Authors
ಸೀತಾದೇವಿಯ ಜನಕಪುರಿಯಿಂದ ಅಯೋಧ್ಯೆಗೆ ಯಾತ್ರೆ,, ರಾಮ ಮಂದಿರ ಬಾಬರಿ ಮಸೀದಿ ಉರುಳಿಸಿದ ಜಾಗದ ಬದಲು ಬೇರೆಡೆ ನಿರ್ಮಾಣವಾಗುತ್ತಿದೆ, ಕಾಶ್ಮೀರ ಲಾಲ್ ಚೌಕದಲ್ಲಿ ಶ್ರೀರಾಮನ ಪ್ರದರ್ಶನ, ಅಯೋಧ್ಯೆಗೆ ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಎನ್ನುವ ಸುಳ್ಳು ಹೇಳಿಕೆಗಳು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಸಮೀಪಿಸುತ್ತಿರುವಂತೆ ಈ ವಾರವೂ ಹೈಲೈಟ್ ಆಗಿವೆ. ಇದು ಹೊರತಾಗಿ ರಾಹುಲ್ ಗಾಂಧಿಯವರನ್ನು ಗಲ್ಫ್ ನ್ಯೂಸ್ ಪಪ್ಪು ಎಂದು ಕರೆದಿದೆ, ವೀಳ್ಯದೆಲೆ ತಿಂದರೆ ಮಧುಮೇಹ ನಿಯಂತ್ರಣ ಎಂಬ ಕ್ಲೇಮ್ ಗಳೂ ಹರಿದಾಡಿದ್ದವು. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ನಿರೂಪಿಸಿದೆ.
ಸೀತಾದೇವಿಯ ಜನಕಪುರಿಯಿಂದ ಅಯೋಧ್ಯೆಗೆ ಯಾತ್ರೆ ನಡೆದಿದೆಯೇ, ಸತ್ಯ ಏನು?
ಸೀತಾದೇವಿಯ ಊರು ನೇಪಾಳದ ಜನಕಪುರಿಯಿಂದ ಅಯೋಧ್ಯೆಗೆ ಸೀತಾದೇವಿಯ ಸೀರೆ, ಆಭರಣಗಳನ್ನು ಯಾತ್ರೆಯ ಮೂಲಕ ಜನರು ತರುತ್ತಿದ್ದಾರೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ, ಇದು ಜನಕಪುರಿಯಿಂದ ನಡೆದ ಯಾತ್ರೆಯಲ್ಲ ಬದಲಾಗಿ ಗ್ರೇಟರ್ ನೋಯ್ಡಾದಲ್ಲಿ ನಡೆದ ಕಲಶ ಯಾತ್ರೆಯಾಗಿದೆ ಎಂದು ಗೊತ್ತಾಗಿದೆ. ಇದರ ಹೆಚ್ಚಿನ ವಿವಿರಗಳನ್ನು ಇಲ್ಲಿ ಓದಿ
ಅಯೋಧ್ಯೆ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದ ಬದಲು ಬೇರೆ ಕಡೆ ನಿರ್ಮಾಣವಾಗುತ್ತಿದೆಯೇ?
ಅಯೋಧ್ಯೆಯಲ್ಲಿ ರಾಮ ಮಂದಿರ ಮಸೀದಿ ಉರುಳಿಸಿದ ಜಾಗದಲ್ಲಿ ಅಲ್ಲ, ಬೇರೆ ಕಡೆ ನಿರ್ಮಾಣವಾಗುತ್ತಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಮಸೀದಿ ಉರುಳಿಸಿದ ಜಾಗದಲ್ಲೇ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಗೂಗಲ್ ಮ್ಯಾಪ್ ನಲ್ಲಿ ಗುರುತಿಸಿದ ಜಾಗ ತಪ್ಪಾದ ಗುರುತು ಎಂದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಇದರ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಕಾಶ್ಮೀರದ ಲಾಲ್ ಚೌಕದಲ್ಲಿ ಶ್ರೀ ರಾಮನ ಚಿತ್ರ ಪ್ರದರ್ಶಿಸಲಾಗಿದೆಯೇ?
ಕಾಶ್ಮೀರದ ಲಾಲ್ ಚೌಕ್ ನಲ್ಲಿ ಶ್ರೀ ರಾಮನ ಚಿತ್ರವನ್ನು ಪ್ರದರ್ಶಿಸಲಾಗಿದೆ ಎಂದು ಹೇಳಿಕೆ ಹರಿದಾಡಿದೆ. ಇದರ ಬಗ್ಗೆ ಶೋಧ ನಡೆಸಿದಾಗ, ಶ್ರೀರಾಮನ ಚಿತ್ರ ಪ್ರದರ್ಶಿಸಿರುವುದು ಕಾಶ್ಮೀರದ ಲಾಲ್ ಚೌಕ್ ನಲ್ಲಿ ಅಲ್ಲ, ಬದಲಾಗಿ ಡೆಹ್ರಾಡೂನ್ ನ ಕ್ಲಾಕ್ ಟವರ್ ನಲ್ಲಿ ಎಂದು ತಿಳಿದುಬಂದಿದೆ. ಇದರ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಅಯೋಧ್ಯೆಗೆ ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಎನ್ನುವುದು ನಿಜವೇ?
ಅಯೋಧ್ಯೆಗೆ ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹತ್ತಿಕೊಂಡಿದೆ ಎಂದು ವೈರಲ್ ವೀಡಿಯೋದೊಂದಿಗೆ ಹೇಳಿಕೆಯೊಂದು ಹರಿದಾಡಿದೆ.ನಮ್ಮ ತನಿಖೆಯ ಪ್ರಕಾರ, ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಂಭ್ರಮಾಚರಣೆ ನಿಮಿತ್ತ ಪಟಾಕಿಗಳನ್ನು ಸಾಗಿಸುವ ಲಾರಿಯಲ್ಲಿ ಬೆಂಕಿ ಕಾಣಿಸಿದೆ ಎನ್ನುವ ಹೇಳಿಕೆ ತಪ್ಪುದಾರಿಗೆಳೆಯುವಂಥಾದ್ದಾಗಿದೆ. ವಾಸ್ತವವಾಗಿ, ಪಟಾಕಿಗಳನ್ನು ತುಂಬಿದ ಈ ಟ್ರಕ್ ಬಹ್ರೈಚ್ ಗೆ ಹೋಗುತ್ತಿತ್ತು ಎಂದು ಗೊತ್ತಾಗಿದೆ. ಇದರ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ರಾಹುಲ್ ಗಾಂಧಿಯವರನ್ನು ಗಲ್ಫ್ ನ್ಯೂಸ್ ‘ಪಪ್ಪು’ ಎಂದು ಕರೆದಿದೆಯೇ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ‘ಪಪ್ಪು’ ಹೆಸರಿನಿಂದಲೇ ಕರೆಯುತ್ತಾರೆ. ಗಲ್ಫ್ ದೇಶಕ್ಕೂ ಅವರ ಹೆಸರು ಹಬ್ಬಿದೆ, ಎಂಬರ್ಥದಲ್ಲಿ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡಿದೆ. ಗಲ್ಫ್ ನ್ಯೂಸ್ ನಲ್ಲಿ ರಾಹುಲ್ ಗಾಂಧಿಯವರನ್ನು ಪಪ್ಪು ಎಂದು ಕರೆದಿಲ್ಲ, ಈ ಬಗ್ಗೆ ಸಂದರ್ಶನದಲ್ಲಿ ಅವರ ಪ್ರತಿಕ್ರಿಯೆಯನ್ನು ಕೇಳಲಾಗಿದೆ, ಈ ಪ್ರಶ್ನೆ ಮುದ್ರಿತವಾದ ಪತ್ರಿಕೆಯನ್ನು ಮಡಚಿ, ಫೋಟೋ ತೆಗೆದು ಈ ರೀತಿ ಪ್ರಚಾರ ಮಾಡಲಾಗಿದೆ ಎಂದು ಗೊತ್ತಾಗಿದೆ. ಇದರ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ತಿಂದರೆ ಮಧುಮೇಹ ನಿಯಂತ್ರಣ ಸಾಧ್ಯವೇ?
ಮಧುಮೇಹ ನಿಯಂತ್ರಣಕ್ಕೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ತಿನ್ನುವುದು ಉತ್ತಮ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಈ ಬಗ್ಗೆ ನ್ಯೂಸ್‌ಚೆಕರ್ ಶೋಧ ನಡೆಸಿದ್ದು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ವೀಳ್ಯದೆಲೆ ತಿಂದರೆ ಮಧುಮೇಹ ನಿಯಂತ್ರಣ ಸಾಧ್ಯ ಎನ್ನುವುದು ಸುಳ್ಳು. ಆಹಾರ ಕ್ರಮ ಬದಲಾವಣೆ ಒಂದರಿಂದಲೇ ಮಧುಮೇಹ ನಿಯಂತ್ರಣ ಸಾಧ್ಯವಿಲ್ಲ ಎಂದು ಗೊತ್ತಾಗಿದೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.