Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ರೈಲ್ವೇ ಟ್ರ್ಯಾಕ್ ಮೇಲೆ ಕಲ್ಲು ಇಟ್ಟು 2024ರ ಲೋಕಸಭೆ ಚುನಾವಣೆಗೆ ಮುನ್ನ ಬಹುದೊಡ್ಡ ಪಿತೂರಿ ಮಾಡಲಾಗುತ್ತಿದೆ
Fact
ರೈಲ್ವೇ ಟ್ರ್ಯಾಕ್ ಮೇಲೆ ಕಲ್ಲು ಇಟ್ಟ ಪ್ರಕರಣ 2018ರದ್ದಾಗಿದ್ದು, ಬಾಲಕರು ಹುಡುಗಾಟಿಕೆಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ
ಬಾಲಕನೊಬ್ಬ ರೈಲ್ವೇ ಟ್ರ್ಯಾಕ್‌ನಲ್ಲಿ ಕಲ್ಲುಗಳನ್ನು ಇಟ್ಟ ಬಗ್ಗೆ ಇಬ್ಬರು ರೈಲ್ವೇ ಕಾರ್ಮಿಕರು ವಿಚಾರಣೆ ನಡೆಸುತ್ತಿರುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಕುರಿತು ವಿವಿಧೆಡೆ ವೈರಲ್ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇದರೊಂದಿಗಿನ ಹೇಳಿಕೆಯಲ್ಲಿ “ಇದು ಸರ್ಕಾರದ ವಿರುದ್ಧದ ಯುದ್ಧದಂತೆ ತೋರುತ್ತಿದೆ, ಮುಗ್ಧ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಮತ್ತು ಅವಘಡಗಳಿಗೆ ಸರ್ಕಾರವನ್ನು ದೂಷಿಸುತ್ತಿದೆ. ಇದು ಅಂತರ್ಯುದ್ಧದಂತಹ ದೊಡ್ಡ ಸಮಯದ ಪಿತೂರಿಯಾಗಿದೆ. ನಾವು ಬಹಳ ಜಾಗರೂಕರಾಗಿರಬೇಕು ಮತ್ತು ಜಾಗರೂಕರಾಗಿರಬೇಕು. 2024 ರ ಲೋಕಸಭಾ ಚುನಾವಣೆಗೆ ಏನು ಬೇಕಾದರೂ ಆಗಬಹುದು. ಇದನ್ನು ಸಾಧ್ಯವಾದಷ್ಟು ಜನರಿಗೆ ಕಳುಹಿಸಿ” ಎಂಬ ಹೇಳಿಕೆಯೊಂದಿಗೆ ಹಂಚಲಾಗುತ್ತಿದೆ.
Also Read: ರಾಹುಲ್ ಗಾಂಧಿ ‘ನಾನು ಮುಸ್ಲಿಂ’ ಎಂದು ಹೇಳಿದ್ದಾರೆನ್ನಲಾದ ತಿರುಚಿದ ಸುದ್ದಿಯ ಚಿತ್ರ ವೈರಲ್
ಈ ವೈರಲ್ ವೀಡಿಯೋದ ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್ ಟಿಪ್ ಲೈನ್ (+91-9999499044)ಗೆ ಬಳಕೆದಾರರು ದೂರನ್ನು ಸಲ್ಲಿಸಿದ್ದು, ಸತ್ಯಶೋಧನೆಗಾಗಿ ಅಂಗೀಕರಿಸಲಾಗಿದೆ.
ಇದರೊಂದಿಗೆ ಸಾಮಾಜಿಕ ಜಾಲತಾಣಗಳ ವಿವಿಧೆಡೆಯೂ ಇದೇ ರೀತಿಯ ಹೇಳಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು ಅದು ಇಲ್ಲಿ, ಇಲ್ಲಿ ಮತ್ತು ಇಲ್ಲಿದೆ.
ಸತ್ಯಶೋಧನೆಗಾಗಿ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಇಬ್ಬರು ರೈಲ್ವೇ ಕಾರ್ಮಿಕರು ಬಾಲಕನೊಬ್ಬನ ಕೈ ಹಿಡಿದು ವಿಚಾರಣೆ ನಡೆಸುವ ದೃಶ್ಯ ಇದರಲ್ಲಿದ್ದು, ಇಬ್ಬೊಬ್ಬ ವ್ಯಕ್ತಿ ವೀಡಿಯೋ ಮಾಡುತ್ತಾನೆ. ಈ ವೇಳೆ ಬಾಲಕನ ಬಳಿ ವೀಡಿಯೋ ಮಾಡುವ ವ್ಯಕ್ತಿ “ಇದನ್ನು ಯಾರು ಇಟ್ಟಿದ್ದಾರೆ ಎಂದು ಕೇಳಿದಾಗ, ಆತ ಇದನ್ನು ಬೇರೊಬ್ಬ ಇಟ್ಟಿದ್ದಾನೆ ಎಂದು ಹೇಳುತ್ತಾನೆ. ಯಾರು ಇಟ್ಟಿದ್ದಾರೆ ಎಂದು ಮತ್ತೆ ಕೇಳಿದಾಗ ಆತ ಇನ್ನೊಬ್ಬ ಬಾಲಕನ ಹೆಸರನ್ನು ಪಪ್ಪು ಎಂದು ಹೇಳುತ್ತಾನೆ. ಜೊತೆಗೆ ಆತ ಎಲ್ಲಿರುತ್ತಾನೆ ಎಂದಾಗ ಆತ “ದೇವನಗರ” ಎಂದು ಹೇಳುತ್ತಾನೆ. ಈ ವೇಳೆ ಇನ್ನೊಬ್ಬ ವ್ಯಕ್ತಿ ಇಂತಹ ಕೆಲಸ ಮಾಡುತ್ತೀಯಾ ಎಂದು ಕೇಳಿದಾಗ ಬಾಲಕ ವ್ಯಕ್ತಿಯ ಕಾಲು ಹಿಡಿಯಲು ಮುಂದಾಗುತ್ತಾನೆ. ಇದೇ ವೇಳೆ ಬಾಲಕನ ಕೈ ಹಿಡಿದ ವ್ಯಕ್ತಿ ಬಾಲಕನ ತಂದೆಯ ಬಗ್ಗೆ ಕೇಳಿದಾಗ ಅವರೊಬ್ಬರು ಕಂಡಕ್ಟರ್ ಎಂದು ಹೇಳುತ್ತಾನೆ. ಜೊತೆಗೆ ಬಾಲಕನ ಬಳಿ ವ್ಯಕ್ತಿ ತಂದೆಯ ಮೊಬೈಲ್ ನಂಬರ್ ಹೇಳುವಂತೆ ಹೇಳುತ್ತಾನೆ. ಜೊತೆಗೆ ಎಷ್ಟು ರೈಲುಗಳಿಗೆ ಈ ರೀತಿ ಕಲ್ಲು ಇಡಲಾಗಿದೆ ಎಂದು ಕೇಳುತ್ತಾರೆ. ಈ ವೇಳೆ ಬಾಲಕ ನಾನು ಇದೇ ಮೊದಲು ಇಟ್ಟಿದ್ದಾಗಿ ಅಳುತ್ತ ಹೇಳುತ್ತಾನೆ. ವ್ಯಕ್ತಿಗಳು ವಿಚಾರಣೆ ನಡೆಸುವ ವೇಳೆ ಕಾಲಿಗೆ ಬೀಳುತ್ತೇನೆ. ಬಿಟ್ಟುಬಿಡಿ ಎಂದು ಬಾಲಕ ಹೇಳುವುದು, ಪದೇ ಪದೇ ಕಾಲಿಗೆ ಬೀಳುವುದು ಕಾಣುತ್ತದೆ. ಜೊತೆಗೆ ಎಷ್ಟೊಂದು ಕಲ್ಲು ಇಟ್ಟಿದ್ದಾನೆ ಎಂದು ವೀಡಿಯೋ ಮಾಡಿದ ವ್ಯಕ್ತಿ ಹೇಳುತ್ತ ಕಲ್ಲುಗಳನ್ನು ಇಟ್ಟಿದ್ದನ್ನು ವ್ಯಕ್ತಿ ತೋರಿಸುವುದು ಕಾಣಿಸುತ್ತದೆ.
Also Read: ನಟ ಡ್ವೇನ್ ಜಾನ್ಸನ್ ‘ಆರತಿ’ ಮಾಡುತ್ತಿರುವ ವೈರಲ್ ಫೋಟೋ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕರಾಮತ್ತು!
ಈ ವೀಡಿಯೋ ಮತ್ತು ಸಂಭಾಷಣೆಯನ್ನು ಕೂಲಂಕಷವಾಗಿ ಪರೀಕ್ಷಿಸಿದ ಬಳಿಕ ಬಾಲಕ ಹೇಳುವ ಊರಿನ ಹೆಸರು “ದೇವನಗರ” ಎಂಬುದನ್ನು ಪತ್ತೆ ಮಾಡಲಾಗಿದೆ. ಜೊತೆಗೆ ಈ ರೀತಿಯ ಕನ್ನಡ ಮಾತನಾಡುವ ಶೈಲಿ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟದಲ್ಲಿ ಮಾತನಾಡುವ ಕನ್ನಡ ಶೈಲಿ ಎಂದು ಪತ್ತೆ ಹಚ್ಚಲಾಗಿದೆ.
ಅದರಂತೆ ಗೂಗಲ್ ಸರ್ಚ್ ನಲ್ಲಿ ದೇವನಗರ, ಕಲಬುರಗಿ, ಕರ್ನಾಟಕ ಎಂದು ಸರ್ಚ್ ಮಾಡಲಾಗಿದ್ದು, ಇದು ಕಲಬುರಗಿ ಪ್ರದೇಶವನ್ನು ತೋರಿಸಿದೆ.
ಈ ಫಲಿತಾಂಶದ ಆಧಾರದ ಮೇಲೆ ಗೂಗಲ್‌ನಲ್ಲಿ ಸರ್ಚ್ ನಡೆಸಲಾಗಿದ್ದು, ಬಾಲಕ ಹಳಿಯಲ್ಲಿ ಕಲ್ಲು ಇಟ್ಟ ವಿಚಾರದ ಬಗ್ಗೆ ಯಾವುದೇ ವರದಿಗಳು ಲಭ್ಯವಾಗಿಲ್ಲ.
ಅನಂತರ ಕಲಬುರಗಿ ಪ್ರಜಾವಾಣಿ ಹಿರಿಯ ವರದಿಗಾರರಾದ ಮನೋಜ್ ಕುಮಾರ್ ಗುಡ್ಡಿ ಅವರನ್ನು ಸಂಪರ್ಕಿಸಲಾಗಿದ್ದು, ಅವರು ನ್ಯೂಸ್‌ಚೆಕರ್‌ನೊಂದಿಗೆ ಮಾತನಾಡಿ, “ಇದು 2018ರ ವಿದ್ಯಮಾನ ಎಂದು ತಿಳಿಸಿದ್ದಾರೆ. ಜೊತೆಗೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ” ಎಂದೂ ಹೇಳಿದ್ದಾರೆ.
ಈ ಮಾಹಿತಿ ಅನ್ವಯ ಈ ವ್ಯಾಪ್ತಿಯ, ವಾಡಿ ರೈಲ್ವೇ ಪೊಲೀಸ್ ಇನ್ಸ್‌ಪೆಕ್ಟರ್ ಎಮ್ ಪಾಶಾ ಅವರನ್ನು ಸಂಪರ್ಕಿಸಲಾಗಿದ್ದು, ಅವರು ನ್ಯೂಸ್‌ಚೆಕರ್‌ನೊಂದಿಗೆ ಮಾತನಾಡಿ, “ಇದು 2018ರಲ್ಲಿ ನಡೆದ ಪ್ರಕರಣವಾಗಿದ್ದು, ಯಾವುದೇ ಪೊಲೀಸ್ ಕೇಸ್ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರೈಲ್ವೇ ಟ್ರ್ಯಾಕ್ ಮೇಲೆ ಕಲ್ಲು ಇಟ್ಟಿರುವುದು ಮಕ್ಕಳು ಹುಡುಗಾಟಿಕೆಯಿಂದ ಮಾಡಿದ್ದಾಗಿರಬಹುದು, ಇದು ಗಂಭೀರ ಪ್ರಕರಣವಲ್ಲ. ಟ್ರ್ಯಾಕ್ ಮೇಲೆ ಕಲ್ಲು ಇಟ್ಟದ್ದನ್ನು ಕಂಡ ವೇಳೆ ಈ ವೇಳೆ ರೈಲ್ವೇ ಕಾರ್ಮಿಕರು ವಿಚಾರಿಸಿದ್ದಾರೆ ಎಂದು ತಿಳಿಸಿದ್ದಾರೆ.” ಜೊತೆಗೆ “ಒಡಿಶಾದ ಬಾಲಸೋರ್ ಪ್ರಕರಣದ ಬಳಿಕ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಲ್ಲು ಇಟ್ಟಿರುವ ಪ್ರಕರಣ, ವೀಡಿಯೋ ಬಗ್ಗೆ ರೈಲ್ವೇ ಪೊಲೀಸ್‌ನ ಹಿರಿಯ ಅಧಿಕಾರಿಗಳೂ ಮಾಹಿತಿ ಪಡೆದುಕೊಂಡಿದ್ದಾರೆ” ಎಂದು ತಿಳಿಸಿದರು.
Also Read: ಕಾಂಗ್ರೆಸ್ ಸರ್ಕಾರದ ‘ಉಚಿತ ವಿದ್ಯುತ್’ ಭರವಸೆ ನೆಪದಲ್ಲಿ ವಿದ್ಯುತ್ ಸಿಬ್ಬಂದಿ ಮೇಲೆ ಹಲ್ಲೆ, ಸತ್ಯಾಂಶ ಏನು?
ಈ ಸತ್ಯ ಶೋಧನೆಯ ಅನ್ವಯ ರೈಲ್ವೇ ಟ್ರ್ಯಾಕ್ ಮೇಲೆ ಬಾಲಕರು ಕಲ್ಲು ಇಟ್ಟ ಪ್ರಕರಣದ ಹಿಂದೆ ದೊಡ್ಡ ಪಿತೂರಿ ಇದೆ ಎನ್ನುವ ಕ್ಲೇಮಿನ ಹೇಳಿಕೆ ತಪ್ಪಾದ ಸಂದರ್ಭವಾಗಿದೆ ಮತ್ತು ಈ ವೀಡಿಯೋ ಹಳೆಯದು ಎಂದು ತಿಳಿದುಬಂದಿದೆ.
Our Sources:
Conversation with Manoj Kumar Guddi, Senior Correspondent, Prajavani Daily Kalaburagi
Conversation with M.Pasha, Police Sub Inspector, Wadi railway Sation
Self-analysis
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.