Weekly Wrap: ರಿಷಬ್‌ ಶೆಟ್ಟಿಗೆ ದಾದಾ ಸಾಹೇಬ್‌ ಫಾಲ್ಕೆ, ನಂದಿನಿ ಮೇಲೆ ಹಿಂದಿ ಹೇರಿಕೆ, ಈ ವಾರದ ತಪ್ಪು ಕ್ಲೇಮ್‌ಗಳ ಕುರಿತ ನೋಟ

Weekly wrap

ಕಾಂತಾರ ನಟ, ನಿರ್ದೇಶಕ ರಿಷಬ್‌ ಶೆಟ್ಟಿಯವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಎನ್ನುವುದು ಈ ವಾರ ಸುದ್ದಿ ಮಾಡಿದೆ. ರಿಷಬ್‌ ಶೆಟ್ಟಿಯವರಿಗೆ ನಿಜಕ್ಕೂ ಸಿಕ್ಕಿದ್ದು ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯೇ ಎಂಬುದು ಸಂಶಯಕ್ಕೆಡೆ ಮಾಡಿದ್ದು, ಇದು ದಾದಾ ಸಾಹೇಬ್‌ ಪ್ರಶಸ್ತಿಯಲ್ಲ, ಬದಲಾಗಿ ದಾದಾ ಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ ಪ್ರಶಸ್ತಿ ಎನ್ನುವುದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ.

ಇನ್ನು ರಾಜ್ಯದಲ್ಲಿ ಹಿಂದಿ ಹೇರಿಕೆ ಮಾಡಲಾಗುತ್ತಿದೆ ಎಂಬ ಕೂಗುಗಳ ಮಧ್ಯೆ ನಂದಿನಿ ಉತ್ಪನ್ನಗಳ ಮೇಲೆಯೂ ಹಿಂದಿ ಹೇರಲಾಗುತ್ತಿದೆ ಎನ್ನುವ ಕ್ಲೇಮ್‌ ವೈರಲ್‌ ಆಗಿತ್ತು. ಆದರೆ ಕ್ಲೇಮಿನಲ್ಲಿ ಕಂಡಿದ್ದು ಸತ್ಯವಲ್ಲ, ಇದು ಎಜಿಮಾರ್ಕ್‌ ಎಂಬುದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಇದರೊಂದಿಗೆ ಥಾಣೆಯಲ್ಲಿ ಕಾಂಕ್ರೀಟ್‌ ತೊಲೆಯೊಂದು ಕುಸಿದು ಬಿದ್ದು ಹಲವರು ಮೃತಪಟ್ಟಿದ್ದಾರೆ ಎಂಬ ಕುರಿತ ಕ್ಲೇಮ್‌ ಕೂಡ ವೈರಲ್‌ ಆಗಿದ್ದು, ಇದು 2019ರ ವಾರಾಣಸಿ ಘಟನೆ ಎಂಬುದು ಗೊತ್ತಾಗಿದೆ.

ಥಾಣೆಯಲ್ಲಿ ಕುಸಿದು ಬಿದ್ದ ಕಾಂಕ್ರೀಟ್‌ ತೊಲೆ; ಆ ದುರ್ಘಟನೆ ನಿಜಕ್ಕೂ ಅಲ್ಲಿ ನಡೆದಿದ್ದಲ್ಲ!

ಥಾಣೆಯಲ್ಲಿ ಕುಸಿದು ಬಿದ್ದ ಕಾಂಕ್ರೀಟ್‌ ತೊಲೆ ಎಂದು ಪೋಸ್ಟ್‌ ಒಂದು ವಾಟ್ಸಾಪಿನಲ್ಲಿ ಹರಿದಾಡುತ್ತಿತ್ತು. ಆ ಕ್ಲೇಮಿನ ಪ್ರಕಾರ, ಥಾಣೆಯಲ್ಲಿ ನಡೆದ ಘಟನೆಯಲ್ಲಿ ತೊಲೆ ಹಲವು ಕಾರುಗಳ ಮೇಲೆ ಬಿದ್ದಿದ್ದು ಜನರು ಸಿಲುಕಿಕೊಂಡಿದ್ದಾರೆ. ಆ ಕ್ಲೇಮ್‌ನ ದೃಶ್ಯದಲ್ಲಿ ಜನರು ಗಾಬರಿಯಿಂದ ರಕ್ಷಣೆಗೆ ಓಡುತ್ತಿರುವ ದೃಶ್ಯ ಕಂಡುಬಂದಿತ್ತು. ಇದರ ಕುರಿತು ಪರಿಶೀಲನೆ ನಡೆಸಿದಾಗ ಈ ಘಟನೆ ಮೇ 15 2018 ರಂದು ವಾರಾಣಸಿಯಲ್ಲಿ ನಡೆದ ಘಟನೆಯಾಗಿದ್ದು, ಫ್ಲೈಓವರ್‌ನ ತೊಲೆ ಬಿದ್ದು 18 ಜನ ಮೃತಪಟ್ಟ ಘಟನೆ ಅದು ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನದ್ದನ್ನು ಇಲ್ಲಿ ಓದಿ

ರಿಷಬ್ ಶೆಟ್ಟಿಗೆ ನಿಜಕ್ಕೂ ಸಿಕ್ಕಿದ್ದು ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯೇ?

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಸಿಕ್ಕಿದೆ ಎಂದು ಟ್ವಿಟರ್‌ನಲ್ಲಿ ಕ್ಲೇಮ್‌ ಒಂದರಲ್ಲಿ ಹೇಳಲಾಗಿತ್ತು. ಆದರೆ ಸತ್ಯಶೋಧನೆ ವೇಳೆ ಅವರಿಗೆ ಸಿಕ್ಕಿದ್ದು ದಾದಾ ಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಫಿಲಂ ಪ್ರಶಸ್ತಿ ಎನ್ನುವುದು ಗೊತ್ತಾಗಿದೆ. ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಅಧೀನದ ಡೈರೆಕ್ಟೋರೇಟ್‌ ಆಫ್‌ ಫಿಲಂ ಫೆಸ್ಟಿವಲ್‌ ಕೊಡುವುದಾದರೆ, ದಾದಾ ಸಾಹೇಬ್‌ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್‌ ಪ್ರಶಸ್ತಿಯನ್ನು ಸ್ವತಂತ್ರ್ಯ ಸಂಸ್ಥೆಯೊಂದು ಕೊಡುತ್ತದೆ. ಇದರ ವ್ಯತ್ಯಾಸದ ಬಗ್ಗೆ ತಿಳಿಯದೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಎಂದೇ ಸಾಮಾಜಿಕ ಜಾಲತಾಣದಲ್ಲಿ ಕ್ಲೇಮ್‌ಗಳು ಹರಿದಾಡಿವೆ. ಈ ಕುರಿತ ಸತ್ಯಶೋಧನೆಯ ಬಗ್ಗೆ ಹೆಚ್ಚಿನದ್ದನ್ನು ಇಲ್ಲಿ ಓದಿ

ನಂದಿನಿ ಉತ್ಪನ್ನಗಳ ಮೇಲೆ ಹಿಂದಿ ಹೇರಿಕೆ?

ಪ್ರಸಿದ್ಧ ನಂದಿನಿ ಹಾಲಿನ ಉತ್ಪನ್ನಗಳ ಮೇಲೆ ಹಿಂದಿ ಹೇರಿಕೆಯಾಗುತ್ತಿದೆ, ಹಿಂದಿ ಹೇರಿಕೆಯನ್ನು ನಿಲ್ಲಿಸಿ ಎಂಬ ಪೋಸ್ಟ್‌ ಟ್ವಿಟರ್ ನಲ್ಲಿ ಕಂಡುಬಂದಿತ್ತು. ಈ ಬಗ್ಗೆ ಸತ್ಯಶೋಧನೆಯ ವೇಳೆ, ಅದು ಎಜಿಮಾರ್ಕ್ ಎಂಬುದು ಗೊತ್ತಾಗಿದೆ. ಎಜಿಮಾರ್ಕ್‌ ಎಂಬುದು ಕೃಷ್ಯುತ್ಪನ್ನಗಳ ಗುಣಮಟ್ಟಕ್ಕಾಗಿ ನೀಡುವ ಮೊಹರಾಗಿದ್ದು, ಅದನ್ನು ನಂದಿನಿಯ ತುಪ್ಪ, ಬೆಣ್ಣೆ ಉತ್ಪನ್ನಗಳಲ್ಲಿ ಬಳಸುತ್ತಿರುವುದು ಗೊತ್ತಾಗಿದೆ. ಗುಣಮಟ್ಟದ ಕುರಿತ ಈ ಮೊಹರನ್ನು ಪಡೆಯುವುದು ಐಚ್ಛಿಕವಾಗಿದ್ದು, ಭಾರತದಲ್ಲಿ ಹಲವು ಉತ್ಪನ್ನಗಳ ಮೇಲೆ ಇರುವುದು ಗೊತ್ತಾಗಿದೆ. ಈ ಕ್ಲೇಮಿನ ಕುರಿತ ಸತ್ಯಶೋಧನೆ ಬಗ್ಗೆ ಹೆಚ್ಚಿನದ್ದನ್ನು ಇಲ್ಲಿ ಓದಿ

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.