Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಸಚಿವ ಪ್ರಿಯಾಂಕ್ ಖರ್ಗೆ ಅಕ್ರಮ ಗೋಹತ್ಯೆ ಬೆಂಬಲಿಸಿ ಮಾತನಾಡಿದ್ದಾರೆ
Fact
ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಪೊಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಗೋ ರಕ್ಷಣೆಯ ಹೆಸರಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಹೇಳಿದ್ದಾರೆ
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರು ಅಕ್ರಮ ಗೋಹತ್ಯೆ ಬೆಂಬಲಿಸಿ ಮತ್ತು ಇದನ್ನು ವಿರೋಧಿಸಿದವರನ್ನು ಬಂಧಿಸುವಂತೆ ಪೊಲೀಸರಿಗೆ ಒತ್ತಡ ಹೇರಿದ್ದಾರೆ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಈ ಕುರಿತು ಬಿಜೆಪಿ ಕರ್ನಾಟಕ ಮಾಡಿದ ಟ್ವೀಟ್ನಲ್ಲಿ “ಭಾರತೀಯ ಸಂವಿಧಾನದ 48 ನೇ ವಿಧಿಯು ಪ್ರಾಣಿಗಳನ್ನು, ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ವಧೆ ಮಾಡುವುದನ್ನು ಸ್ಪಷ್ಟವಾಗಿ ನಿಷೇಧಿಸುತ್ತದೆ. ಆದಾಗ್ಯೂ, ಪ್ರಿಯಾಂಕ್ ಖರ್ಗೆ ಅವರು ಅಕ್ರಮ ಗೋಹತ್ಯೆಯನ್ನು ಉತ್ತೇಜಿಸುವ ಮೂಲಕ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಜೊತೆಗೆ ಅದನ್ನು ವಿರೋಧಿಸುವವರನ್ನು ಬಂಧಿಸುವಂತೆ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಸ್ವಯಂಘೋಷಿತ ಸಂವಿಧಾನ ತಜ್ಞ ಸಿದ್ದರಾಮಯ್ಯ ಅವರು ಇದು ಬಾಬಾ ಸಾಹೇಬರ ಭಾರತೀಯ ಸಂವಿಧಾನವನ್ನು ಉಲ್ಲಂಘಿಸುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ವಿವರಿಸಬೇಕು. ಇಲ್ಲದಿದ್ದರೆ, ಇಬ್ಬರೂ ಭಾರತೀಯ ಸಂವಿಧಾನದ ಬಗ್ಗೆ ಶಿಕ್ಷಣ ಪಡೆಯಬೇಕು” ಎಂದಿದೆ. ಇದರೊಂದಿಗೆ ಖರ್ಗೆಯವರ ವೀಡಿಯೋವೊಂದನ್ನೂ ಲಗತ್ತಿಸಲಾಗಿದೆ. ಈ ಟ್ವೀಟ್ ಇಲ್ಲಿದೆ.
Also Read: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪುರಿ ಜಗನ್ನಾಥ ದೇಗುಲದ ಗರ್ಭಗೃಹಕ್ಕೆ ಪ್ರವೇಶಿಸಿದಂತೆ ತಡೆಯಲಾಯಿತೇ?
ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ಮಾಡಿದ್ದು, ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್, ವೀಡಿಯೋದ ಕೀಫ್ರೇಮ್‌ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಈ ವೇಳೆ ವೀಡಿಯೋಗಳು ಲಭ್ಯವಾಗಿವೆ.
ಟಿವಿ 5 ಕನ್ನಡ ಜೂನ್ 20, 2023ರಂದು ಪ್ರಕಟಿಸಿದ “ಆ ದಳ ಈ ದಳ ಅಂದೊಂಡು ಕಾನೂನು ಕೈಗೆ ತಗೊಂಡ್ರೆ ಒದ್ದು ಒಳಗೆ ಹಾಕಿ..!” ಶೀರ್ಷಿಕೆಯ ಯೂಟ್ಯೂಬ್ ವೀಡಿಯೋದಲ್ಲಿ ಕ್ಲೇಮಿನಲ್ಲಿರುವ ವೀಡಿಯೋವನ್ನೇ ಹೋಲುವ ವೀಡಿಯೋ ಇದೆ. ಇದರಲ್ಲಿ “ಕಾನೂನು ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳಬೇಕು. ಜಾನುವಾರು ಸಾಗಾಟಕ್ಕೆ ಅನುಮತಿ, ಸೂಕ್ತ ದಾಖಲೆಗಳಿದ್ದರೆ ಪರಿಶೀಲಿಸಿ ಹೊರತಾಗಿ ಗೋ ರಕ್ಷಣೆಯ ಹೆಸರಲ್ಲಿ ಆ ದಳ ಈ ದಳಗಳಿಗೆ ಕಾನೂನು ಕೈಗೆತ್ತಿಕೊಂಡರೆ ಒದ್ದು ಒಳಗೆ ಹಾಕಬೇಕು” ಎಂದು ಹೇಳುತ್ತಾರೆ. ಈ ವೀಡಿಯೋ ಕ್ಲೇಮಿನಲ್ಲಿರುವ ವೀಡಿಯೋಕ್ಕಿಂತ ಹೆಚ್ಚಿನ ಅವಧಿಯನ್ನು ಹೊಂದಿದೆ.
ವಾರ್ತಾಭಾರತಿ ಜೂನ್ 21, 2023ರಂದು ಪ್ರಕಟಿಸಿದ “ಕೋಮು ವಿಷ ಬೀಜ ಬಿತ್ತುವವರಿಗೆ ಕಡಿವಾಣ ಹಾಕಬೇಕು: ಪ್ರಿಯಾಂಕ್ ಖರ್ಗೆ” ಶೀರ್ಷಿಕೆಯ ಯೂಟ್ಯೂಬ್ ವೀಡಿಯೋದಲ್ಲಿ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣಕ್ರಮಕ್ಕೆ ಪೊಲೀಸರಿಗೆ ಸೂಚಿಸುವುದು ಕಂಡುಬರುತ್ತದೆ. ಮತ್ತು ಗೋ ರಕ್ಷಣೆಯ ಹೆಸರಲ್ಲಿ ಕಾನೂನು ಕೈಗೆತ್ತಿಕೊಂಡರೆ ಒದ್ದು ಒಳಗೆ ಹಾಕಬೇಕು” ಎಂದು ಹೇಳುತ್ತಾರೆ. ಕಲಬುರಗಿಯಲ್ಲಿ ನಡೆದ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಈ ಸೂಚನೆ ನೀಡಿದ್ದಾರೆ ಎಂದು ವೀಡಿಯೋದ ವಿವರಣೆಯಲ್ಲಿದೆ. ಈ ವೀಡಿಯೋ ಕ್ಲೇಮಿನಲ್ಲಿರುವ ವೀಡಿಯೋವನ್ನೇ ಹೋಲುತ್ತಿದ್ದು, ಪೂರ್ಣ ಆವೃತ್ತಿಯನ್ನು ಹೊಂದಿದೆ.
ಈ ವೀಡಿಯೋಗಳನ್ನು ಸಾಕ್ಷ್ಯಗಳನ್ನಾಗಿ ಪರಿಗಣಿಸಿ, ನಾವು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.
ಜನಶಕ್ತಿ ಮೀಡಿಯಾ ಜೂ 21, 2023ರಂದು ಪ್ರಕಟಿಸಿದ ವರದಿಯಲ್ಲಿ, “ಗೋ ರಕ್ಷಣೆ ಎಂಬ ಹೆಸರಿನಲ್ಲಿ ದಳ, ಸೇನೆ ಎಂದು ಹೇಳಿ ಶಾಲು ಹಾಕಿಕೊಂಡು ಕಾನೂನು ಕೈಗಿತ್ತಿಕೊಂಡರೆ ಅವರನ್ನು ಒದ್ದು ಒಳ ಹಾಕಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಪೊಲೀಸ್ ಅಧಿಕಾರಿಗಳಿಗೆ ಖಡಖ್ ಸೂಚನೆ ನೀಡಿದ್ದಾರೆ. ನಿಮ್ಮ ಕೆಲಸವನ್ನು ಅವರ ಕೈಯ್ಯಲ್ಲಿ ಕೊಟ್ಟು ನೀವು ಸ್ಟೇಷನ್ ಅಲ್ಲಿ ಇರಬಾರದು ಎಂದು ಅವರು ಸೂಚನೆ ನೀಡಿದ್ದಾರೆ.” ಎಂದಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ ಎಂದು ವರದಿಯಲ್ಲಿದೆ.
ಸುವರ್ಣ ನ್ಯೂಸ್ ಜೂ.22, 2023ರಂದು ಪ್ರಕಟಿಸಿದ ವರದಿಯಲ್ಲಿ “ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ, ರೌಡಿಸಂ ಚಟುವಟಿಕೆ ನಿಯಂತ್ರಣದ ಸಭೆ ನಡೆಸಿ, ಪೊಲೀಸ್, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ಇದೇ ವರದಿಯಲ್ಲಿ ಖರ್ಗೆ ಅವರು “ಗೋವು ರಕ್ಷಕರು ಎಂದು ಹೇಳಿಕೊಂಡು ಕೋಮುಗಲಭೆ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಿ” ಎಂದು ಹೇಳಿದ್ದಾರೆ ಎಂದಿದೆ.
ಈ ವರದಿಗಳಲ್ಲೆಲ್ಲೂ ಖರ್ಗೆ ಅವರು ಅಕ್ರಮ ಗೋಸಾಗಾಟಕ್ಕೆ ಬೆಂಬಲಿಸುವ ರೀತಿ ಹೇಳಿಕೆ ನೀಡಿರುವುದು ಕಂಡುಬಂದಿರುವುದಿಲ್ಲ.
ಇನ್ನು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಪ್ರಿಯಾಂಕ್ ಖರ್ಗೆಯವರೂ ಟ್ವೀಟ್ ಪ್ರತಿಕ್ರಿಯೆ ನೀಡಿದ್ದು, “ಬಿಜೆಪಿಯು ಗೋ ರಕ್ಷಣೆಯ ಹೆಸರಿನಲ್ಲಿ ಯಾವುದೇ ರೀತಿಯಲ್ಲಿ ಕಾನೂನು ಮುರಿಯಲು ಪ್ರೋತ್ಸಾಹಿಸಬೇಕು ಎಂದು ಹೇಳುತ್ತದೆಯೇ, ನೀವು ಇದನ್ನು ಪ್ರಯತ್ನಿಸಿ, ಕರ್ನಾಟಕ ಸರ್ಕಾರ ನಿಮಗೆ ಸಂವಿಧಾನದ ಶಕ್ತಿ ಏನು ಎಂಬುದನ್ನು ತೋರಿಸುತ್ತದೆ” ಎಂದಿದ್ದಾರೆ. ಈ ಟ್ವೀಟ್ ಇಲ್ಲಿದೆ.
ಈ ಸತ್ಯಶೋಧನೆಯ ಪ್ರಕಾರ, ಕ್ಲೇಮಿನಲ್ಲಿ ಹೇಳಿದ ರೀತಿ “ಅಕ್ರಮ ಗೋಹತ್ಯೆಯನ್ನು ಉತ್ತೇಜಿಸುವ” ಮಾತುಗಳನ್ನಾಡಿದ್ದಾರೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ.
Also Read: ಕೆಎಸ್ಆರ್ಟಿಸಿ ಬಸ್ ಗೆ ಕಿಟಕಿ ಮೂಲಕ ಹತ್ತುವ ವೇಳೆ ಮಹಿಳೆಯ ಕೈ ತುಂಡಾಗಿದೆಯೇ, ಸತ್ಯ ಏನು?
Our Sources
YouTube Video By TV5 Kannada, Dated: June 20, 2023
YouTube Video By Varthabharathi, Dated: June 21, 2023
Report By Janashakthi Media, Dated: June 21, 2023
Report By Suvarna News, Dated: June 22, 2023
Tweet By Priyank Kharge, Dated: June 25, 2023
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 30, 2024
Prasad S Prabhu
November 29, 2024
Prasad S Prabhu
November 27, 2024