Fact Check
ಲಕ್ನೋ ನ್ಯಾಯಾಲಯಕ್ಕೆ ಹಾಜರಾದಾಗ ನ್ಯಾಯಾಧೀಶರು ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರೇ?
Claim
ಲಕ್ನೋ ನ್ಯಾಯಾಲಯಕ್ಕೆ ಹಾಜರಾದಾಗ ನ್ಯಾಯಾಧೀಶರು ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದರು
Fact
ನ್ಯಾಯಾಧೀಶರು ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿಲ್ಲ, ಹಾಗೆ ಸೆಲ್ಫಿ ತೆಗೆದವರು ವಕೀಲ ಸೈಯದ್ ಮಹಮೂದ್ ಹಸನ್ ಅವರಾಗಿದ್ದಾರೆ
ಲಕ್ನೋ ನ್ಯಾಯಾಲಯಕ್ಕೆ ಹಾಜರಾದಾಗ ರಾಹುಲ್ ಗಾಂಧಿ ಅವರೊಂದಿಗೆ ನ್ಯಾಯಾಧೀಶರು ಸೆಲ್ಫಿ ತೆಗೆದುಕೊಂಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ .

ಆದರೆ, ನಮ್ಮ ತನಿಖೆಯಲ್ಲಿ ಈ ಫೋಟೋದಲ್ಲಿ ಕಾಣುವ ವ್ಯಕ್ತಿ ಲಕ್ನೋ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿರುವ ಸೈಯದ್ ಮಹಮೂದ್ ಹಸನ್ ಎಂದು ಗೊತ್ತಾಗಿದೆ.
ಜುಲೈ 15 ರ ಮಧ್ಯಾಹ್ನ, ಭಾರತೀಯ ಸೇನೆಯ ಬಗ್ಗೆ ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಲಕ್ನೋ ನ್ಯಾಯಾಲಯಕ್ಕೆ ಹಾಜರಾಗಿ ಶರಣಾದರು. ಆದಾಗ್ಯೂ, ಶರಣಾದ 5 ನಿಮಿಷಗಳ ನಂತರ ಅವರಿಗೆ ಜಾಮೀನು ನೀಡಲಾಯಿತು. ಡಿಸೆಂಬರ್ 2022 ರಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭ ರಾಹುಲ್ ಗಾಂಧಿ ಭಾರತೀಯ ಸೇನೆಯ ಬಗ್ಗೆ ಹೇಳಿಕೆ ನೀಡಿದ್ದರು, ಅನಂತರ ಮಾಜಿ ಬಿಆರ್ಒ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯಕ್ಕೆ ದೂರು ದಾಖಲು ಮಾಡಿದ್ದರು.
ರಾಹುಲ್ ಗಾಂಧಿ ಲಕ್ನೋ ನ್ಯಾಯಾಲಯಕ್ಕೆ ಹಾಜರಾದ ನಂತರ ವೈರಲ್ ಆಗಿರುವ ಈ ಫೋಟೋದಲ್ಲಿ, ಕಪ್ಪು ಕೋಟ್ ಧರಿಸಿದ ವ್ಯಕ್ತಿಯೊಬ್ಬರು ರಾಹುಲ್ ಗಾಂಧಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು. ಈ ಫೋಟೋದಲ್ಲಿ ಕಾಂಗ್ರೆಸ್ ನಾಯಕ ಅಜಯ್ ಕುಮಾರ್ ಲಲ್ಲು ಮತ್ತು ಇತರ ಅನೇಕ ಜನರು ಸಹ ಇದ್ದಾರೆ.
Also Read: ಪೊಲೀಸ್ ವ್ಯಕ್ತಿಯೊಬ್ಬನಿಗೆ ಹೊಡೆಯುತ್ತಿರುವ ವೈರಲ್ ವೀಡಿಯೋ ಎಲ್ಲಿಯದ್ದು?
Fact Check/Verification
ಲಕ್ನೋ ನ್ಯಾಯಾಲಯಕ್ಕೆ ಹಾಜರಾದಾಗ ರಾಹುಲ್ ಗಾಂಧಿ ಅವರೊಂದಿಗೆ ನ್ಯಾಯಾಧೀಶರೊಬ್ಬರು ಸೆಲ್ಫಿ ತೆಗೆದುಕೊಂಡಿದ್ದಾರೆ ಎಂಬ ವೈರಲ್ ಹೇಳಿಕೆಯ ಬಗ್ಗೆ ಪರಿಶೀಲನೆ ನಡೆಸುತ್ತಿರುವ ವೇಳೆ ಜುಲೈ 15, 2025 ರಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಟೆ ಮಾಡಿದ ಪೋಸ್ಟ್ ನಮಗೆ ಸಿಕ್ಕಿತು , ಅದರಲ್ಲಿ ಅವರು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಪೋಸ್ಟ್ ನಲ್ಲಿದ್ದ ಹೇಳಿಕೆಯನ್ನು ನಿರಾಕರಿಸಿದ್ದಾರೆ. ಸುಪ್ರಿಯಾ ಶ್ರೀನಾಟೆ ತಮ್ಮ ಪೋಸ್ಟ್ನಲ್ಲಿ ಫೋಟೋ ತೆಗೆದ ವ್ಯಕ್ತಿ ನ್ಯಾಯಾಧೀಶರಲ್ಲ, ಬದಲಾಗಿ ಅವರು ವಕೀಲರು ಎಂದು ಬರೆದಿದ್ದಾರೆ.

ಏತನ್ಮಧ್ಯೆ, ಲಕ್ನೋ ಮೂಲದ ಪತ್ರಕರ್ತ ಗೌರವ್ ಸಿಂಗ್ ಸೆಂಗಾರ್ ಅವರ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ನೋಡಿದ್ದೇವೆ. ಅದರಲ್ಲಿ ಅವರು ವೈರಲ್ ಫೋಟೋವನ್ನು ಪೋಸ್ಟ್ ಮಾಡಿ, “ವೈರಲ್ ಫೋಟೋ ವಿಷಯ – ಫೋಟೋದಲ್ಲಿರುವ ವ್ಯಕ್ತಿ ವಕೀಲರು, ನ್ಯಾಯಾಧೀಶರಲ್ಲ. ವಕೀಲರು ಸೈಯದ್ ಮಹಮೂದ್ ಹಸನ್. ವದಂತಿಗಳನ್ನು ಹರಡಬೇಡಿ ಮತ್ತು ಅವುಗಳನ್ನು ಹರಡಲು ಬಿಡಬೇಡಿ!!” ಎಂದು ಬರೆದಿದ್ದಾರೆ.

ತನಿಖೆಯ ಸಮಯದಲ್ಲಿ, ನಮಗೆ ಸೈಯದ್ ಮಹಮೂದ್ ಹಸನ್ ಅವರ ಫೇಸ್ಬುಕ್ ಖಾತೆಯೂ ಸಿಕ್ಕಿತು . ಈ ಫೇಸ್ಬುಕ್ ಖಾತೆಯ ಬಗ್ಗೆ ವಿಭಾಗದಲ್ಲಿ, ಅವರು ತಮ್ಮನ್ನು ಹೈಕೋರ್ಟ್ ಮತ್ತು ಸಿವಿಲ್ ನ್ಯಾಯಾಲಯದ ವಕೀಲ ಎಂದು ಬಣ್ಣಿಸಿಕೊಂಡಿದ್ದಾರೆ.

ಆ ನಂತರ ಫೋಟೋದಲ್ಲಿ ಕಾಣುವ ಸೈಯದ್ ಮಹಮೂದ್ ಹಸನ್ ಅವರನ್ನು ಸಹ ನಾವು ಸಂಪರ್ಕಿಸಿದೆವು. ಅವರು “ಈ ಫೋಟೋದಲ್ಲಿ ನಾನೇ ಇದ್ದೇನೆ ಮತ್ತು ನಾನು ನ್ಯಾಯಾಧೀಶನಲ್ಲ, ವಕೀಲ. ನಾನು ಲಕ್ನೋ ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿಕೆ ಮಾಡುತ್ತೇನೆ. ರಾಹುಲ್ ಗಾಂಧಿ ಲಕ್ನೋ ನ್ಯಾಯಾಲಯಕ್ಕೆ ಹಾಜರಾದಾಗ ನಾನು ಈ ಚಿತ್ರವನ್ನು ತೆಗೆದುಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ.
Conclusion
ತನಿಖೆಯಲ್ಲಿ ದೊರೆತ ಪುರಾವೆಗಳ ಮೂಲಕ, ಲಕ್ನೋ ನ್ಯಾಯಾಲಯಕ್ಕೆ ಹಾಜರಾದಾಗ ರಾಹುಲ್ ಗಾಂಧಿ ಅವರೊಂದಿಗೆ ನ್ಯಾಯಾಧೀಶರು ಸೆಲ್ಫಿ ತೆಗೆದುಕೊಂಡಿದ್ದಾರೆ ಎಂಬ ಹೇಳಿಕೆ ಸುಳ್ಳು. ಅವರೊಂದಿಗೆ ಸೆಲ್ಫಿ ತೆಗೆದವರು ವಕೀಲ ಸೈಯದ್ ಮಹಮೂದ್ ಹಸನ್ ಅವರಾಗಿದ್ದಾರೆ ಎಂದು ಸಾಬೀತಾಗಿದೆ.
Our Sources
X Post by Supriya Shrinate Dated: 15th July 2025
Facebook Post by Gaurav Singh Sengar Dated: 15th July 2025
Telephonic Conversation with Syed Mahmood Hasan
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)