ಮುಸ್ಲಿಮರು ದಿಲ್ಲಿ ಮೆಟ್ರೋದಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ್ದಾರೆ, ಮುಸ್ಲಿಮರು ಮಕ್ಕಳಾಗದಂತೆ ಖರ್ಜೂರದಲ್ಲಿ ಮಾತ್ರೆ ಇಟ್ಟು ಹಿಂದೂಗಳಿಗೆ ಮಾರಾಟ ಎಂಬ ಕೋಮು ಹೇಳಿಕೆಗಳು ಈ ವಾರ ಪ್ರಮುಖವಾಗಿದ್ದವು. ಇದರೊಂದಿಗೆ ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ: ಅಶ್ವಿನಿ ವೈಷ್ಣವ್ ಭಾವುಕರಾದ ಹಳೆಯ ವೀಡಿಯೋ ವೈರಲ್ ಆಗಿತ್ತು. ರಾಮೇಶ್ವರದಲ್ಲಿ ಬೆಂಕಿ ಅನಾಹುತ ಎಂಬ ಎಐ ವೀಡಿಯೋಗಳನ್ನು ಹಂಚಿಕೆ, ಕುಂಭಮೇಳದ ಮಹತ್ವದ ಬಗ್ಗೆ ಬ್ರಿಟಿಷ್ ಪೈಲಟ್ ವಿಮಾನದಲ್ಲಿ ಹೇಳಿದ್ದಾರೆ ಎಂಬ ಹೇಳಿಕೆಗಳೂ ಇದ್ದವು. ಜೊತೆಗೆ ಬೆಲ್ಲದ ಚಹಾ ರಕ್ತಹೀನತೆಗೆ, ತೂಕ ಕಳೆದುಕೊಳ್ಳಲು ಸಹಕಾರಿ ಎಂಬಂತೆ ಹೇಳಿಕೆಗಳೂ ಇದ್ದವು. ಇವುಗಳ ಬಗ್ಗೆ ಶೋಧ ನಡೆಸಿದಾಗ ಇದು ಸರಿಯಾದ್ದಲ್ಲ, ತಪ್ಪು ಮಾಹಿತಿಗಳು ಎಂದು ಕಂಡುಬಂದಿದೆ. ಈ ಕುರಿತ ವಾರದ ನೋಟ ಇಲ್ಲಿದೆ

ಮುಸ್ಲಿಮರು ದಿಲ್ಲಿ ಮೆಟ್ರೋದಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಿದ್ದಾರೆಯೇ?
ಮುಸ್ಲಿಮರು ಟಿಕೆಟ್ ರಹಿತವಾಗಿ ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯಲ್ಲಿ, ಪ್ರಯಾಣಿಕರ ಸಂಖ್ಯೆ ಏಕಾಏಕಿ ಏರಿಕೆಯಾದ್ದರಿಂದ ಜಾಮಾ ಮಸ್ಜಿದ್ ಮೆಟ್ರೋ ನಿಲ್ದಾಣದಲ್ಲಿ ಹೊರಹೋಗುವ ದಟ್ಟಣೆ ವೇಳೆ ಕೆಲವರು ಎಎಫ್ಸಿ ಗೇಟ್ ಗಳನ್ನು ಹಾರಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿದೆ

ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ: ಅಶ್ವಿನಿ ವೈಷ್ಣವ್ ಭಾವುಕರಾದ ಹಳೆಯ ವೀಡಿಯೋ ವೈರಲ್
ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಕಾಲ್ತುಳಿತ: ಪತ್ರಕರ್ತರೊಂದಿಗೆ ಮಾತನಾಡುವ ವೇಳೆ ಅಶ್ವಿನಿ ವೈಷ್ಣವ್ ಭಾವುಕರಾಗಿದ್ದಾರೆ ಎಂದು ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇದರ ಬಗ್ಗೆ ತನಿಖೆ ನಡೆಸಿದಾಗ, 2023 ರ ಒಡಿಶಾ ರೈಲು ಅಪಘಾತದ ಬಗ್ಗೆ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಭಾವುಕರಾದ ಹಳೆಯ ವೀಡಿಯೋವನ್ನು ಇತ್ತೀಚಿನ ನವದೆಹಲಿ ರೈಲು ನಿಲ್ದಾಣದ ಕಾಲ್ತುಳಿದ ಘಟನೆಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಮುಸ್ಲಿಮರು ಮಕ್ಕಳಾಗದಂತೆ ಖರ್ಜೂರದಲ್ಲಿ ಮಾತ್ರೆ ಇಟ್ಟು ಹಿಂದೂಗಳಿಗೆ ಮಾರಾಟ?
ಮುಸ್ಲಿಮರು ಮಾರಕ ರೋಗಕ್ಕಾಗಿ ಮತ್ತು ಮಕ್ಕಳಾಗದಂತೆ ಖರ್ಜೂರದಲ್ಲಿ ಮಾತ್ರೆ ಇಟ್ಟು ಹಿಂದೂಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬಂತೆ ವೀಡಿಯೋ ಜೊತೆಗೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.ಇದರ ಬಗ್ಗೆ ಪರಿಶೀಲನೆ ನಡೆಸಿದಾಗ, ಬಿಹಾರ ರೈಲಿನಲ್ಲಿ ಮತ್ತು ಬರುವ ಮಾತ್ರೆ ಖರ್ಜೂರಕ್ಕೆ ಬೆರೆಸಿ ಜನರಿಗೆ ನೀಡಿ ದರೋಡೆ ಮಾಡುತ್ತಿದ್ದ ತಂಡದ ಕೃತ್ಯವನ್ನು ಪೊಲೀಸರು ಬಯಲಿಗೆಳೆದಿದ್ದರು. ಇದು ಆ ಕುರಿತ ವೀಡಿಯೋ ಆಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿದೆ

ರಾಮೇಶ್ವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದ ವೀಡಿಯೋ ಎಐ ಉತ್ಪತ್ತಿ
ತಮಿಳುನಾಡಿನ ರಾಮೇಶ್ವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಪರಿಶೀಲನೆ ನಡೆಸಿದಾಗ, ಈ ಹೇಳಿಕೆ ಸುಳ್ಳು. ವೈರಲ್ ವೀಡಿಯೊ ಎಐ ನಿಂದ ಮಾಡಿದ್ದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಸಾಂಪ್ರದಾಯಿಕ ಸಮರ ಕಲೆ ಅಭ್ಯಾಸ ಮಾಡುವ ಮಹಿಳೆ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅಲ್ಲ, ಆಕೆ ಮರಾಠಿ ನಟಿ!
ಮಹಿಳೆಯೊಬ್ಬರು ಸಾಂಪ್ರದಾಯಿಕ ಸಮರ ಕಲೆ ಅಭ್ಯಾಸ ಮಾಡುತ್ತಿರುವ ವೀಡಿಯೋ ಒಂದು ವೈರಲ್ ಆಗಿದೆ. ಆ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾಗುಪ್ತಾ ಎಂದು ಹೇಳಲಾಗುತ್ತಿದೆ. ಸತ್ಯಶೋಧನೆ ನಡೆಸಿದಾಗ, ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡ ಸಮರಕಲೆ ಅಭ್ಯಾಸ ಮಾಡುತ್ತಿರುವ ಮಹಿಳೆ ದೆಹಲಿಯ ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅಲ್ಲ, ಆಕೆ ಮರಾಠಿ ನಟಿ ಪಾಯಲ್ ಜಾಧವ್ ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿದೆ

ಬ್ರಿಟಿಷ್ ಪೈಲಟ್ ವಿಮಾನದಲ್ಲಿ ಮಹಾಕುಂಭ ಮೇಳದ ಮಹತ್ವ ಹೇಳಿದ್ದಾರೆ ಎನ್ನುವುದು ಸುಳ್ಳು!
ಬ್ರಿಟಿಷ್ ಪೈಲಟ್ ಒಬ್ಬರು ಪ್ರಯಾಗ್ ರಾಜ್ ಗೆ ಬಂದ ವಿಮಾನದಲ್ಲಿ ಮಹಾಕುಂಭ ಮೇಳದ ಮಹತ್ವದ ಬಗ್ಗೆ ಹೇಳಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ತನಿಖೆ ನಡೆಸಿದಾಗ, ಇದು ಇನ್ ಸ್ಟಾ ಬಳಕೆದಾರರೊಬ್ಬರು ಡ್ರೋನ್ ನಲ್ಲಿ ವೀಡಿಯೋ ತೆಗೆದು ಮಾಡಿದ ವಾಯ್ಸ್ ಓವರ್ ಆಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ

ಬೆಲ್ಲದ ಚಹಾ ತೂಕ ನಷ್ಟ, ಜೀರ್ಣಕ್ರಿಯೆ ಮತ್ತು ರಕ್ತಹೀನತೆ ಸಮಸ್ಯೆಗೆ ಸಹಾಯ ಮಾಡುತ್ತದೆಯೇ?
ಬೆಲ್ಲದ ಚಹಾವನ್ನು ಕುಡಿಯುವುದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ರಕ್ತಹೀನತೆ ಸಮಸ್ಯೆಗೆ ಪರಿಹಾರ ನೀಡುತ್ತದೆ ಎಂಬಂತೆ ಹೇಳಿಕೆಯೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ಶೋಧ ನಡೆಸಿದಾಗ, ಬೆಲ್ಲದ ಚಹಾವು ಎಲ್ಲ ರೀತಿಯ ಪರಿಹಾರವಲ್ಲ. ಇದು ಕೆಲವು ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿದೆ ಆದರೆ ನೇರವಾಗಿ ತೂಕ ನಷ್ಟಕ್ಕೆ, ಜೀರ್ಣಕ್ರಿಯೆಯನ್ನು ಗಮನಾರ್ಹವಾಗಿ ಸುಧಾರಿಸಲು ಅಥವಾ ರಕ್ತಹೀನತೆಯನ್ನು ನಿವಾರಿಸಲು ಕಾರಣವಾಗುವುದಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ