Authors
Claim
ಹುಡುಗಿಯ ದುಪ್ಪಟ್ಟಾ ಎಳೆದ ಆರೋಪಿಗಳ ಪರಿಸ್ಥಿತಿ
Fact
ವೈರಲ್ ಆಗಿರುವ ಈ ವೀಡಿಯೋ ಉತ್ತರ ಪ್ರದೇಶದ್ದಲ್ಲ. ಇದು ರಾಜಸ್ಥಾನದ ಭರತ್ ಪುರದ್ದಾಗಿದ್ದು, ಅಲ್ಲೂ ಕೊಲೆ ಪ್ರಕರಣವೊಂದರ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು.
ಕಾಲಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವ ಮೂವರು ಯುವಕರು ನೆಲದ ಮೇಲೆ ಕಾಲುಗಳನ್ನು ಎಳೆಯುತ್ತ ಸಾಗುತ್ತಿರುವ ದೃಶ್ಯವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಓಡಾಡುತ್ತಿದೆ.
30 ಸೆಕೆಂಡ್ಗಳ ಈ ವೀಡಿಯ ವೈರಲ್ ಆಗಿದ್ದು, ಉತ್ತರ ಪ್ರದೇಶದ್ದು ಎಂದು ಹಂಚಿಕೊಳ್ಳಲಾಗುತ್ತಿದೆ. ವಾಟ್ಸಾಪ್ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ “ ಆನಂದ ಪರಮಾನಂದ! ಉತ್ತರ ಪ್ರದೇಶದಲ್ಲಿ ಹುಡುಗಿಯ ದುಪ್ಪಟ್ಟಾ ಹಿಡಿದು ಬೈಕಿನಲ್ಲಿ ಎಳೆದುಕೊಂಡು ಹೋಗಿ ಹುಡುಗಿಯ ಸಾವಿಗೆ ಕಾರಣರಾದ ಮೂವರು ಇಸ್ಲಾಂ ಜಿಹಾದಿಗಳಿಗೆ ಯೋಗಿ ಸರ್ಕಾರ ನೀಡಿರುವ ಬಹುಮಾನ!!. ಕಾಲು ಪಂಚರ್” ಎಂದಿದೆ.
Also Read: ಮನೆ ಬಳಿ ಬಸ್ ನಿಲ್ಲಿಸದ್ದಕ್ಕೆ ಮುಸ್ಲಿಂ ಗುಂಪು ಬಸ್ ಪುಡಿಗಟ್ಟಿತೇ, ಸತ್ಯ ಏನು?
ಈ ವೀಡಿಯೋದ ಬಗ್ಗೆ ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್ಚೆಕರ್ಗೆ ವಿನಂತಿಸಿಕೊಂಡಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.
ಇದೇ ರೀತಿಯ ಹೇಳಿಕೆಯೊಂದಿಗೆ ಫೇಸ್ಬಕ್ ನಲ್ಲಿಯೂ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು
Fact Check/Verification
ವೈರಲ್ ಕ್ಲೈಮ್ ಅನ್ನು ತನಿಖೆ ಮಾಡಲು ನ್ಯೂಸ್ಚೆಕರ್ ಸಂಬಂಧಿತ ಕೀವರ್ಡ್ಗಳೊಂದಿಗೆ ಗೂಗಲ್ನಲ್ಲಿ ಹುಡುಕಿದಾಗ, ಸೆಪ್ಟೆಂಬರ್ 17 ರಂದು ಯುಪಿ ತಕ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಈ ವರದಿಯಲ್ಲಿ, ಅಂಬೇಡ್ಕರ್ ನಗರದಲ್ಲಿ ನಡೆದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಮತ್ತು ಅದೇ ಸಮಯದಲ್ಲಿ ಅದರಲ್ಲಿ ಭಾಗಿಯಾಗಿರುವ ಆರೋಪಿಗಳ ಹೆಸರನ್ನು ಸಹ ಪೊಲೀಸರು ಉಲ್ಲೇಖಿಸಿದ್ದಾರೆ. ವರದಿಯಲ್ಲಿರುವ ಮೂವರು ಆರೋಪಿಗಳ ಫೋಟೋ ಇಲ್ಲಿದೆ.
—
ವರದಿಯ ಪ್ರಕಾರ, ಈ ಪ್ರಕರಣವು ಅಂಬೇಡ್ಕರ್ ನಗರ ಜಿಲ್ಲೆಯ ಹನ್ಸ್ವಾರ್ ಪೊಲೀಸ್ ಠಾಣೆ ವ್ಯಾಪ್ತಿಯದ್ದಾಗಿದ್ದು, ಸೆಪ್ಟೆಂಬರ್ 15 ರಂದು ಬಾರ್ಹಿ ಆದಿಲ್ಪುರದ ಅಪ್ರಾಪ್ತ ಬಾಲಕಿ ಶಾಲೆಯಿಂದ ಮನೆಗೆ ಮರಳುತ್ತಿದ್ದಳು. ಆಗ ಹಿರಾಪುರ್ ಬಜಾರ್ ಬಳಿ ಬೈಕಿನಲ್ಲಿ ಕುಳಿತಿದ್ದ ಶಹಬಾಜ್ ಮತ್ತು ಅರ್ಬಾಜ್ ಎಂಬ ಇಬ್ಬರು ಹುಡುಗರು ಆಕೆಯ ಸ್ಕಾರ್ಫ್ ಎಳೆದರು. ಇದರಿಂದಾಗಿ ಬೈಸಿಕಲ್ ಸವಾರಿ ಮಾಡುವ ವಿದ್ಯಾರ್ಥಿಯ ಸಮತೋಲನ ತಪ್ಪಿ ವಿದ್ಯಾರ್ಥಿನಿ ರಸ್ತೆ ಮಧ್ಯಕ್ಕೆ ಬರುವಂತಾಯಿತು. ಈ ವೇಳೆ ಹಾದುಹೋಗುತ್ತಿದ್ದ ಬೈಕ್ ಆಕೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
Also Read: ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆಯೇ?
ಸಾವಿನ ನಂತರ, ಕುಟುಂಬದ ದೂರಿನ ಮೇರೆಗೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧನದ ಸಮಯದಲ್ಲಿ, ಆರೋಪಿಗಳು ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು, ಅವರು ಪೊಲೀಸರ ಬಂದೂಕನ್ನು ಕಸಿದುಕೊಂಡು ಅವರ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದರು. ಈ ವೇಳೆ ಆರೋಪಿಗಳಾದ ಶಹಬಾಜ್ ಮತ್ತು ಫೈಸಲ್ ಅವರ ಕಾಲಿಗೆ ಗುಂಡು ಹಾರಿಸಲಾಗಿದೆ. ಅದೇ ಸಮಯದಲ್ಲಿ, ಮೂರನೇ ಆರೋಪಿ ಪರಾರಿಯಾಗುವಾಗ ಕಾಲು ಮುರಿದಿದೆ.
ತನಿಖೆಯ ಸಮಯದಲ್ಲಿ, ನ್ಯೂಸ್ 18 ಹಿಂದಿ ಮತ್ತು ಪತ್ರಿಕಾ ದ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಈ ಎರಡೂ ವರದಿಗಳು ಮೇಲೆ ಬರೆದ ಎಲ್ಲ ಮಾಹಿತಿಯನ್ನು ಒಳಗೊಂಡಿವೆ. ಅಲ್ಲದೆ, ಎಲ್ಲ ಮೂರು ವರದಿಗಳಲ್ಲಿ ಒಂದೇ ಚಿತ್ರವಿದೆ, ಇದರಲ್ಲಿ ಮೂವರು ಆರೋಪಿಗಳು ಕಾಲಿಗೆ ಗಾಯವಾದ ಕಾರಣ ಪೊಲೀಸರ ಸಹಾಯದಿಂದ ನಿಂತಿದ್ದಾರೆ.
ವೈರಲ್ ವೀಡಿಯೊದಲ್ಲಿ ಕಂಡುಬರುವ ಯುವಕರನ್ನು ಸುದ್ದಿ ವರದಿಗಳಲ್ಲಿನ ಚಿತ್ರಗಳೊಂದಿಗೆ ನಾವು ಹೋಲಿಕೆ ಮಾಡಿದಾಗ, ಈ ಮೂವರು ಆರೋಪಿಗಳಲ್ಲಿ ಯಾರೂ ವೈರಲ್ ವೀಡಿಯೊದಲ್ಲಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಕೆಳಗಿನ ಚಿತ್ರಗಳಿಂದ ನೀವು ಅದನ್ನು ನೋಡಬಹುದು.
ಏಕೆಂದರೆ, ಇಲ್ಲಿಯವರೆಗೆ ನಮ್ಮ ತನಿಖೆಯಲ್ಲಿ, ವೈರಲ್ ವೀಡಿಯೋ ಹುಡುಗಿಯ ದುಪ್ಪಟ್ಟಾ ಎಳೆದ ಆರೋಪಿಗಳ ಪರಿಸ್ಥಿತಿ ಮತ್ತು ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಡೆದ ಘಟನೆಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟವಾಗಿದೆ. ಆದ್ದರಿಂದ ನಾವು ನಮ್ಮ ತನಿಖೆಯನ್ನು ಮುಂದುವರಿಸಿದ್ದು, ಕೀಫ್ರೇಮ್ ಸಹಾಯದಿಂದ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ.
ರಿವರ್ಸ್ ಇಮೇಜ್ ಹುಡುಕಾಟದಲ್ಲಿ, ಸೆಪ್ಟೆಂಬರ್ 18, 2023 ರಂದು ಫಸ್ಟ್ ಇಂಡಿಯಾ ನ್ಯೂಸ್ ಯೂಟ್ಯೂಬ್ ಖಾತೆಯಲ್ಲಿ ಅಪ್ಲೋಡ್ ಮಾಡಿದ ವೀಡಿಯೊ ವರದಿಯನ್ನು ನಾವು ನೋಡಿದ್ದೇವೆ. ಈ ವರದಿಯಲ್ಲಿ ವೈರಲ್ ವೀಡಿಯೋ ಕೂಡ ಇದೆ. ವೀಡಿಯೋ ವರದಿಯ ಪ್ರಕಾರ, ನೆಲದ ಮೇಲೆ ತೆವಳುತ್ತಿದ್ದ ಮೂವರು ಯುವಕರು ರಾಜಸ್ಥಾನದ ಭರತ್ ಪುರದಲ್ಲಿ ನಡೆದ ಅಜಯ್ ಜಾಮ್ರಿ ಕೊಲೆ ಪ್ರಕರಣದ ಆರೋಪಿಗಳಾಗಿದ್ದಾರೆ. ಬಂಧನದ ಸಮಯದಲ್ಲಿ, ಪೊಲೀಸರೊಂದಿಗಿನ ಎನ್ಕೌಂಟರ್ನಲ್ಲಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಲಾಗಿದೆ.
ಈಗ ನಾವು ಕೀವರ್ಡ್ಗಳ ಸಹಾಯದಿಂದ ಸುದ್ದಿ ವರದಿಗಳನ್ನು ಹುಡುಕಿದ್ದೇವೆ. ದೈನಿಕ್ ಭಾಸ್ಕರ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲಿ ಅಜಯ್ ಜಾಮ್ರಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳ ಛಾಯಾಚಿತ್ರಗಳನ್ನು ವರದಿ ಒಳಗೊಂಡಿದೆ.
ವರದಿಯ ಪ್ರಕಾರ, ಆಗಸ್ಟ್ 27 ರ ಸಂಜೆ ಭರತ್ ಪುರದ ಹಿರಾದಾಸ್ ಚೌಕದಲ್ಲಿ ಅಜಯ್ ಜಾಮ್ರಿ ಎಂಬ ಯುವಕನನ್ನು ಗುಂಡಿಕ್ಕಿ ಕೊಲ್ಲಲಾಯಿತು. ಪ್ರಕರಣದ ತನಿಖೆಯ ಸಮಯದಲ್ಲಿ, ಇದರಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳು ಡೆಹ್ರಾಡೂನ್ನಲ್ಲಿ ಅಡಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು, ನಂತರ ಪೊಲೀಸರು ಮೂವರು ಆರೋಪಿಗಳಾದ ಯುವರಾಜ್, ಬಂಟಿ ಮತ್ತು ತೇಜ್ವೀರ್ ಅವರನ್ನು ಡೆಹ್ರಾಡೂನ್ನಿಂದ ಬಂಧಿಸಿ ಸೆಪ್ಟೆಂಬರ್ 5 ರ ರಾತ್ರಿ ಭರತ್ ಪುರಕ್ಕೆ ಕರೆತಂದರು.
ಭರತ್ ಪುರ ಪೊಲೀಸರ ಜಿಲ್ಲಾ ವಿಶೇಷ ತಂಡ (ಡಿಎಸ್ಟಿ) ಮೂವರು ಆರೋಪಿಗಳನ್ನು ಅಟಲ್ ಪೊಲೀಸ್ ಠಾಣೆಗೆ ಹಸ್ತಾಂತಲು ಯೋಜಿಸಿದ್ದರು. ಈ ವೇಳೆ ತೇಜ್ವೀರ್ ಎಂಬ ಆರೋಪಿ ಕಾನ್ಸ್ಟೇಬಲ್ ಒಬ್ಬರ ಪಿಸ್ತೂಲ್ ಕಸಿದುಕೊಂಡು ಓಡಿಹೋಗಲು ಪ್ರಾರಂಭಿಸಿದನು. ಪೊಲೀಸರು ಅವನನ್ನು ಬೆನ್ನಟ್ಟಿದಾಗ, ಅವನು ಗುಂಡು ಹಾರಿಸಿದನು. ಈ ಸಮಯದಲ್ಲಿ, ಪೊಲೀಸ್ ಅಧಿಕಾರಿಯ ಎದೆಗೆ ಗುಂಡು ಹಾರಿಸಲಾಗಿದೆ, ಆದರೆ ಅವರು ಬುಲೆಟ್ ಪ್ರೂಫ್ ಜಾಕೆಟ್ ಹಾಕಿದ್ದರಿಂದ ಹಾನಿ ಸಂಭವಿಸಿಲ್ಲ. ಇದರ ನಂತರ, ಪೊಲೀಸರು ಸಹ ಗುಂಡು ಹಾರಿಸಿದರು ಮತ್ತು ಮೂವರು ಆರೋಪಿಗಳ ಕಾಲುಗಳಿಗೆ ಗುಂಡು ಹಾರಿಸಲಾಗಿದೆ. ಈ ವೇಳೆ ಆರೋಪಿಗಳು ಗಾಯಗೊಂಡಿದ್ದರಿಂದ ಅವರನ್ನು ಹತ್ತಿರದ ಆರ್ ಬಿಎಂ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಮತ್ತು ಅನಂತರ ಮೂವರನ್ನು ಜೈಪುರಕ್ಕೆ ಕಳುಹಿಸಲಾಯಿತು.
ತನಿಖೆಯ ವೇಳೆ ವೈರಲ್ ವೀಡಿಯೋವನ್ನು ದೈನಿಕ್ ಭಾಸ್ಕರ್ ವರದಿಯಲ್ಲಿರುವ ಆರೋಪಿಗಳ ಚಿತ್ರದೊಂದಿಗೆ ಹೋಲಿಕೆ ಮಾಡಿದ್ದೇವೆ ಅವುಗಳು ಒಂದೇ ಎಂದು ಕಂಡುಕೊಂಡಿದ್ದೇವೆ. ಕೆಳಗಿನ ಚಿತ್ರದಲ್ಲಿ ನೀವು ಕೂಡ ಈ ಹೋಲಿಕೆಯನ್ನು ಸಹ ನೋಡಬಹುದು.
Also Read: ಭಾರತಕ್ಕೆ ಪ್ರಯಾಣಿಸುವಾಗ ಎಚ್ಚರಿಕೆ ವಹಿಸುವಂತೆ ಕೆನಡಾ ಹೇಳಿದೆ ಎಂಬ ಎಎನ್ಐ ವರದಿ ನಿಜವೇ?
ನಮ್ಮ ತನಿಖೆಯ ಭಾಗವಾಗಿ ನಾವು ಅಟಲ್ ಪೊಲೀಸ್ ಠಾಣೆಯ ಎಸ್ಎಚ್ಒ ಮನೀಶ್ ಶರ್ಮಾ ಅವರನ್ನು ಸಂಪರ್ಕಿಸಿದ್ದೇವೆ. ವೈರಲ್ ವೀಡಿಯೋವನ್ನು ದೃಢಪಡಿಸಿದ ಅವರು, ಈ ವೀಡಿಯೋದಲ್ಲಿ ಕಂಡುಬರುವ ಮೂವರು ಆರೋಪಿಗಳು ಅಜಯ್ ಜಾಮ್ರಿ ಕೊಲೆ ಪ್ರಕರಣಕ್ಕೆ ಸೇರಿದವರು ಎಂದು ಹೇಳಿದರು. ಯುವರಾಜ್, ಬಂಟಿ ಮತ್ತು ತೇಜ್ವೀರ್ ವೀಡಿಯೊದಲ್ಲಿ ಇದ್ದಾರೆ.
Conclusion
ನಮ್ಮ ತನಿಖೆಯಲ್ಲಿ ದೊರೆತ ಪುರಾವೆಗಳ ಪ್ರಕಾರ, ಕ್ಲೇಮಿನಲ್ಲಿ ಹೇಳಿರುವಂತೆ ಈ ವೈರಲ್ ವೀಡಿಯೋ, ಹುಡುಗಿಯ ದುಪ್ಪಟ್ಟಾ ಎಳೆದ ಆರೋಪಿಗಳ ಪರಿಸ್ಥಿತಿಯದ್ದಲ್ಲ. ಇದು ರಾಜಸ್ಥಾನದ ಭರತ್ ಪುರದಿಂದ ಬಂದಿದೆ, ಅಲ್ಲಿ ಅಜಯ್ ಜಾಮ್ರಿ ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳಿಗೆ ಪೊಲೀಸರು ಗುಂಡಿಕ್ಕಿದ್ದು, ಕಾಲುಗಳಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
Result: False
Our Sources
Report By UP Tak, Dated: September 17, 2023
Report By News 18, Dated: September 17, 2023
Report By Dainik Bhaskar, Dated: 06, 2023
YouTube Video By First India News, Dated: September 18, 2023
Telephonic Conversation with Atalband SHO
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.