2015ರಲ್ಲಿ ಬಿಬಿಸಿ ಪ್ರಕಟಿಸಿದ್ದ ಭಾರತದ ನಕಾಶೆ ಇತ್ತೀಚಿನದ್ದು ಎಂದು ವೈರಲ್‌!

ಬಿಬಿಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎನ್ನಲಾದ ಈ ಚಿತ್ರದಲ್ಲಿ ಜಮ್ಮು ಮತ್ತು ಕಾಶ್ಮೀರ ರಹಿತವಾಗಿ ಭಾರತವನ್ನು ತೋರಿಸಲಾಗಿದೆ. ಗುಜರಾತ್‌ ಗಲಭೆ ಕುರಿತ ಸಾಕ್ಷ್ಯಚಿತ್ರವನ್ನು ತಯಾರಿಸಿದ ಬಿಬಿಸಿ ಈಗ ಜಮ್ಮು ಮತ್ತು ಕಾಶ್ಮೀರ ರಹಿತವಾಗಿ ನಕಾಶೆಯನ್ನು ಪ್ರಕಟಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕುರಿತಾಗಿ ಬಿಬಿಸಿ ಸಾಕ್ಷ್ಯ ಚಿತ್ರ ವಿವಾದ ಭುಗಿಲೆದ್ದ ಬೆನ್ನಲ್ಲೇ,  ಬಿಬಿಸಿ ಪ್ರಕಟಿಸಿದೆ ಎನ್ನಲಾದ ಜಮ್ಮು ಮತ್ತು ಕಾಶ್ಮೀರ ರಹಿತವಾದ ಈ ಭಾರತದ ಚಿತ್ರವೂ ವೈರಲ್‌ ಆಗಿದೆ.

ಈ ಕುರಿತ ಕ್ಲೇಮ್‌ ಒಂದು ಹೀಗಿದೆ “ ಕಾಶ್ಮೀರವಿಲ್ಲದ ಭಾರತದ ಭೂಪಟವನ್ನು ನಿರಂತರವಾಗಿ ತಮ್ಮ ವಾರ್ತೆಗಳಲ್ಲಿ ಪ್ರಕಟಿಸಿದರು, ಅದರ ಮುಂದುವರಿದ ಭಾಗವೇ ಬಿಬಿಸಿಯ ಡಾಕ್ಯುಮೆಂಟರಿ. ಅವರ ಗುರಿ ಮೋದಿ ಮಾತ್ರವಲ್ಲ.. ನಮ್ಮ ಭಾರತ.. ಆದರೆ ಬಿಬಿಸಿಯನ್ನು ಹೊತ್ತು ತಿರುಗುತ್ತಿರುವ ಕಾಂಗ್ರೆಸ್‌ ಮತ್ತು ಕಮ್ಯುನಿಷ್ಟರಿಗೆ ಅದು ಅರ್ಥವಾಗುತ್ತಿಲ್ಲ ಎಂದು ಪೋಸ್ಟ್‌ ಹಾಕಲಾಗಿದ್ದು, ಜೊತೆಗೆ ಬಿಬಿಸಿ ನ್ಯೂಸ್‌ ಚಾನೆಲ್‌ಗೆ ಗೋಧ್ರಾ ಹತ್ಯಾಕಾಂಡ ಕಾಣಿಸಿದೆ ಹಿರತು ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡ, ಕಾಶ್ಮೀರ ನರಮೇಧ, ಸಿಖ್ಖರ ಹತ್ಯಾಕಾಂಡ ಯಾಕೆ ಕಾಣಿಸಲಿಲ್ಲ ಪರದೇಶಿ ಗುಲಾಮಿ ಬಿಬಿಸಿ ಚಾನೆಲ್‌ಗೆ” ಎಂದು ಹೇಳಲಾಗಿದೆ.

ಬಿಬಿಸಿ, ಭಾರತ, ನಕಾಶೆ, ವೈರಲ್‌, ಪ್ರಧಾನಿ ನರೇಂದ್ರ ಮೋದಿ, ಗುಜರಾತ್‌ ಗಲಭೆ,  ಸಾಕ್ಷ್ಯಚಿತ್ರ
ಟ್ವಿಟರ್‌ನಲ್ಲಿ ಕಂಡುಬಂದ ಕ್ಲೇಮ್‌

ವಿವಿಧ ಬಳಕೆದಾರರು ಇದೇ ರೀತಿಯ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ ಅವುಗಳನ್ನು ಇಲ್ಲಿ ಇಲ್ಲಿ ಇಲ್ಲಿ ಮತ್ತು ಇಲ್ಲಿ ನೋಡಬಹುದು.

Fact check/ Verification

ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್‌ ಗಲಭೆ ಕುರಿತ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿದ ಬಳಿಕ ಜಮ್ಮು ಮತ್ತು ಕಾಶ್ಮೀರವಿಲ್ಲದ ನಕಾಶೆಯನ್ನು ನಿಜವಾಗಿಯೂ ಬಿಬಿಸಿ ಪ್ರಕಟಿಸಿದೆಯೇ ಎಂಬ ಕುರಿತು ನಾವು ಸತ್ಯ ಶೋಧನೆಗೆ ಮುಂದಾಗಿದ್ದು, ಇದಕ್ಕಾಗಿ ಗೂಗಲ್‌ ಕೀವರ್ಡ್‌ ಸರ್ಚ್ ನಡೆಸಲಾಗಿದೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ದೇಶಗಳಿಗೆ ಭೇಟಿ ನೀಡಿದ ಕುರಿತ ವೀಡಿಯೋ ವರದಿಯಲ್ಲಿ ಈ ರೀತಿಯ ನಕಾಶೆಯನ್ನು ಹಾಕಿರುವುದು ಕಂಡು ಬಂದಿದೆ.

ಈ ವೀಡಿಯೋದಲ್ಲಿ ಕ್ಲೇಮಿನಲ್ಲಿ ಹೇಳಿರುವ ರೀತಿಯ ನಕಾಶೆ ಇದ್ದು, ಇದು ವೈರಲ್‌ ಆಗಿರುವ ಮೆಸೇಜ್‌ನ ಸಾಮ್ಯತೆಯನ್ನು ಹೊಂದಿದೆ. ಇದು ವೀಡಿಯೋದಿಂದಲೇ ತೆಗೆದ ಸ್ಕ್ರೀನ್‌ ಗ್ರ್ಯಾಬ್‌ ಆಗಿದೆ ಎಂಬುದು ಶೋಧನೆಯಲ್ಲಿ ತಿಳಿದುಬಂದಿದೆ.

ಈ ಸ್ಕ್ರೀನ್‌ಶಾಟ್‌ ಅನ್ನು ಪಡೆದ ಕೆಲವೇ ಹೊತ್ತಿನಲ್ಲಿ, ಈ ವೀಡಿಯೋ ವರದಿಯನ್ನು ಬಿಬಿಸಿ ತನ್ನ ವೆಬ್‌ಸೈಟ್‌ನಿಂದ ತೆಗೆದು ಹಾಕಿದೆ.

ಬಿಬಿಸಿ ವೆಬ್‌ಸೈಟ್‌ ಸ್ಕ್ರೀನ್‌ ಗ್ರ್ಯಾಬ್‌

ಪರಿಶೀಲನೆ ವೇಳೆ ತಿಳಿದುಬಂದ ಪ್ರಕಾರ, ಬೇರೆ ಸಂದರ್ಭದಲ್ಲಿ ಬಿಬಿಸಿ ಜಮ್ಮು ಮತ್ತು ಕಾಶ್ಮೀರ ರಹಿತವಾದ ನಕಾಶೆಯನ್ನು ತೋರಿಸಿದ್ದು ಹೌದು. ಆ ಬಳಿಕ ಅದು ಈ ಕುರಿತು ಕ್ಷಮಾಪಣೆಯನ್ನೂ ಕೇಳಿತ್ತು.

Also Read: ಗುಜರಾತ್ ಗಲಭೆ ಕುರಿತು ಸಾಕ್ಷ್ಯಚಿತ್ರ ಮಾಡಿದ್ದಕ್ಕಾಗಿ ಬಿಬಿಸಿ ವಿರುದ್ಧ ಪ್ರತಿಭಟನೆ?

ಈ ಬಗ್ಗೆ ಔಟ್‌ ಲುಕ್‌ ಜನವರಿ 20, 2021ರಂದು ವರದಿಯನ್ನು ಪ್ರಕಟಿಸಿದ್ದು ಅಮೆರಿಕದ ಅಧ್ಯಕ್ಷ ಜೋಯ್‌ ಬೈಡೆನ್‌ ಅವರ ಗೋಷ್ಠಿಯಲ್ಲಿ ಈ ತಪ್ಪನ್ನು ಒಪ್ಪಿಕೊಂಡಿತ್ತು ಎಂದು ಹೇಳಿತ್ತು.

ಇನ್ನು ಇಂಡಿಯನ್‌ ಎಕ್ಸ್‌ ಪ್ರೆಸ್‌ ವರದಿ ಪ್ರಕಾರ ಬಿಬಿಸಿ ಜಮ್ಮು ಮತ್ತು ಕಾಶ್ಮೀರವಿಲ್ಲದ ನಕಾಶೆಯನ್ನು 2015ರಲ್ಲಿ ಪ್ರಕಟಿಸಿತ್ತು. ಪ್ರಧಾನಿ ಮೋದಿ ಅವರು ವಿವಿಧ ದೇಶಗಳಿಗೆ ಭೇಟಿ ನೀಡಿದಾಗ ಅದು ಇದನ್ನು ಪ್ರಕಟಿಸಿದೆ. ಈ ವಿಚಾರದಲ್ಲಿ ಲೇಬರ್‌ ಪಾರ್ಟಿಯ ಸಂಸದ ವೀರೇಂದ್ರ ಶರ್ಮಾ ಅವರು ಬಿಬಿಸಿ ಡಿಜಿ ಅವರಿಂದ ಈ ಬಗ್ಗೆ ಪ್ರತಿಕ್ರಿಯೆ ಕೇಳಿದ್ದು, ಆ ನಂತರ ಅದು ಕ್ಷಮೆ ಕೇಳಿ ನಕಾಶೆಯನ್ನು ಸರಿಪಡಿಸಿದೆ ಎನ್ನಲಾಗಿದೆ.

ಇನ್ನು ಈ ಕುರಿತಂತೆ ನ್ಯೂಸ್‌ಚೆಕರ್‌, ಬಿಬಿಸಿಯನ್ನು ಸಂಪರ್ಕಿಸಿದ್ದು, ಬಿಬಿಸಿಯ ವಕ್ತಾರರು ಪ್ರತಿಕ್ರಿಯಿಸಿ, 2015ರಲ್ಲಿ ಬಿಬಿಸಿ ಪ್ರಸಾರ ಮಾಡಿದ ವೀಡಿಯೋದಿಂದ ಆ ವೈರಲ್‌ ಸ್ಕ್ರೀನ್‌ಶಾಟ್‌ ತೆಗೆಯಲಾಗಿದೆ. ಅದರಲ್ಲಿ ಭಾರತದ ತಪ್ಪಾದ ನಕಾಶೆಯನ್ನು ಹಾಕಲಾಗಿತ್ತು. ಈ ವೀಡಿಯೋವನ್ನು ಈಗ ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ.

ನಕಾಶೆ ಕುರಿತ ಕಾನೂನುಗಳು

ಭಾರತದ ಕಾನೂನು ಪ್ರಕಾರ ದೇಶದ ನಕಾಶೆಯನ್ನು ತಪ್ಪಾಗಿ ಚಿತ್ರಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ರಾಷ್ಟ್ರೀಯ ನಕಾಶೆ ನೀತಿ (ಎಮ್‌ಎನ್‌ಪಿ 2016) ಮತ್ತು ಸರ್ವೇ ಆಫ್‌ ಇಂಡಿಯಾ (ಎಸ್‌ಇಐ) ಪ್ರಕಾರ ಈ ಕಾನೂನು ಅನ್ವಯವಾಗುತ್ತದೆ.

ದೇಶದ ಗಡಿಗುರುತುಗಳ ಬಗ್ಗೆ ತಪ್ಪಾದ ಮಾಹಿತಿ ನೀಡುವುದು ಮತ್ತು ತಪ್ಪಾಗಿ ನಕಾಶೆ ಚಿತ್ರಿಸುವುದು ಕಾನೂನು ಕ್ರಮಕ್ಕೆ ಕಾರಣವಾಗುತ್ತದೆ. 1923ರ ಅಧಿಕೃತ ರಹಸ್ಯ ಕಾಯ್ದೆ, 1962ರ ಕಸ್ಟಮ್ಸ್‌ ಕಾಯ್ದೆ, 1990ರ ಕ್ರಿಮಿನಲ್‌ ಕಾನೂನು (ತಿದ್ದುಪಡಿ ಕಾಯ್ದೆ) ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ತಪ್ಪಾಗಿ ಭಾರತದ ನಕಾಶೆಯನ್ನು ಚಿತ್ರಿಸುವುದು ತಪ್ಪಾಗಿ ಗಡಿ ಗುರುತುಗಳನ್ನು ತೋರಿಸುವುದು ಭಾರತದ ಸಾರ್ವಭೌಮತ್ವದ ಮೇಲಿನ ಪ್ರಶ್ನೆಯಾಗಿರುತ್ತದೆ. ಕಾನೂನು ಅನ್ವಯ ಅಂತಹ ತಪ್ಪುಗಳನ್ನು ಎಸಗಿದವರಿಗೆ ಜೈಲು ಅಥವಾ ದಂಡ ಅಥವಾ ಎರಡೂ ಶಿಕ್ಷೆಗಳನ್ನು ನೀಡಲು ಕಾನೂನಿನಡಿ ಅವಕಾಶವಿದೆ.

Conclusion

ಈ ಸತ್ಯ ಶೋಧನೆ ಪ್ರಕಾರ, ವೈರಲ್‌ ಆಗಿರುವ ಮೆಸೇಜ್‌ ಅನ್ನು ಬಿಬಿಸಿ ಪ್ರಕಟಿಸಿದ್ದರೂ ಅದು ಈಗಿನದ್ದಲ್ಲ. ಗುಜರಾತ್‌ ಸಾಕ್ಷ್ಯಚಿತ್ರ ಪ್ರಕಟನೆ ನಂತರದ್ದಲ್ಲ. ಅದು 2015ರದ್ದಾಗಿದೆ. ಇದನ್ನು ಈಗ ಬಿಬಿಸಿ ಪ್ರಕಟಿಸಿದೆ ಎನ್ನವುದು ತಪ್ಪಾದ ಸಂದರ್ಭವಾಗಿದೆ.

Result: Missing context

Our Sources
Report by BBC, Dated November 12, 2015


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.