Authors
ಬಿಬಿಸಿಯಲ್ಲಿ ಮೋದಿ ಡಾಕ್ಯುಮೆಂಟರಿ ವಿಚಾರ ಚರ್ಚೆಯಲ್ಲಿರುವಾಗಲೇ, ಇದು ಪ್ರಸಾರವಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾರಣ ಎಂಬ ವದಂತಿ ಹಬ್ಬಿದೆ. ಇದಕ್ಕಾಗಿ ಅವರು ಇತ್ತೀಚೆಗೆ ಡಾಕ್ಯುಮೆಂಟರಿ ನಿರ್ಮಾಪಕರನ್ನು ಭೇಟಿಯಾಗಿದ್ದಾರೆ ಎಂಬ ವೈರಲ್ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ಕುರಿತು ಟ್ವಿಟರ್ನಲ್ಲಿರುವ ಒಂದು ಕ್ಲೇಮ್ ಹೀಗಿದೆ “ಬಿಬಿಸಿ ಎಂಬ ತಗಡು ವಾಹಿನಿ ಮೋದಿ ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಲು ಕಾರಣ, 6 ತಿಂಗಳ ಹಿಂದೆ ಪಪ್ಪು ಅದರ ಸಂಪಾದಕ ಭೇಟಿ ಮಾಡಿದ್ದು” ಎಂದು ಬರೆಯಲಾಗಿದೆ. ಅದು ಇಲ್ಲಿದೆ.
ಈ ಕುರಿತ ಸತ್ಯಶೋಧನೆಯನ್ನು ನ್ಯೂಸ್ ಚೆಕರ್ ಮಾಡಿದ್ದು ಇದು ಸುಳ್ಳು ಎಂದು ತಿಳಿದುಬಂದಿದೆ.
Fact Check/Verification
ಕ್ಲೇಮಿನಲ್ಲಿ ಪೋಸ್ಟ್ ಮಾಡಲಾದ ಫೋಟೋದಲ್ಲಿ ಒಟ್ಟು ಮೂರು ಜನರಿದ್ದಾರೆ. ಮೊದಲನೆಯವರು ರಾಹುಲ್ ಗಾಂಧಿ, ಎರಡನೆಯವರು ಯುನೈಟೆಡ್ ಕಿಂಗ್ಡಮ್ನ ಸಂಸದ ಲೇಬರ್ ಪಕ್ಷದ ನಾಯಕ ಜೆರ್ಮಿ ಕಾರ್ಬಿನ್ ಮತ್ತು ಉದ್ಯಮಿ ಸ್ಯಾಮ್ ಪಿತ್ರೊಡಾ ಅವರು. ಈ ಕುರಿತು ಕೀವರ್ಡ್ ಸರ್ಚ್ ನಡೆಸಿದಾಗ ಈ ಫೋಟೋ ಹಿಂದಿನ ವಿವಿಧ ಪತ್ರಿಕಾ ವರದಿಗಳು ಲಭ್ಯವಾಗಿವೆ. ಅವುಗಳು ಇಲ್ಲಿ ಇಲ್ಲಿ ಮತ್ತು ಇಲ್ಲಿವೆ. ಆ ಪ್ರಕಾರ, ಜೆರ್ಮಿ ಕಾರ್ಬಿನ್ ಅವರನ್ನು ರಾಹುಲ್ ಅವರು 2022ರಲ್ಲಿ ಲಂಡನ್ನಲ್ಲಿ ಭೇಟಿ ಮಾಡಿದ್ದು, ಇದು ತೀವ್ರವಾದ ರಾಜಕೀಯ ಚರ್ಚೆಗೆ ಕಾರಣವಾಗಿತ್ತು.
ಇಂಡಿಯಾ ಟುಡೇ ವರದಿ ಪ್ರಕಾರ, ಈ ಭೇಟಿ ಮೇ 24, 2022ರಲ್ಲಿ ನಡೆದಿದ್ದು, ಈ ವೇಳೆ ಬಿಜೆಪಿ ಭಾರತ ವಿರೋಧಿ ಧೋರಣೆ ಹೊಂದಿದ ಸಂಸದ ಜೆಮ್ಮಿ ಕಾರ್ಬಿನ್ ಅವರನ್ನು ಭೇಟಿ ಮಾಡಿದ್ದಕ್ಕಾಗಿ ರಾಹುಲ್ ಗಾಂಧಿಯವರನ್ನು ಟೀಕಿಸಿದೆ ಎಂದಿದೆ. ಜೊತೆಗೆ ಪಿತ್ರೋಡಾ ಅವರ ಹೇಳಿಕೆಯನ್ನೂ ಅದು ದಾಖಲಿಸಿದೆ. “ಕಾರ್ಬಿನ್ ಅವರು ನನ್ನ ವೈಯಕ್ತಿಕ ಸ್ನೇಹಿತರಾಗಿದ್ದು, ಅವರು ನಮ್ಮೊಂದಿಗೆ ಚಹಾ ಸೇವನೆಗೆ ಹೋಟೆಲ್ಗೆ ಆಗಮಿಸಿದ್ದರು. ಅದಕ್ಕಿಂತ ಹೆಚ್ಚಿನದ್ದೇನೂ ರಾಜಕೀಯ ಇದರಲ್ಲಿಲ್ಲ” ಎಂದು ಅವರು ಹೇಳಿದ್ದಾರೆ ಎಂದಿದೆ.
Also Read: ಬ್ರಿಟನ್ ಪಿಎಂ ರಿಷಿ ಸುನಕ್ ಮನೆಯಲ್ಲಿ ಸಂಕ್ರಾಂತಿಗೆ ಬಾಳೆ ಎಲೆ ಊಟ ಹಾಕಲಾಗಿತ್ತೇ?
ಇದರೊಂದಿಗೆ ಈ ಭೇಟಿ ಕುರಿತ ಫೋಟೋವನ್ನು ಮೊದಲು ಭಾರತೀಯ ಅನಿವಾಸಿ ಕಾಂಗ್ರೆಸ್ ಮೇ 23 2022ರಂದು ಮೊದಲು ಟ್ವೀಟ್ ಮಾಡಿದ್ದು ಪತ್ತೆಯಾಗಿದೆ.
ಇದರೊಂದಿಗೆ ನಾವು ಬಿಬಿಸಿ ಚಾನೆಲ್ ಜನವರಿ 17 2023ರಂದು ಪ್ರಸಾರ ಮಾಡಿದ “ಇಂಡಿಯಾ: ದಿ ಮೋದಿ ಕ್ವೆಶ್ಚನ್” ಡಾಕ್ಯುಮೆಂಟರಿಯ ಕ್ರೆಡಿಟ್ಸ್ ಬಗ್ಗೆ ಐಎಂಡಿಬಿ ಮತ್ತು ಬಿಬಿಸಿಯಲ್ಲಿ ಪರಿಶೀಲನೆ ಮಾಡಲಾಗಿದೆ. ಅದರಲ್ಲಿ ನಿರ್ಮಾಪಕರ ಹೆಸರು ರಿಚರ್ಡ್ ಕುಕ್ಸನ್ ಮತ್ತು ಕಾರ್ಯಕಾರಿ ನಿರ್ಮಾಪಕರು ಮೈಕ್ರಾಡ್ಫೋರ್ಡ್ ಎಂದಿದೆ. ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ “Rahul Gandhi Richard Cookson Mike Radford” ಎಂದು ಸರ್ಚ್ ನಡೆಸಲಾಗಿದ್ದು, ಈ ವೇಳೆ ಯಾವುದೇ ಫಲಿತಾಂಶ ಲಭ್ಯವಾಗಿಲ್ಲ.
ಇದರೊಂದಿಗೆ ನಾವು ಬಿಬಿಸಿಯನ್ನೂ ಸಂಪರ್ಕಿಸಿದ್ದು, ಅದರ ವಕ್ತಾರರು “ಪ್ರೊಡಕ್ಷನ್ ತಂಡದ ಯಾರೂ ರಾಹುಲ್ ಗಾಂಧಿಯವರನ್ನು ಭೇಟಿಯಾಗಿಲ್ಲ” ಎಂದು ತಿಳಿಸಿದ್ದಾರೆ.
Conclusion
ಈ ಸತ್ಯ ಶೋಧನೆಯ ಪ್ರಕಾರ, ಬಿಬಿಸಿ ಮೋದಿ ಸರ್ಕಾರದ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಲು 6 ತಿಂಗಳ ಹಿಂದೆ ರಾಹುಲ್ ಅವರು ಅದರ ಸಂಪಾದಕರನ್ನು ಭೇಟಿ ಮಾಡಿರುವುದು ಕಾರಣ ಎಂದು ಹೇಳಿರುವುದು ತಪ್ಪು.
Result: False
Our Sources
Tweet by Indian Overseas Congress, Dated: May 23, 2022
IMDb page
Email with BBC