Fact Check: ಕಾಂಗ್ರೆಸ್‌ ಸರ್ಕಾರದ ‘ಉಚಿತ ವಿದ್ಯುತ್‌’ ಭರವಸೆ ನೆಪದಲ್ಲಿ ವಿದ್ಯುತ್‌ ಸಿಬ್ಬಂದಿ ಮೇಲೆ ಹಲ್ಲೆ, ಸತ್ಯಾಂಶ ಏನು?

ಉಚಿತ ವಿದ್ಯುತ್‌, ಕಾಂಗ್ರೆಸ್‌, ಲೈನ್‌ ಮ್ಯಾನ್‌ ಮೇಲೆ ಹಲ್ಲೆ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಕಾಂಗ್ರೆಸ್‌ “ಉಚಿತ ವಿದ್ಯುತ್” ಭರವಸೆ ನೆಪದಲ್ಲಿ ವಿದ್ಯುತ್‌ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ

Fact
9000 ರೂ. ವಿದ್ಯುತ್‌ ಬಿಲ್‌ ಕಟ್ಟದೇ ಬಾಕಿ ಉಳಿಸಿಕೊಂಡಿದ್ದ ಕೊಪ್ಪಳ ಕುಕನಹಳ್ಳಿಯ ವ್ಯಕ್ತಿಯೊಬ್ಬರ ಬಳಿ ಬಿಲ್‌ ಕಟ್ಟುವಂತೆ ಕೇಳಲು ಹೋದಾಗ ವಿದ್ಯುತ್‌ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ. ಕಾಂಗ್ರೆಸ್ ಪ್ರಣಾಳಿಕೆಯ ಭರವಸೆಯನ್ನು ಉಲ್ಲೇಖಿಸಿ ಬಳಕೆದಾರರು ಬಿಲ್ ಪಾವತಿಸಲು ನಿರಾಕರಿಸಿದ ನಿದರ್ಶನಗಳು ಇದ್ದರೂ, ಕಾಂಗ್ರೆಸ್ ಯೋಜನೆಗೆ ಮತ್ತು ಈ ಘಟನೆಗೆ ಯಾವುದೇ ಸಂಬಂಧವಿಲ್ಲ

ಕರ್ನಾಟಕ ವಿಧಾನಸಭಾ ಚುನಾವಣೆ ಕಳೆದ ಕೂಡಲೇ, ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ “200 ಯುನಿಟ್ ಉಚಿತ ವಿದ್ಯುತ್‌” ಕುರಿತ ವಿಚಾರ ಮುನ್ನೆಲೆಗೆ ಬಂದಿದ್ದು ವಿವಿಧೆಡೆ ವಿದ್ಯುತ್‌ ಬಿಲ್‌ ಕಟ್ಟಲು ನಿರಾಕರಿಸಿ ಹೇಳಿಕೆ ನೀಡಿದ ವೀಡಿಯೋಗಳು, ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಇಂತಹ ಕ್ಲೇಮ್‌ ಒಂದರಲ್ಲಿ ಸ್ಥಳೀಯರು ವಿದ್ಯುತ್‌ ವಿಭಾಗದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ವೀಡಿಯೋ ಒಂದು ವೈರಲ್‌ ಆಗಿದೆ. “ಕಾಂಗ್ರೆಸ್‌ ಗ್ಯಾರೆಂಟಿ ಸ್ಕೀಮ್‌ ಪ್ರಕಾರ ವಿದ್ಯುತ್‌ ಬಿಲ್‌ ಕಟ್ಟಬೇಕಿಲ್ಲ ಎಂದು ಹೇಳಲಾಗಿದ್ದು, ಸ್ಥಳೀಯರು ವಿದ್ಯುತ್ ಮೀಟರ್ ರೀಡಿಂಗ್‌ ಮಾಡಲು ಬಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಹೇಳಲಾಗಿದೆ. ಈ ಕುರಿತ ಟ್ವೀಟ್‌ ಇಲ್ಲಿದೆ

Also read: ತ್ರಿವರ್ಣ ಧ್ವಜದ ಮಧ್ಯೆ ಮಸೀದಿ ಚಿತ್ರ, ವೈರಲ್‌ ಮೆಸೇಜ್‌ ಹಿಂದಿನ ಸತ್ಯ ಏನು?

 ಕಾಂಗ್ರೆಸ್‌ 'ಉಚಿತ ವಿದ್ಯುತ್‌' ಭರವಸೆ ನೆಪದಲ್ಲಿ ವಿದ್ಯುತ್‌ ಸಿಬ್ಬಂದಿ ಮೇಲೆ ಹಲ್ಲೆ, ಸತ್ಯಾಂಶ ಏನು?

ಇದೇ ರೀತಿ ಹಲವು ಕ್ಲೇಮ್‌ಗಳು ಕಂಡುಬಂದಿದ್ದು, ಅವುಗಳು ಇಲ್ಲಿ, ಇಲ್ಲಿ ಮತ್ತು ಇಲ್ಲಿವೆ.

ಉಚಿತ ವಿದ್ಯುತ್‌ ಭರವಸೆ; ಬಿಲ್‌ ಕಟ್ಟುವುದಕ್ಕೆ ನಕಾರ

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಚುನಾವಣೆ ಪೂರ್ವದಲ್ಲಿ 200 ಯುನಿಟ್‌ ಉಚಿತ ವಿದ್ಯುತ್‌ ಕೊಡುವ ಭರವಸೆಯನ್ನು ಪ್ರಣಾಳಿಕೆಯಲ್ಲಿ ನೀಡಿತ್ತು. ಅದರಂತೆ ಚುನಾವಣೆಯಲ್ಲಿ ಕಾಂಗ್ರೆಸ್‌ ವಿಜಯಿಯಾಗುತ್ತಿದ್ದಂತೆ, ಕರ್ನಾಟಕದ ವಿವಿಧೆಡೆಗಳಲ್ಲಿ ಜನರು ಕರೆಂಟು ಬಿಲ್ಲು ಕಟ್ಟುವುದಿಲ್ಲ ಎಂಬ ಧೋರಣೆ ಹೊಂದಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. ಈ ಕುರಿತ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು. ಇಂತಹುದೇ ನಿದರ್ಶನಗಳು ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಪ್ರಸಾರವಾಗುತ್ತಿರುವಂತೆಯೇ ಕೊಪ್ಪಳ ಕುಕನಹಳ್ಳಿಯ ಪ್ರಕರಣವನ್ನೂ ಕಾಂಗ್ರೆಸ್‌ ಚುನಾವಣಾ ಭರವಸೆ ಹಿನ್ನೆಲೆಯಲ್ಲಿ ವಿದ್ಯುತ್‌ ಬಿಲ್‌ ಕಟ್ಟಲು ನಕಾರ ಎಂದು ಟಿ.ವಿ. ಮಾಧ್ಯಮಗಳು ವರದಿ ಮಾಡಿವೆ. ಟಿ.ವಿ.9 ಕನ್ನಡ ತನ್ನ ವರದಿಯಲ್ಲಿ “ಇದೀಗ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕೆಲ ಜನರು ವಿದ್ಯುತ್​ ಬಿಲ್ ಕಟ್ಟುವುದಿಲ್ಲ ಎಂದು ಲೈನ್​ಮ್ಯಾನ್​ಗಳ ಜತೆ ಜಗಳಕ್ಕೆ ಇಳಿದಿದ್ದಾರೆ. ಇಷ್ಟು ದಿನ ಬರೀ ತರಾಟೆ, ಮಾತಿನಲ್ಲಿ ನಡೆಯುತ್ತಿದ್ದ ಜಗಳ ಇದೀಗ ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿದೆ.” ಎಂದು ಹೇಳಿದೆ. ಇದೇ ರೀತಿ ಪಬ್ಲಿಕ್‌ ಟಿ.ವಿ. ತನ್ನ ವರದಿಯಲ್ಲಿ “200 ಯುನಿಟ್ ಕರೆಂಟ್ ಫ್ರೀ ಕೊಡ್ತೀವಿ ಅಂತ ಕಾಂಗ್ರೆಸ್ ಸರ್ಕಾರ ಹೇಳಿದ್ದು, ಜನ ಇದನ್ನೇ ನೆಪ ಮಾಡಿಕೊಂಡು ಕರೆಂಟ್ ಬಿಲ್ ಕಟ್ಟಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ. ಅಂತೆಯೇ ಇದೀಗ ಕೊಪ್ಪಳದಲ್ಲಿ ವಿದ್ಯುತ್ ಬಿಲ್ ಕಲೆಕ್ಟ್ ಮಾಡಲು ಬಂದವರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ” ಎಂದು ಹೇಳಿದೆ.

ಆದರೆ ಈ ವೈರಲ್‌ ವೀಡಿಯೋದಲ್ಲಿ ಎಲ್ಲೂ ಥಳಿಸುತ್ತಿರುವ ವ್ಯಕ್ತಿ ಕಾಂಗ್ರೆಸ್ ಗ್ಯಾರೆಂಟಿ ಸ್ಕೀಮ್‌ ಬಗ್ಗೆ ಹೇಳದೇ ಇರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಈ ವೈರಲ್‌ ವೀಡಿಯೋದ ಸತ್ಯಶೋಧನೆಗೆ ನ್ಯೂಸ್‌ಚೆಕರ್‌ ಮುಂದಾಗಿದ್ದು, ಈ ಕ್ಲೇಮ್‌ ಭಾಗಶಃ ತಪ್ಪು ಎಂದು ತಿಳಿದುಬಂದಿದೆ.

Fact Check/ Verification

ಸತ್ಯಶೋಧನೆಗಾಗಿ, ಗೂಗಲ್‌ ಕೀವರ್ಡ್ ಸರ್ಚ್ ನಡೆಸಿದ್ದು, ಹಲವು ಫಲಿತಾಂಶಗಳು ಲಭ್ಯವಾಗಿವೆ. ಅದರಂತೆ ವಿದ್ಯುತ್‌ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಈ ಘಟನೆ ಕೊಪ್ಪಳ ಜಿಲ್ಲೆ ಮತ್ತು ತಾಲೂಕಿನ ಕುಕನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಎಂದು ತಿಳಿದುಬಂದಿದೆ.

ಮೇ 24 2023ರ ಡೆಕ್ಕನ್‌ ಹೆರಾಲ್ಡ್‌ ವರದಿಯ ಪ್ರಕಾರ, “ವಿದ್ಯುತ್‌ ಬಿಲ್‌ ಕಟ್ಟಲು ಕೇಳಲು ಹೋದ ಜೆಸ್ಕಾಂ ಲೈನ್‌ ಮೇಲೆ ಕುಕನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾನೆ. ಬಿಲ್‌ ಕಟ್ಟದೇ ಇದ್ದುದರಿಂದ ಆರೋಪಿಯ ಮನೆಗೆ ವಿದ್ಯುತ್‌ ಕಡಿತಗೊಳಿಸಲಾಗಿತ್ತು. ಅಲ್ಲದೇ ಆತನ ಮನೆಗೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದು, ಇದನ್ನು ಪ್ರಶ್ನಿಸಲು ಸಿಬ್ಬಂದಿ ಹೋಗಿದ್ದರು. ಈ ವೇಳೆ ಬಿಲ್‌ ಕಟ್ಟುವಂತೆ ಹೇಳಿದಾಗ ವ್ಯಕ್ತಿ ಲೈನ್‌ ಮ್ಯಾನ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನು ಇನ್ನೊಬ್ಬ ಸಿಬ್ಬಂದಿ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.” ಎಂದಿದೆ.

Also read: ಪಿ-500 ಪಾರಾಸಿಟಮಲ್‌ ಮಾತ್ರೆಯಲ್ಲಿ ಅಪಾಯಕಾರಿ ಮಚುಪೊ ವೈರಸ್‌ ಇದೆಯೇ, ವೈರಲ್‌ ಕ್ಲೇಮ್‌ ನಿಜವೇ?

ಮೇ 24 2023ರ ಪ್ರಜಾವಾಣಿ ವರದಿ ಪ್ರಕಾರ, “ಕೊಪ್ಪಳ ತಾ. ಕುಕನಪಳ್ಳಿ ಗ್ರಾಮದಲ್ಲಿ ವಿದ್ಯುತ್‌ ಬಿಲ್‌ ಬಾಕಿ ವಸೂಲಾತಿಗೆ ತೆರಳಿದ್ದ ಜೆಸ್ಕಾಂ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದಿದ್ದ ಚಂದ್ರಶೇಖರ ಹಿರೇಮಠ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಷಯವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಖಚಿತಪಡಿಸಿದ್ದಾರೆ. ಚಂದ್ರಶೇಖರ್‌ ಗೃಹಬಳಕೆ ವಿದ್ಯುತ್‌ ಸಂಪರ್ಕ ಪಡೆದುಕೊಂಡು ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿದ್ದರುಉ. ಅನಧಿಕೃತವಾಗಿ ಪಡೆದುಕೊಂಡಿದ್ದ ಸಂಪರ್ಕವನ್ನು ಪ್ರಶ್ನಿಸಿ ಬಿಲ್‌ ಪಾವತಿಸುವಂತೆ ಹೇಳಿದ್ದಕ್ಕೆ ಜೆಸ್ಕಾ ಸಿಬ್ಬಂದಿ ಆರ್‌ ಮಂಜುನಾಥ ಅವರ ಮೇಲೆ ಹಲ್ಲೆ ಮಾಡಿದ್ದು ವೀಡಿಯೋ ವೈರಲ್‌ ಆಗಿದೆ” ಎಂದಿದೆ. ಇದೇ ವರದಿಯಲ್ಲಿ “ಚಂದ್ರಶೇಖರ್‌ 9 ಸಾವಿರ ವಿದ್ಯುತ್‌ ಬಿಲ್‌ ಬಾಕಿ ಳಿಸಿಕೊಂಡಿದ್ದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಅನಧಿಕೃತವಾಗಿ ಮತ್ತೆ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದ. ಇದನ್ನು ನಮ್ಮ ಸಿಬ್ಬಂದಿ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ್ದಾನೆ ಎಂದು ಕೊಪ್ಪಳ ಜೆಸ್ಕಾಂ ಇಇ ರಾಜೇಶ ಪ್ರಜಾವಾಣಿಗೆ ತಿಳಿಸಿದ್ದಾರೆ” ಎಂದಿದೆ.

 ಕಾಂಗ್ರೆಸ್‌ 'ಉಚಿತ ವಿದ್ಯುತ್‌' ಭರವಸೆ ನೆಪದಲ್ಲಿ ವಿದ್ಯುತ್‌ ಸಿಬ್ಬಂದಿ ಮೇಲೆ ಹಲ್ಲೆ, ಸತ್ಯಾಂಶ ಏನು?

ಮೇ 24, 2023ರ ಕನ್ನಡ ಪ್ರಭ ವರದಿಯಲ್ಲೂ “ಕರೆಂಟ್‌ ಬಿಲ್ಲ ಕಟ್ಟಲು ಹೇಳಿದ್ದಕ್ಕೆ ಸಿಬ್ಬಂದಿಗೆ ಚಪ್ಪಲಿಯಿಂದ ಏಟು” ಸುದ್ದಿಯಲ್ಲಿ “ವಿದ್ಯುತ್‌ ಬಿಲ್‌ ಬಾಕಿ ವಸೂಲಾತಿಗೆ ಹೋಗಿದ್ದ ಜೆಸ್ಕಾಂ ಸಿಬ್ಬಂದಿಗೆ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಥಳಿಸಿರುವ ಘಟನೆ ಕೊಪ್ಪಳ ತಾಲೂಕಿನ ಕುಕನಪಳ್ಳಿ ಗ್ರಾಮದಲ್ಲಿ ನಡೆದಿದೆ. ನಾನು ಕರೆಂಟ್‌ ಬಿಲ್ಲ ಕಟ್ಟವುದಿಲ್ಲ ಎಂದು ಕೂಗಾಡುತ್ತಾ ಗರಾಮದ ಚಂದ್ರಶೇಖರ ಹಿರೇಮಠ ಎಂಬಾತ ಸಿಬ್ಬಂದಿಯನ್ನು ಎಳೆದಾಡಿ ಕೆನ್ನೆಗೆ ಬಾರಿಸಿದ್ದಾನೆ” ಎಂದಿದೆ.

ಈ ಘಟನೆ ಕುರಿತ ಹೆಚ್ಚಿನ ಮಾಹಿತಿಗೆ ಕನ್ನಡಪ್ರಭದ ಕೊಪ್ಪಳ ಜಿಲ್ಲಾ ಹಿರಿಯ ವರದಿಗಾರ ಸೋಮರೆಡ್ಡಿ ಅಳವಂಡಿ ಅವರನ್ನು ಸಂಪರ್ಕಿಸಲಾಗಿದ್ದು, “ಕಾಂಗ್ರೆಸ್‌ ಗ್ಯಾರೆಂಟಿ ಸ್ಕೀಮ್‌ಗೆ ಮತ್ತು ಈ ಘಟನೆಗೆ ಯಾವುದೇ ಸಂಬಂಧ ಇಲ್ಲದೆ ಇರುವುದು ತಿಳಿದುಬಂದಿದೆ. ಆರೋಪಿ ವ್ಯಕ್ತಿ 9000 ರೂ.ಗಳಷ್ಟು ವಿದ್ಯುತ್‌ ಬಿಲ್‌ ಕಟ್ಟದೇ ಬಾಕಿ ಉಳಿಸಿಕೊಂಡಿದ್ದು, ಮತ್ತೆ ಅಕ್ರಮ ಸಂಪರ್ಕ ಪಡೆದುಕೊಂಡಿದ್ದ. ಇದನ್ನು ಕೇಳಲು ಹೋದಾಗ ಆತ ಸಿಬ್ಬಂದಿಗೆ ಥಳಿಸಿದ್ದಾನೆ” ಎಂದು ತಿಳಿಸಿದ್ದಾರೆ.  

ಇದೇ ಪ್ರಕರಣದ ಬಗ್ಗೆ ಕೊಪ್ಪಳ ಎಸ್‌ಪಿ ಯಶೋದಾ ವಂಟಗೋಡಿ ಅವರು ಸ್ಪಷ್ಟೀಕರಣ ನೀಡಿದ ವೀಡಿಯೋವನ್ನು ಸೌತ್ ಫಸ್ಟ್‌ ವೆಬ್‌ನ ಅನುಶಾ ರವಿ ಸೂದ್‌ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಎಸ್‌ಪಿ ಅವರು “ಆರೋಪಿ ವ್ಯಕ್ತಿ 9000 ರೂ.ಗಳಷ್ಟು ವಿದ್ಯುತ್‌ ಬಿಲ್‌ ಕಟ್ಟದೇ ಬಾಕಿ ಉಳಿಸಿಕೊಂಡಿದ್ದು, ಮತ್ತೆ ಅಕ್ರಮ ಸಂಪರ್ಕ ಪಡೆದುಕೊಂಡಿದ್ದ. ಇದನ್ನು ಕೇಳಲು ಹೋದಾಗ ಆತ ಸಿಬ್ಬಂದಿಗೆ ಥಳಿಸಿದ್ದಾನೆ” ಎಂದು ಹೇಳಿರುವುದು ಕಂಡುಬಂದಿದೆ.

ವಿದ್ಯುತ್ ಇಲಾಖೆ ಸಿಬ್ಬಂದಿಗೆ ಥಳಿಸಿದ ವಿಚಾರದಲ್ಲಿ, ಕಾಂಗ್ರೆಸ್‌ ಗ್ಯಾರೆಂಟಿ ಸ್ಕೀಂ ವಿಚಾರ ಪ್ರಸ್ತಾಪವಾಗಿಲ್ಲ. ಆದರೆ ಈ ವೀಡಿಯೋವನ್ನು ಕಾಂಗ್ರೆಸ್‌ನ ಉಚಿತ ವಿದ್ಯುತ್‌ ಗ್ಯಾರೆಂಟಿ ವಿಚಾರದೊಂದಿಗೆ ಸಮೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುವುದು ಕಂಡುಬಂದಿದೆ.

Also read: ಮಣಿಪುರದಲ್ಲಿ ಪ್ರಪಾತಕ್ಕೆ ಬಸ್‌ ಬಿದ್ದ ಬಸ್‌, ವೈರಲ್‌ ವೀಡಿಯೋ ನಿಜವೇ?

Conclusion

ಈ ಸತ್ಯಶೋಧನೆಯ ಪ್ರಕಾರ, ಕಾಂಗ್ರೆಸ್‌ ಗ್ಯಾರೆಂಟಿ ಸ್ಕೀಂ “ಉಚಿತ ವಿದ್ಯುತ್” ವಿಚಾರದಲ್ಲಿ ವಿದ್ಯುತ್‌ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನುವುದು ಭಾಗಶಃ ತಪ್ಪಾಗಿದೆ.

Result: Partly False

Our Sources

Report By Deccan Herald, Dated: May 24, 2023

Report By Prajavani, Dated: May 24, 2023

Report By Kannadaprabha, Dated: May 24, 2023

Conversation with Somashekhara Reddy Alavandim Senior Correspondent Kannadaprabha Newspaper Koppal


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.