Fact Check
ಮದುವೆ ತಯಾರಿಯಲ್ಲಿದ್ದ ಹಿಂದೂಗಳ ಮೇಲೆ ಮುಸ್ಲಿಮರ ಹಲ್ಲೆ ಎಂದ ವೀಡಿಯೋ ಹಿಂದಿನ ನಿಜವೇನು?

Claim
ಮದುವೆ ತಯಾರಿಯಲ್ಲಿದ್ದ ಹಿಂದೂಗಳ ಮೇಲೆ ಮುಸ್ಲಿಮರ ಹಲ್ಲೆ
Fact
ಮದುವೆ ತಯಾರಿಯಲ್ಲಿದ್ದ ಹಿಂದೂಗಳ ಮೇಲೆ ಮುಸ್ಲಿಮರ ಹಲ್ಲೆ ಎನ್ನುವುದು ತಪ್ಪಾಗಿದೆ. ಹಳೆಯ ಹಣಕಾಸಿನ ವಿಚಾರದಲ್ಲಿ ಬಂಧುಗಳ ನಡುವಿನ ಕಲಹ ಇದಾಗಿದೆ
ಮದುವೆ ತಯಾರಿಯಲ್ಲಿದ್ದ ಹಿಂದೂಗಳ ಮೇಲೆ ಮುಸ್ಲಿಮರಿಂದ ಹಲ್ಲೆ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ಎಕ್ಸ್ ನಲ್ಲಿ ಕಂಡುಬಂದ ವೈರಲ್ ವೀಡಿಯೋ ಜೊತೆಗಿನ ಹೇಳಿಕೆಯಲ್ಲಿ “ಮೋದಿ ನಗರ, ಗಾಜಿಯಾಬಾದ್: ಮದುವೆ ತಯಾರಿಯಲ್ಲಿ ನಿರತರಾಗಿದ್ದ ಹಿಂದೂ ಕುಟುಂಬದ ಮೇಲೆ ನೂರಾರು ಮುಸ್ಲಿಮರ ಗುಂಪು ಹಲ್ಲೆ ನಡೆಸಿದೆ. ಒಂದು ಸಣ್ಣ ಅಪಘಾತದ ಬಗ್ಗೆ ವಾದದ ನಂತರ, ಮುಸ್ಲಿಂ ಗುಂಪು ಬಂದು ಕುಟುಂಬದ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿತು. ದಾಳಿಯು ಎಷ್ಟು ಕ್ರೂರವಾಗಿತ್ತು ಎಂದರೆ ಹಲವರು ಗಂಭೀರವಾಗಿ ಗಾಯಗೊಂಡರು” ಎಂದಿದೆ.

ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದೊಂದು ಸಂಬಂಧಿಕರ ನಡುವಿನ ಜಗಳವಾಗಿದ್ದು, ಯಾವುದೇ ಕೋಮು ಆಯಾಮದ ಗಲಾಟೆಯಲ್ಲ ಎಂದು ತಿಳಿದುಬಂದಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಲನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಮಾಧ್ಯಮ ವರದಿಗಳು ಇದು ಹಳೆಯ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ಜಗಳ ಎಂದು ಪೊಲೀಸ್ ಹೇಳಿಕೆಯನ್ನುಲ್ಲೇಖಿಸಿದ ವರದಿ ಮಾಡಿವೆ.
ಫೆಬ್ರವರಿ 28, 2025ರಂದು ನ್ಯೂಸ್ 24 ವರದಿಯಲ್ಲಿ, ಗಾಜಿಯಾಬಾದ್ನ ಲೋನಿ ಪ್ರದೇಶದಲ್ಲಿ ಬೈಕರ್ನೊಬ್ಬ ಸೃಷ್ಟಿಸುತ್ತಿದ್ದ “ಮಾರ್ಪಡಿಸಿದ ಸೈಲೆನ್ಸರ್” ಶಬ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಜನರ ಗುಂಪೊಂದು ಒಂದು ಕುಟುಂಬದ ಮೇಲೆ ಹಲ್ಲೆ ನಡೆಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಶುಕ್ರವಾರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ 1.18 ನಿಮಿಷಗಳ ವೀಡಿಯೋದಲ್ಲಿ ಕೋಲುಗಳನ್ನು ಹಿಡಿದುಕೊಂಡು 10 ರಿಂದ 12 ಜನರ ಗುಂಪು ಮನೆಯೊಂದಕ್ಕೆ ನುಗ್ಗಿ ಕುಟುಂಬದ ಮೇಲೆ ಹಲ್ಲೆ ನಡೆಸಿರುವುದನ್ನು ಕಾಣಬಹುದು” ಎಂದಿದೆ. ಇದೇ ವರದಿಯಲ್ಲಿ “ಆದಾಗ್ಯೂ, ಬಾಕಿ ಹಣದ ಕಾರಣದಿಂದಾಗಿ ಜಗಳ ಭುಗಿಲೆದ್ದಿದ್ದು, ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲೋನಿ ಗಡಿಯ ಲಕ್ಷ್ಮಿ ನಗರದ ಬೀದಿ ಸಂಖ್ಯೆ 14 ರಲ್ಲಿ ಫೆಬ್ರವರಿ 25 ರಂದು ಈ ಘಟನೆ ನಡೆದಿದೆ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದು ಬೈಕ್ನಿಂದ ಬಂದ ಪಟಾಕಿ ಶಬ್ದವಲ್ಲ, ಬದಲಾಗಿ ಕೌಟುಂಬಿಕ ಕಲಹದ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ. ವರದಿಯ ಪ್ರಕಾರ, ಇರ್ಷಾದ್ ಎಂಬ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಜಗಳ ನಡೆದ ಬಗ್ಗೆ ದೂರಿದ್ದಾರೆ, ಆ ಸಮಯದಲ್ಲಿ ಅವರ ಸೋದರಸಂಬಂಧಿ ಸಾದ್ ಮತ್ತು ಇತರರು ದೀರ್ಘಕಾಲದ ಆರ್ಥಿಕ ವಿವಾದದ ಕುರಿತು ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಎರಡೂ ಕಡೆಯವರಿಗೆ ಗಾಯಗಳಾಗಿದ್ದು, ಪ್ರಕರಣ ದಾಖಲಿಸಲಾಗಿದೆ.” ಎಂದಿದೆ.

ಹೀಗಾಗಿ ಇದು ಒಂದೇ ಕುಟುಂಬಕ್ಕೆ ಸೇರಿದ ಮತ್ತು ಒಂದೇ ಸಮುದಾಯದ ವಿಭಿನ್ನ ಸದಸ್ಯರ ನಡುವಿನ ಹೋರಾಟ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ, ಇದು ವೈರಲ್ ಹೇಳಿಕೆಗೆ ವಿರುದ್ಧವಾಗಿದೆ. ಈ ಬಗ್ಗೆ ನಾವು ಇನ್ನಷ್ಟು ಶೋಧ ನಡೆಸಿದ್ದು ವಿವಿಧ ವರದಿಗಳೂ ಅದನ್ನೇ ಹೇಳಿವೆ. ಫೆಬ್ರವರಿ 28, 2025ರ ಫ್ರೀ ಪ್ರೆಸ್ ಜರ್ನಲ್ ವರದಿಯಲ್ಲಿಯೂ ಘಟನೆ ಬಗ್ಗೆ "ಪೊಲೀಸರ ಪ್ರಕಾರ, ಈ ಘಟನೆ ಫೆಬ್ರವರಿ 25 ರಂದು ಲೋನಿ ಗಡಿಯ ಲಕ್ಷ್ಮಿ ನಗರದ ಸ್ಟ್ರೀಟ್ ಸಂಖ್ಯೆ 14 ರಲ್ಲಿ ನಡೆದಿದೆ. ಇದು ಕೌಟುಂಬಿಕ ಕಲಹದ ಪ್ರಕರಣವಾಗಿದ್ದು, ಬೈಕ್ನಿಂದ ಬರುವ ಶಬ್ದಕ್ಕೆ ಸಂಬಂಧಿಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ವರದಿಯ ಪ್ರಕಾರ, ಇರ್ಷಾದ್ ಎಂಬ ವ್ಯಕ್ತಿ ರಸ್ತೆಯಲ್ಲಿ ನಡೆದ ಜಗಳದ ಬಗ್ಗೆ ದೂರು ನೀಡಿದ್ದು, ಆ ಸಮಯದಲ್ಲಿ ಅವರ ಸೋದರ ಸಂಬಂಧಿ ಸಾದ್ ಮತ್ತು ಇತರರು ಹಳೆಯ ಹಣಕಾಸಿನ ವಿವಾದದ ಕುರಿತು ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.” ಎಂದಿದೆ.

ಫೆಬ್ರವರಿ 27, 2025ರ ಐಬಿಸಿ 24 ವರದಿಯಲ್ಲಿ “ಪೊಲೀಸರ ಪ್ರಕಾರ, ಇದು ಕೌಟುಂಬಿಕ ಕಲಹದ ಪ್ರಕರಣವಾಗಿದೆ. ಬೈಕ್ನಿಂದ ಪಟಾಕಿ ಸಿಡಿದ ಬಗ್ಗೆ ಪೊಲೀಸರು ಯಾವುದೇ ಉಲ್ಲೇಖ ಮಾಡಿಲ್ಲ. ಪೊಲೀಸರ ಪ್ರಕಾರ, ಈ ಘಟನೆ ಲೋನಿ ಗಡಿಯ ಲಕ್ಷ್ಮಿ ನಗರದ 14 ನೇ ಲೇನ್ನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇರ್ಷಾದ್ ಎಂಬ ವ್ಯಕ್ತಿ ರಸ್ತೆಯಲ್ಲಿ ನಡೆದ ಜಗಳವನ್ನು ವರದಿ ಮಾಡಿದಾಗ ಹಳೆಯ ಹಣದ ವಿವಾದದಿಂದಾಗಿ ಇರ್ಷಾದ್ ಅವರ ಸೋದರಸಂಬಂಧಿ ಸಾದ್ ಮತ್ತು ಕೆಲವರು ಮನೆಗೆ ನುಗ್ಗಿ ಅವರನ್ನು ಥಳಿಸಿದ್ದಾರೆ. ಮೊದಲು ಅವರು ಸಾದ್ನನ್ನು ಮನೆಯೊಳಗೆ ಎಳೆದುಕೊಂಡು ಹೋಗಿ ನಂತರ ಕೋಲುಗಳಿಂದ ಕ್ರೂರವಾಗಿ ಹೊಡೆದರು. ಈ ವೇಳೆ, ಸಾದ್ ಕಡೆಯ ಜನರು ಸಹ ಗಾಯಗೊಂಡರು” ಎಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ, ಗಾಜಿಯಾಬಾದ್ ಡಿಸಿಪಿ ರೂರಲ್ ಕಮಿಷನರೆಟ್ ನ ಸಹಾಯಕ ಪೊಲೀಸ್ ಆಯುಕ್ತ ಅಂಕುರ್ ವಿಹಾರ್ ಅವರು ಎಕ್ಸ್ ನಲ್ಲಿ ಫೆಬ್ರವರಿ 27, 2025ರಂದು ನೀಡಿದ ವೀಡಿಯೋ ಹೇಳಿಕೆಯನ್ನು ನಾವು ನೋಡಿದ್ದೇವೆ. ವೈರಲ್ ವೀಡಿಯೋದ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯೆಯನ್ನು ಅವರು ನೀಡಿದ್ದು, ಕೌಟುಂಬಿಕ ಕಲಹದ ಪ್ರಕರಣ ಇದಾಗಿದ್ದು ನಾಲ್ವರನ್ನು ಬಂಧಿಸಿದ್ದಾಗಿ ಹೇಳಿದ್ದಾರೆ.
Conclusion
ಈ ಸಾಕ್ಷ್ಯಗಳ ಪ್ರಕಾರ, ಗಾಜಿಯಾಬಾದ್ ನಲ್ಲಿ ಮದುವೆ ತಯಾರಿಯಲ್ಲಿದ್ದ ಹಿಂದೂಗಳ ಮೇಲೆ ಮುಸ್ಲಿಮರ ಹಲ್ಲೆ ಎನ್ನುವುದು ತಪ್ಪಾಗಿದೆ. ಹಳೆಯ ಹಣಕಾಸಿನ ವಿಚಾರದಲ್ಲಿ ಒಂದು ಕುಟುಂಬದ ಇರ್ಷಾದ್ ಮತ್ತು ಸಾದ್ ಎಂಬ ಸಂಬಂಧಿಕರ ನಡುವಿನ ಕಲಹ ಇದಾಗಿದೆ ಎಂದು ಗೊತ್ತಾಗಿದೆ.
Also Read: ಮಹಾಕುಂಭ ಮೇಳದ ಕೊನೆಯಲ್ಲಿ ವಾಯುಪಡೆ ವಿಮಾನಗಳು ತ್ರಿಶೂಲದ ಚಿತ್ತಾರ ಬಿಡಿಸಿವೆಯೇ?
Our Sources
Report By Free Press Journal, Dated: February 28, 2025
Report By News 24, Dated: February 28, 2025
Report By IBC 24, Dated: February 27, 2025
X post By DCP Rural Commissionerate Ghaziabad, February 27, 2025