Authors
ದೆಹಲಿ ಪೊಲೀಸರು ಬಂಧಿಸಿದಾಗ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಸಂಗೀತಾ ಫೋಗಟ್ ತೆಗೆದ ಫೊಟೋ ವೈರಲ್, ಮೂಳೆಗಳಿರುವ ಕ್ಯಾಪ್ಸೂಲ್ ಮೂಲಕ ಜಿಹಾದ್, ನಟ ಡ್ವೇನ್ ಜಾನ್ಸನ್ ಹಿಂದೂ ರೀತಿ ಆರತಿ ಮಾಡುತ್ತಿದ್ದಾರೆ ಎನ್ನುವ ಕ್ಲೇಮ್ ಗಳು ಈ ವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ಸುದ್ದಿಯ ಸುತ್ತ ಹಲವು ಸುಳ್ಳು ಸುದ್ದಿಗಳು ಓಡಾಡಿದ್ದು, ಅವುಗಳಲ್ಲಿ ಬಂಧನ ಬಳಿಕ ಅವರು ನಗುತ್ತಾ ಸೆಲ್ಫಿ ತೆಗೆದುಕೊಂಡರು ಎಂದು ಒಂದರಲ್ಲಿ ಹೇಳಲಾಗಿತ್ತು. ಅದೇ ರೀತಿ ನಟ ಡ್ವೇನ್ ಜಾನ್ಸನ್ ಆರತಿ ಮಾಡುತ್ತಿರುವ ಫೋಟೋ ಕೂಡ ಕೃತಕ ಬುದ್ಧಿಯ ಕರಾಮತ್ತಾಗಿತ್ತು. ಕ್ಯಾಪ್ಸೂಲ್ ಒಳಗಡೆ ಮೊಳೆಗಳಿವೆ ಎಂದು ಹೇಳಲಾದ ಇನ್ನೊಂದು ವೀಡಿಯೋ ರಷ್ಯಾ ಮತ್ತು ಪಾಕಿಸ್ಥಾನದ್ದಾಗಿತ್ತು. ಆರೋಗ್ಯ ಸಂಬಂಧಿ ಹೇಳಿಕೆಯೊಂದರಲ್ಲಿ ಜೋಳದ ರೊಟ್ಟಿ ತಿನ್ನುವುದರಿಂದ ಕ್ಯಾನ್ಸರ್, ಹೃದಯ, ಕಿಡ್ನಿ ಕಾಯಿಲೆಗಳನ್ನು ತಡೆಯಬಹುದು ಎನ್ನಲಾಗಿದ್ದು, ಇದು ತಪ್ಪು ಸಂದರ್ಭದ್ದು ಎಂದು ಗೊತ್ತಾಗಿದೆ.
ದೆಹಲಿ ಪೊಲೀಸರು ಬಂಧಿಸಿದ ವೇಳೆಯ ವಿನೇಶ್ ಫೋಗಟ್, ಸಂಗೀತಾ ಫೋಗಟ್ ಫೋಟೋ ವೈರಲ್
ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಬಂಧನಕ್ಕೊಳಗಾದ ನಂತರ ಪೊಲೀಸ್ ವ್ಯಾನ್‌ನಲ್ಲಿ ನಗುತ್ತ ಸೆಲ್ಫಿ ತೆಗೆದಿದ್ದನ್ನು ತೋರಿಸುವ ಫೋಟೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿತ್ತು. ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಕುಸ್ತಿಪಟುಗಳು ನವದೆಹಲಿಯ ಜಂತರ್ ಮಂತರ್ ನಲ್ಲಿ ಸುಮಾರು 35 ದಿನಗಳಿಂದ ತಾತ್ಕಾಲಿಕ ವಸತಿಗಳಲ್ಲಿದ್ದ ಕುಸ್ತಿಪಟುಗಳನ್ನು ಸಂಸತ್ ಭವನ ಉದ್ಘಾಟನೆಯಂದು ತೆರವು ಗೊಳಿಸಿದ ವೇಳೆ ಈ ವೇಳೆ ಕುಸ್ತಿಪಟುಗಳನ್ನು ವಶಕ್ಕೆ ಪಡೆಯಲಾಗಿತ್ತು. ಆ ನಂತರ ಅವರು ಪೊಲೀಸ್ ವ್ಯಾನ್ ಒಳಗೆ ನಗುತ್ತಿದ್ದರು ಎನ್ನಲಾಗಿತ್ತು. ಸತ್ಯಶೋಧನೆ ವೇಳೆ ಈ ಫೋಟೋ ಸುಳ್ಳು, ವಿನೇಶ್ ಫೋಗಟ್ ಮತ್ತು ಸಂಗೀತಾ ಫೋಗಟ್ ಅವರ ವೈರಲ್ ಫೋಟೋ ಎಐ ಅಪ್ಲಿಕೇಶನ್ ಬಳಸಿ ತಿರುಚಲಾಗಿದೆ ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ನಟ ಡ್ವೇನ್ ಜಾನ್ಸನ್ ‘ಆರತಿ’ ಮಾಡುತ್ತಿರುವ ವೈರಲ್ ಫೋಟೋ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕರಾಮತ್ತು!
ಖ್ಯಾತ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಹಿಂದೂ ಉಡುಪನ್ನು ಧರಿಸಿ ಆರತಿಯನ್ನು ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಸತ್ಯಶೋಧನೆ ಭಾಗವಾಗಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಇದು ಕೃತಕ ಬುದ್ಧಿಮತ್ತೆಯನ್ನು ಬಳಸಿ ಸೃಷ್ಟಿಸಿದ ಚಿತ್ರಗಳು ಎಂದು ತಿಳಿದುಬಂದಿದೆ. ಭಾರ್ಗವ್ ವಲೇರಾ ಎಂಬವರು ಈ ಚಿತ್ರವನ್ನು ಸೃಷ್ಟಿದವರಾಗಿದ್ದು, ಅವರ ಫೇಸ್‌ಬುಕ್ ಖಾತೆಗಳಲ್ಲಿ ಇವುಗಳು ಪತ್ತೆಯಾಗಿವೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಮೊಳೆಗಳಿರುವ ಕ್ಯಾಪ್ಸೂಲ್ ಮೂಲಕ ಜಿಹಾದ್, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಕ್ಯಾಪ್ಸೂಲ್‌ಗಳಲ್ಲಿ ಮೊಳೆಗಳಿವೆ ಎಂಬ ವೈರಲ್ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ವೀಡಿಯೋದಲ್ಲಿ ಒಬ್ಬ ಔಷಧದ ಪ್ಯಾಕೆಟ್ ತೆರೆದು ಅನಂತರ ಕ್ಯಾಪ್ಸೂಲ್ ಹೊರತೆಗೆದು ಅದೊರಳಗೆ ಮೊಳೆ ಇರುವುದನ್ನು ತೋರಿಸುತ್ತಾನೆ. ಇನ್ನೊಂದು ಪ್ಯಾಕೆಟ್ ಕ್ಯಾಪ್ಸೂಲ್‌ನಲ್ಲೂ ಮೊಳೆಗಳಿರುವುದನ್ನು ತೋರಿಸಲಾಗುತ್ತದೆ.ಈ ಕ್ಲೇಮಿನಲ್ಲಿ ಮೊಳೆಗಳಿರುವ ಕ್ಯಾಪ್ಸೂಲ್‌ಗಳ ಮೂಲಕ ಹೊಸ ಜಿಹಾದ್ ಶುರುವಾಗಿದೆ ಎಂದು ಹೇಳಲಾಗಿದೆ. ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ಮಾಡಿದ್ದು, ಈ ವೀಡಿಯೋ ಭಾರತದ್ದಲ್ಲ. ವೈರಲ್ ವೀಡಿಯೋದಲ್ಲಿ ತೋರಿಸಲಾಗಿರುವ ಕ್ಯಾಪ್ಸೂಲ್‌ಗಳು ಪಾಕಿಸ್ಥಾನ ಮತ್ತು ರಷ್ಯಾದ್ದು ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಜೋಳದ ರೊಟ್ಟಿ ತಿನ್ನುವುದರಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಮತ್ತು ಯಕೃತ್ತಿನ ಸಮಸ್ಯೆಗಳನ್ನು ತಡೆಯಬಹುದೇ?
ಜೋಳದ ರೊಟ್ಟಿಯಿಂದ ಬಹಳಷ್ಟು ಆರೋಗ್ಯಕರ ಪ್ರಯೋಜನಗಳಿವೆ ಎನ್ನುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಜೋಳದ ರೊಟ್ಟಿಯನ್ನು ಸೇವಿಸುವುದರಿಂದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಮತ್ತು ಲಿವರ್ ಸಮಸ್ಯೆಗಳನ್ನು ತಡೆಯಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದ ವೇಳೆ ಜೋಳದ ರೊಟ್ಟಿಯಿಂದ ಮಾತ್ರವೇ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ, ಯಕೃತ್ತಿನ ಸಮಸ್ಯೆ ತಡೆಯಬಹುದು ಎಂದು ಹೇಳುವಂತಿಲ್ಲ. ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ, ಉತ್ತಮ ದೈಹಿಕ ಚಟುವಟಿಕೆಗಳೂ ಮುಖ್ಯ ಎಂಬುದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ