Authors
ವಿಶ್ವಕಪ್ ಕ್ರಿಕೆಟ್ ಫೈನಲ್ ನಡೆ ಹಿನ್ನೆಲೆಯಲ್ಲಿ ಈ ವಾರ ಆಕುರಿತ ಕ್ಲೇಮ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ವಿಶ್ವಕಪ್ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದ ಪ್ರಧಾನಿ ಮೋದಿ, ಫೈನಲ್‌ನಲ್ಲಿ ಹನುಮಾನ್ ಚಾಲೀಸಾ ಪಠಣ, ಭಾರತ ಮಾತೆ ಯಾರು ಎಂದು ಕೇಳಿದ ರಾಹುಲ್ ಗಾಂಧಿ, ಅಶೋಕವನದಲ್ಲಿ ಸೀತಾ ಮಾತೆ ಕುಳಿತಿದ್ದ ಕಲ್ಲು ಅಯೋಧ್ಯೆಗೆ ತಂದ ದೃಶ್ಯ, ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಜಿಸಿದರು ಎಂದ ಖರ್ಗೆ, ಸರ್ಕಾರಿ ಬಸ್ ಗಳು ಹೆಣ್ಣು ಮಕ್ಕಳಿಗೆ ಸುರಕ್ಷಿತವಲ್ಲ ಎಂಬ ಕ್ಲೇಮ್ ಗಳು ಹರಿದಾಡಿವೆ. ಇವುಗಳ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು, ಇವುಗಳು ತಪ್ಪು ಎಂದು ನಿರೂಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರೇ?
ಕ್ರಿಕೆಟ್ ವಿಶ್ವಕಪ್ ಪ್ರದಾನ ವೇಳೆ ಪ್ರಧಾನಿ ನರೇಂದ್ರ ಮೋದಿ ವಿಜೇತ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರು ಎಂದು ಕ್ಲೇಮ್ ಹರಿದಾಡಿದೆ. ಸತ್ಯಶೋಧನೆ ವೇಳೆ ಆಸ್ಟ್ರೇಲಿಯನ್ನರನ್ನು ಅಭಿನಂದಿಸದೆ ತೆರಳಿದರು ಎಂದು ಹೇಳಲಾದ ವೀಡಿಯೋ ಎಡಿಟ್ ಮಾಡಲಾಗಿದ್ದು ಕೊನೆಯ ಭಾಗ ಮಾತ್ರ ಹಾಕಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಜಿಸಿದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರಾ?
ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಜಿಸಿದರು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ. ಆದರೆ ತನಿಖೆ ವೇಳೆ ಭಾಷಣದ ವೇಳೆ ಮಲ್ಲಿಕಾರ್ಜುನ ಖರ್ಗೆ ರಾಹುಲ್ ಗಾಂಧಿ ದೇಶಕ್ಕಾಗಿ ಪ್ರಾಣ ತ್ಯಜಿಸಿದ್ದಾರೆ ಎಂದು ಹೇಳಿ ಬಳಿಕ ಕೂಡಲೇ ತಪ್ಪು ಸರಿಪಡಿಸಿಕೊಂಡಿದ್ದಾರೆ. ವೈರಲ್ ವೀಡಿಯೋದಲ್ಲಿ ಅವರು ತಪ್ಪಾಗಿ ಹೇಳಿದ್ದನ್ನು ಮಾತ್ರ ತೋರಿಸಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್ ಗಾಂಧಿ ಅವಮಾನಿಸಿದರೇ, ಸತ್ಯ ಏನು?
ರಾಹುಲ್ ಗಾಂಧಿಯವರಿಗೆ ಭಾರತ ಮಾತೆ ಬಗ್ಗೆ ಗೊತ್ತಿಲ್ಲ ಮತ್ತು ಅವರು ಭಾರತ ಮಾತೆಯನ್ನು ಅವಮಾನಿಸುತ್ತಿದ್ದಾರೆ ಎಂಬ ಹೇಳಿಕೆಗಳೊಂದಿಗೆ, ರಾಹುಲ್ ಭಾರತ ಮಾತೆ ಯಾರು ಎಂದು ಕೇಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಭಾರತ ಮಾತೆ ಯಾರು ಎಂದು ಕೇಳಿ ರಾಹುಲ್ ಗಾಂಧಿ ಭಾರತ ಮಾತೆಯನ್ನು ಅವಮಾನಿಸಿಲ್ಲ. ರಾಹುಲ್ ಅವರ ಭಾಷಣದ ಒಂದು ಕ್ಲಿಪ್ ಮಾತ್ರ ಹೆಕ್ಕಿ ತೆಗೆದು ತಪ್ಪಾಗಿ ಚಿತ್ರಿಸಲಾಗಿದೆ ಎಂದು ಸತ್ಯಶೋಧನೆಯಲ್ಲಿ ಕಂಡುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಅಶೋಕವನದಲ್ಲಿ ಸೀತಾಮಾತೆ ಕುಳಿತಿದ್ದ ಕಲ್ಲು ಅಯೋಧ್ಯೆಗೆ ತರಲಾಗಿದೆ ಎಂದ ವೀಡಿಯೋ ನಿಜವೇ?
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿರುವಾಗಲೇ, ಶ್ರೀಲಂಕಾದ ಅಶೋಕವನದಲ್ಲಿ ಸೀತಾಮಾತೆ ಕುಳಿತಿದ್ದ ಕಲ್ಲನ್ನು ಅಯೋಧ್ಯೆಗೆ ತರಲಾಗಿದೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ತನಿಖೆ ನಡೆಸಿದ ವೇಳೆ ವೈರಲ್ ವೀಡಿಯೋದಲ್ಲಿರುವುದು ಸೀತಾಮಾತೆ ಕುಳಿತಿದ್ದ ಕಲ್ಲು ತಂದ ದೃಶ್ಯವಲ್ಲ. ಇದು ಉತ್ತರ ಪ್ರದೇಶದ ಕುಶಿನಗರಕ್ಕೆ ಭಗವಾನ್ ಬುದ್ಧನ ಅವಶೇಷಗಳನ್ನು ತಂದ ದೃಶ್ಯವಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ವರ್ಲ್ಡ್ ಕಪ್ ಫೈನಲ್‌ನಲ್ಲಿ ಹನುಮಾನ್ ಚಾಲೀಸಾ ಪಠಣ, ವೈರಲ್ ವೀಡಿಯೋ ಅಸಲಿಯತ್ತೇನು?
ಅಹಮದಾಬಾದ್‌ನಲ್ಲಿ ನಡೆದ ಕ್ರಿಕೆಟ್ ವರ್ಲ್ಡ್ ಕಪ್ ಫೈನಲ್‌ನಲ್ಲಿ ಒಂದೂವರೆ ಲಕ್ಷ ಮಂದಿ ಹನುಮಾನ್ ಚಾಲೀಸಾ ಪಠಿಸಿದ್ದಾರೆ ಎಂಬ ವೀಡಿಯೋ ವೈರಲ್ ಆಗಿದೆ. ತನಿಖೆ ವೇಳೆ ವೈರಲ್ ವೀಡಿಯೋದಲ್ಲಿ ತೋರಿಸಿದ ವೀಡಿಯೋ ಭಾರತ-ಪಾಕಿಸ್ಥಾನ ಮ್ಯಾಚ್ ಸಂದರ್ಭದ್ದು ಮತ್ತು ಆ ದೃಶ್ಯಾವಳಿಯೊಂದಿಗೆ ಹಾಕಿದ ಚಾಲೀಸಾ ಪಠಣದ ಆಡಿಯೋ ಬೇರೆ ಸಂದರ್ಭದ್ದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಸರ್ಕಾರಿ ಬಸ್‌ಗಳು ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಿಲ್ಲ ಎಂದ ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
ಸರ್ಕಾರಿ ಬಸ್‌ಗಳು ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಿಲ್ಲ ಎಂದು ವ್ಯಕ್ತಿಯೊಬ್ಬ ಮಹಿಳೆಗೆ ಥಳಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಶೋಧ ನಡೆಸಿದಾಗ ಮಹಿಳೆಯರಿಗೆ ಸರ್ಕಾರಿ ಬಸ್ ಗಳು ಸುರಕ್ಷಿತವಲ್ಲ ಎನ್ನುವುದು ತಪ್ಪಾದ ಸಂದರ್ಭವಾಗಿದೆ. ಖಾಕಿ ದಿರಿಸಿನಲ್ಲಿದ್ದ ವ್ಯಕ್ತಿಯೊಬ್ಬ ಕೌಟುಂಬಿಕ ಕಾರಣಕ್ಕೆ ಪತ್ನಿಗೆ ಹೊಡೆದ ಪ್ರಕರಣ ಇದಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಕೊಬ್ಬರಿ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆಯೇ?
ಒಣ ಕೊಬ್ಬರಿ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ ಎಂದು ಕ್ಲೇಮ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಒಣಕೊಬ್ಬರಿ ತಿನ್ನುವುದರಿಂದ ನಿರ್ದಿಷ್ಟವಾದ ಆರೋಗ್ಯ ಪ್ರಯೋಜನಗಳಿವೆ ಎಂದು ಹೇಳಿರುವುದು ತಪ್ಪಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ ಎಂದು ಸತ್ಯಶೋಧನೆಯಲ್ಲಿ ಗೊತ್ತಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.