Authors
ಚಂದ್ರಯಾನ 3 ಉಡಾವಣೆಯ ದೊಡ್ಡ ಸುದ್ದಿಯ ನಡುವೆ, ರಾಕೆಟ್ ಉಡ್ಡಯನದ ವೀಡಿಯೋವನ್ನು ವಿಮಾನ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ ಎನ್ನುವುದು ಈ ವಾರದ ಪ್ರಮುಖ ಕ್ಲೇಮ್ ಆಗಿತ್ತು. ಇದರೊಂದಿಗೆ ಕರ್ನಾಟಕದಲ್ಲಿ ಮದರಸಾ ವಿದ್ಯಾರ್ಥಿಗಳು ತಪ್ಪಾಗಿ ಹೆಸರನ್ನು ಹೇಳಿದ್ದಾರೆ, ಲುಪ್ಪೋಕೇಕ್ನಲ್ಲಿ ಮಾತ್ರೆಗಳನ್ನಿಟ್ಟು ಹಿಂದೂ ಮಕ್ಕಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಅವರನ್ನು ಕರೆಯೆದೇ ವಿದೇಶಕ್ಕೆ ಹೋಗಿ ಅವಮಾನಕ್ಕೀಡಾಗಿದ್ದಾರೆ ಎಂಬ ಕ್ಲೇಮ್ಗಳು ಸದ್ದುಮಾಡಿವೆ. ಇದರೊಂದಿಗೆ ಒಂದೇ ಟ್ರ್ಯಾಕ್ನಲ್ಲಿ ಎರಡು ರೈಲುಗಳು ಎದುರು ಬದುರಾಗಿ ಬಂದಿದ್ದು ಒಡಿಶಾ ರೀತಿಯ ಅವಘಡ ತಪ್ಪಿದೆ, ಕಾಂಗ್ರೆಸ್ ಸಭೆಯ ಬ್ಯಾನರ್ನಲ್ಲಿ ಚೋರ್ ಗ್ರೂಪ್ ಮೀಟಿಂಗ್ ಎಂದು ಬರೆಯಲಾಗಿತ್ತು. ಸತ್ಯಶೋಧನೆಯ ವೇಳೆ ಈ ಕ್ಲೇಮುಗಳು ತಪ್ಪು ಎಂದು ಕಂಡುಬಂದಿವೆ.
ಚಂದ್ರಯಾನ 3 ಉಡಾವಣೆ ಎಂದು ತೋರಿಸಲು ಹಂಚಿಕೊಂಡ ವೈರಲ್ ವೀಡಿಯೋಗಳ ಅಸಲಿಯತ್ತೇನು?
ಇಸ್ರೋ ಚಂದ್ರಯಾನ 3ರ ರಾಕೆಟ್ ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಉಡಾವಣೆಯ ನಂತರ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಚಂದ್ರಯಾನ 3 ರ ಉಡಾವಣೆಯ ದೃಶ್ಯ, ಇದನ್ನು ವಿಮಾನದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದಾರೆ ಎಂದು ತೋರಿಸುವ ವೀಡಿಯೋಗಳನ್ನು ಹಂಚಿಕೊಂಡಿದ್ದರು. ಅಂತಹ ಎರಡು ವೀಡಿಯೋಗಳನ್ನು ನ್ಯೂಸ್ಚೆಕರ್ ತನಿಖೆ ಮಾಡಿದ್ದು, ಇದು ಇತ್ತೀಚಿನ ಉಡಾವಣೆಗೆ ಸಂಬಂಧಿಸಿದ್ದಲ್ಲ ಎಂದು ಗೊತ್ತಾಗಿದೆ. ಅಮೆರಿಕದ ಫ್ಲೋರಿಡಾದಲ್ಲಿ ನಡೆದ ರಾಕೆಟ್ ಉಡಾವಣೆಯನ್ನು ಚಂದ್ರಯಾನ 3 ಉಡಾವಣೆ ದೃಶ್ಯ ಎಂದು ತಪ್ಪಾಗಿ ಸಂಬಂಧ ಕಲ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಮಸೀದಿಗೆ, ಚರ್ಚ್ ಗಳಿಗೆ ವಿದ್ಯುತ್ ದರ ಕಡಿಮೆ, ದೇಗುಲಕ್ಕೆ ಹೆಚ್ಚು ಅನ್ನೋದು ನಿಜವೇ?
ಮಸೀದಿಗಳಿಗೆ, ಚರ್ಚ್ಗಳಿಗೆ ಅತಿ ಕಡಿಮೆ ದರದಲ್ಲಿ ವಿದ್ಯುತ್ ನೀಡಲಾಗುತ್ತಿದೆ ಮತ್ತು ದೇಗುಲಗಳಿಗೆ ಅತಿ ಹೆಚ್ಚು ದರ ವಿಧಿಸಲಾಗುತ್ತಿದೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಪ್ರಕಾರ, ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಒಂದೇ ರೀತಿಯ ದರವಿದೆ. ಆದರೆ ವಿಭಾಗವಾರು ಇದು ಸ್ವಲ್ಪ ವ್ಯತ್ಯಾಸವನ್ನು ಹೊಂದಿರಬಹುದು ಎಂದು ನ್ಯೂಸ್ಚೆಕರ್ ಸತ್ಯಶೋಧನೆಯಲ್ಲಿ ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಒಂದೇ ಟ್ರ್ಯಾಕ್ನಲ್ಲಿ ಎರಡು ರೈಲುಗಳು, ತಪ್ಪಿದ ಅನಾಹುತ ಎಂದ ಈ ವೈರಲ್ ವೀಡಿಯೋ ಸತ್ಯವೇ?
ಒಡಿಶಾ ರೈಲು ದುರಂತ ಬಳಿಕವೂ ಹಲವು ಸಂಭಾವ್ಯ ಅವಘಡಗಳಿಂದ ರೈಲ್ವೇ ಪಾರಾದ ಕುರಿತ ಸುದ್ದಿಗಳು ಇರುವ ಬೆನ್ನಲ್ಲೇ ಎರಡು ರೈಲುಗಳು ಮುಖಾಮುಖಿ ಢಿಕ್ಕಿ ಯಾಗುವುದು ತಪ್ಪಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಒಂದೇ ಟ್ರ್ಯಾಕ್ನಲ್ಲಿ ಎರಡು ರೈಲುಗಳು ಬಂದು ಅನಾಹುತವಾಗಿಲ್ಲ. ಇದು ಛತ್ತೀಸ್ಗಢದ ಪ್ರಕರಣವಾಗಿದ್ದು, ಸಿಗ್ನಲಿಂಗ್ ಭಾಗವಾಗಿ ಒಂದು ರೈಲಿನ ಹಿಂದೆ ಇನ್ನೊಂದು ರೈಲು ನಿಲ್ಲಿಸಲಾಗಿದೆ ಎಂದು ರೈಲ್ವೇ ಸ್ಪಷ್ಟೀಕರಣ ನೀಡಿದ್ದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಕಾಂಗ್ರೆಸ್ ಸಭೆಯ ಬ್ಯಾನರ್ ನಲ್ಲಿ ಚೋರ್ ಗ್ರೂಪ್ ಮೀಟಿಂಗ್ ಎಂದು ಬರೆಯಲಾಗಿತ್ತೇ?
‘ಚೋರ್ ಗ್ರೂಪ್ ಮೀಟಿಂಗ್’ ಎಂಬ ಬ್ಯಾನರ್ ನೊಂದಿಗೆ ಕಾಂಗ್ರೆಸ್ ಸಭೆಯ ಚಿತ್ರವೊಂದು ಇದೀಗ ವೈರಲ್ ಆಗಿದೆ. ಹಾಸ್ಯದ ಉದ್ದೇಶಕ್ಕಾಗಿ ಈ ಚಿತ್ರವನ್ನು ವೈರಲ್ ಮಾಡಿದ್ದರೂ, ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದಾಗ ಮೂಲ ಚಿತ್ರದಲ್ಲಿ ಕಾಂಗ್ರೆಸ್ ಸಭೆಯ ಬ್ಯಾನರ್ ನಲ್ಲಿ ಚೋರ್ ಗ್ರೂಪ್ ಮೀಟಿಂಗ್ ಎಂದು ಬರೆದಿಲ್ಲ. ಇದು ತಿರುಚಿದ ಚಿತ್ರ ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಲುಪ್ಪೋ ಕೇಕ್ ನಲ್ಲಿ ಮಾತ್ರೆಗಳನ್ನಿಟ್ಟು ಮಾರಾಟ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಹೊಸ ಕೇಕ್ ಮಾರುಕಟ್ಟೆಗೆ ಬಂದಿದ್ದು, ಅದರಲ್ಲಿ ಮಕ್ಕಳ ಆರೋಗ್ಯದ ಮೇಲೆ ಹಾನಿ ಮಾಡುವಂತೆ ಮಾತ್ರೆಗಳನ್ನು ಇಟ್ಟು ಮಾರಾಟ ಮಾಡಲಾಗುತ್ತಿದೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆ ವೇಳೆ ಇದೊಂದು ಹಳೆಯ ಸುಳ್ಳು ವೈರಲ್ ವೀಡಿಯೋ ಆಗಿದ್ದು ಇರಾಕ್ನಿಂದ ಬಂದಿರಬಹುದು ಎಂದು ಊಹಿಸಲಾಗಿದೆ. ಲುಪ್ಪೋ ಕೇಕ್ ತಯಾರಿಕಾ ಕಂಪೆನಿ ಟರ್ಕಿ ಮೂಲದ್ದಾಗಿದ್ದು, ಟರ್ಕಿಯ ದಾಳಿಯನ್ನು ಬಹಿಷ್ಕರಿಸುವಂತೆ ಇರಾಕ್ನಲ್ಲಿ ಮಾಡಲಾದ ವೀಡಿಯೋ ಇದಾಗಿದೆ ಎಂದು ಊಹಿಸಲಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಪ್ರಧಾನಿ ನರೇಂದ್ರ ಮೋದಿ ಅವರು ಕರೆಯದೇ ವಿದೇಶಕ್ಕೆ ಹೋಗಿ ಅವಮಾನಕ್ಕೀಡಾದರೇ, ಸತ್ಯ ಏನು?
ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಯದೇ ಅತಿಥಿಯಾಗಿ ವಿದೇಶಕ್ಕೆ ಹೋದ್ದಕ್ಕೆ ಅವರ ಸ್ವಾಗತಕ್ಕೆ ಯಾರೂ ಜನರಿಲ್ಲದೆ ಅವಮಾನ ಅನುಭವಿಸುವಂತಾಗಿದೆ ಎಂಬರ್ಥದಲ್ಲಿ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಆದರೆ ಸತ್ಯಶೋಧನೆ ವೇಳೆ ವಿದೇಶ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಯಾರೂ ಇರಲಿಲ್ಲ ಎನ್ನುವುದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ. ಇತ್ತೀಚಿನ ಫ್ರಾನ್ಸ್ ಪ್ರವಾಸದ ವೇಳೆ ಸ್ವತಃ ಫ್ರಾನ್ಸ್ ಪ್ರಧಾನಿಯವರೇ ಮೋದಿ ಅವರನ್ನು ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರಗಳ ಪ್ರಕಾರ ಸ್ವಾಗತಿಸಿದ್ದಾರೆ. ಈ ವೀಡಿಯೋದ ಆರಂಭಿಕ ದೃಶ್ಯಗಳನ್ನು ಮಾತ್ರ ವೈರಲ್ ವೀಡಿಯೋದಲ್ಲಿ ತೋರಿಸಲಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.