Fact check: ಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆಯೇ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಮಂಗಳೂರು ಕಾಲೇಜಿನಲ್ಲಿ ಕಾಮಗಾರಿ ವೇಳೆ ನಿಧಿ ಪತ್ತೆ

Claim
ಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆ

Fact
ಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿಲ್ಲ. ಈ ವೀಡಿಯೋ ಟರ್ಕಿ ಮೂಲದ್ದು ಮತ್ತು ಸಂಪಾದಿಸಿದ ವೀಡಿಯೋ

ಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ಹರಿದಾಡುತ್ತಿದೆ.

ಫೇಸ್‌ಬುಕ್‌ನಲ್ಲಿ ಕಂಡುಬಂದಿರುವ ಈ ಕ್ಲೇಮ್‌ನಲ್ಲಿ “ಮಂಗಳೂರು ಸೆಂಟ್ರಲ್ ಕಾಲೇಜ್ ಕಾಮಗಾರಿಯ ವೇಳೆ ಸಿಕ್ಕಿರುವ ನಿಧಿ!” ಎಂದು ಬರೆಯಲಾಗಿದ್ದು, ವ್ಯಕ್ತಿಯೊಬ್ಬ ಪುರಾತನವಾದ ನಿಧಿ ಹೊಂದಿದ ಮಡಕೆಯನ್ನು ತೆಗೆಯುತ್ತಿರುವ ದೃಶ್ಯ ಇದೆ. ‘ಉತ್ಖನನ’ದ ಸಮಯದಲ್ಲಿ ಒಬ್ಬ ವ್ಯಕ್ತಿ ಮುಚ್ಚಿದ ಪಾತ್ರೆಯನ್ನು ತೆರೆಯುವುದರೊಂದಿಗೆ ಮತ್ತು ಅದರೊಳಗೆ ನಿಧಿಯನ್ನು ರಕ್ಷಿಸಿದ ಹಾವು ಇದೆ ಎಂಬ ದೃಶ್ಯದೊಂದಿಗೆ ವೀಡಿಯೋ ಆರಂಭವಾಗುತ್ತದೆ. ಇದೇ ಮಡಕೆಯಲ್ಲಿ ಸತ್ತ ಕಪ್ಪೆ ಕೂಡ ಕಾಣುತ್ತದೆ. ಹಾವನ್ನು ಅದರಿಂದ ತೆಗೆದ ನಂತರ ಆ ವ್ಯಕ್ತಿಯು ಚಿನ್ನದ ಸರ ಮತ್ತು ಚಿನ್ನದ ನಾಣ್ಯಗಳನ್ನು ತೆಗೆಯುತ್ತಾನೆ.

ಸತ್ಯ ಪರಿಶೀಲನೆಯಲ್ಲಿ ಇದು ಒಂದು ಸುಳ್ಳು ವೀಡಿಯೋ ಎಂದು ಕಂಡುಬಂದಿದೆ.

ಇದೇ ರೀತಿಯ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

Fact check/ Verification

ಮಂಗಳೂರಿನಲ್ಲಿ ಚಿನ್ನದ ನಾಣ್ಯಗಳು ತುಂಬಿದ ಯಾವುದೇ ಪಾತ್ರೆ ಪತ್ತೆಯಾಗಿದೆಯೇ ಎಂಬುದನ್ನು ಗೂಗಲ್‌ ಸರ್ಚ್ ಮೂಲಕ ಪರಿಶೀಲಿಸಿದ್ದು ಅಂತಹ ಯಾವುದೇ ಪ್ರಕರಣ ನಡೆದ ಬಗ್ಗೆ ಫಲಿತಾಂಶಗಳು ಲಭ್ಯವಾಗಿಲ್ಲ. ಇದರೊಂದಿಗೆ ಮಂಗಳೂರಿನಲ್ಲಿ ಸೆಂಟ್ರಲ್‌ ಕಾಲೇಜು ಎನ್ನುವ ಹೆಸರಿನಲ್ಲಿ ಯಾವುದೇ ಕಾಲೇಜು ಇಲ್ಲದಿರುವುದು ಕಂಡುಬಂದಿದೆ.

ಇದನ್ನು ಅನುಸರಿಸಿ, ನಾವು ವೀಡಿಯೋ ಬಗ್ಗೆ ಫೇಸ್‌ಬುಕ್‌ನಲ್ಲಿ ವ್ಯಾಪಕ ಶೋಧ ನಡೆಸಿದ್ದು ಈ ವೇಳೆ “Watch more original videos by Hazine avcısı” ಎಂಬ ಸಂದೇಶ ಕಂಡುಬಂದಿದೆ.

ಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆಯೇ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು

ಅಲ್ಲಿದ್ದ “ಗೋ” ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ಬಳಿಕ “ಹಜೈನ್ ಅವಾಸೆ” ಎನ್ನುವ ಫೇಸ್ಬುಕ್ ಪುಟ ತೆರೆದುಕೊಂಡಿದೆ. ಈ ಪುಟದ ಬಗ್ಗೆ ಹೀಗೆ ಹೇಳಲಾಗಿದೆ. “ನೀವು ಟರ್ಕಿಯ ಗಡಿಯೊಳಗೆ ವಾಸಿಸುತ್ತಿದ್ದರೆ; ಅನುಮತಿಯಿಲ್ಲದೆ ಸಂಶೋಧನೆ, ಉತ್ಖನನ ಮತ್ತು ಉತ್ತಮ ಕೆಲಸವನ್ನು ನಡೆಸುವವರನ್ನು ಸಾಂಸ್ಕೃತಿಕ ಮತ್ತು ನೈಸರ್ಗಿಕ ಸ್ವತ್ತುಗಳ ರಕ್ಷಣೆಗೆ ಸಂಬಂಧಿಸಿದ ಕಾನೂನು ಸಂಖ್ಯೆ 74 ರ ಆರ್ಟಿಕಲ್ 5879 ರ ನಿಬಂಧನೆಗೆ ಅನುಗುಣವಾಗಿ ಶಿಕ್ಷಿಸಲಾಗುವುದು.” (ಟರ್ಕಿ ಭಾಷೆಯಿಂದ ಭಾಷಾಂತರಿಸಲಾಗಿದೆ)”

ಆ ಬಳಿಕ ನಾವು ವಿಡಿಯೋದ ಮೂಲದ ಬಗ್ಗೆ ಪರಿಶೀಲನೆಯನ್ನು ನಡೆಸಿದ್ದು, ಇದೇ ಪೇಜ್‌ನ ವೀಡಿಯೋ ವಿಭಾಗದಲ್ಲಿ “ಮೋಸ್ಟ್‌ ಪಾಪ್ಯುಲರ್‌” ವೀಡಿಯೋ ಅಡಿಯಲ್ಲಿ ವೈರಲ್‌ ವೀಡಿಯೋ ಪತ್ತೆಯಾಗಿದೆ.

Also Read: ಸತ್ತರೆ ಉಚಿತವಾಗಿ ಶವ ಸಂಸ್ಕಾರ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆಯೇ, ನಿಜ ಏನು?

ಇದರೊಂದಿಗೆ ನಾವು ಹಝೈನ್ ಅವಾಸೆ ಫೇಸ್ಬುಕ್ ಪುಟದಲ್ಲಿ ಪರಿಶೀಲನೆ ನಡೆಸಿದ್ದು, ವೈರಲ್‌ ವೀಡಿಯೋದಲ್ಲಿ ಕಂಡುಬಂದಿರುವ ಚಿನ್ನದ ಸರವನ್ನು ಬೇರೆ ಬೇರೆ ದಿನಾಂಕಗಳಂದು ಬೇರೆ ಬೇರೆ ಸ್ಥಳಗಳಲ್ಲಿ “ನಿಧಿ ಬೇಟೆ” ಹೆಸರಿನಲ್ಲಿ ತೆಗೆದಿದ್ದನ್ನು ಪತ್ತೆ ಹಚ್ಚಲಾಗಿದೆ. ಉದಾಹರಣೆಗೆ, ಸೆಪ್ಟೆಂಬರ್ 6, 2022 ರ ಪೋಸ್ಟ್‌ ನಲ್ಲಿ “I entered a fearful cave and found treasure” ಶೀರ್ಷಿಕೆಯಡಿಯಲ್ಲಿ ವೀಡಿಯೋ, ಸೆಪ್ಟೆಂಬರ್ 20, 2022 “real treasure discovered” ಶೀರ್ಷಿಕೆಯ ಪೋಸ್ಟ್ ನಲ್ಲಿ ವೈರಲ್‌ ವೀಡಿಯೋದಲ್ಲಿ ಕಂಡುಬಂದಿರುವ ರೀತಿಯ ಸರವನ್ನು ತೆಗೆಯುವುದು ಕಂಡುಬಂದಿದೆ.

ಇದಲ್ಲದೆ, ನಾವು ಹಾಜಿನ್ ಅವ್ಸೆ ಅವರ ದೃಢೀಕೃತ ಯೂಟ್ಯೂಬ್ ಚಾನೆಲ್ ಅನ್ನು ಹುಡುಕಿದ್ದು, ವೈರಲ್ ವೀಡಿಯೊದ ಸುದೀರ್ಘ ಆವೃತ್ತಿ ಕಂಡುಬಂದಿದೆ. ಸಂಪೂರ್ಣ ‘ಉತ್ಖನನ’ ಪ್ರಕ್ರಿಯೆಯನ್ನು ಇದು ಹೊಂದಿದ್ದು, ಇದನ್ನು ಜುಲೈ 16, 2022 ರಂದು ಅಪ್ಲೋಡ್ ಮಾಡಲಾಗಿದೆ. ಇದರಲ್ಲಿ “moment of finding treasure with scoop” ಎಂಬ ಶೀರ್ಷಿಕೆಯನ್ನು ಕೊಡಲಾಗಿದೆ.

ವಿಶೇಷವೆಂದರೆ, ವೀಡಿಯೊದ ವಿವರಣೆಯನ್ನು ಇಂಗ್ಲಿಷ್, ಟರ್ಕಿಶ್ ಮತ್ತು ಜಾರ್ಜಿಯನ್ ಎಂಬ ಮೂರು ಭಾಷೆಗಳಲ್ಲಿ ಬರೆಯಲಾಗಿದೆ. ಇದರಲ್ಲಿ ಟರ್ಕಿ ಭಾಷೆಯಲ್ಲಿ ಬರೆದ ವಿವರಣೆಯು “ಗಮನಿಸಿ” ಎಂದು ಭಾಷಾಂತರಿಸುತ್ತದೆ. ಇದರೊಂದಿಗೆ “ನೀವು ಟರ್ಕಿಯಲ್ಲಿ ವಾಸಿಸುತ್ತಿದ್ದರೆ, ನೀವು ಇದನ್ನು ಓದಲು ಮತ್ತು ನಿಯಮಗಳನ್ನು ಅನುಸರಿಸಲು ನಾನು ಬಯಸುತ್ತೇನೆ. !!ಪ್ರಮುಖ!! ಅನುಮತಿಯಿಲ್ಲದೆ ಸಂಶೋಧನೆ, ಉತ್ಖನನ ಮತ್ತು ಧ್ವನಿ ನೀಡುವವರನ್ನು ಸಾಂಸ್ಕೃತಿಕ ಮತ್ತು ನೈಸರ್ಗಿಕ ಸ್ವತ್ತುಗಳ ರಕ್ಷಣೆಗೆ ಸಂಬಂಧಿಸಿದ ಕಾನೂನು ಸಂಖ್ಯೆ 74 ರ ಆರ್ಟಿಕಲ್ 5879 ರ ನಿಬಂಧನೆಗೆ ಅನುಗುಣವಾಗಿ ಶಿಕ್ಷಿಸಲಾಗುವುದು. ಈ ನಿಬಂಧನೆಯ ಪ್ರಕಾರ; “ಸಾಂಸ್ಕೃತಿಕ ಸ್ವತ್ತುಗಳನ್ನು ಹುಡುಕುವ ಸಲುವಾಗಿ ಅನುಮತಿಯಿಲ್ಲದೆ ಅಗೆಯುವ ಅಥವಾ ಅಭ್ಯಾಸ ಮಾಡುವ ಯಾರಿಗಾದರೂ ಎರಡರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. (ಗಮನಿಸಿ: ಪ್ರದರ್ಶಿಸಲಾದ ಎಲ್ಲಾ ದೃಶ್ಯಗಳನ್ನು ಸಂಪಾದಿಸಲಾಗಿದೆ)” ಎಂದಿದೆ.

ಇನ್ನು ಜಾರ್ಜಿಯನ್‌ ಭಾಷೆಯ ಅನುವಾದದ ಪ್ರಕಾರ “ಗಮನಿಸಿ. ಇದೆಲ್ಲವೂ ಸಿದ್ಧವಾಗಿದೆ. ಇದು ನಿಜವಲ್ಲ. ಎಲ್ಲಾ ವೀಡಿಯೊಗಳು ಕಾಲ್ಪನಿಕವಾಗಿವೆ. ಜನರನ್ನು ರಂಜಿಸುವುದು ನಮ್ಮ ಗುರಿಯಾಗಿದೆ.”

ಇದಲ್ಲದೆ, ಮೇ 21, 2022 ರಂದು ಅಪ್ಲೋಡ್ ಮಾಡಿದ ವೀಡಿಯೊವನ್ನು ನಾವು ಪತ್ತೆ ಮಾಡಿದ್ದು, “I took the chest full of gold with a ladle from 3 meters” ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಗಿದೆ. ವೀಡಿಯೋದ 16 ನಿಮಿಷಗಳ ಪ್ರದರ್ಶನ ನಂತರ ವೈರಲ್‌ ದೃಶ್ಯದಲ್ಲಿ ಕಂಡುಬರುವಂತೆ ಓರ್ವ ವ್ಯಕ್ತಿ ಅದೇ ರೀತಿಯ ಪಾತ್ರೆಯನ್ನು ಅಗೆದು ತೆಗೆಯುವುದು ಕಾಣುತ್ತದೆ. ಇದರೊಂದಿಗೆ ಈ ವೀಡಿಯೋದ ವಿವರಣೆ ಕೂಡ ಈ ಹಿಂದೆ ನೋಡಿದ ವೀಡಿಯೋ ವಿವರಣೆಯಂತೇ ಇರುವುದು ಪತ್ತೆಯಾಗಿದೆ.

Conclusion

ಈ ಸತ್ಯಶೋಧನೆಯ ಪ್ರಕಾರ ಮಂಗಳೂರು ಸೆಂಟ್ರಲ್ ಕಾಲೇಜ್ ಕಾಮಗಾರಿಯ ನಿಧಿ ಸಿಕ್ಕಿದೆ ಎನ್ನುವ ವೈರಲ್‌ ವೀಡಿಯೋ ಸುಳ್ಳಾಗಿದೆ.

Result: False

Our Sources

Facebook Page Of Hazine avcısı

YouTube Channel Of Hazine avcısı

(ಈ ಲೇಖನವು ಮೂಲತಃ ನ್ಯೂಸ್‌ಚೆಕರ್‌ ಇಂಗ್ಲಿಷ್‌ನಲ್ಲಿ ವಸುಧಾ ಬೆರಿ ಅವರಿಂದ ಪ್ರಕಟಿಸಲ್ಪಟ್ಟಿದೆ. ಅದನ್ನು ಇಲ್ಲಿ ಓದಬಹುದು)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.