Authors
ಮತಗಟ್ಟೆಯಲ್ಲಿ ಮತದಾನ ಅಕ್ರಮ ನಡೆಸಲಾಗುತ್ತಿದೆ ಎನ್ನುವುದನ್ನು ವೀಡಿಯೋವೊಂದು ವೈರಲ್ ಆಗಿದ್ದು ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. ಇದು ಗುಜರಾತ್ ಚುನಾವಣೆಯದ್ದು ಎಂದು ಹಲವರು ಹೇಳಿದ್ದಾರೆ. ಈ ಕ್ಲೇಮ್ ಪ್ರಕಾರ “ಗುಜರಾತ್‌ನ ಎಲ್ಲ ಮತಗಟ್ಟೆಗಳಲ್ಲಿ ಬಿಜೆಪಿ ಮತ್ತು ಮತಗಟ್ಟೆ ಸಿಬ್ಬಂದಿಗಳ ಸಹಕಾರದೊಂದಿಗೆ ಒಬ್ಬ ವ್ಯಕ್ತಿ ಬಿಜೆಪಿ ಪರವಾಗಿ ನಿರಂತರವಾಗಿ ಇವಿಎಂನ ಬಟನ್ ಅನ್ನು ಒತ್ತುತ್ತಲೇ ಇದ್ದನು. ಮತದಾರಿಗೆ ಇವಿಎಂ ಬಟನ್ ಒತ್ತಲು ಅವಕಾಶ ನೀಡಲಿಲ್ಲ. ಮೋದಿ ಮತ್ತು ಚುನಾವಣಾ ಆಯೋಗ ಒಟ್ಟಾಗಿ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ವೀಡಿಯೋದಲ್ಲಿ ನೋಡಿ” ಎಂದು ಬರೆಯಲಾಗಿದೆ.
Fact Check
ನ್ಯೂಸ್ ಚೆಕರ್ ಈ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದು, ಈ ವೇಳೆ ವೀಡಿಯೋದಲ್ಲಿ ಮಾತನಾಡುತ್ತಿರುವ ಭಾಷೆ ಗುಜರಾತ್ ಅಲ್ಲ, ಬದಲಾಗಿ ಬಾಂಗ್ಲಾ ಭಾಷೆ ಎಂದು ತಿಳಿದು ಬಂದಿದ್ದು ಸಂಶಯಗಳನ್ನು ಹುಟ್ಟುಹಾಕಿದೆ.
ವೀಡಿಯೋದ ಕೀಫ್ರೇಂಗಳನ್ನು ತೆಗೆದು ಅದನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿ ನೋಡಿದಾಗ, ಇದು ಯೂಟ್ಯೂಬ್ ವೀಡಿಯೋವೊಂದನ್ನು ತೋರಿಸಿದೆ. ಆ ಪ್ರಕಾರ 2022 ಫೆಬ್ರವರಿ 27ರಂದು ಟಿವಿ9 ಬಾಂಗ್ಲಾಲೈವ್ ಅಪ್ಲೋಡ್ ಮಾಡಿದ ವೀಡಿಯೋ ಅದಾಗಿದ್ದು, 2022 ರ ಪ.ಬಂಗಾಳದ ಸ್ಥಳೀಯಾಡಳಿತ ಚುನಾವಣೆಯ ಸಂದರ್ಭದ್ದು ಎಂದು ತಿಳಿದುಬಂದಿದೆ. ಬಾಂಗ್ಲಾದ ಆ ವೀಡಿಯೋ ವಿವರಣೆಯನ್ನು ಭಾಷಾಂತರಿಸಿದಾಗ “ದಕ್ಷಿಣ ಡಮ್ ಡಮ್ ಪುರಸಭೆಯ ವಾರ್ಡ್ ನಂಬರ್ 33ರ ಲೇಕ್ ವ್ಯೂ ಶಾಲೆಯಲ್ಲಿ ಮತದಾನ ನಡೆಯುವಾಗ, ಮತದಾರರನ್ನು ತಡೆದು ಏಜೆಂಟರೇ ಇವಿಎಂ ಬಟನ್ ಒತ್ತಿದರು. ಆ ವೀಡಿಯೋ ನೋಡಿ ಎಂದಿದೆ.”
ಯೂಟ್ಯೂಬ್‌ನಲ್ಲಿ ಇನ್ನೊಂದು ವೀಡಿಯೋ ಕೂಡ ಕಂಡುಬಂದಿದ್ದು ಅದು ಫೆಬ್ರವರಿ 27ರಂದು ಅಪ್ಲೋಡ್ ಮಾಡಿದ ಆರೋಹಿ ನ್ಯೂಸ್ ನದ್ದಾಗಿದೆ. ಈ ವೀಡಿಯೋದಲ್ಲಿ ಬರೆದಿರುವುದನ್ನು ಭಾಷಾಂತರಿಸಿದಾಗ, “ದಕ್ಷಿಣ ಡಮ್ ಡಮ್‌ನಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ ಎಂದು ಆರೋಪ ಮಾಡಲಾಗಿದ್ದು, ವಾರ್ಡ್ ನಂ 33ರ ಮತಗಟ್ಟೆ ಸಂಖ್ಯೆ 108ರಲ್ಲಿ ಈ ಘಟನೆ ನಡೆದಿದೆ” ಎಂದು ಹೇಳಲಾಗಿದೆ.
Also Read: ಬ್ರಾಹ್ಮಣರನ್ನು ನಿಂದಿಸಿದವರ ವಿರುದ್ಧ ದೌರ್ಜನ್ಯ ಕಾಯ್ದೆ? ಇಲ್ಲ, ಈ ವೈರಲ್ ಪೋಸ್ಟ್ ಸುಳ್ಳು!
ಇದರ ಬಗ್ಗೆ ಇನ್ನಷ್ಟು ಕೀ ವರ್ಡ್ ಸರ್ಚ್ ನಡೆಸಿದಾಗ, 2022 ಫೆ.27ರ ಖಬೋರ್ 24*7 ಸುದ್ದಿ ವಾಹಿನಿಯ ವೀಡಿಯೋ ಕಂಡು ಬಂದಿದೆ. ಆ ವರದಿಯನ್ನು ಅನುವಾದ ಮಾಡಿದಾಗ “ ದಕ್ಷಿಣ ಡಮ್ ಡಮ್‌ನ ವಾರ್ಡ್ ನಂ.33ರ ಬೂತ್ ನಂ108ರಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬೂತ್ ಅನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಈ ವೀಡಿಯೋವನ್ನು ಬಿಜೆಪಿ ನಾಯಕ ಅಗ್ನಿಮಿತ್ರ ಪಾಲ್ ಅವರು ಶೇರ್ ಮಾಡಿದ್ದಾರೆ” ಎಂದು ವರದಿಯಲ್ಲಿ ಹೇಳಿದೆ.
ಈ ವೀಡಿಯೋವನ್ನು ಬಾಂಗ್ಲಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ರಾಜ್ಯ ಘಟಕಗಳು ಶೇರ್ ಮಾಡಿದ್ದು, ತೃಣಮೂಲ ಕಾಂಗ್ರೆಸ್ ಚುನಾವಣೆ ಅಕ್ರಮ ಎಸಗುತ್ತಿರುವ ಬಗ್ಗೆ ಟೀಕೆ ಮಾಡಿವೆ. 2022 ಫೆ.27ರಂದು ಅಲ್ಲಿ ಸ್ಥಳೀಯಾಡಳಿತ ಚುನಾವಣೆಯ ಮತದಾನ ನಡೆದಿತ್ತು.
ಈ ವೀಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗದೇ ಇದ್ದರೂ, ಈ ವೀಡಿಯೋ ಗುಜರಾತ್ ಚುನಾವಣೆ ಸಂದರ್ಭದ್ದಂತೂ ಅಲ್ಲ ಎನ್ನುವುದು ಸ್ಪಷ್ಟವಾಗಿದೆ.
Conclusion
ಗುಜರಾತ್ ವಿಧಾನಸಭೆ ಚುನಾವಣೆಯ ಮತದಾನ ಸಂದರ್ಭ ಅಕ್ರಮ ನಡೆದಿದೆ ಎಂದು ಹೇಳಲಾದ ವೀಡಿಯೋ ನಿಜಕ್ಕೂ ಪ.ಬಂಗಾಳ ಮೂಲದ್ದಾಗಿದೆ.
Result: False
Our Sources
Video analysis
YouTube video, TV9BanglaLive, February 27, 2022
YouTube video, Arohi news, February 27, 2022
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.