇ, ಸತ್ಯ ಏನು?
ಫೋಟೋ ತೆಗೆಸಿಕೊಳ್ಳುತ್ತಿರುವ ಯುವತಿಯೊಬ್ಬಳನ್ನು ಮೊಸಳೆ ನುಂಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸಿಕ್ಕ ಸಿಕ್ಕಲ್ಲಿ ಫೋಟೋ ತೆಗೆಯುವುದರಿಂದ ಅಪಾಯ ಆಹ್ವಾನಿಸಿದಂತೆ ಎಂದು ಕ್ಲೇಮಿನಲ್ಲಿ ಹೇಳಲಾಗಿತ್ತು. ಈ ಹೇಳಿಕೆಯೊಂದಿಗೆ ಶೇರ್ ಮಾಡಿದ ವೀಡಿಯೋದ ಬಗ್ಗೆ ಸತ್ಯಶೋಧನೆ ನಡೆಸಿದ ವೇಳೆ, ಇದು ಬ್ಯಾಗ್ ಒಂದಕ್ಕಾಗಿ ತಯಾರು ಮಾಡಿರುವ ಜಾಹೀರಾತು. ಸಿಕ್ಕ ಸಿಕ್ಕಲ್ಲಿ ಫೊಟೋ ತೆಗೆಯುವುದರಿಂದ ಅನಾಹುತವಾಗಿದೆ ಎನ್ನುವುದು ಸುಳ್ಳು ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಬಿಪರ್ ಜಾಯ್ ಚಂಡಮಾರುತದ ಪರಿಣಾಮ ತೋರಿಸಲು ಹಳೆಯ, ಸಂಬಂಧವೇ ಇಲ್ಲದ ವೀಡಿಯೋಗಳ ಬಳಕೆ!
ಬಿಪರ್ ಜಾಯ್ ಚಂಡಮಾರುತ ಗುಜರಾತ್ ಕರಾವಳಿ ತೀರಕ್ಕೆ ಅಪ್ಪಳಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಇದರ ಪರಿಣಾಮವನ್ನು ತೋರಿಸುವ ಅನೇಕ ವೀಡಿಯೋಗಳು ಹರಿದಾಡಿದ್ದವು. ನ್ಯೂಸ್ಚೆಕರ್ ಅಂತಹ ಮೂರು ವೀಡಿಯೋಗಳ ಬಗ್ಗೆ ಸತ್ಯಶೋಧನೆ ನಡೆಸಿದ್ದು, ಅವುಗಳು ಬಿಪರ್ ಜಾಯ್ ಚಂಡಮಾರುತಕ್ಕೆ ಸಂಬಂಧಿಸಿದ್ದಲ್ಲ ಎಂದು ಕಂಡುಕೊಂಡಿದೆ. ಅಮೆರಿಕ, ಈಜಿಪ್ಟ್ನ ಸಂಬಂಧವಿಲ್ಲದ ವೀಡಿಯೋಗಳನ್ನು ಹಂಚಿಕೊಂಡಿರುವುದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಶಿರಡಿ ಸಾಯಿ ಟ್ರಸ್ಟ್ ಹಜ್ ಸಮಿತಿಗೆ ₹35 ಕೋಟಿ ದೇಣಿಗೆ ನೀಡಿದೆಯೇ? ಇಲ್ಲ, ವೈರಲ್ ಹೇಳಿಕೆ ಸುಳ್ಳು
ಶಿರಡಿ ಸಾಯಿ ಟ್ರಸ್ಟ್ ಹಜ್ ಸಮಿತಿಗೆ ₹ 35 ಕೋಟಿ ದೇಣಿಗೆ ನೀಡಿದೆ ಎಂಬ ಕ್ಲೇಮ್ ಒಂದು ವೈರಲ್ ಆಗಿತ್ತು. ಸತ್ಯಶೋಧನೆ ವೇಳೆ, ಶಿರಡಿ ಟ್ರಸ್ಟ್ ಅಂತಹ ಯಾವುದೇ ದೇಣಿಗೆ ನೀಡಿದ್ದು ಕಂಡುಬಂದಿರುವುದಿಲ್ಲ, ಜೊತೆಗೆ ಈ ಬಗ್ಗೆ ನ್ಯೂಸ್ಚೆಕರ್ಗೆ ಸ್ಪಷ್ಟೀಕರಿಸಿದ ಶಿರಡಿ ಸಾಯಿ ಟ್ರಸ್ಟ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಅವರು, ದೇಣಿಗೆ ನೀಡಿದ ಹೇಳಿಕೆಗಳನ್ನು ನಿರಾಕರಿಸಿದ್ದಾರೆ. ಹಜ್ ಸಮಿತಿಗೆ ಯಾವುದೇ ಹಣವನ್ನು ದೇಣಿಗೆ ನೀಡಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಕಿವಿ ಹಣ್ಣು ತಿನ್ನುವುದು ರಕ್ತದೊತ್ತಡ ನಿಯಂತ್ರಣ, ಹೃದಯದ ಆರೋಗ್ಯಕ್ಕೆ ಪರಿಣಾಮಕಾರಿಯೇ?
ಕಿವಿ ಹಣ್ಣು ತಿನ್ನುವುದು ರಕ್ತದೊತ್ತಡ ನಿಯಂತ್ರಣ, ಹೃದಯದ ಆರೋಗ್ಯಕ್ಕೆ ಪರಿಣಾಮಕಾರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಒಂದು ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಿವಿ ಹಣ್ಣು ಒಂದರಿಂದಲೇ ರಕ್ತದೊತ್ತಡ ನಿಯಂತ್ರಣ, ಹೃದಯದ ಆರೋಗ್ಯಕ್ಕೆ ಪೂರಕ ಎನ್ನುವುದನ್ನು ಹೇಳಲಾಗದು ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ