ಬುರ್ಖಾ ಮತ್ತು ಹಿಜಾಬ್ ನಲ್ಲಿ ಇಂದಿರಾ ಗಾಂಧಿ, ಪೋಲಂಡ್ ಪ್ರವೇಶಿಸುತ್ತಿದ್ದ ಜಿಹಾದಿಗಳಿಗೆ ಗುಂಡಿಕ್ಕಿ ಕೊಲ್ಲಲಾಗಿದೆ, ಮುಸ್ಲಿಂ ವ್ಯಕ್ತಿಯೊಬ್ಬ ಸ್ವಂತ ಮಗಳನ್ನು ಮದುವೆಯಾಗಿ ಗರ್ಭಿಣಿಯಾಗುವಂತೆ ಮಾಡಿದ್ದಾನೆ, ಬೀದರ್ ನಲ್ಲಿ ಗಾಂಜಾ ಮಾರಾಟ ಪ್ರಶ್ನಿಸಿದ್ದಕ್ಕೆ ಹಿಂದೂಗಳ ಮನೆ ಮೇಲೆ ದಾಳಿ, ಔರಂಗಜೇಬ್ ನಿಂದಿಸುವ ಫಲಕ ಹಿಡಿದ ಸಿಎಸ್‌ಕೆ ಅಭಿಮಾನಿ, ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಸರಸ್ವತಿ ಪೂಜೆಗೆ ಅವಕಾಶ ನೀಡದೆ ಇಫ್ತಾರ್ ಮಾತ್ರ ಆಚರಿಸಲಾಗುತ್ತಿದೆ ಎಂಬಂತೆ ಈ ವಾರ ಹಲವಾರು ಕೋಮು ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇವುಗಳನ್ನು ನ್ಯೂಸ್‌ಚೆಕರ್ ಸತ್ಯಶೋಧನೆಗೊಳಪಡಿಸಿದ್ದು, ಸುಳ್ಳು ಎಂದು ಸಾಬೀತು ಮಾಡಿದೆ. ಇದರೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿ ಥೈರಾಯ್ಡ್ ಆರೋಗ್ಯಕ್ಕೆ ಹಲಸಿನ ಹಣ್ಣು ಪ್ರಯೋಜನಕಾರಿಯೇ? ಎಂಬ ಬಗ್ಗೆಯೂ ಸತ್ಯಶೋಧನೆ ನಡೆಸಿದ್ದು ಈ ಹೇಳಿಕೆ ಭಾಗಶಃ ತಪ್ಪು ಎಂದು ಕಂಡುಬಂದಿದೆ.

ಬುರ್ಖಾ ಮತ್ತು ಹಿಜಾಬ್ ನಲ್ಲಿ ಇಂದಿರಾ ಗಾಂಧಿ: ಕ್ರಾಪ್ ಮಾಡಲಾದ ಫೋಟೋ ಹಂಚಿಕೆ
ಬುರ್ಖಾ ಮತ್ತು ಹಿಜಾಬ್ ನಲ್ಲಿ ಇಂದಿರಾ ಗಾಂಧಿ- ಕ್ಯಾಪ್ ಧರಿಸಿದ ರಾಹುಲ್ ಖಾನ್.. ಅವರು ಇಡೀ ಹಿಂದೂಗಳನ್ನು ಮೂರ್ಖರನ್ನಾಗಿ ಮಾಡಿದರು ಎಂದು ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಬುರ್ಖಾ ಮತ್ತು ಹಿಜಾಬ್ ನಲ್ಲಿ ಇಂದಿರಾ ಗಾಂಧಿ, ರಾಹುಲ್ ಎನ್ನಲು ನೈಜ ಫೋಟೋವನ್ನು ಕ್ರಾಪ್ ಮಾಡಿ ಬಳಸಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವಿವರ ಇಲ್ಲಿದೆ

ಪೋಲಂಡ್ ಪ್ರವೇಶಿಸುತ್ತಿದ್ದ ಜಿಹಾದಿಗಳಿಗೆ ಗುಂಡಿಕ್ಕಿ ಕೊಲ್ಲಲಾಗಿದೆ ಎಂದ ಈ ವೀಡಿಯೋ ಹಿಂದಿನ ಸತ್ಯವೇನು?
ಬೆಲಾರಸ್ ನಿಂದ ಅಕ್ರಮವಾಗಿ ಪೋಲೆಂಡ್ ಪ್ರವೇಶ ಮಾಡುತ್ತಿದ್ದವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂಬಂತೆ ವೀಡಿಯೋ ಜೊತೆಗೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಪರಿಶೀಲಿಸಿದಾಗ, ಪೋಲಂಡ್ ಪ್ರವೇಶಿಸುತ್ತಿದ್ದ ಜಿಹಾದಿಗಳಿಗೆ ಗುಂಡಿಕ್ಕಿ ಕೊಲ್ಲಲಾಗಿದೆ ಎನ್ನುವುದು ನಿಜವಲ್ಲ, ಗಡಿ ದಾಟುತ್ತಿದ್ದ ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವಿವರ ಇಲ್ಲಿದೆ

ಮುಸ್ಲಿಂ ವ್ಯಕ್ತಿಯೊಬ್ಬ ಸ್ವಂತ ಮಗಳನ್ನು ಮದುವೆಯಾಗಿ ಗರ್ಭಿಣಿಯಾಗುವಂತೆ ಮಾಡಿದ್ದಾನೆಯೇ?
ಮುಸ್ಲಿಂ ವ್ಯಕ್ತಿಯೊಬ್ಬ ಸ್ವಂತ ಮಗಳನ್ನೇ ಮದುವೆಯಾಗಿ ಗರ್ಭಿಣಿಯಾಗಿಸಿದ್ದಾನೆ ಎಂಬಂತೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸತ್ಯಶೋಧನೆ ನಡೆಸಿದಾಗ, ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಸ್ವಂತ ಮಗಳನ್ನು ಮದುವೆಯಾಗಿ ಗರ್ಭಿಣಿಯಾಗುವಂತೆ ಮಾಡಿದ್ದಾನೆ ಎಂದು ಪ್ರಸಾರವಾಗುತ್ತಿರುವ ವೀಡಿಯೋ ನಿಜವಾದ್ದಲ್ಲ, ಅದು ಸ್ಕ್ರಿಪ್ಟೆಡ್ ವೀಡಿಯೋ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಬೀದರ್ ನಲ್ಲಿ ಗಾಂಜಾ ಮಾರಾಟ ಪ್ರಶ್ನಿಸಿದ್ದಕ್ಕೆ ಹಿಂದೂಗಳ ಮನೆ ಮೇಲೆ ದಾಳಿ, ಸುಳ್ಳು ಹೇಳಿಕೆ ವೈರಲ್!
ಬೀದರ್ ನಲ್ಲಿ ಗಾಂಜಾ ಮಾರಾಟವನ್ನು ಪ್ರಶ್ನಿಸಿದ್ದಕ್ಕೆ ಹಿಂದೂಗಳ ಮನೆ ಮೇಲೆ ದಾಳಿ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಶೋಧ ನಡೆಸಿದಾಗ, ಬೀದರ್ ನಲ್ಲಿ ಗಾಂಜಾ ಮಾರಾಟವನ್ನು ಪ್ರಶ್ನಿಸಿದ್ದಕ್ಕೆ ಹಿಂದೂಗಳ ಮನೆ ಮೇಲೆ ದಾಳಿ ಎನ್ನವುದು ನಿಜವಲ್ಲ, ಅಪಘಾತ ಪ್ರಕರಣವೊಂದರ ಕುರಿತ ವೀಡಿಯೋವನ್ನು ಕೋಮು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಔರಂಗಜೇಬ್ ನಿಂದಿಸುವ ಫಲಕ ಹಿಡಿದ ಸಿಎಸ್‌ಕೆ ಅಭಿಮಾನಿ; ವೈರಲ್ ಚಿತ್ರ ನಿಜವೇ?
ಸಿಎಸ್ ಕೆ (ಚೆನ್ನೈ ಸೂಪರ್ ಕಿಂಗ್ಸ್ ) ಅಭಿಮಾನಿಯೊಬ್ಬರು ಪದ್ಯಾಂಟದ ವೇಳೆ ಮೊಘಲ್ ದೊರೆ ಔರಂಗಜೇಬನನ್ನು ನಿಂದಿಸುವ ಫಲಕ ಹಿಡಿದಿದ್ದರು ಎಂದು ಫೋಟೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಸಿಎಸ್ ಕೆ ಅಭಿಮಾನಿ ಹಿಡಿದಿದ್ದಾರೆ ಎನ್ನಲಾದ ಫಲಕ ನಿಜವಾದ್ದಲ್ಲ, ಅದನ್ನು ತಿದ್ದಲಾಗಿದೆ ಎಂದು ಸತ್ಯಶೋಧನೆಯಲ್ಲಿ ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿದೆ

ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಸರಸ್ವತಿ ಪೂಜೆಗೆ ಅವಕಾಶ ನೀಡದೆ ಇಫ್ತಾರ್ ಮಾತ್ರ ಆಚರಿಸಲಾಗುತ್ತಿದೆಯೇ?
ಕೋಲ್ಕತ್ತಾದ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಸರಸ್ವತಿ ಪೂಜೆಗೆ ಅವಕಾಶ ನೀಡದೆ, ಇಫ್ತಾರ್ ಮಾತ್ರ ಆಚರಿಸಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಜಾದವ್‌ಪುರ ವಿಶ್ವವಿದ್ಯಾಲಯವು ಇಫ್ತಾರ್ ಕೂಟವನ್ನು ಮಾತ್ರವಲ್ಲದೆ ಸರಸ್ವತಿ ಪೂಜೆ ಮತ್ತು ಡೋಲ್ ಉತ್ಸವವನ್ನೂ ಆಯೋಜಿಸುತ್ತದೆ, ಇದರಲ್ಲಿ ಎಲ್ಲ ಹಿನ್ನೆಲೆಯ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಥೈರಾಯ್ಡ್ ಆರೋಗ್ಯಕ್ಕೆ ಹಲಸಿನ ಹಣ್ಣು ಪ್ರಯೋಜನಕಾರಿಯೇ?
ಥೈರಾಯ್ಡ್ ಆರೋಗ್ಯಕ್ಕೆ ಹಲಸಿನ ಹಣ್ಣು ಪ್ರಯೋಜನಕಾರಿ, ಇದು ಥೈರಾಯ್ಡ್ ಗ್ರಂಥಿಯಲ್ಲಿ ಹಾರ್ಮೋನುಗಳ ಸ್ರವಿಸುವಿಕೆಯನ್ನು ಸಮತೋಲನಗೊಳಿಸುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಕಂಡುಬಂದಿದೆ. ಇದರ ಬಗ್ಗೆ ಶೋಧ ನಡೆಸಿದಾಗ, ಹಲಸಿನ ಹಣ್ಣನ್ನು ನೇರವಾಗಿ ಸೇವಿಸುವುದರಿಂದ ಥೈರಾಯ್ಡ್ ಹಾರ್ಮೋನ್ ನಿಯಂತ್ರಣಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಸೂಚಿಸಲು ಯಾವುದೇ ಬಲವಾದ ವೈಜ್ಞಾನಿಕ ಪುರಾವೆಗಳಿಲ್ಲ. ಹಲಸು ಪೌಷ್ಟಿಕಾಂಶದ ಹಣ್ಣು. ಇದನ್ನು ಸಮತೋಲಿತ ಆಹಾರದ ಭಾಗವಾಗಿ ಪ್ರಯೋಜನ ನೀಡಬಹುದು ಎಂದು ಗೊತ್ತಾಗಿದೆ ಈ ಕುರಿತ ವರದಿ ಇಲ್ಲಿದೆ