Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅತಿ ಹೆಚ್ಚು ಸುದ್ದಿಯಾಗಿದ್ದು, ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳು. 200 ಯುನಿಟ್ “ಉಚಿತ ವಿದ್ಯುತ್” ಭರವಸೆ ಕೂಡ ಇದರಲ್ಲಿ ಒಂದು. ಈ ವಿಚಾರವನ್ನೇ ಪ್ರಮುಖವಾಗಿಸಿ, ಜನರು ವಿದ್ಯುತ್ ಬಿಲ್ ಕಟ್ಟಲು ನಿರಾಕರಿಸಿದ್ದಾರೆ, ವಿದ್ಯುತ್ ಬಿಲ್ ಕೇಳಲು ಹೋದ ವಿದ್ಯುತ್ ಇಲಾಖೆ ಲೈನ್ ಮ್ಯಾನ್‌ಗೇ ಹಲ್ಲೆ ನಡೆಸಲಾಗಿದೆ ಎಂಬ ಕ್ಲೇಮ್ ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಈ ವಾರ ಹರಿದಾಡಿತ್ತು. ಇದರೊಂದಿಗೆ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಡಿ.ಕೆ.ಶಿವಕುಮಾರ್ ಟಿಪ್ಪು ಸಮಾಧಿಗೆ ಭೇಟಿ ನೀಡಿ ನಮಸ್ಕರಿಸಿದ್ದರು, ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ತ್ರಿವರ್ಣ ಧ್ವಜದ ಮಧ್ಯೆ ಮಸೀದಿ ಚಿತ್ರ ಇರುವ ಧ್ವಜವನ್ನು ಸಿರಗುಪ್ಪದಲ್ಲಿ ಹಾರಿಸಲಾಗಿದೆ ಎಂಬ ಹೇಳಿಕೆ, ಪಿ-500 ಪಾರಾಸಿಟಮಲ್ ಮಾತ್ರೆಯಲ್ಲಿ ಅಪಾಯಕಾರಿ ಮಚುಪೊ ವೈರಸ್ ಇದೆ ಎನ್ನುವ ಕ್ಲೇಮ್ ಗಳೂ ಈ ವಾರ ಸದ್ದುಮಾಡಿದ್ದವು. ಇವುಗಳ ಕುರಿತಾಗಿ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಸತ್ಯಾಸತ್ಯತೆಯನ್ನು ತೆರೆದಿಟ್ಟಿದೆ.
ಕಾಂಗ್ರೆಸ್ ಗ್ಯಾರೆಂಟಿ ಸ್ಕೀಮ್ ಪ್ರಕಾರ ವಿದ್ಯುತ್ ಬಿಲ್ ಕಟ್ಟಬೇಕಿಲ್ಲ ಎಂದು, ಕೊಪ್ಪಳ ಕುಕನಹಳ್ಳಿಯ ವ್ಯಕ್ತಿಯೊಬ್ಬ ವಿದ್ಯುತ್ ಮೀಟರ್ ರೀಡಿಂಗ್ ಮಾಡಲು ಬಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸತ್ಯಶೋಧನೆ ವೇಳೆ ಇದು ಕಾಂಗ್ರೆಸ್ ಗ್ಯಾರೆಂಟಿ ಸ್ಕೀಮ್ ವಿಚಾರಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿದುಬಂದಿತ್ತು. 9000 ರೂ. ವಿದ್ಯುತ್ ಬಿಲ್ ಕಟ್ಟದೇ ಬಾಕಿ ಉಳಿಸಿಕೊಂಡಿದ್ದ ಆ ವ್ಯಕ್ತಿ ಬಳಿ ಬಿಲ್ ಕಟ್ಟುವಂತೆ ಹೇಳಿದಾಗ ಆತ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಕಾಂಗ್ರೆಸ್ ಪ್ರಣಾಳಿಕೆ ಭರವಸೆಯನ್ನು ಉಲ್ಲೇಖಿಸಿ ಹಲವೆಡೆ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದರೂ ಕುಕನಹಳ್ಳಿ ಘಟನೆಗೆ ಸಂಬಂಧವಿಲ್ಲದಿರುವುದು ಪತ್ತೆಯಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ.
ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಿಪ್ಪು ಸುಲ್ತಾನ್ ಸಮಾಧಿಗೆ ಭೇಟಿ ಮಾಡಿ, ನಮಸ್ಕರಿಸಿದರು ಎಂದು ಸಾಮಾಜಿಕ ಜಾಲತಾಣದಲ್ಲಿ ಫೊಟೊ ಒಂದು ಹರಿದಾಡಿದೆ. ಈ ವೈರಲ್ ಫೋಟೋ ಬಗ್ಗೆ ಸತ್ಯಶೋಧನೆ ನಡೆಸಿದ ವೇಳೆ ಇದು 3 ವರ್ಷಗಳಷ್ಟು ಹಳೆಯದ್ದು ಎಂದು ತಿಳಿದುಬಂದಿದೆ ಮತ್ತು ಹಲವು ಮಾಧ್ಯಮ ವರದಿಗಳೂ ಇದನ್ನು ದೃಢಪಡಿಸಿವೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ, ಸಿರಗುಪ್ಪದಲ್ಲಿ ನಡೆದ ಘಟನೆ ಅಶೋಕ ಚಕ್ರದ ಬದಲು ಮಸೀದಿಯ ಚಿತ್ರ ಬಂದಾಯ್ತು ಇನ್ನು ಏನೇನು ಕಾದಿದೆಯೋ ಏನೋ ಎಂಬರ್ಥದಲ್ಲಿ ತ್ರಿವರ್ಣಧ್ವಜ, ಮಧ್ಯದಲ್ಲಿ ಮಸೀದಿ ಚಿತ್ರ ಇರುವ ಧ್ವಜ ಹಾರಾಡುವ ಚಿತ್ರವೊಂದು ವೈರಲ್ ಆಗಿತ್ತು. ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್‌ಲೈನ್‌ಗೆ ಬಂದ ದೂರನ್ನು ಸತ್ಯಶೋಧನೆ ನಡೆಸಿದಾಗ ವೈರಲ್ ಚಿತ್ರವಿರುವ ಮೆಸೇಜ್ ಸುಮಾರು ನಾಲ್ಕು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಈಗಿನ ಸಂದರ್ಭದ್ದಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ.
ಪಿ-500 ಪಾರಾಸಿಟಮಲ್ ಮಾತ್ರೆಯಲ್ಲಿ ಅಪಾಯಕಾರಿ ಮಚುಪೊ ವೈರಸ್ ಇದೆ, ಇದರಿಂದ ಸಾವಿನ ಪ್ರಮಾಣ ಹೆಚ್ಚು ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. “ಅತ್ಯಂತ ಬಿಳಿ ಮತ್ತು ಹೊಳೆಯುವ ರೀತಿಯ” ಪಾರಾಸಿಟಮಲ್ ಮಾತ್ರೆಯಲ್ಲಿ ಮಚುಪೊ ವೈರಸ್ ಇದೆ ಎಂದು ಹೇಳಲಾಗಿದ್ದು ಇದರಿಂದ ಸಾವಿನ ಪ್ರಮಾಣ ಅಧಿಕವಾಗಿದೆ ಎನ್ನಲಾಗಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಲಾಗಿದ್ದು, ಅಪಾಯಕಾರಿ ವೈರಸ್ ಇದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಮಣಿಪುರದಲ್ಲಿ ಪ್ರಪಾತಕ್ಕೆ ಬಸ್ ಒಂದುಬಿದ್ದಿದೆ ಎಂದು ವೀಡಿಯೋ ಒಂದು ವೈರಲ್ ಆಗಿತ್ತು. ಏಕಾಏಕಿ ಬಸ್ ಚಲಿಸಿ, ಪ್ರಪಾತಕ್ಕೆ ಬೀಳುವ ವೀಡಿಯೋ ಇದಾಗಿತ್ತು. ಇದನ್ನು ಸತ್ಯಶೋಧನೆಗೆ ಒಳಪಡಿಸಿದ ವೇಳೆ, ಬಸ್ ಪ್ರಪಾತಕ್ಕೆ ಬಿದ್ದ ಈ ಘಟನೆ ನಡೆದಿದ್ದು ಇಂಡೋನೇಷ್ಯಾದಲ್ಲಿ, ಮಣಿಪುರದಲ್ಲಿ ಅಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಮಹಿಳೆಯರು ಬೆಳ್ಳಿ ಕಾಲ್ಗೆಜ್ಜೆ ಧರಿಸುವುದರಿಂದ ರಕ್ತ ಪರಿಚಲನೆ, ರೋಗನಿರೋಧಕ ಶಕ್ತಿ ಹೆಚ್ಚುತ್ತದೆ, ದೇಹದ ಉಷ್ಣತೆ ಕಡಿಮೆ ಮಾಡುತ್ತದೆ ಎಂಬ ಕ್ಳೇಮ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ನ್ಯೂಸ್‌ಚೆಕರ್-ಥಿಪ್ ಸತ್ಯಶೋಧನೆ ನಡೆಸಿದ್ದು, ಬೆಳ್ಳಿಯ ಕಾಲ್ಗೆಜ್ಜೆ ಧರಿಸುವುದರಿಂದ ನಿರ್ದಿಷ್ಟ ಪ್ರಯೋಜನವಿದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ