Authors
ಅರಬ್ಬೀ ಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತ ಸೃಷ್ಟಿಯಾಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಕ್ಲೇಮುಗಳೂ ಹರಿದಾಡಿವೆ. ಡಿಜಿಟಲ್ ಆಗಿ ಮಾರ್ಪಡಿಸಿದ ವೀಡಿಯೋಗಳು, ಗಾಳಿಯ ರಭಸಕ್ಕೆ ತೂಗಾಡುವ ತೆಂಗಿನ ಮರದ ವೈರಲ್ ವೀಡಿಯೋಗಳನ್ನು ಹಾಕಿ ಇದು ಬಿಪರ್ ಜಾಯ್ ಎಂದು ಹೇಳಲಾಗಿತ್ತು. ಸೇತುವೆ ಮೇಲೆ ಗುಜರಾತ್ನಲ್ಲಿ ದೊಡ್ಡ ತೆರೆ ಅಪ್ಪಳಿಸಿದೆ ಎಂದು ಹಳೇ ವೈರಲ್ ವೀಡಿಯೋಕ್ಕೆ ಚಂಡಮಾರುತ ಥಳುಕು ಹಾಕಲಾಗಿತ್ತು. ಇದರೊಂದಿಗೆ ಲ್ಯಾಟಿನ್ ಅಮೆರಿಕದಲ್ಲಿ ಪ್ರವಾಹದಲ್ಲಿ ಕಾರು ಕೊಚ್ಚಿ ಹೋದ ಘಟನೆಯೊಂದನ್ನು ದಾಂಡೇಲಿಯಲ್ಲಿ ನಡೆದಿದ್ದು ಎಂದು ಹೇಳಲಾಗಿತ್ತು. ಇನ್ನು ಅಗ್ನಿಪಥ್ ಯೋಜನೆ ವಿರುದ್ಧದ ಪ್ರತಿಭಟನೆಗೆ ನಡೆಸಿದ ರೈಲು ಹಳಿ ಕ್ಲಾಂಪ್ ಕಿತ್ತು ಹಾಕಿದ ಪ್ರಕರಣಕ್ಕೆ ಕೋಮು ಬಣ್ಣ, ಭಟ್ಪಾರಾದಲ್ಲಿ ಬಿಜೆಪಿ ವಿಜಯ ಎಂದು ಸುಳ್ಳು ಕ್ಲೇಮ್‌ಗಳು ಹರಡಿದ್ದು ಈ ವಾರ ಕಂಡುಬಂದಿದೆ.
ದ್ವಾರಕೆ ಬಳಿ ಬಿಪರ್ ಜಾಯ್ ಚಂಡಮಾರುತ ಎಂದು 2022ರಲ್ಲಿ ಡಿಜಿಟಲ್ ಆಗಿ ಮಾರ್ಪಡಿಸಿದ ವೀಡಿಯೋ ಹಂಚಿಕೆ
ಗುಜರಾತ್ ಕರಾವಳಿಯ ದ್ವಾರಕೆ ಬಳಿ ಬಿಪರ್ ಜಾಯ್ ಚಂಡಮಾರುತ ಸಮುದ್ರ ಮೇಲೆರಗುವ ದೃಶ್ಯ ಎಂಬ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ನ್ಯೂಸ್‌ಚೆಕರ್ ಸತ್ಯಶೋಧನೆ ವೇಳೆ ಇದೊಂದು ಕೃತಕವಾಗಿ ತಯಾರಿಸಿದ ವೀಡಿಯೋ ಎಂಬುದು ದೃಢಪಟ್ಟಿದೆ ಮತ್ತು ಈ ವೀಡಿಯೋವನ್ನು ತಯಾರಿಸಿದವರು ಇದರ ಬಗ್ಗೆ ಸ್ಪಷ್ಟೀಕರಣವನ್ನೂ ನೀಡಿದ್ದು, ಇದು ಬಿಪರ್ ಜಾಯ್ ಚಂಡಮಾರುತಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದಾರೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಸೇತುವೆ ಮೇಲೆ ಭಾರೀ ತೆರೆಗಳು ಅಪ್ಪಳಿಸುವ ವೈರಲ್ ವೀಡಿಯೋ ಬಿಪರ್ ಜಾಯ್ ಚಂಡಮಾರುತದ್ದಲ್ಲ!
ಇನ್ನೊಂದು ವೈರಲ್ ವೀಡಿಯೋದಲ್ಲಿ, ಬಿಪರ್ ಜಾಯ್ ಚಂಡಮಾರುತದಿಂದಾಗಿ ಗುಜರಾತಲ್ಲಿ ಸೇತುವೆಯ ಮೇಲೆ ಭಾರೀ ತೆರೆ ಅಪ್ಪಳಿಸಿದೆ ಎಂದು ಹೇಳಲಾಗಿತ್ತು. ಸತ್ಯಶೋಧನೆಯ ವೇಳೆ ಈ ವೀಡಿಯೋ, 2017 ರಂದು ಲಕ್ಷದ್ವೀಪ ಸಮೂಹದ ಮಿನಿಕೋಯ್ ದ್ವೀಪದ ಪೂರ್ವ ಜೆಟ್ಟಿಯ ಮೇಲೆ ಬೃಹತ್ ಅಲೆಗಳು ಬಡಿದ ದೃಶ್ಯವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ತೆಂಗಿನ ಮರ ತೂಗಾಡಿದ್ದು ಬಿಪರ್ ಜಾಯ್ ಚಂಡಮಾರುತ ಕಾರಣ ಅಲ್ಲ, ಇದು ಸುಳ್ಳು!
ಬಿಪರ್ ಜಾಯ್ ಚಂಡಮಾರುತದಿಂದಾಗಿ ತೆಂಗಿನ ಮರ ತೀವ್ರವಾಗಿ ತೂಗಾಡುತ್ತಿರುವ ದೃಶ್ಯ ಎಂಬ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿತ್ತು. ಸತ್ಯಶೋಧನೆಯಲ್ಲಿ ಇದು 2022ರ ಘಟನೆ ಮತ್ತು ಮುಂಬೈನಲ್ಲಿ ನಡೆದಿದೆ ಎಂದು ಗೊತ್ತಾಗಿತ್ತು. ಭಾರೀ ಗಾಳಿಯ ರಭಸಕ್ಕೆ ತೆಂಗಿನ ಮರ ತೂಗಾಡಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಭಟ್ಪಾರಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ, ಸತ್ಯ ಏನು?
ಭಟ್ಪಾರಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ 26 ಸ್ಥಾನಗಳನ್ನು ಗೆದ್ದು ಬಿಜೆಪಿ ಜಯಭೇರಿ ಬಾರಿಸಿದೆ ಎಂಬ ಕ್ಲೇಮ್ ಒಂದು ವಾಟ್ಸಾಪಿನಲ್ಲಿ ಹರಿದಾಡಿತ್ತು. ಪಾಲಿಕೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಒಂದೂ ಖಾತೆ ತೆರೆದಿಲ್ಲ ಎಂದೂ ಹೇಳಲಾಗಿತ್ತು. ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಭಟ್ಪಾರಾ ಮಹಾನಗರ ಪಾಲಿಕೆ ಚುನಾವಣೆ 2022ರಲ್ಲಿ ನಡೆದಿದ್ದು ತೃಣಮೂಲ ಕಾಂಗ್ರೆಸ್ ಜಯಗಳಿಸಿತ್ತು ಎಂಬುದು ಪತ್ತೆಯಾಗಿದೆ. ಅಲ್ಲದೇ ಗರಿಷ್ಠ ಸ್ಥಾನವನ್ನು ತೃಣಮೂಲ ಕಾಂಗ್ರೆಸ್ಸೇ ಪಡೆದಿತ್ತು. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ರೈಲ್ವೇ ಹಳಿ ಕ್ಲಾಂಪ್‌ಗಳನ್ನು ಕಿತ್ತು ಹಾಕಿ ನಡೆಸಿದ ಪ್ರತಿಭಟನೆಗೆ ಕೋಮು ಬಣ್ಣ!
ಒಡಿಶಾದಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್ ದುರಂತದ ಬೆನ್ನಲ್ಲೇ, ಶಾಂತಿಪ್ರಿಯ ಯುವಕರು ರೈಲ್ವೇ ಹಳಿ ಕ್ಲಾಂಪ್‌ಗಳನ್ನು ಕಿತ್ತು ಹಾಕಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದನ್ನು ಹರಿಯಬಿಡಲಾಗಿತ್ತು. ಪರೋಕ್ಷವಾಗಿ ಇದು ಒಂದು ಸಮುದಾಯವನ್ನು ಉದ್ದೇಶಿಸಿ ಮಾಡಲಾಗಿತ್ತು. ಈ ಬಗ್ಗೆ ಸತ್ಯಶೋಧನೆ ವೇಳೆ, ಒಡಿಶಾದಲ್ಲಿ ನಡೆದ ಕೋರಮಂಡಲ್ ಎಕ್ಸ್ ಪ್ರೆಸ್ ದುರಂತಕ್ಕೂ ಇದಕ್ಕೂ ಸಂಬಂಧವಿಲ್ಲ, ರೈಲ್ವೇ ಹಳಿ ಕ್ಲಾಂಪ್‌ಗಳನ್ನು ಕಿತ್ತು ಹಾಕಿರುವ ವಿದ್ಯಮಾನ 2022 ಜೂನ್ ವೇಳೆ ಅಗ್ನಿಪಥ ಯೋಜನೆ ವಿರುದ್ಧದ ಪ್ರತಿಭಟನೆಯಲ್ಲಿ ರಾಜಸ್ಥಾನದಲ್ಲಿ ನಡೆದ ಬಗ್ಗೆ ವರದಿಯಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ದಾಂಡೇಲಿಯ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರು, ಈ ಘಟನೆ ನಿಜವೇ?
ದಾಂಡೇಲಿಯ ಪ್ರವಾಹದಲ್ಲಿ ಕಾರೊಂದು ಕೊಚ್ಚಿಕೊಂಡು ಹೋಗಿದೆ ಎಂದು ವೀಡಿಯೋ ಒಂದು ವೈರಲ್ ಆಗಿತ್ತು. ಈ ವೀಡಿಯೋವನ್ನು ಸತ್ಯಶೋಧನೆಗೆ ಒಳಪಡಿಸಿದ ವೇಳೆ ಇದು ದಾಂಡೇಲಿಯಲ್ಲಿ ನಡೆದ ಘಟನೆಯಲ್ಲ, ಲ್ಯಾಟಿನ್ ಅಮೆರಿಕಾದ ನಿಕರಗುವಾ ದೇಶದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಈರುಳ್ಳಿ ರಸ ಹಾಕುವುದರಿಂದ ಕಿವಿ ನೋವು ಗುಣವಾಗುತ್ತಾ?
ಈರುಳ್ಳಿ ರಸವನ್ನು ಹಾಕುವುದರಿಂದ ಕಿವಿ ನೋವು ಗುಣವಾಗುತ್ತದೆ ಎಂದು ಕ್ಲೇಮ್ ಒಂದರಲ್ಲಿ ಹೇಳಲಾಗಿದೆ. ಆದರೆ ಈರುಳ್ಳಿ ರಸ ಹಾಕುವುದರಿಂದ ಕಿವಿ ನೋವು ಸಂಪೂರ್ಣ ಗುಣವಾಗುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ. ಹೀಗೆ ಮಾಡುವುದರಿಂದ ಕಿವಿ ಸಮಸ್ಯೆ ಬಿಗಡಾಯಿಸಬಹುದು ಮತ್ತು ವೈದ್ಯರ ನೆರವಿನಿಂದಲೇ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ