Authors
ಕೆಎಸ್ಆರ್ಟಿಸಿ ಬಸ್ಗೆ ಕಿಟಕಿ ಮೂಲಕ ಹತ್ತುವ ವೇಳೆ ಮಹಿಳೆಯೊಬ್ಬರ ಕೈ ತುಂಡಾಗಿದೆ, ಪುರಿ ಜಗನ್ನಾಥ ದೇಗುಲದ ಗರ್ಭಗುಡಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪ್ರವೇಶಕ್ಕೆ ತಡೆ ಒಡ್ಡಲಾಗಿದೆ, ಪ್ರಧಾನಿ ನರೇಂದ್ರ ಮೋದಿ ಈಜಿಪ್ಟ್ ಪ್ರವಾಸದ ವೇಳೆ ಮುಸ್ಲಿಂ ಟೋಪಿ ಧರಿಸಿದ್ದರು, ಸಚಿವ ಪ್ರಿಯಾಂಕ ಖರ್ಗೆ ಗೋಹತ್ಯೆ ಬೆಂಬಲಿಸಿ ಮಾತನಾಡಿದ್ದರು, ಗುಜರಾತ್ ಹೈಕೋರ್ಟ್ ಮೀಸಲಾತಿಯನ್ನು ರದ್ದುಮಾಡಿದೆ, ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ನಂಬರ್ ಕೊಡಲಾಗಿದೆ ಮತ್ತು ಋತುಚಕ್ರ ವೇಳೆ ಮಹಿಳೆಯರು ನೆಲ್ಲಿಕಾಯಿ ತಿಂದರೆ ಫಲವತ್ತತೆ ಹೆಚ್ಚುತ್ತದೆ ಎಂಬ ಸುಳ್ಳು ಕ್ಲೇಮುಗಳು ಈ ವಾರ ಹರಿದಾಡಿವೆ.
ಕೆಎಸ್ಆರ್ಟಿಸಿ ಬಸ್ ಗೆ ಕಿಟಕಿ ಮೂಲಕ ಹತ್ತುವ ವೇಳೆ ಮಹಿಳೆಯ ಕೈ ತುಂಡಾಗಿದೆಯೇ, ಸತ್ಯ ಏನು?
ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ಘೋಷಿಸಿದ ಬೆನ್ನಲ್ಲೇ, ಮಹಿಳೆಯೊಬ್ಬರು ಬಸ್ಸಿಗೆ ಕಿಟಿಕಿಯಿಂದ ಹತ್ತಲು ಯತ್ನಿಸಿ ಕೈಯನ್ನೇ ಕಳೆದುಕೊಂಡಿದ್ದಾರೆ ಎಂಬ ಮೆಸೇಜ್ ಇರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸತ್ಯಶೋಧನೆ ವೇಳೆ ಕೆಎಸ್ಆರ್ಟಿಸಿ ಬಸ್ಗೆ ಕಟಾವು ಯಂತ್ರ ಹೊತ್ತೊಯ್ಯುತ್ತಿದ್ದ ಟೆಂಪೋ ಒಂದು ಢಿಕ್ಕಿಯಾಗಿ ಅಪಘಾತ ಸಂಭವಿಸಿದ ವೇಳೆ ಬಲಭಾಗದಲ್ಲಿ ಕೂತಿದ್ದ ಮಹಿಳೆಯ ಕೈ ತುಂಡಾಗಿದೆ. ಈ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನ, ಬಿಳಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ನರಸೀಪುರ ರಸ್ತೆಯಲ್ಲಿ ನಡೆದಿದೆ ಎಂದು ಗೊತ್ತಾಗಿತ್ತು. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪುರಿ ಜಗನ್ನಾಥ ದೇಗುಲದ ಗರ್ಭಗೃಹಕ್ಕೆ ಪ್ರವೇಶಿಸಿದಂತೆ ತಡೆಯಲಾಯಿತೇ?
ಪುರಿ ಜಗನ್ನಾಥ ದೇಗುಲದ ಗರ್ಭಗುಡಿ ಪ್ರವೇಶಕ್ಕೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಹೋಗಲು ಬಿಡಲಾಗಿದೆ. ಆದರೆ ದಲಿತರೆಂಬ ಕಾರಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಿಟ್ಟಿಲ್ಲ ಎಂದು ಕ್ಲೇಮ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಗರ್ಭಗೃಹ ಪ್ರವೇಶಿಸದೆ ಹೊರಗಿನಿಂದಲೇ ದರ್ಶನ ಮಾಡುವುದು ರಾಷ್ಟ್ರಪತಿಯವರ ಆಯ್ಕೆಯಾಗಿತ್ತು ಎಂದು ರಾಷ್ಟ್ರಪತಿಯವರ ಕಚೇರಿ ನ್ಯೂಸ್ಚೆಕರ್ಗೆ ತಿಳಿಸಿದೆ. ರಾಷ್ಟ್ರಪತಿಯವರು ಬಾಲ್ಯದಿಂದಲೂ ಜಗನ್ನಾಥನ ಮೇಲೆ ಅಪಾರ ನಂಬಿಕೆ ಹೊಂದಿದ್ದು, ಸಾಲಿಗ್ರಾಮ ಶಿಲೆಯಲ್ಲಿ ಆಳವಾದ ನಂಬಿಕೆ ಹೊಂದಿದ್ದಾರೆ. ದ್ರೌಪದಿ ಮುರ್ಮು ಅವರನ್ನು ಯಾರೂ ತಡೆದಿರಲಿಲ್ಲ. ಅವರು ಸ್ವತಃ ಹೊರಗಿನಿಂದಲೇ ದರ್ಶಿಸುವ ನಿರ್ಧಾರ ತಳೆದಿದ್ದಾರೆ ಎಂದು ದೇವಾಲಯದ ಟ್ರಸ್ಟ್ ಕೂಡ ನಮಗೆ ತಿಳಿಸಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಪ್ರಧಾನಿ ನರೇಂದ್ರ ಮೋದಿ ಈಜಿಪ್ಟ್ ಭೇಟಿ ವೇಳೆ ಮುಸ್ಲಿಂ ಟೋಪಿ ಧರಿಸಿದ್ದರೇ, ಸತ್ಯ ಏನು?
ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ಈಜಿಪ್ಟ್ ಪ್ರವಾಸದ ವೇಳೆ ಮುಸ್ಲಿಂ ಟೋಪಿ ಹಾಕಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಸತ್ಯಶೋಧನೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಮುಸ್ಲಿಮರ ಟೋಪಿ ಧರಿಸಿದ್ದಾರೆ ಎನ್ನುವ ಫೋಟೋ ತಿರುಚಿದ್ದಾಗಿದೆ. ಮತ್ತು ಫೋಟೋದಲ್ಲಿ ಕಾಣಿಸುವ ಸಂದರ್ಭ ಈಜಿಪ್ಟಿನದ್ದಲ್ಲ ಬದಲಾಗಿ ಅದು ಬೊಹ್ರಾ ಸಮುದಾಯದ ಶಿಕ್ಷಣ ಕ್ಯಾಂಪಸ್ಸನ್ನು ಮುಂಬೈನಲ್ಲಿ ಉದ್ಘಾಟಿಸಿದ ಸಮಯದ್ದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಗುಜರಾತ್ ಹೈಕೋರ್ಟ್ ಮೀಸಲಾತಿ ರದ್ದುಗೊಳಿಸಿದೆಯೇ, ವೈರಲ್ ಪೋಸ್ಟ್ ನಿಜವೇ?
ಗುಜರಾತ್ ಹೈಕೋರ್ಟ್ ಮೀಸಲಾತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ ಎಂಬ ಹೇಳಿಕೆಯೊಂದು ವೈರಲ್ ಆಗಿತ್ತು. ಆದರೆ ಇಂತಹ ಯಾವುದೇ ತೀರ್ಪನ್ನು ಗುಜರಾತ್ ಹೈಕೋರ್ಟ್ ನೀಡಿಲ್ಲ ಎನ್ನುವುದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಇದರೊಂದಿಗೆ ಇತ್ತೀಚೆಗೆ ಸ್ವತಃ ಹೈಕೋರ್ಟ್ ನೇಮಕಾತಿಯಲ್ಲೇ ಮೀಸಲಾತಿ ಅನ್ವಯ ಹುದ್ದೆ ತುಂಬಲು ಪ್ರಕಟಣೆ ಕೊಟ್ಟಿರುವ ಕಾರಣ ಇನ್ನೂ ಹೈಕೋರ್ಟ್ ನೇಮಕಾತಿಯನ್ನು ರದ್ದು ಮಾಡಿದೆ ಎನ್ನುವುದು ಸುಳ್ಳು ಎನ್ನುವುದು ಸಾಬೀತಾಗಿತ್ತು. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಸಚಿವ ಪ್ರಿಯಾಂಕ್ ಖರ್ಗೆ ಅಕ್ರಮ ಗೋಹತ್ಯೆ ಬೆಂಬಲಿಸಿ ಮಾತನಾಡಿದ್ದಾರೆಯೇ?
ಸಚಿವ ಪ್ರಿಯಾಂಕ್ ಖರ್ಗೆಯವರು ಅಕ್ರಮ ಗೋಹತ್ಯೆ ಬೆಂಬಲಿಸಿ ಮತ್ತು ಇದನ್ನು ವಿರೋಧಿಸಿದವರನ್ನು ಬಂಧಿಸುವಂತೆ ಪೊಲೀಸರಿಗೆ ಒತ್ತಡ ಹೇರಿದ್ದಾರೆ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆ ವೇಳೆ ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಪೊಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಗೋ ರಕ್ಷಣೆಯ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಋತುಚಕ್ರದ ವೇಳೆ ಮಹಿಳೆಯರು ನೆಲ್ಲಿಕಾಯಿ ತಿನ್ನುವುದರಿಂದ ಫಲವತ್ತತೆ ಹೆಚ್ಚಾಗುತ್ತದೆ ಎನ್ನೋದು ಸತ್ಯವೇ?
ಋತುಚಕ್ರದ ಸಮಯದಲ್ಲಿ, ಮಹಿಳೆಯರು ಫಲವತ್ತತೆಯನ್ನು ಸುಧಾರಿಸಲು ನೆಲ್ಲಿಕಾಯಿಯನ್ನು ಸೇವಿಸಬೇಕು. ಹಾಗೆ, ಇದು ಟಾಕ್ಸಿನ್ಗಳನ್ನು ಹೊರಹಾಕುತ್ತದೆ ಎಂಬ ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸತ್ಯಶೋಧನೆಯಲ್ಲಿ ಋತುಚಕ್ರದ ವೇಳೆ ಮಹಿಳೆಯರು ನೆಲ್ಲಿಕಾಯಿ ತಿನ್ನುವುದರಿಂದ ಫಲವತ್ತತೆ ಹೆಚ್ಚಾಗುತ್ತದೆ ಎನ್ನುವುದಕ್ಕೆ ಹೆಚ್ಚಿನ ವೈಜ್ಞಾನಿಕ ದಾಖಲೆಗಳು ಲಭ್ಯವಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ ಎಂದು ಬಿಜೆಪಿ ಮಿಸ್ಡ್ ಕಾಲ್ ಅಭಿಯಾನದ ನಂಬರ್ ವೈರಲ್
ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ, ಫೋನ್ ಕರೆ ಮಾಡಿ, ಬೆಂಬಲ ವ್ಯಕ್ತಪಡಿಸಿ ಎನ್ನುವ ಸಂದೇಶಗಳೂ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿವೆ. ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿ 9090902024 ಮಿಸ್ಡ್ ಕಾಲ್ ನೀಡಿ ಎಂದು ಅಭಿಯಾನ ನಡೆಯುತ್ತಿದೆ ಎಂದು ಕ್ಲೇಮಿನಲ್ಲಿ ಹೇಳಲಾಗಿತ್ತು. ಆದರೆ ಸತ್ಯಶೋಧನೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 9 ವರ್ಷ ತುಂಬಿದ ಅಂಗವಾಗಿ ಮತ್ತು 2024ರ ಚುನಾವಣೆಗೆ ಮುನ್ನ ಜನರನ್ನು ತಲುಪುವ ಭಾಗವಾಗಿ ಬಿಜೆಪಿ 9090902024 ಮಿಸ್ಡ್ ಕಾಲ್ ಅಭಿಯಾನ ನಡೆಸಿದೆ ಎಂದು ಗೊತ್ತಾಗಿದೆ. ಇದು ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ್ದಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ