Fact Check
ಮಣಿಪುರದ ಉಗ್ರಗಾಮಿಗಳಿಂದ ಸೇನೆ ವಶಪಡಿಸಿಕೊಂಡ ಶಸ್ತ್ರಾಸ್ತ್ರ ಎಂದ ಈ ವೀಡಿಯೋ ಸತ್ಯಾಸತ್ಯತೆ ಏನು?
Claim
ಮಣಿಪುರದ ಉಗ್ರಗಾಮಿಗಳಿಂದ ಸೇನೆ ವಶಪಡಿಸಿಕೊಂಡ ಶಸ್ತ್ರಾಸ್ತ್ರ
Fact
ಮಣಿಪುರದಲ್ಲಿ ಉಗ್ರಗಾಮಿಗಳಿಂದ ಸೇನೆಯು ಶಸ್ತ್ರಾಸ್ತ್ರ ಮತ್ತು ಹಣವನ್ನು ವಶಪಡಿಸಿಕೊಂಡಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೋ ಮ್ಯಾನ್ಮಾರ್ ನದ್ದಾಗಿದೆ
ಮಣಿಪುರ ಉಗ್ರಗಾಮಿಗಳಿಂದ ಭಾರತೀಯ ಸೇನೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ನಗದು ವಶಪಡಿಸಿಕೊಂಡಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

2025 ರ ಮೇ 14 ರಂದು ಮಣಿಪುರದ ಚಾಂದೆಲ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ 10 ಉಗ್ರರು ಮೃತಪಟ್ಟಿದ್ದಾರೆ. ಅನಂತರ ಭದ್ರತಾ ಪಡೆಗಳು ಸ್ಥಳದಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡವು. ಏತನ್ಮಧ್ಯೆ, ಮಣಿಪುರದ್ದು ಎಂಬಂತೆ ವೈರಲ್ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ ತನಿಖೆ ವೇಳೆ ಈ ವೀಡಿಯೋ ಭಾರತದ್ದಲ್ಲ, ಅದು ಮ್ಯಾನ್ಮಾರ್ ನದ್ದು ಎಂದು ನಾವು ಕಂಡುಕೊಂಡಿದ್ದೇವೆ.
Also Read: ಧ್ವಂಸವಾದ ರಾವಲ್ಪಿಂಡಿ ಕ್ರೀಡಾಂಗಣ ಎಂದು ವೈರಲ್ ಆಗುತ್ತಿರುವ ಫೋಟೋ ಎಐ ಸೃಷ್ಟಿ
ಅಂತಹ ಇತರ ಪೋಸ್ಟ್ಗಳ ಆರ್ಕೈವ್ಗಳನ್ನು ಇಲ್ಲಿ , ಇಲ್ಲಿ ಮತ್ತು ಇಲ್ಲಿ ನೋಡಿ.

Fact Check/Verification
ವೈರಲ್ ಆಗಿರುವ ಈ ವೀಡಿಯೋದ ಬಗ್ಗೆ ಸತ್ಯ ಏನು ಎಂಬುದನ್ನು ತಿಳಿದುಕೊಳ್ಳಲು ನಾವು ಗೂಗಲ್ ನಲ್ಲಿ ನಲ್ಲಿ ಕೀವರ್ಡ್ ಸರ್ಚ್ ಮಾಡಿದ್ದೇವೆ. ಈ ವೇಳೆ ಮೇ 14 ರಂದು ನಡೆದ ಎನ್ಕೌಂಟರ್ ನಂತರ, ಭದ್ರತಾ ಪಡೆಗಳು ಆ ಪ್ರದೇಶದಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ನಡೆಸಿವೆ ಎಂದು ಗೊತ್ತಾಗಿದೆ. ಶೋಧದ ಸಮಯದಲ್ಲಿ ಏಳು ಎಕೆ -47 ರೈಫಲ್ಗಳು, ಒಂದು ಎಂ 4 ರೈಫಲ್, ಒಂದು ಆರ್ಪಿಜಿ ಲಾಂಚರ್, ನಾಲ್ಕು ಸಿಂಗಲ್-ಬ್ಯಾರೆಲ್ ಬ್ರೀಚ್-ಲೋಡಿಂಗ್ ರೈಫಲ್ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ.
ಈ ಬಗ್ಗೆ ಇಂಡಿಯಾ ಟುಡೇ ಪ್ರಕಟಿಸಿದ ವರದಿಯಲ್ಲಿ ಹಂಚಿಕೊಂಡಿರುವ ಚಿತ್ರವನ್ನು ವೈರಲ್ ವೀಡಿಯೋದೊಂದಿಗೆ ಹೋಲಿಸಿದಾಗ, ವೈರಲ್ ವೀಡಿಯೋದಲ್ಲಿ ಕಂಡುಬರುವ ಶಸ್ತ್ರಾಸ್ತ್ರಗಳ ಸಂಖ್ಯೆ ಮಣಿಪುರದಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳಿಗಿಂತ ಹೆಚ್ಚಿವೆ ಎಂದು ನಾವು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೋದಲ್ಲಿ ನಗದು ಕೂಡ ಕಾಣಿಸುತ್ತದೆ.

ವೈರಲ್ ವೀಡಿಯೋ ಬಗ್ಗೆ ಇನ್ನಷ್ಟು ತನಿಖೆಗೆ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ವೈರಲ್ ವೀಡಿಯೋ ಏಪ್ರಿಲ್ನಿಂದ ಅಂತರ್ಜಾಲದಲ್ಲಿ ಇರುವುದನ್ನು ನಾವು ಕಂಡುಕೊಂಡಿದ್ದೇವೆ. ಅಂತಹ ಪೋಸ್ಟ್ಗಳನ್ನು ಇಲ್ಲಿ , ಇಲ್ಲಿ , ಇಲ್ಲಿ ಮತ್ತು ಇಲ್ಲಿ ನೋಡಬಹುದು. ಇದರಿಂದಾಗಿ ಮೇ 14, 2025 ರಂದು ಮಣಿಪುರದಲ್ಲಿ ಉಗ್ರಗಾಮಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಸ್ಪಷ್ಟವಾಗಿದೆ. ಜೊತೆಗೆ ವೈರಲ್ ವೀಡಿಯೋ ಹೋಲುವ ಮೂಲ ವೀಡಿಯೋಗಳ ಪೋಸ್ಟ್ ಗಳು ಮ್ಯಾನ್ಮಾರ್ ನ ಬರ್ಮೀಸ್ ಭಾಷೆಯಲ್ಲಿ ಬರೆದಿರುವುದನ್ನು ನೋಡಿದ್ದೇವೆ.

ಇದರೊಂದಿಗೆ ವೈರಲ್ ವೀಡಿಯೋದಲ್ಲಿ ಜನರು ಧರಿಸಿರುವ ಸಮವಸ್ತ್ರದಲ್ಲಿBNRF ಚಿಹ್ನೆ ಇರುವುದನ್ನು ನಾವು ಗಮನಿಸಿದ್ದೇವೆ. BNRF (ಬರ್ಮಾ ರಾಷ್ಟ್ರೀಯ ಕ್ರಾಂತಿ ಪಡೆ) ಮ್ಯಾನ್ಮಾರ್ನ ಸಾಗೈಂಗ್ ವಿಭಾಗದಲ್ಲಿ ಸಕ್ರಿಯವಾಗಿರುವ ಸಶಸ್ತ್ರ ವಿರೋಧಿ ಗುಂಪು ಎಂದು ತಿಳಿದು ಬಂದಿದೆ.

ಇನ್ನು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವಾಗ, ಮ್ಯಾನ್ಮಾರ್ನ ಬಳಕೆದಾರರು ಶೀರ್ಷಿಕೆಯಲ್ಲಿ “ಚಿನ್ ಬ್ರದರ್ಹುಡ್” , “ಫಲಂ” ಮುಂತಾದ ಪದಗಳನ್ನು ಬರೆದಿದ್ದಾರೆ . ಹೆಚ್ಚಿನ ತನಿಖೆಯು ಬರ್ಮೀಸ್ ಭಾಷೆಯಲ್ಲಿ ಸಂಬಂಧಿತ ಕೀವರ್ಡ್ಗಳಿಗಾಗಿ ಗೂಗಲ್ ಹುಡುಕಾಟಕ್ಕೆ ನಮ್ಮನ್ನು ಕರೆದೊಯ್ಯಿತು ಮತ್ತು ವೀಡಿಯೊದಲ್ಲಿ ಕಂಡುಬರುವ ಸ್ಥಳದ ಚಿತ್ರಗಳೊಂದಿಗೆ ಬರ್ಮೀಸ್ನಲ್ಲಿ ಪ್ರಕಟವಾದ ಹಲವಾರು ಮಾಧ್ಯಮ ವರದಿಗಳು ಕಂಡುಬಂದವು . ಚಿನ್ ಸಹೋದರತ್ವವು ಉತ್ತರ ಚಿನ್ ರಾಜ್ಯದ ಫಲಮ್ ಪಟ್ಟಣದ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಂಡಿದೆ ಮತ್ತು ಸೇನೆಯ ಪದಾತಿ ದಳದ ಬೆಟಾಲಿಯನ್ (IB) 268 ರ ನೆಲೆಯನ್ನು ವಶಪಡಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.
ಮ್ಯಾನ್ಮಾರ್ ನೌ ವರದಿ ಮಾಡಿದಂತೆ , ಐದು ತಿಂಗಳ ಹೋರಾಟದ ನಂತರ ಏಪ್ರಿಲ್ 7 ರ ರಾತ್ರಿ ಚಿನ್ ರಾಜ್ಯದ ಫಲಮ್ ಪಟ್ಟಣದಲ್ಲಿ ಮ್ಯಾನ್ಮಾರ್ ಸೇನೆಯ ಬಳಿ ಉಳಿದಿರುವ ಏಕೈಕ ಪರ್ವತ ನೆಲೆಯನ್ನು ಚಿನ್ ಬ್ರದರ್ಹುಡ್ ಮೈತ್ರಿಕೂಟ ವಶಪಡಿಸಿಕೊಂಡಿತು. ಚಿನ್ ಬ್ರದರ್ಹುಡ್ ಸೇನೆಯ ಪದಾತಿ ದಳದ ಬೆಟಾಲಿಯನ್ (IB) 268 ರ ನೆಲೆಯನ್ನು ವಶಪಡಿಸಿಕೊಂಡ ಮೂಲಕ ಉತ್ತರ ಚಿನ್ ರಾಜ್ಯದ ಫಲಮ್ ಪಟ್ಟಣದ ಸಂಪೂರ್ಣ ನಿಯಂತ್ರಣವನ್ನು ಪಡೆದುಕೊಂಡಿತ್ತು.

Conclusion
ತನಿಖೆಯ ಪ್ರಕಾರ, ಮಣಿಪುರದಲ್ಲಿ ಉಗ್ರಗಾಮಿಗಳಿಂದ ಸೇನೆಯು ಶಸ್ತ್ರಾಸ್ತ್ರ ಮತ್ತು ಹಣವನ್ನು ವಶಪಡಿಸಿಕೊಂಡಿದೆ ಎಂಬ ಹೇಳಿಕೆಯೊಂದಿಗೆ ವೈರಲ್ ಆಗುತ್ತಿರುವ ವೀಡಿಯೋ ಮ್ಯಾನ್ಮಾರ್ ನದ್ದಾಗಿದೆ.
Also Read: ಪಾಕಿಸ್ತಾನದ ವಿವಿಧೆಡೆಗಳಲ್ಲಿ ಭಾರತ ದಾಳಿ ಎಂದು ಲೆಬನಾನ್ ವೀಡಿಯೋ ವೈರಲ್
Our Sources
Report By India Today, Dated 16th May 2025
Report By Myanmar Now, Dated: 9th April 2025
Report By tachileik News Agency, Dated 9th April 2025
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)