ಅಮೆರಿಕದ ಶ್ವೇತಭವನದಲ್ಲಿ ಪಾಕಿಸ್ತಾನೀಯರು ಆಹಾರಕ್ಕಾಗಿ ನೂಕುನುಗ್ಗಲು ಮಾಡಿದ ದೃಶ್ಯ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಅಮೇರಿಕಾ ದ ಶ್ವೇತ ಭವನ ದಲ್ಲಿ ಪಾಕಿಸ್ತಾನ ದ ಪ್ರತಿನಿಧಿಗಳು” ಎಂದಿದೆ.
ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರನ್ನು ಔತಣಕ್ಕೆ ಆಹ್ವಾನಿಸಿದ್ದು, ಈ ಹಿನ್ನೆಲೆಯಲ್ಲಿ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡಿದೆ.
ಈ ಕುರಿತು ನ್ಯೂಸ್ ಚೆಕರ್ ತನಿಖೆ ಮಾಡಲು ಮುಂದಾಗಿದ್ದು, ಇದು ಲಾಹೋರ್ ನಲ್ಲಿ ನಡೆದ ವಿದ್ಯಮಾನವಾಗಿದ್ದು ಶ್ವೇತಭವನದಲ್ಲಿ ನಡೆದಿದೆ ಎನ್ನುವುದು ದಾರಿತಪ್ಪಿಸುವ ಹೇಳಿಕೆಯಾಗಿದೆ ಎಂದು ಕಂಡುಕೊಂಡಿದೆ.
Also Read: ಇರಾನ್ ಯುದ್ಧ ನಿಲ್ಲಿಸುವಂತೆ ಇಸ್ರೇಲ್ ಸೈನಿಕ ಬೇಡಿದ್ದಾನೆ ಎಂದ ವೀಡಿಯೋ ಎಐ ಕರಾಮತ್ತು!

Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಇದರಲ್ಲಿರುವ ಜನರು ಏಷ್ಯನ್ನರ ರೀತಿ ಕಂಡುಬಂದಿದ್ದಾರೆ ಜೊತೆಗೆ ಊಟದ ಹಾಲ್ ನ ಹಿಂಭಾಗದಲ್ಲಿ ಫೋಟೋಗಳಿದ್ದು ಅದು ಶ್ವೇತಭವನದ ರೀತಿ ಕಾಣಿಸದೇ ಇರುವುದು ಸಂಶಯಾಸ್ಪದವಾಗಿದೆ.

ತನಿಖೆಯ ಭಾಗವಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದು, ಫಲಿತಾಂಶಗಳು ಲಭ್ಯವಾಗಿವೆ.
ಅಕ್ಟೋಬರ್ 1, 2020ರಂದು ಉಸ್ಮಾನ್ ರಾಝಾ ಜಮೀಲ್ ಎಂಬ ಎಕ್ಸ್ ಬಳಕೆದಾರರು ಪೋಸ್ಟ್ ಒಂದನ್ನು ಮಾಡಿದ್ದು, ಅದರಲ್ಲಿ “ಲಾಹೋರ್ ಬಾರ್ ಚುನಾವಣಾ ಸಭೆಗೆ ಜಿಂದಾಬಾದ್.. ಮೊದಲು ಮಾಂಸಕ್ಕಾಗಿ ಗುದ್ದಾಡೋಣ – ನಾವು ತಳ್ಳುವಾಗ ನಮ್ಮ ಮುಖವಾಡಗಳನ್ನು ದೂರವಿಡೋಣ ಮತ್ತು ಮುಂದಿನ ಪೀಳಿಗೆಯ ವಕೀಲರಿಗೆ ಅವರ ಸಮಯ ಮುಂದೆ ಏನಿದೆ ಎಂಬುದನ್ನು ತೋರಿಸೋಣ.” ಎಂದಿದೆ. ಈ ಹೇಳಿಕೆಯೊಂದಿಗೆ ಲಗತ್ತಿಸಲಾದ ವೀಡಿಯೋ ವೈರಲ್ ವೀಡಿಯೋವನ್ನು ಹೋಲುವುದನ್ನು ಗಮನಿಸಿದ್ದೇವೆ.

ಅನಂತರ ನಾವು ಈ ಕುರಿತು ಕೀವರ್ಡ್ ಸರ್ಚ್ ಮಾಡಿದ್ದೇವೆ. ಈ ವೇಳೆ ಇಟಿ ಟೈಮ್ಸ್ ಲೈಫ್ ಸ್ಟೈಲ್ 2023 ಸೆಪ್ಟೆಂಬರ್ 29ರಂದು ಫೇಸ್ಬುಕ್ ನಲ್ಲಿ ಮಾಡಿರುವ ಪೋಸ್ಟ್ ನೋಡಿದ್ದೇವೆ. ಈ ಪೋಸ್ಟ್ ವಿವರಣೆಯಲ್ಲಿ, “ಇದು 2020 ರಿಂದ ವೈರಲ್ ಆಗಿರುವ ಹಳೆಯ ವೀಡಿಯೋ. 2020 ರಲ್ಲಿ ಲಾಹೋರ್ ಬಾರ್ ಚುನಾವಣೆಯ ನಂತರ ಜನರು ತಮ್ಮ ಆಹಾರದ ಪಾಲನ್ನು ಪಡೆಯಲು ನೂಕುನುಗ್ಗಲು ಉಂಟುಮಾಡಿರುವುದನ್ನು ಇದು ತೋರಿಸುತ್ತದೆ.” ಎಂದಿದೆ.
ಇದೇ ರೀತಿ ವಿವಿಧ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ವೀಡಿಯೋವನ್ನು 2020ರ ವೇಳೆಗೆ ಹಂಚಿಕೊಂಡಿದ್ದು, ಲಾಹೋರ್ ಬಾರ್ ಎಲೆಕ್ಷನ್ ಸಂದರ್ಭದ್ದು ಎಂದು ಹೇಳಿಕೊಂಡಿದ್ದಾರೆ.
ಇಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ನೋಡಬಹುದು.
Also Read: 2ನೇ ಮತ್ತು 4ನೇ ಶನಿವಾರ ಮತ್ತೆ ಕೆಲಸದ ದಿನಗಳಾಗಿ, ಸರ್ಕಾರಿ ರಜೆ ರದ್ದು ಮಾಡಲಾಗಿದೆಯೇ?
Conclusion
ಆದ್ದರಿಂದ ಈ ತನಿಖೆಯ ಪ್ರಕಾರ, ಇದು ಶ್ವೇತಭವನದಲ್ಲಿ ಪಾಕಿಸ್ತಾನೀಯರು ಆಹಾರಕ್ಕಾಗಿ ನೂಕುನುಗ್ಗಲಾದ ವಿದ್ಯಮಾನವಲ್ಲ ಬದಲಾಗಿ ಇದು ಲಾಹೋರ್ ಬಾರ್ ಕೌನ್ಸಿಲ್ ಚುನಾವಣೆ ಸಂದರ್ಭದ್ದಾಗಿದ್ದು, ದಾರಿತಪ್ಪಿಸುವ ಹೇಳಿಕೆ ಎಂದು ಕಂಡುಬಂದಿದೆ.
Our Sources
X Post By Usman Raza Jamil, Dated: October 1, 2020
Facebook Post By ET Times Life, Dated: September 29, 2023