Authors
ವಯನಾಡಿನಲ್ಲಿ ರಾಹುಲ್ ನಾಮಪತ್ರ ಸಲ್ಲಿಕೆ ವೇಳೆ ಮುಸ್ಲಿಂ ಬಾವುಟ ಹಾರಾಟ, ಹಿಮಾಚಲ ಪ್ರದೇಶದಲ್ಲಿ ಹೊಸ ಚಿಚಾಮ್ ಸೇತುವೆ ನಿರ್ಮಿಸಲಾಗಿದೆ, ಬಪ್ಪನಾಡು ದೇಗುಲದ ರಥದ ದಾರಿಯಲ್ಲಿ ಮುಸ್ಲಿಮರು ಅಡ್ಡಲಾಗಿ ವಾಹನ ಇಟ್ಟಿದ್ದಾರೆ, ಜನಾರ್ದನ ಪೂಜಾರಿಯನ್ನು ಎನ್ ಕೌಂಟರ್ ಮಾಡಿ ಎಂದು ಅಲ್ಪಸಂಖ್ಯಾತ ಸಮುದಾಯದವನೊಬ್ಬ ಕರೆ ಕೊಟ್ಟಿದ್ದಾನೆ ಎಂಬ ಕ್ಲೇಮುಗಳು ಈ ವಾರ ಹರಿದಾಡಿವೆ. ಈ ಕ್ಲೇಮುಗಳು ಚುನಾವಣೆಯ ಹಿನ್ನೆಲೆಯಿಂದ ಹರಿದಾಡಿದ್ದು, ಅವುಗಳನ್ನು ಸತ್ಯಶೋಧನೆ ನಡೆಸಿದಾಗ ಸುಳ್ಳು ಎಂದು ಕಂಡುಬಂದಿದೆ. ಇದರೊಂದಿಗೆ ಆರೋಗ್ಯ ಕುರಿತಾಗಿ ರಾತ್ರಿ ಊಟದ ನಂತರ ಸಿಹಿತಿಂಡಿಗಳನ್ನು ತಿನ್ನುವುದರಿಂದ ಮಧುಮೇಹದ ಸಮಸ್ಯೆ ಹೆಚ್ಚಾಗುತ್ತದೆ ಎಂಬ ಬಗ್ಗೆಯೂ ಸತ್ಯಶೋಧನೆ ನಡೆಸಲಾಗಿದ್ದು ಸುಳ್ಳು ಎಂದು ಗೊತ್ತಾಗಿದೆ.
ಬಪ್ಪನಾಡು ದೇಗುಲದ ರಥದ ದಾರಿಯಲ್ಲಿ ಮುಸ್ಲಿಮರು ಅಡ್ಡಲಾಗಿ ವಾಹನ ಇಟ್ಟಿದ್ದರೇ, ಸತ್ಯ ಏನು?
ಬಪ್ಪನಾಡು ದೇಗುಲದಲ್ಲಿ ದೇವರ ರಥ ಬರುವ ದಾರಿಗೆ ಅಡ್ಡಲಾಗಿ ಮುಸ್ಲಿಮರು ವಾಹನಗಳನ್ನು ಇಟ್ಟಿದ್ದು ಅದನ್ನು ಹಿಂದೂ ಭಕ್ತರು ಎತ್ತಿ ಆಚೆಗೆ ಹಾಕಿದ್ದಾರೆ ಎಂದು ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಸತ್ಯಶೋಧನೆ ವೇಳೆ ಕಂಡುಬಂದ ಪ್ರಕಾರ ಬಪ್ಪನಾಡು ದೇಗುಲದಲ್ಲಿ ರಥದ ದಾರಿಯಲ್ಲಿ ಮುಸ್ಲಿಮರು ಅಡ್ಡಲಾಗಿ ವಾಹನ ಇಟ್ಟಿದ್ದಾರೆ ಎನ್ನಲಾದ ವಾಹನ ಮುಸ್ಲಿಮರದ್ದಲ್ಲ, ಅದು ಜಾತ್ರೆಗೆ ಬಂದ ವ್ಯಾಪಾರಿಗಳದ್ದಾಗಿತ್ತು ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಹಿಮಾಚಲ ಪ್ರದೇಶದಲ್ಲಿ ಚಿಚಾಮ್ ಸೇತುವೆಯನ್ನು ಹೊಸದಾಗಿ ನಿರ್ಮಿಸಲಾಗಿದೆಯೇ?
ಹಿಮಾಚಲ ಪ್ರದೇಶದಲ್ಲಿ ಚಿಚಾಮ್ ಸೇತುವೆಯನ್ನು ಹೊಸದಾಗಿ ನಿರ್ಮಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದು ಹರಿದಾಡುತ್ತಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧೆಡೆ ಇಂತಹ ಕ್ಲೇಮ್ ಗಳು ಕಂಡುಬಂದಿವೆ. ಇದರ ಬಗ್ಗೆ ನಾವು ಸತ್ಯಶೋಧನೆ ನಡೆಸಿದ್ದು ಇದು 2017ರಲ್ಲಿ ಉದ್ಘಾಟನೆಗೊಂಡ ಸೇತುವೆಯಾಗಿದೆ ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರಾಲಿಯಲ್ಲಿ ಮುಸ್ಲಿಂ ಬಾವುಟಗಳನ್ನು ಹಾರಿಸಲಾಗಿದೆಯೇ?
ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರಾಲಿಯಲ್ಲಿ ಮುಸ್ಲಿಂ ಬಾವುಟಗಳನ್ನು ಹಾರಿಸಲಾಗಿದೆ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ, ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರಾಲಿಯಲ್ಲಿ ಮುಸ್ಲಿಂ ಬಾವುಟಗಳನ್ನು ಹಾರಿಸಿಲ್ಲ. ವೈರಲ್ ವೀಡಿಯೋ 2019ನೇ ಇಸವಿಯದ್ದು ಮತ್ತು ಕಾಸರಗೋಡಿನದ್ದಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ರಾತ್ರಿ ಊಟದ ನಂತರ ಸಿಹಿತಿಂಡಿಗಳನ್ನು ತಿನ್ನುವುದರಿಂದ ಮಧುಮೇಹದ ಸಮಸ್ಯೆ ಹೆಚ್ಚಾಗುತ್ತದೆಯೇ?
ರಾತ್ರಿ ಊಟದ ನಂತರ ಸಿಹಿತಿಂಡಿಗಳನ್ನು ಸೇವಿಸುವುದು ಅಪಾಯಕಾರಿ ಇದರಿಂದ ಮಧುಮೇಹದ ಸಮಸ್ಯೆ ಹೆಚ್ಚು ಎನ್ನುವ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಸತ್ಯಶೋಧನೆಯ ಪ್ರಕಾರ, ಊಟದ ನಂತರ ಸಿಹಿ ತಿಂದರೆ ಮಧುಮೇಹದ ಅಪಾಯ ಹೆಚ್ಚಾಗುವುದು ಪ್ರಿಡಯಾಬಿಟೀಸ್ ಅಥವಾ ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
‘ಜನಾರ್ದನ ಪೂಜಾರಿ ಎನ್‌ಕೌಂಟರ್ ಮಾಡಿ’ ಎಂಬ ಹಳೆಯ ವಿವಾದಾಸ್ಪದ ಹೇಳಿಕೆ ಹಂಚಿಕೆ
ಜನಾರ್ದನ ಪೂಜಾರಿಯವರನ್ನು ಎನ್‌ಕೌಂಟರ್ ಮಾಡಿ ಎಂದು ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬ ಹೇಳಿದ್ದಾನೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಹರಿದಾಡಿದೆ. ಎನ್‌ಕೌಂಟರ್ ಹೇಳಿಕೆ ಡಿಸೆಂಬರ್ 2018ರ ಸಮಯದ್ದಾಗಿದ್ದು ಈಗಿನದ್ದಲ್ಲ. ಈಗಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.