Authors
ಇಸ್ರೇಲ್-ಹಮಾಸ್ ಕದನದ ಹಿನ್ನೆಲೆಯಲ್ಲಿ ಈವಾರ ಸಾಮಾಜಿಕ ಜಾಲತಾಣಗಳಲ್ಲಿ ಆ ಕುರಿತ ಸುಳ್ಳು ಸುದ್ದಿಗಳೇ ಹೆಚ್ಚಿದ್ದವು. ಇಸ್ರೇಲ್‌ನಿಂದ ಮಸೀದಿ ಧ್ವಂಸ ಎಂದು, 26 ಮಂದಿ ಹಮಾಸ್ ದಾಳಿಕೋರರನ್ನು ಕೊಂದ ಇಸ್ರೇಲ್ ಮಹಿಳೆ ಎಂಬ ಕ್ಲೇಮುಗಳು ಹರಿದಾಡಿದ್ದವು. ಇದು ಹೊರತಾಗಿ ಆಪ್ ನಾಯಕನ ಮನೆಯಲ್ಲಿ ಕಂತೆ ಕಂತೆ ನೋಟು, ಗರ್ಭಿಣಿಯರಿಗೆ ಫೋಲಿಕ್ ಆಸಿಡ್ ಮಾತ್ರೆ ಬದಲಾಗಿ ಬೀಟ್ರೂಟ್, ಸಬ್ಬಸಿಗೆ ಕೊಡಬಹುದು, ಅಮರ್ತ್ಯ ಸೇನ್ ನಿಧನರಾಗಿದ್ದಾರೆ ಎಂಬ ಕ್ಲೇಮುಗಳು ಇದ್ದವು. ನ್ಯೂಸ್ ಚೆಕರ್ ಇವುಗಳ ಸತ್ಯಶೋಧನೆ ಮಾಡಿದ್ದು ಇದು ಸುಳ್ಳು ಎಂದು ನಿರೂಪಿಸಿದೆ.
ಇಸ್ರೇಲ್ ಮಸೀದಿಯನ್ನು ಧ್ವಂಸಗೈದಿದೆ ಎಂದ ಈ ವೀಡಿಯೋ ನಿಜವೇ?
ಇಸ್ರೇಲ್ ಹಮಾಸ್ ನಡುವಿನ ಸಂಘರ್ಷದ ಮಧ್ಯೆ, ಇಸ್ರೇಲ್ ಮಸೀದಿಯೊಂದನ್ನು ಧ್ವಂಸಗೈದಿದೆ ಎಂಬ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಮಸೀದಿಯಲ್ಲಿ ಪ್ರಾರ್ಥನೆ ನಡೆಸುತ್ತಿರುವ ಮಧ್ಯೆಯೇ, ಬಾಂಬಿಟ್ಟು ಮಸೀದಿಯನ್ನು ಧ್ವಂಸಮಾಡಲಾಗಿದೆ ಎಂಬರ್ಥದಲ್ಲಿ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಸತ್ಯಶೋಧನೆ ಪ್ರಕಾರ, ಇದು ಇಸ್ರೇಲ್ ಪ್ಯಾಲೆಸ್ತೀನ್ ಮಸೀದಿಯನ್ನು ಧ್ವಂಸಗೊಳಿಸಿದ ದೃಶ್ಯ ಅಲ್ಲ, ಇದು ಐಸಿಸ್ ಸಿರಿಯಾದಲ್ಲಿ 2014 ನಡೆಸಿದ ಕೃತ್ಯವಾಗಿದೆ ಎಂದು ಕಂಡುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
26 ಮಂದಿ ಹಮಾಸ್ ದಾಳಿಕೋರರನ್ನು ಕೊಂದ ಇಸ್ರೇಲಿ ಮಹಿಳೆ, ವೈರಲ್ ಫೋಟೋ ನಿಜವಾದ್ದೇ?
ಇಸ್ರೇಲ್‌ನಲ್ಲಿ ಮಹಿಳೆಯೊಬ್ಬಳು 26 ಮಂದಿ ಹಮಾಸ್ ಬಂಡುಕೋರರನ್ನು ಹೊಡೆದು ಕೊಂದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಕ್ಲೇಮಿನಲ್ಲಿ ಹೇಳಿರುವ ರೀತಿ ಮಹಿಳೆಯೊಬ್ಬರೇ 26 ಮಂದಿ ಉಗ್ರರನ್ನು ಕೊಂದಿಲ್ಲ. ತನ್ನ ಭದ್ರತಾ ಗುಂಪನ್ನು ಮುನ್ನಡೆಸಿ ಅವರು ಈ ಕೆಲಸ ಮಾಡಿದ್ದಾರೆ ಮತ್ತು ಕ್ಲೇಮಿನಲ್ಲಿ ಹಾಕಿರುವ ಫೊಟೋ ಕಾರ್ಯಾಚರಣೆಯಲ್ಲಿ ಭಾಗಿಯಾದ ಮಹಿಳೆಯಲ್ಲ ಎಂದು ತಿಳಿದು ಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಆಪ್ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದಾಗ ಸಿಕ್ಕ ನೋಟುಗಳು ಎಂದ ವೈರಲ್ ವೀಡಿಯೋ ನಿಜವೇ?
ಗುಜರಾತ್ ಆಪ್ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ವೇಳೆ ಸಿಕ್ಕ ನೋಟುಗಳು ಎಂದು ವೀಡಿಯೋವೊಂದು ಹರಿದಾಡಿದೆ. ಇದರಲ್ಲಿ ಕಂತೆ ಕಂತೆ ನೋಟುಗಳನ್ನು ಎಣಿಸುತ್ತಿರುವ ದೃಶ್ಯವಿದೆ. ಆದರೆ ಇದು ಗುಜರಾತ್ ನ ಸೂರತ್ ನಲ್ಲಿ ಆಪ್ ನಾಯಕನ ಮನೆ ಮೇಲೆ ಇಡಿ ದಾಳಿ ನಡೆಸಿದ ಕುರಿತ ವೀಡಿಯೋ ಅಲ್ಲ. ಕೋಲ್ಕತಾದಲ್ಲಿ ಮೊಬೈಲ್ ಗೇಮಿಂಗ್ ಆಪ್ ಪ್ರವರ್ತಕರೊಬ್ಬರ ಮೇಲೆ ಇಡಿ ದಾಳಿ ನಡೆಸಿದಾಗ ಸಿಕ್ಕಿದ ನಗದು ಹಣವಾಗಿದೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಕೊಚ್ಚಿ ಲುಲು ಮಾಲ್ ನಲ್ಲಿ ಭಾರತದ್ದಕ್ಕಿಂತ ದೊಡ್ಡದಾದ ಪಾಕಿಸ್ಥಾನ ಧ್ವಜ ಹಾಕಲಾಗಿದೆ ಎನ್ನುವುದು ಸತ್ಯವೇ?
ಕೊಚ್ಚಿ ಲುಲು ಮಾಲ್ ನಲ್ಲಿ ಭಾರತದ್ದಕ್ಕಿಂತ ದೊಡ್ಡದಾದ ಪಾಕಿಸ್ಥಾನ ಧ್ವಜ ಹಾಕಲಾಗಿದೆ ಎಂಬ ಫೋಟೊವೊಂದು ವೈರಲ್ ಆಗಿತ್ತು. ಆದರೆ ಸತ್ಶಶೋಧನೆ ವೇಳೆ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾಟದ ಆರಂಭದ ವೇಳೆ ಕೊಚ್ಚಿಯ ಲುಲು ಮಾಲ್ ನಲ್ಲಿ ಸಮಾನ ಎತ್ತರದಲ್ಲಿ ಒಂದೇ ಆಕಾರವನ್ನು ಹೊಂದಿದ ವಿವಿಧ ದೇಶಗಳ ಧ್ವಜಗಳನ್ನು ಹಾಕಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಗರ್ಭಿಣಿಯರಿಗೆ ಫೋಲಿಕ್ ಆಸಿಡ್ ಮಾತ್ರೆ ಬದಲಾಗಿ ಬೀಟ್ರೂಟ್, ಸಬ್ಬಸಿಗೆ ಸೊಪ್ಪು ಕೊಡಬಹುದೇ?
ಗರ್ಭಿಣಿಯರಿಗೆ ಫೋಲಿಕ್ ಆಸಿಡ್ ಮಾತ್ರೆ ಕೊಡುವುದರ ಬದಲಿಗೆ ಬೀಟ್ರೂಟ್, ಸಬ್ಬಸಿಗೆ ಸೊಪ್ಪು ಕೊಟ್ಟರೆ ಕಬ್ಬಿಣದ ಕೊರತೆ ನೀಗುತ್ತದೆ ಎಂದು ಕ್ಲೇಮ್ ಒಂದು ಹೇಳಿದೆ. ಆದರೆ ಸತ್ಯಶೋಧನೆ ಪ್ರಕಾರ, ಗರ್ಭಿಣಿಯರಿಗೆ ಕಬ್ಬಿಣಾಂಶದ ಬದಲಿಗೆ ಬೀಟ್ರೂಟ್, ಸಬ್ಬಸಿಗೆ ಸೊಪ್ಪು ಕೊಡಬೇಕು ಎನ್ನುವುದು ತಪ್ಪಾಗಿದೆ. ಉತ್ತಮ ಆಹಾರದ ಭಾಗವಾಗಿ ಬೀಟ್ರೂಟ್, ಸಬ್ಬಸಿಗೆ ಸೊಪ್ಪುಗಳನ್ನು ಸೇವಿಸಬಹುದಾಗಿದೆ. ಇದು ಫೋಲಿಕ್ ಆಸಿಡ್ ಮಾತ್ರೆಗೆ ಪರ್ಯಾಯವಲ್ಲ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಮಾರುಕಟ್ಟೆಗೆ ನಕಲಿ ಗೋಧಿ ಬಂದಿದೆ ಎನ್ನುವ ವೀಡಿಯೋ ಸತ್ಯವೇ?
ಮಾರುಕಟ್ಟೆಗೆ ನಕಲಿ ಗೋಧಿ ಬಂದಿದೆ ಎಂದು ಹೇಳುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಸತ್ಯಶೋಧನೆಯ ಪ್ರಕಾರ, ಇದು ನಕಲಿ ಗೋಧಿ ಉತ್ಪಾದನೆಯ ವೀಡಿಯೋವಲ್ಲ, ಇದು ಪ್ಲಾಸ್ಟಿಕ್ ಪುನರ್ಬಳಕೆ ಕುರಿತ ವೀಡಿಯೋವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನದ್ದನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.