Fact Check: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿ ಪಾಕ್ ಕಂಪನಿ ಉದ್ಯೋಗಿಗಳ ಪಟ್ಟಿ ಕೋಮು ಹೇಳಿಕೆಯೊಂದಿಗೆ ವೈರಲ್

ತಿರುಪತಿ ಲಡ್ಡು, ಪಾಕ್‌ ಕಂಪೆನಿ, ಕೋಮು ಹೇಳಿಕೆ, ತುಪ್ಪ,

Claim
ತಿರುಪತಿ ದೇವಸ್ಥಾನಕ್ಕೆ ಲಡ್ಡು ಪ್ರಸಾದಕ್ಕೆ ತುಪ್ಪ ಸರಬರಾಜು ಮಾಡುವ ಕಂಪನಿಯ ಆಡಳಿತದಲ್ಲಿರುವ ಎಲ್ಲರೂ ಮುಸ್ಲಿಮರು

Fact
ವೈರಲ್ ಸ್ಕ್ರೀನ್‌ಶಾಟ್‌ನಲ್ಲಿರುವ ಹೆಸರು ಪಾಕಿಸ್ತಾನದ ಕಂಪನಿ ಎಆರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ಉನ್ನತ ಉದ್ಯೋಗಿಗಳ ಪಟ್ಟಿಯಾಗಿದೆ

ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿ ಸ್ಕ್ರೀನ್‌ಶಾಟ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಇದರ ಪ್ರಕಾರ, ದೇಗುಲಕ್ಕೆ ಪೂರೈಸಿದ ತುಪ್ಪ ಉತ್ಪಾದಿಸಿದ ಕಂಪೆನಿಯ ಉದ್ಯೋಗಗಿಗಳು ಮುಸ್ಲಿಮರಾಗಿದ್ದು, ಇದರ ಉತ್ಪನ್ನದಲ್ಲಿ ಪ್ರಾಣಿಗಳ ಕೊಬ್ಬು, ಹಸುವಿನ, ಹಂದಿಯ ಕೊಬ್ಬುಗಳೂ ಇದ್ದವು ಎಂಬುದನ್ನು ದೃಢಪಡಿಸಲಾಗಿದೆ ಎಂಬಂತೆ ಹೇಳಲಾಗಿದೆ.

ನ್ಯೂಸ್ ಚೆಕರ್ ಈ ಬಗ್ಗೆ ತನಿಖೆ ನಡೆಸಿದಾಗ, ವೈರಲ್ ಸ್ಕ್ರೀನ್‌ಶಾಟ್ ನಲ್ಲಿದ್ದ ತಮಿಳುನಾಡಿನ ಎಆರ್ ಡೈರಿ ಫುಡ್ಸ್ ಕಂಪನಿಯ ಆಡಳಿತದಲ್ಲಿರುವ ವ್ಯಕ್ತಿಗಳು ಎಂದ ಪಟ್ಟಿ ನಿಜವಾದ್ದಲ್ಲ. ಅದು ಪಾಕಿಸ್ತಾನದ ಎಆರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ಮಂಡಳಿಯ ಪಟ್ಟಿ ಎಂದು ಕಂಡುಕೊಳ್ಳಲಾಗಿದೆ. 

ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದಕ್ಕೆ ಬಳಸಿದ ತುಪ್ಪದಲ್ಲಿ ಪ್ರಾಣಿ ಜನ್ಯ ಕೊಬ್ಬು ಬೆರೆಸಿದ ವಿಚಾರ ತೀವ್ರ ವಿವಾದ ಹುಟ್ಟು ಹಾಕಿದೆ. ಕಳೆದ 50 ವರ್ಷಗಳಿಂದ ಕರ್ನಾಟಕ ಸಹಕಾರಿ ಹಾಲು ಒಕ್ಕೂಟವು ತಿರುಪತಿ ದೇವಸ್ಥಾನ ಟ್ರಸ್ಟ್‌ಗೆ ಅಗ್ಗದ ದರದಲ್ಲಿ ತುಪ್ಪವನ್ನು ಒದಗಿಸುತ್ತಿತ್ತು. ಪ್ರತಿ ಆರು ತಿಂಗಳಿಗೊಮ್ಮೆ 1400 ಟನ್ ತುಪ್ಪವನ್ನು ಖರೀದಿ ಮಾಡಲಾಗುತ್ತಿತ್ತು. 2023 ರ ಜುಲೈನಲ್ಲಿ ಕಡಿಮೆ ದರದಲ್ಲಿ ತುಪ್ಪವನ್ನು ಪೂರೈಸಲು ಕರ್ನಾಟಕ ಸಹಕಾರಿ ಹಾಲು ಒಕ್ಕೂಟವನ್ನು ಟ್ರಸ್ಟ್ ಕೇಳಿಕೊಂಡಿತ್ತು.

ಆದರೆ ಸಹಕಾರಿ ಒಕ್ಕೂಟವು ಕಡಿಮೆ ದರದಲ್ಲಿ ತುಪ್ಪ ನೀಡಲು ನಿರಾಕರಿಸಿದ್ದು, ಆ ಬಳಿಕ ಹಿಂದಿನ ಜಗನ್‌ ಸರ್ಕಾರದ ಅವಧಿಯಲ್ಲಿ ದೇಗುಲ ಟ್ರಸ್ಟ್ ಬೇರೆ 5 ಸಂಸ್ಥೆಗಳಿಗೆ ತುಪ್ಪ ಪೂರೈಸುವ ಟೆಂಡರನ್ನು ನೀಡಿತ್ತು. ಇವುಗಳಲ್ಲಿ ತಮಿಳುನಾಡಿನ ದಿಂಡಿಗಲ್ ಮೂಲದ ಎಆರ್ ಡೈರಿ ಫುಡ್ಸ್ ಕೂಡ ಒಂದಾಗಿತ್ತು. ಜೂನ್ 2024 ರಲ್ಲಿ, ಆಂಧ್ರಪ್ರದೇಶದಲ್ಲಿ ಸರ್ಕಾರ ಬದಲಾಯಿತು ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಅಧಿಕಾರಕ್ಕೆ ಬಂದ ನಂತರ, ಟಿಡಿಪಿ ಸರ್ಕಾರವು ಐಎಎಸ್ ಅಧಿಕಾರಿ ಜೆ ಶ್ಯಾಮಲಾ ರಾವ್ ಅವರನ್ನು ತಿರುಮಲ ತಿರುಪತಿ ದೇವಸ್ಥಾನದ ಹೊಸ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಮಾಡಿದೆ. ಅಧಿಕಾರ ವಹಿಸಿಕೊಂಡ ನಂತರ ಅವರು ಲಡ್ಡುಗಳ ಗುಣಮಟ್ಟದ ಪರೀಕ್ಷೆಗೆ ಆದೇಶಿಸಿದ್ದರು ಮತ್ತು ಪ್ರಸಾದಕ್ಕೆ ಬಳಸಲಾಗಿದ್ದ ತುಪ್ಪದ ಮಾದರಿಗಳನ್ನು ಪರೀಕ್ಷೆಗಾಗಿ ಗುಜರಾತ್‌ನ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ ಕಳುಹಿಸಲಾಗಿತ್ತು. ಜುಲೈನಲ್ಲಿ ಇದರ ವರದಿ ಬಂದಿದ್ದು, ಅದರಲ್ಲಿ ಪ್ರಾಣಿಗಳ ಕೊಬ್ಬು ಇದ್ದುದನ್ನು ಹೇಳಲಾಗಿತ್ತು. ಆ ನಂತರ ಟ್ರಸ್ಟ್ ದಿಂಡಿಗಲ್ ಮೂಲದ ಎಆರ್ ಡೈರಿ ಫುಡ್ಸ್ ಕಳುಹಿಸಿದ್ದ ತುಪ್ಪದ ಸ್ಟಾಕ್ ಅನ್ನು ಹಿಂದಿರುಗಿಸಿತು ಮತ್ತು ಅದನ್ನು ಕಪ್ಪು ಪಟ್ಟಿಗೆ ಸೇರಿಸಿತು.  

ವೈರಲ್‌ ಕ್ಲೇಮಿನಲ್ಲಿ ಹೇಳಿರುವಂತೆ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ತುಪ್ಪವನ್ನು ಪೂರೈಸುವ ತಮಿಳುನಾಡು ಕಂಪನಿಯ ಆಡಳಿತ ಮಂಡಳಿಯಲ್ಲಿರುವವರ ಹೆಸರು ಈ ಕೆಳಗಿನಂತಿವೆ. ಉಲ್ಲೇಖಿಸಲಾದ ಹೆಸರುಗಳಲ್ಲಿ ಎಸ್‌ಎಂ ನಸೀಮ್ ಜಾವೇದ್, ಮೊಹಮ್ಮದ್ ನಸೀಮ್, ಮೊಹಮ್ಮದ್ ನೋಮನ್, ರಾಹೀಲ್ ರೆಹಮಾನ್, ಲಿಯೋನಿಡಾಸ್ ಶೇಖ್ ಸೇರಿದ್ದಾರೆ ಎಂದಿದೆ.

ಈ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವ ಸಂದರ್ಭದಲ್ಲಿ ಹೀಗೆ ಹೇಳಲಾಗಿದೆ. “ಇದು ಅವರ ಹೆಸರುಗಳು.. ತಿರುಪತಿ ಬಾಲಾಜಿಗೆ ಯಾರು ತುಪ್ಪ ಕಳುಹಿಸುತ್ತಿದ್ದರು.. ಎಷ್ಟೇ ದೊಡ್ಡ ಹುದ್ದೆಯಾದರೂ… ಅವರು ಹಿಂದೂ ಧರ್ಮವನ್ನು ಯಾವುದೇ ರೀತಿಯಲ್ಲಿ ಭ್ರಷ್ಟಗೊಳಿಸುವ ಮೂಲಕ ದುರ್ಬಲಗೊಳಿಸಲು ಬಯಸುತ್ತಾರೆ … ಅದೇನೆಂದರೆ ನಮ್ಮ ಧರ್ಮ ಕೆಡದಿದ್ದರೆ ನಾವೇ ಶಕ್ತಿವಂತರು ಎಂದು ನಂಬುತ್ತಾರೆ!!” (ಅನುವಾದಿಸಲಾಗಿದೆ)

Fact Check: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿ ಪಾಕ್ ಕಂಪನಿ  ಉದ್ಯೋಗಿಗಳ ಪಟ್ಟಿ ಕೋಮು ಹೇಳಿಕೆಯೊಂದಿಗೆ ವೈರಲ್
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆ

Fact Check/Verification

ಸತ್ಯಶೋಧನೆಯ ಭಾಗವಾಗಿ ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದ ಸುದ್ದಿ ವರದಿಗಳನ್ನು ನ್ಯೂಸ್‌ಚೆಕರ್ ಮೊದಲು ಪರಿಶೀಲಿಸಿದೆ. ಈ ಸಮಯದಲ್ಲಿ 21 ಸೆಪ್ಟೆಂಬರ್ 2024 ರಂದು ಹಿಂದೂಸ್ತಾನ್ ಟೈಮ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡಿದ್ದೇವೆ . ಈ ವರದಿಯಲ್ಲಿ, ಜುಲೈ 2023 ರ ನಂತರ ತಿರುಪತಿ ದೇವಸ್ಥಾನಕ್ಕೆ ತುಪ್ಪ ಸರಬರಾಜು ಮಾಡುವ ಕಂಪನಿಗಳಲ್ಲಿ ತಮಿಳುನಾಡಿನ ಎಆರ್ ಡೈರಿ ಫುಡ್ಸ್ ಕಂಪನಿಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. 

ತಮಿಳುನಾಡಿನ ದಿಂಡಿಗಲ್ ಮೂಲದ ಎಆರ್ ಡೈರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು 1995 ರಲ್ಲಿ ಪ್ರಾರಂಭವಾಯಿತು ಮತ್ತು ಈ ಕಂಪನಿಯು ಮೂವರು ನಿರ್ದೇಶಕರನ್ನು ಹೊಂದಿದೆ, ಅವರ ಹೆಸರುಗಳು ರಾಜಶೇಖರನ್ ಆರ್, ಸೂರ್ಯ ಪ್ರಭಾ ಆರ್ ಮತ್ತು ಶ್ರೀನಿವಾಸ್ ಎಸ್ ಆರ್ ಎಂದು ವರದಿಯಲ್ಲಿ ತಿಳಿಸಲಾಗಿದೆ. ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಮಾಹಿತಿಯಲ್ಲಿ, ಕಂಪನಿಯು ತನ್ನ ಕಂಪನಿಯು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮಾತ್ರ ತಿರುಪತಿ ದೇವಸ್ಥಾನಕ್ಕೆ ತುಪ್ಪವನ್ನು ಕಳುಹಿಸಿದೆ ಮತ್ತು ಅದರ ಲ್ಯಾಬ್ ವರದಿಯನ್ನು ಸಹ ಈ ಅವಧಿಯಲ್ಲಿ ಕಳುಹಿಸಲಾಗಿದೆ ಎಂದು ಹೇಳಿದೆ ಎಂದು ವರದಿಯಲ್ಲಿದೆ.

ಇದಲ್ಲದೆ, 21 ಸೆಪ್ಟೆಂಬರ್ 2024 ರಂದು ಆಜ್ ತಕ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ತಿರುಮಲ ತಿರುಪತಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಜೆ ಶ್ಯಾಮಲಾ ರಾವ್ ಅವರು ಪಿಟಿಐಗೆ ನೀಡಿದ ಹೇಳಿಕೆಯಲ್ಲಿ ತಿರುಪತಿ ದೇವಸ್ಥಾನ ಮಂಡಳಿಗೆ ಐದು ತುಪ್ಪ ಪೂರೈಕೆದಾರರಿದ್ದು, ಇವರು ಪ್ರೀಮಿಯರ್ ಅಗ್ರಿ ಫುಡ್ಸ್, ಕೃಪಾರಂ ಡೈರಿ, ವೈಷ್ಣವಿ, ಶ್ರೀ ಪರಾಗ್ ಹಾಲು ಮತ್ತು ಎಆರ್ ಡೈರಿಗಳಾಗಿವೆ. ಅವುಗಳು ಪೂರೈಸುವ ತುಪ್ಪದ ಬೆಲೆ ಕೆಜಿಗೆ 320 ರಿಂದ 411 ರೂ. ಆಗಿದೆ. ಇದರಲ್ಲಿ ಎಆರ್ ಡೇರಿಯಿಂದ ಕಳುಹಿಸಲಾದ ನಾಲ್ಕು ಟ್ಯಾಂಕರ್ ತುಪ್ಪ ಗುಣಮಟ್ಟವಿಲ್ಲದಿರುವುದು ಮೊದಲ ನೋಟದಲ್ಲೇ ಕಂಡುಬಂದಿದೆ. ಆದರೆ ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ ನೋಂದಾಯಿತ ಲ್ಯಾಬ್‌ನಿಂದ ಪರೀಕ್ಷೆ ಮಾಡಿದ ನಂತರವೇ ತುಪ್ಪವನ್ನು ಪೂರೈಸಿದೆ ಎಂದು ಸ್ಪಷ್ಟಪಡಿಸಿದೆ.

Fact Check: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿ ಪಾಕ್ ಕಂಪನಿ  ಉದ್ಯೋಗಿಗಳ ಪಟ್ಟಿ ಕೋಮು ಹೇಳಿಕೆಯೊಂದಿಗೆ ವೈರಲ್

ಈಗ ನಾವು ಈ ತಮಿಳುನಾಡು ಮೂಲದ ಕಂಪನಿಯ ವೆಬ್‌ಸೈಟ್ ಅನ್ನು ಹುಡುಕಿದ್ದೇವೆ. ಈ ಸಮಯದಲ್ಲಿ, ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‌ನ ಭಾಗವಾಗಿರುವ ರಾಜ್ ಮಿಲ್ಕ್ ಹೆಸರಿನ ವೆಬ್‌ಸೈಟ್ ಕಂಡುಬಂದಿದೆ . ಈ ಕಂಪನಿಯನ್ನು 1995 ರಲ್ಲಿ ಪ್ರಾರಂಭಿಸಲಾಯಿತು ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

Fact Check: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿ ಪಾಕ್ ಕಂಪನಿ  ಉದ್ಯೋಗಿಗಳ ಪಟ್ಟಿ ಕೋಮು ಹೇಳಿಕೆಯೊಂದಿಗೆ ವೈರಲ್


ಇದಲ್ಲದೆ, ಕಂಪನಿಯು ರಾಜಶೇಖರನ್ ಆರ್, ಸೂರ್ಯ ಪ್ರಭಾ ಆರ್ ಮತ್ತು ಶ್ರೀನಿವಾಸನ್ ಎಸ್ಆರ್ ಎಂಬ ಮೂವರು ನಿರ್ದೇಶಕರನ್ನು ಹೊಂದಿದೆ ಎಂದು ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕಂಪನಿಯ ತಾಂತ್ರಿಕ ತಂಡದ ಸದಸ್ಯರ ಹೆಸರುಗಳು ಶರದ್ ಚಂದ್ರ ಬಾಸ, ಮಾಣಿಕ್ಕವಾಸಗಂ ಆರ್, ಲಕ್ಷ್ಮೀನರಸಿಂಹನ್ ಅಯ್ಯರ್ ಮತ್ತು ರಾಜದರ್ಶಿನಿ ಆರ್. ಎಂದಿದೆ. ಜೊತೆಗೆ, ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಕಂಪನಿಯ ವಿಳಾಸವನ್ನು ನಮೂದಿಸಲಾಗಿದೆ.

ಆ ನಂತರ, ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ಕಂಡುಬಂದ ಹೆಸರುಗಳ ಬಗ್ಗೆ, ಕಂಪೆನಿ ಬಗ್ಗೆ ಶೋಧ ನಡೆಸಿದ್ದೇವೆ. ಈ ವೇಳೆ rocketreach.co ವೆಬ್‌ಸೈಟ್‌ನಲ್ಲಿ AR ಫುಡ್ಸ್ ಪ್ರೈವೇಟ್ ಲಿಮಿಟೆಡ್ ಕುರಿತು ಮಾಹಿತಿಯನ್ನು ಕಂಡುಕೊಂಡಿದ್ದೇವೆ. ವೈರಲ್ ಸ್ಕ್ರೀನ್‌ಶಾಟ್ ಅನ್ನು ಈ ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾಗಿದೆ ಎಂದು ನಾವು ಪತ್ತೆಮಾಡಿದ್ದೇವೆ. ಈ ವೆಬ್‌ಸೈಟ್‌ನಲ್ಲಿ, ಎಆರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ವಿಳಾಸವನ್ನು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಎಂದು ನಮೂದಿಸಲಾಗಿದೆ.

Fact Check: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿ ಪಾಕ್ ಕಂಪನಿ  ಉದ್ಯೋಗಿಗಳ ಪಟ್ಟಿ ಕೋಮು ಹೇಳಿಕೆಯೊಂದಿಗೆ ವೈರಲ್

ಎಆರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್‌ನ ವೆಬ್‌ಸೈಟ್ ಪರಿಶೀಲಿಸಿದ ನಂತರ, ಈ ಕಂಪನಿಯು ಅಕ್ಕಿ ಮತ್ತು ಮಸಾಲೆಗಳಂತಹ ವಿಭಿನ್ನ ಉತ್ಪನ್ನಗಳನ್ನು “ಫೂಲ್” ಹೆಸರಿನಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ ಕಂಪನಿ ಭಾರತದ್ದಲ್ಲ, ಪಾಕಿಸ್ತಾನದ್ದಾಗಿದೆ ಎಂದು ಗೊತ್ತಾಗಿದೆ.

Fact Check: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿ ಪಾಕ್ ಕಂಪನಿ  ಉದ್ಯೋಗಿಗಳ ಪಟ್ಟಿ ಕೋಮು ಹೇಳಿಕೆಯೊಂದಿಗೆ ವೈರಲ್

ನ್ಯೂಸ್‌ಚೆಕರ್ ತಮಿಳುನಾಡು ಮೂಲದ ಎಆರ್ ಡೈರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೇವೆ. ಅವರ ಪ್ರತಿಕ್ರಿಯೆ ಬಂದ ಬಳಿಕ ಈ ಲೇಖನವನ್ನು ನವೀಕರಿಸಲಾಗುವುದು.

Conclusion

ಈ ಸತ್ಯಶೋಧನೆಯ ಪ್ರಕಾರ, ತಿರುಪತಿ ದೇವಸ್ಥಾನಕ್ಕೆ ಲಡ್ಡು ಪ್ರಸಾದಕ್ಕೆ ತುಪ್ಪ ಸರಬರಾಜು ಮಾಡುವ ಕಂಪನಿಯ ಆಡಳಿತದಲ್ಲಿರುವ ಎಲ್ಲರೂ ಮುಸ್ಲಿಮರು ಎಂಬ ಹೇಳಿಕೆ ತಪ್ಪಾಗಿದೆ. ತುಪ್ಪ ಪೂರೈಸಿದ ಕಂಪೆನಿ ತಮಿಳುನಾಡಿನದ್ದಾಗಿದ್ದು, ವೈರಲ್‌ ಹೇಳಿಕೆಯಲ್ಲಿ ನೀಡಲಾದ ಕಂಪೆನಿ ಮತ್ತು ಉನ್ನತ ಉದ್ಯೋಗಗಿಗಳ ಪಟ್ಟಿಯು ಪಾಕಿಸ್ತಾನದ ಕಂಪೆನಿಯದ್ದಾಗಿದೆ ಎಂದು ಗೊತ್ತಾಗಿದೆ.

Result: False

Our Sources
Report Published by Hindustan Times Dated, 21 September 2024

Report by AAJ Tak, Dated: 21 September 2024

Info available on Raj Milk Website

Info available on AR FOODS PVT LTD

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.